Tuesday 5 August 2014

ಮೈಸೂರು ಸುದ್ದಿ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಉಲ್ಲಂಘಿಸಿದರೆ ದಂಡ
ಮೈಸೂರು,ಆ.5.ಕೇಂದ್ರ ಸರ್ಕಾರವು 2011ನೇ ಆಗಸ್ಟ್ 05 ರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಮತ್ತು ನಿಯಮ, ನಿಬಂಧನೆಯಗಳನ್ನು ಜಾರಿಗೆ ತಂದಿರುತ್ತದೆ. ಆಹಾರ ತಯಾರಕರು ಮತ್ತು ಮಾರಾಟಗಾರರು ತಯಾರಿಸುವ ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ಬ್ಯಾಚ್ ನಂ, ತಯಾರಿಕೆ ದಿನಾಂಕ, ವಾಯಿದೆ ದಿನಾಂಕ, ತಯಾರಕರ ಹೆಸರು ಮತ್ತು ಪೂರ್ಣ ವಿಳಾಸ, ಆಹಾರ ಪದಾರ್ಥದ ಹೆಸರು, ಅಡಕವಾಗಿರುವ ಆಹಾರ ಪದಾರ್ಥಗಳ ಅಂಶಗಳು, ಹಸಿರು/ಕೆಂಪು ಬಣ್ಣದ ವೃತ್ತದ ಚಿಹ್ನೆ ಮಾಹಿತಿಗಳನ್ನು ಮುದ್ರಿಸಿ ವಹಿವಾಟು ನಡೆಸುವುದು ಕಡ್ಡಾಯವಾಗಿರುತ್ತದೆ. ಸದರಿ ಮಾಹಿತಿಗಳಲ್ಲಿ ಒಂದಂಶ ಬಿಟ್ಟು ಹೋಗಿದ್ದರೂ ಸಹ ಆಹಾರ ಸುರಕ್ಷತೆ ಮತ್ತು ಗುಣಮಟ್ಟ  ಕಾಯ್ದೆ 2006 ರ ನಿಯಮಗಳು ಉಲ್ಲಂಘನೆಯಾಗುತ್ತದೆ. ಸದರಿ ಆಹಾರ ಪೊಟ್ಟಣದಲ್ಲಿನ ಆಹಾರ ಪದಾರ್ಥವನ್ನು ಮಿಸ್ ಬ್ರಾಂಡ್ ಎಂದು ನಿರ್ಧರಿಸಿ, ನಿಯಮ 52 ರನ್ವಯ ಮೂರು ಲಕ್ಷ ರೂಗಳವರೆವಿಗೂ ದಂಡ ವಿಧಿಸಬಹುದಾಗಿರುತ್ತದೆ.
ಆಹಾರ ತಯಾರುಕರು/ಮಾರಾಟಗಾರರು ಮಾರಾಟಮಾಡುವ ಪ್ಯಾಕೇಟುಗಳ ಮೇಲೆ ಮೇಲ್ಕಂಡ ಎಲ್ಲಾ ಮಾಹಿತಿಗಳನ್ನು ತಪ್ಪದೇ ಮುದ್ರಿಸುವುದು ಹಾಗೂ ಆಹಾರ  ತಯಾರಿಕಾ ಸ್ಥಳದಲ್ಲಿ ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಗಮನಹರಿಸುವುದು ಕಡ್ಡಾಯವಾಗಿರುತ್ತದೆ. ಇದರ ಉಲ್ಲಂಘನೆಯಾದರೆ ನಿಯಮ 56, 69 ಅಡಿಯಲ್ಲಿ ಅಂಕಿತ ಅಧಿಕಾರಿಗಳು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಇವರ ಅಧಿಕಾರ ವ್ಯಾಪ್ತಿಯಲ್ಲಿ ಸ್ಥಳದಲ್ಲಿಯೇ ಸುಮಾರು ಒಂದು ಲಕ್ಷ ರೂಗಳವರೆಗೆ ದಂಡ ವಿಧಿಸಲಾಗುವುದು.
ಸುರಕ್ಷಿತವಲ್ಲದ ಆಹಾರವೆಂದು ಕಂಡು ಬಂದಲ್ಲಿ ತಕ್ಷಣವೇ ಆ ರೀತಿಯ ಆಹಾರ ಮಾದರಿಗಳನ್ನು ಆಹಾರ ಸುರಕ್ಷತಾಧಿಕಾರಿಗಳು ಸಂಗ್ರಹಿಸಿ, ವಿಶ್ಲೇಷಣೆಗೆ ಪ್ರಯೋಗಾಲಕ್ಕೆ ಕಳುಹಿಸಿಕೊಡುತ್ತಾರೆ. ಒಂದು ವೇಳೆ ಪ್ರಯೋಗಾಲಯದಿಂದ, ವಿಶ್ಲೇಷಣೆಯ ವರದಿಯಲ್ಲಿ ಆಹಾರವು ಅಸುರಕ್ಷಿತ ಎಂದು ಕಂಡುಬಂದಲ್ಲಿ ನಿಯಮಾನುಸಾರ ರೂ.1 ಲಕ್ಷದಿಂದ 10 ಲಕ್ಷದವರೆಗೆ ದಂಡ ಹಾಗೂ 6 ತಿಂಗಳಿಂದ ಜೀವಿತಾವದಿವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿರುತ್ತದೆ.
ಆಹಾರ ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಪಡೆದಿರುವ ಪರವಾನಗಿ/ನೋಂದಣಿಯ ಪತ್ರವನ್ನು ಸಾರ್ವಜನಿಕರಿಗೆ ಕಾಣುವಂತೆ  ಆಹಾರ ತಯಾರಿಸುವ ಸ್ಥಳ/ಮಾರಾಟ ಮಾಡುವ ಸ್ಥಳದಲ್ಲಿ ಕಡ್ಡಾಯವಾಗಿ. ಪ್ರದರ್ಶಿಸುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿ ಡಾ|| ಚಿದಂಬರ್ ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
                                                                                   
ಮೇವಿನ ಕಿರುಪೊಟ್ಟಣ ವಿತರಣೆ
    ಮೈಸೂರು,ಆ.5.ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಉದ್ಬವಿಸಬಹುದಾದ ಜಾನುವಾರುಗಳಿಗೆ ಮೇವಿನ ಕೊರತೆಯನ್ನು ನೀಗಿಸಲು ಮೇವಿನ ಬೀಜದ ಕಿರುಪೊಟ್ಟಣಗಳನ್ನು ಜಿಲ್ಲೆಯ 7 ತಾಲ್ಲೂಕುಗಳಿಗೆ ಹೆಚ್ಚುವರಿಯಾಗಿ ಸರಬರಾಜು ಮಾಡಲಾಗಿದೆ. ಪುಸ್ತುತ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಮೇವು ಬೆಳೆ ಬೆಳೆಯಲು ಪೂರಕ ವಾತಾವರಣವಿರುತ್ತದೆ. ಆಸಕ್ತ ರೈತರು ಸಮೀಪದ ಪಶುವೈದ್ಯಾ ಸಂಸ್ಥೆಯನ್ನು ಸಂಪರ್ಕಿಸಿ ಮೇವಿನ ಬೀಜದ ಕಿರುಪೊಟ್ಟಣಗಳನ್ನು ಪಡೆದು ಮೇವು ಬೆಳೆ ಬೆಳೆಸಲು ಕ್ರಮವಹಿಸುವಂತೆ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ|| ದೇವದಾಸ್ ಅವರು ತಿಳಿಸಿದ್ದಾರೆ.
    ಹೆಚ್ಚಿನ ಮಾಹಿತಿಗೆ ಆಯಾಯ ತಾಲ್ಲೂಕಿನ ಸಹಾಯಕ ನಿರ್ದೇಶಕರನ್ನು ಮೈಸೂರು -0821-2423451, ನಂಜನಗೂಡು-08221-226742, ಕೆ.ಆರ್.ನಗರ-08223-262617, ತಿ.ನರಸೀಪುರ-08227-261467, ಪಿರಿಯಾಪಟ್ಟಣ-08223-274251, ಹುಣಸೂರು-08222-252098 ಹಾಗೂ ಹೆಚ್.ಡಿ.ಕೋಟೆ 08228-255241

ಆಗಸ್ಟ್ 7 ರಂದು ವಿಚಾರ ಸಂಕಿರಣ
    ಮೈಸೂರು,ಆ.5.ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ವತಿಯಿಂದ ಸೇವಾ ವಲಯ ಅಂಕಿ-ಅಂಶಗಳು ಕುರಿತು ವಿಚಾರ ಸಂಕಿರಣವನ್ನು ಆಗಸ್ಟ್ 7 ರಂದು ಬೆಳಿಗ್ಗೆ 10-30 ಗಂಟೆಗೆ ಕೆ.ವಿ.ಸಿ. ಇಂಟರ್ ನ್ಯಾಷನಲ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
    ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್ ಅವರು ಕಾರ್ಯಕ್ರಮದ ಉದ್ಘಾಟನೆ ಹಾಗೂ ಆರ್ಥಿಕ ಮತ್ತು ಸಾಮಾಜಿಕ ಅವಲೋಕನ ಕೈಪಿಡಿ ಬಿಡುಗಡೆ ಮಾಡುವರು. ಜಿಲ್ಲಾಧಿಕಾರಿ ಎಸ್. ಪಾಲಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
    ಚಾರ್ಟರ್ಡ್ ಅಕೌಂಟೆಂಟ್ ಉಮೇಶ್ ಹಾಗೂ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಪ್ರೊ| ಡಿ.ಎಸ್. ಲೀಲಾವತಿ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಜಿ.ಟಿ & ಟಿ.ಸಿ ಯಲ್ಲಿ ಉಚಿತ ತಾಂತ್ರಿಕ ತರಬೇತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

    ಮೈಸೂರು,ಆ.5.(ಕ.ವಾ.)- ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಮೆಕ್ಯಾನಿಕಲ್ ಕ್ಷೇತ್ರದಲ್ಲಿ ಐ.ಟಿ.ಐ / ಡಿಪ್ಲೊಮ / ಬಿ.ಇ ಪಾಸಾಗಿರುವ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗದ ಅಭ್ಯರ್ಥಿಗಳಿಗೆ ಸಿ.ಎನ್.ಸಿ ಮೆಷಿನ್ ಆಪರೇಷನ್ ಕೋರ್ಸ್ ಮತ್ತು ಕ್ಯಾಡ್ ಕ್ಯಾಮ್ ಕೋರ್ಸ್‍ಗಳ ಅಲ್ಪಾವಧಿ ತರಬೇತಿಯನ್ನು ಉಚಿತವಾಗಿ ಮೈಸೂರು ನಗರದ ಕೆ.ಆರ್.ಎಸ್ ರಸ್ತೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. 93/94, ಇಲ್ಲಿ ನಡೆಸಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ಶೈಕ್ಷಣಿಕ ದಾಖಲೆಗಳೊಂದಿಗೆ ದಿ. 14.08.2014, ರೊಳಗೆ ಅರ್ಜಿ ಸಲ್ಲಿಸಬೇಕಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821 2582464, 9448167259, 9035376071, 9141629580ಯನ್ನು ಸಂಪರ್ಕಿಸಬಹುದು.

No comments:

Post a Comment