Monday 18 August 2014

ಸಾಕ್ಷರತಾ ಪ್ರೇರಕರ ಕೆಲಸವು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ

ಕೃಷ್ಣರಾಜಪೇಟೆ. ಸಮಾಜದಲ್ಲಿ ಓದು ಬರಹ ಗೊತ್ತಿಲ್ಲದ ಗ್ರಾಮೀಣ ಪ್ರದೇಶದ ಮುಗ್ಧ ಜನರಿಗೆ ಅಕ್ಷರದ ಜ್ಞಾನದ ಬೆಳಕನ್ನು ತಮ್ಮ ನಿಸ್ವಾರ್ಥ ಸೇವೆಯ ಮೂಲಕ ನೀಡುತ್ತಿರುವ ಸಾಕ್ಷರತಾ ಪ್ರೇರಕರ ಕೆಲಸವು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ. ಗ್ರಾಮೀಣ ಜನರು ಸಾಕ್ಷರತೆಯಿಂದ ತಮ್ಮ ಬಾಳನ್ನು ಕತ್ತಲಿನಿಂದ ಬೆಳಕಿನೆಡೆಗೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ ಎಂದು ಶಿಕ್ಷಕ ಸಿಂದಘಟ್ಟ ಮಂಜುನಾಥ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಕಶಿಕ್ಷಣ ಇಲಾಖೆಯಲ್ಲಿ ಸಾರ್ಥಕ 6ವರ್ಷಗಳ ಸೇವೆಯನ್ನು ಸಲ್ಲಿಸಿ ಮಾತೃ ಇಲಾಖೆಗೆ ಮರಳಿದ ಮಂಜುನಾಥ್ ಅವರಿಗೆ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ ಪ್ರೇರಕರು ಆಯೋಜಿಸಿದ್ದ ಅಭಿನಂಧನಾ ಸಮಾರಂಭದಲ್ಲಿ ಆತ್ಮೀಯ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ಅನಕ್ಷರತೆ ಹಾಗೂ ಮೂಢನಂಬಿಕೆಯಿಂದ ಗ್ರಾಮೀಣ ಜನರು ದೇಶಕ್ಕೆ ಸ್ವಾತಂತ್ರ್ಯ ಬಂದು 68 ವರ್ಷಗಳು ಕಳೆಯುತ್ತಿದ್ದರೂ ಇಂದಿಗೂ ಬಳಲುತ್ತಿದ್ದಾರೆ. ಅನಕ್ಷರತೆಯ ಲಾಭ ಪಡೆಯುವ ಕಿಡಿಗೇಡಿಗಳು ಅವಿದ್ಯಾವಂತ ಜನರನ್ನು ಸುಲಭವಾಗಿ ಮೋಸ ಮಾಡಿ ಹೆಬ್ಬೆಟ್ಟಿನ ಸಹಿಯನ್ನು ಕಾಗದ ಪತ್ರಗಳಿಗೆ ಹಾಕಿಸಿಕೊಂಡು ಅನ್ಯಾಯ ಮಾಡುತ್ತಿರುವುದರಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿವೆ. ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಯುವಜನರಿಗೆ ಕಂಪ್ಯೂಟರ್ ಮತ್ತು ಆಂಗ್ಲಭಾಷೆಯ ಜ್ಞಾನವು ಎಷ್ಟು ಮುಖ್ಯವೋ ಗ್ರಾಮೀಣ ಜನರಿಗೆ ಅಕ್ಷರ ಜ್ಞಾನವು ಅವಶ್ಯವಾಗಿ ಬೇಕಾಗಿದೆ. ಸಾಕ್ಷರತಾ ಕೇಂದ್ರಗಳಿಗೆ ಬಂದು ಓದು, ಬರಹ, ಲೆಕ್ಕಾಚಾರದ ಜೊತೆಗೆ ವೃತ್ತಿಕೌಶಲ್ಯ ತರಬೇತಿಯನ್ನು ಪಡೆದುಕೊಂಡು ಅಭ್ಯುದಯದ ಹಾದಿಯತ್ತ ಗ್ರಾಮೀಣ ಜನರನ್ನು ಕರೆದೊಯ್ಯುತ್ತಿರುವ ಸಾಕ್ಷರತ ಪ್ರೇರಕರು ಅಲ್ಪ ಗೌರವ ಧನವನ್ನು ಪಡೆದು ಕೋಟಿಗಟ್ಟಲೆ ಬೆಲೆಬಾಳುವ ಸಾಕ್ಷರತೆಯ ಜ್ಞಾನದ ಬೆಳಕನ್ನು ನೀಡುತ್ತಿರುವುದರಿಂದ ಭಗವಂತನೂ ಹರಸಿ ಆಶೀರ್ವದಿಸುತ್ತಾನೆ. ಇಂತಹ ಜನಪರವಾದ ಒಳ್ಳೆಯ ಇಲಾಖೆಯಲ್ಲಿ ಆರು ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಲು ಸಹಕಾರ ನೀಡಿದ ಪ್ರೇರಕರಿಗೆ ಧನ್ಯವಾದಗಳನ್ನು ಸಮರ್ಪಣೆ ಮಾಡುವುದಾಗಿ ಮಂಜುನಾಥ್ ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲೂಕು ಸಂಯೋಜಕ ಚಂದ್ರಪ್ಪ ಮಂಡ್ಯ ಜಿಲ್ಲೆಯಲ್ಲಿಯೇ ಕೃಷ್ಣರಾಜಪೇಟೆ ತಾಲೂಕಿನಲ್ಲಿ ಸಾಕ್ಷರ ಭಾರತ್ ಕಾರ್ಯಕ್ರಮವು ಯಶಸ್ವಿಯಾಗಿ ಅನುಷ್ಠಾನವಾಗುತ್ತಿರುವ ಜೊತೆಗೆ ತಾಲೂಕಿನ ಎಲ್ಲಾ 34 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿಯೂ ವೃತ್ತಿಕೌಶಲ್ಯ ತರಬೇತಿ ಕೇಂದ್ರಗಳನ್ನು ಆರಂಬಿಸಿ ಗ್ರಾಮೀಣ ಪ್ರದೇಶದ ಅನಕ್ಷರಸ್ಥ ಮಹಿಳೆಯರು ಹಾಗೂ ನಿರುದ್ಯೋಗಿ ಯುವತಿಯರು ಸ್ವಾವಲಂಭಿ ಜೀವನವನ್ನು ನಡೆಸಲು ಆಸರೆಯಾಗಿದೆ. ಲೋಕಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವುದು ಭಗವಂತನ ಸೇವೆ ಮಾಡಿದಷ್ಟೇ ಶ್ರೇಷ್ಠವಾಗಿದೆ. ಆದ್ದರಿಂದ ಸಾಕ್ಷರತಾ ಪ್ರೇರಕರು ಸಮಾಜದ ಋಣವನ್ನು ತೀರಿಸುವ ಪುಣ್ಯದ ಕೆಲಸವನ್ನು ಮಾಡುತ್ತಿರುವುದರಿಂದ ಟೀಕೆ-ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಳ್ಳದೇ ಮುಗ್ಧ ಜನರಿಗೆ ಅಕ್ಷರದ ಜ್ಞಾನವನ್ನು ನೀಡಿ ಹೆಬ್ಬೆಟ್ಟಿನ ಸಹಿಯನ್ನು ಅಳಿಸಿ ಹಾಕುವ ಜೊತೆಗೆ ಸಾಮಾಜಿಕ ಅನಿಷ್ಠವಾದ ಅನಕ್ಷರತೆಯನ್ನು ಹೋಗಲಾಡಿಸಿ ಸಾಕ್ಷರತೆಯ ನವ ಸಮಾಜವನ್ನು ನಿರ್ಮಿಸಲು ಪಣತೊಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಸಂಯೋಜಕರಾದ ಬೀರವಳ್ಳಿ ರಾಮಚಂದ್ರು, ಮಾಕವಳ್ಳಿ ಕುಮಾರ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ, ಪ್ರೇರಕರಾದ ಬಲ್ಲೇನಹಳ್ಳಿ ಕುಮಾರ್, ಚೌಡೇನಹಳ್ಳಿ ಪುಷ್ಪಾ, ಕುಪ್ಪಹಳ್ಳಿ ಅಣ್ಣಪ್ಪ, ಅಘಲಯ ತಮ್ಮಣ್ಣನಾಯಕ, ಅಕ್ಕಿಹೆಬ್ಬಾಳು ಗೀತ ಮತ್ತಿತರರು ಭಾಗವಹಿಸಿದ್ದರು. ಪ್ರೇರಕರಾದ ಮೋಹನ್ ಸ್ವಾಗತಿಸಿದರು. ಕೆ.ಟಿ.ಕುಮಾರ್ ವಂದಿಸಿದರು. ಉಷಾ ಮತ್ತು ಮೀನಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment