Saturday 9 August 2014

ಮಂಡ್ಯ-ಮೈಶುಗರ್ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯ ಪ್ರಾರಂಭ.



ಮೈಶುಗರ್ ಕಾರ್ಖಾನೆಯ ಕಬ್ಬು ನುರಿಸುವ ಕಾರ್ಯ ಪ್ರಾರಂಭ
ಮೈಸೂರು ಸಕ್ಕರೆ ಕಂಪನಿ ವತಿಯಿಂದ 2014-15ನೇ ಸಾಲಿನ ಕಬ್ಬು ನುರಿಸುವ ಪ್ರಕ್ರಿಯೆಗೆ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಸಕ್ಕರೆ ಸಚಿವರಾದ ಎಚ್.ಎಸ್. ಮಹದೇವ ಪ್ರಸಾದ್ ಅವರು ಶನಿವಾರ ಚಾಲನೆ ನೀಡಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬಿ’ ಮಿಲ್ ಮೂಲಕ ಕಬ್ಬು ನುರಿಯುವ ಪ್ರಕ್ರಿಯೆ ಆರಂಭಿಸಲಾಗಿದೆ. ಇದರಿಂದ ಪ್ರತಿ ದಿನ 2500 ಟಿಸಿಡಿ ಕಬ್ಬು ನುರಿಸಬಹುದಾಗಿದೆ. ‘ಎ’ ಮಿಲ್‍ನ ಆಧುನೀಕರಣ ಕಾರ್ಯ ಮುಕ್ತಾಯದ ಹಂತದಲ್ಲಿದ್ದು, ನವೆಂಬರ್ ವೇಳೆ ಅದು ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಎರಡೂ ಮಿಲ್‍ಗಳು ಕಾರ್ಯ ನಿರ್ವಹಿಸಿದರೆ ಪ್ರತಿ ದಿನ 5000 ಟಿಸಿಡಿ ಕಬ್ಬು ನುರಿಸಬಹುದಾಗಿದೆ. ರೈತರ ಅನುಕೂಲಕ್ಕೆ  ಪೂರಕವಾಗಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
    ಈ ಸಂದರ್ಭದಲ್ಲಿ ಸಂಸದರಾದ ಸಿ.ಎಸ್.ಪುಟ್ಟರಾಜು, ಮೈಶುಗರ್ಸ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಮಹದೇವು, ಪ್ರಧಾನ ವ್ಯವಸ್ಥಾಪಕರಾದ ಶಂಕರ್, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 


ಅಪೌಷ್ಠಿಕತೆ ಸಮಸ್ಯೆಯಿಂದ ಮಕ್ಕಳನ್ನು ರಕ್ಷಿಸಬೇಕಾಗಿದೆ: ನ್ಯಾ. ಎನ್.ಕೆ.ಪಾಟೀಲ್
    ಮಂಡ್ಯ, ಆಗಸ್ಟ್ 09. ದೇಶದ ಹಲವು ಭಾಗಗಳಲ್ಲಿ ಮಕ್ಕಳು ಪೌಷ್ಠಿಕ ಆಹಾರದ ಕೊರತೆಯಿಂದ, ಅಸಮರ್ಪಕ ಆರೋಗ್ಯ ಸೇವೆಯಿಂದ ಹಾಗೂ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದು, ಈ ಸಮಸ್ಯೆಗಳಿಂದ ಅವರನ್ನು ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಕರ್ನಾಟಕ ಹೈಕೋರ್ಟ್‍ನ ನ್ಯಾಯಾಧೀಶರಾದ ನ್ಯಾ. ಎನ್.ಕೆ.ಪಾಟೀಲ್ ಅವರು ಹೇಳಿದರು.
ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಿದ್ದ ‘ಮಕ್ಕಳಲ್ಲಿ ಅಪೌಷ್ಠಿಕತೆ ತಡೆಗಟ್ಟುವುದರ ಬಗೆಗಿನ ಸಮಗ್ರ ಕಾರ್ಯಯೋಜನೆ ಅನುಷ್ಠಾನ ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದರ ಬಗ್ಗೆ ಅರಿವು-ನೆರವು’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಪೌಷ್ಠಿಕ ಆಹಾರ ಹಾಗೂ ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗಿ ನರಳುತ್ತಿದ್ದ ಘಟನೆಯೊಂದು ವರದಿಯಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸಮಿತಿ ರಚಿಸಿ, ವರದಿ ನೀಡಲು ಸೂಚಿಸಿತ್ತು. ಸಮಿತಿ ಸಮಗ್ರವಾಗಿ ಅಧ್ಯಯನ ನಡೆಸಿ, ಪರಿಪೂರ್ಣವಾದ ವರದಿಯನ್ನು ಸಲ್ಲಿಸಿದೆ. ಸಮಿತಿಯ ಶಿಫಾರಸ್ಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂದು ಹೇಳಿದರು.
ಮುಗ್ಧ ಮಕ್ಕಳ ಲಾಲನೆ, ಪಾಲನೆ, ಪೋಷಣೆ, ಸಂರಕ್ಷಣೆ ಮತ್ತು ಶಿಕ್ಷಣವನ್ನು ಒದಿಗಿಸುವಲ್ಲಿ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಶಿಕ್ಷಕರು ಆ ಮಕ್ಕಳ ಪೋಷಕರಷ್ಟೇ ಜವಾಬ್ದಾರಿ ಹೊಂದಿದ್ದಾರೆ. ಮಕ್ಕಳು, ಕಿಶೋರಿಯರು, ಗರ್ಭಿಣಿಯರು, ಬಾಣಂತಿಯರು ಪೌಷ್ಠಿಕ ಆಹಾರಕ್ಕಾಗಿ ಅಂಗನವಾಡಿಗೆ ಬಂದಾಗ ಅವರಿಗೆ ನಿಷ್ಪಕ್ಷಪಾತ ಸೇವೆ ಸಿಗಬೇಕು ಎಂದು ಹೇಳಿದರು.
ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಸಮಿತಿ ನೀಡಿರುವ ಶಿಫಾರಸ್ಸುಗಳು ಮಂಡ್ಯ ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿವೆಯೇ ಎಂಬುದರ ಬಗ್ಗೆ ಇಂದಿನ ಕಾರ್ಯಾಗಾರದಲ್ಲಿ ಸಮಗ್ರವಾಗಿ ಚರ್ಚೆ ಮಾಡಲಾಗುತ್ತದೆ ಎಂದುರು.  
ಕಾರ್ಯಾಗಾರದಲ್ಲಿ ಹೈಕೋರ್ಟ್‍ನ ನ್ಯಾಯಾಧೀಶರಾದ ನ್ಯಾ. ಬಿ.ಶ್ರೀನಿವಾಸೇಗೌಡ, ನ್ಯಾ. ಆರ್.ಬಿ.ಬೂದಿಹಾಳ, ನ್ಯಾ. ಅಶೋಕ್ ಜಿ. ನಿಜಗಣ್ಣನವರ್, ಮಂಡ್ಯ ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ್ ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸದಾನಂದ ಎಂ. ದೊಡ್ಡಮನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಹೆಚ್.ಪಿ. ಮಂಚೇಗೌಡ, ವಕೀಲರ ಸಂಘದ ಅಧ್ಯಕ್ಷರಾದ ಕೆ.ಎಂ. ಬಸವರಾಜು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

No comments:

Post a Comment