Friday 15 August 2014

ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ತಮ್ಮ ನಿವಾಸದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.

 ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ತಮ್ಮ ನಿವಾಸದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೆಪಿಸಿಸಿ ಕಛೇರಿಗೆ ಆಗಮಿಸಿ ದ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನ  ಕಾಂಗ್ರೇಸ್ ಅದ್ಯಕ್ಷ ಡಾ.ಜಿ.ಪರಮೇಶ್ವರ್ ಹೂ ಗಚ್ಚ ನೀಡಿ ಸ್ವಾಗತಿಸುತ್ತಿರುವುದು.

ಮಾಣಿಕ್  ಷಾ ಮೈದಾನದಲ್ಲಿ ನಡೆದ 68ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜ ವಂದನೆ ಸ್ವೀಕರಿಸುತ್ತಿರುವುದು.
ಗಾಂಧಿ ನಗರದಲ್ಲಿ ಏರ್ಪಡಿಸಿದ್ದ ಸಂಗೋಳಿ ರಾಯಣ್ಣ ಪ್ರತಿಮೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು .ಮುಖ್ಯಮಂತ್ರಿಯವರನ್ನ ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜು ಅಭಿನಂದಿಸಿದ



ಭಾರತದ ಸ್ವಾತಂತ್ರ್ಯ ಹೋರಾಟ ನಮ್ಮ ಹಿರಿಯರ ತ್ಯಾಗ-ಬಲಿದಾನಗಳ ವೀರಗಾಥೆ. ಅಹಿಂಸೆಯ ಮಂತ್ರದ ಮೂಲಕವೇ ಆಗಿನ ಸರ್ವಶಕ್ತ ಬ್ರಿಟಿಷರನ್ನು ಮಣಿಸಿ, ದೇಶವನ್ನು ಗುಲಾಮಗಿರಿಯಿಂದ ಬಿಡುಗಡೆಗೊಳಿಸಿದ ಈ ಹೋರಾಟ ಅನನ್ಯವಾದುದು. ವಿಶ್ವಾದ್ಯಂತ ಹಿಂಸೆ ತನ್ನ ವಿವಿಧ ರೂಪಗಳಲ್ಲಿ ತಾಂಡವವಾಡುತ್ತಿರುವ ಇಂದಿನ ದಿನಮಾನಗಳಲ್ಲಿ ನಮ್ಮ ಹಿರಿಯರ ಅಹಿಂಸಾ ಹೋರಾಟ ನಾವೆಲ್ಲಾ ಹೆಮ್ಮೆಯಿಂದ ಸ್ಮರಿಸುವಂತಹುದು. ಭವಿಷ್ಯದ ಹಾದಿಯಲ್ಲಿ ಅಡಿ ಇಡುವಾಗ ಈ ಇತಿಹಾಸವನ್ನು ನಾವು ನೆನಪು ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕದ ಸಮಸ್ತ ನಾಡಬಾಂಧವರಿಗೆ 68ನೇ ಸ್ವಾತಂತ್ರ್ಯ ದಿನಾಚರಣೆಯ ಹೃದಯಪೂರ್ವಕ ಶುಭಾಶಯಗಳು. ರಾಜ್ಯದ ಮುಖ್ಯಮಂತ್ರಿಯಾಗಿ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಿದ ತಮ್ಮೆಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸಿದ ಅವರು
ರಾಜಕೀಯ ಸ್ವಾತಂತ್ರ್ಯದ ಜೊತೆಯಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯವನ್ನೂ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ತಲುಪಿಸುವುದೇ ಅರ್ಥಪೂರ್ಣ ಸ್ವಾತಂತ್ರ್ಯಾಚರಣೆ  ಎಂದು ನಮ್ಮ ಸರ್ಕಾರ ನಂಬಿದೆ. ಅಧಿಕಾರ, ಅವಕಾಶ ಮತ್ತು ಸಂಪತ್ತು ಸಮಾಜದ ಎಲ್ಲಾ ಜನರಿಗೂ ಹಾಗೂ ಎಲ್ಲಾ ವರ್ಗಗಳಿಗೂ ಹಂಚಿಕೆಯಾಗಬೇಕೆಂಬುದು ಪ್ರಜಾಪ್ರಭುತ್ವದ ಮೂಲ ಆಶಯ. ಇದು ನಮ್ಮ ಸರ್ಕಾರದ ಧ್ಯೇಯವೂ ಕೂಡ ಎಂದು ಹೇಳಿದ ಅವರು ಬಹುಭಾಷೆ, ಬಹುಧರ್ಮ ಮತ್ತು ಬಹುಸಂಸ್ಕೃತಿಗಳ ದೇಶ ನಮ್ಮದು. ಈ ವೈವಿಧ್ಯತೆಯಲ್ಲಿಯೇ ಏಕತೆಯನ್ನು ಕಂಡುಕೊಂಡ ಹೆಮ್ಮೆಯ ಪರಂಪರೆಯ ವಾರಸುದಾರರು ನಾವು. ಈ ಭಾವ ಸಂಬಂಧ ಮುರಿದು ಬೀಳಲು ಅವಕಾಶ ನೀಡದೆ ರಕ್ಷಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಸಂವಿಧಾನದ ಮೂಲ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ನ್ಯಾಯ ಮತ್ತು ಜಾತ್ಯಾತೀತತೆಯನ್ನು ನಮ್ಮ ಜೀವನ ಮೌಲ್ಯಗಳಾಗಿ ನಾವು ಅಳವಡಿಸಿಕೊಂಡಾಗ ಮಾತ್ರ ಇದು ಸಾಧ್ಯ.
"ಹೆಣ್ಣು ಮಕ್ಕಳು ನಡುರಾತ್ರಿಯಲ್ಲಿಯೂ ನಿರ್ಭೀತಿಯಿಂದ ರಸ್ತೆಗಳಲ್ಲಿ ಓಡಾಡುವ ಮತ್ತು ದೇಶದ ಪ್ರತಿಯೊಬ್ಬ ಪ್ರಜೆಯೂ ಹಸಿವಿನಿಂದ ಮುಕ್ತರಾಗುವ ದಿನವೇ ನಮಗೆ ನಿಜವಾದ ಸ್ವಾತಂತ್ರ್ಯ ದಿನ" ಎಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಹೇಳಿದ್ದರು. ನಮ್ಮ ಸರ್ಕಾರದ ಸಂಕಲ್ಪವೂ ಇದೇ ಆಗಿದೆ. ಹಸಿವು, ಬಡತನ, ಅನಕ್ಷರತೆ, ಅನಾರೋಗ್ಯ ಹಾಗೂ ಭಯಮುಕ್ತ ಕರ್ನಾಟಕದ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.
ನಮ್ಮ ರೈತ ಸಮುದಾಯ ಪ್ರಕೃತಿಯನ್ನೇ ದೇವರು ಎಂದು ನಂಬಿದವರು. ರೈತನ ಮಗನಾದ ನಾನೂ ಕೂಡಾ ಇದನ್ನೇ ನಂಬಿದವನು. ಮುಖ್ಯಮಂತ್ರಿಯಾಗುವ ಅವಕಾಶ ಬಂದಾಗ ಎಲ್ಲೆಡೆ ಒಳ್ಳೆಯ ಮಳೆ-ಬೆಳೆ ಆಗಲಿ ಎಂದು ಪ್ರಕೃತಿ ದೇವತೆಯನ್ನು ಬೇಡಿಕೊಂಡಿದ್ದೆ. ನಮ್ಮ ಉದ್ದೇಶ ಪ್ರಾಮಾಣಿಕವಾಗಿದ್ದರೆ ಹಾಗೂ ನಮ್ಮ ನಡವಳಿಕೆಗಳು ಪಾರದರ್ಶಕವಾಗಿದ್ದರೆ ಬೇಡಿಕೊಂಡದ್ದು ಈಡೇರುತ್ತದೆ ಎಂಬ ನಂಬಿಕೆಗೆ ಪ್ರಕೃತಿ ದೇವತೆ ಸ್ಪಂದಿಸಿದ್ದಾಳೆ. ಈ ಬಾರಿ ಮುಂಗಾರು ಮಳೆ ಆರಂಭದಲ್ಲಿ ಕುಂಠಿತವಾದರೂ ನಂತರ ನಿರೀಕ್ಷೆಯಂತೆ ಮಳೆಯಾಗುತ್ತಿರುವುದು ಸಮಾಧಾನಕರ. ರಾಜ್ಯದ ಬಹುತೇಕ ಜಲಾಶಯಗಳು ತುಂಬಿವೆ, ವಿದ್ಯುತ್ ಕೊರತೆ ಕಡಿಮೆಯಾಗಿದೆ, ರೈತರ ಮುಖಗಳಲ್ಲಿ ಸಂತಸದ ಮುಗುಳ್ನಗೆ ಕಾಣುತ್ತಿವೆ. ಇದು ನನಗೆ ಸಂತೃಪ್ತಿ ಹಾಗೂ ಸಮಾಧಾನ ತಂದಿದೆ.
ಮತದಾರರಿಗೆ ನೀಡಿದ ವಚನಪಾಲನೆಯೇ ನಿಜವಾದ ರಾಜಧರ್ಮ ಎಂದು ನಂಬಿದವನು ನಾನು. ಈ ಬದ್ಧತೆಯಿಂದಾಗಿಯೇ ಚುನಾವಣಾ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದ 165 ಭರವಸೆಗಳಲ್ಲಿ 95 ಭರವಸೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಇನ್ನೂ ಕೆಲವು ಅನುಷ್ಠಾನದ ಹಾದಿಯಲ್ಲಿವೆ. ಈ ಆಯವ್ಯಯದಲ್ಲಿಯೂ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿರುವ ಮತ್ತಷ್ಟು ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.
ನಮ್ಮ ಜನಪರ ಯೋಜನೆಗಳ ಯಶಸ್ಸಿನ ಪ್ರತಿಫಲನವನ್ನು ಸಂತೃಪ್ತ ಜನತೆಯ ಮುಖದಲ್ಲಿ ಸ್ಪಷ್ಟವಾಗಿ ಕಾಣಬಹುದು. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ ಮುನ್ನಡೆಯನ್ನು ಸಾಧಿಸಿದೆ. ಹಸಿವುಮುಕ್ತ ಕರ್ನಾಟಕ ನಿರ್ಮಾಣದ ಕನಸು ನನಸಾಗುವ ದಾರಿಯಲ್ಲಿದೆ. ರಾಜ್ಯದಲ್ಲಿ ಅಪೌಷ್ಠಿಕತೆಯಿಂದ ನರಳುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿದಿದೆ. ಆರೋಗ್ಯ ಸೇವೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಅತೀವೃಷ್ಟಿ-ಅನಾವೃಷ್ಟಿಗಳು ಎದುರಾದರೂ ಅವುಗಳನ್ನು ಸಮರ್ಥವಾಗಿ ಎದುರಿಸಿದ್ದೇವೆ. ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನ ಮತ್ತು ಬೆಳೆದ ಬೆಳೆಗೆ ವೈಜ್ಞಾನಿಕವಾದ ಬೆಲೆ ನಿಗದಿಯಿಂದಾಗಿ ಸರ್ಕಾರದ ಬಗ್ಗೆ ರೈತರಲ್ಲಿ ಭರವಸೆ ಮೂಡಿದೆ. ಕರ್ನಾಟಕ ರಾಜ್ಯದ ನೀರಿನ ಹಕ್ಕಿನ ರಕ್ಷಣೆಗಾಗಿ ಸರ್ಕಾರ ನಡೆಸುತ್ತಿರುವ ಪ್ರಯತ್ನ ರೈತರ ವಿಶ್ವಾಸ ಗಳಿಸಿದೆ.
ಮಕ್ಕಳು ನಮ್ಮ ಭವಿಷ್ಯದ ವಾರಸುದಾರರು. ಸುಶಿಕ್ಷಿತ, ಸಂಸ್ಕಾರವಂತ ಮತ್ತು ಆರೋಗ್ಯಪೂರ್ಣ ಭವಿಷ್ಯದ ಪ್ರಜೆಗಳನ್ನು ರೂಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದೇ ಹಾದಿಯಲ್ಲಿ ಸಾಗುತ್ತಿರುವ ನಮ್ಮ ಸರ್ಕಾರ ಕ್ಷೀರಭಾಗ್ಯ, ಮಧ್ಯಾಹ್ನದ ಬಿಸಿಯೂಟ, ಬಡಮಕ್ಕಳಿಗೆ ವಸತಿಶಾಲೆಗಳ ನಿರ್ಮಾಣವೂ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ.

ರೈತರು ನಮ್ಮ ಅನ್ನದಾತರು. ಇದನ್ನು ಅರ್ಥಮಾಡಿಕೊಂಡಿರುವ ನಮ್ಮ ಸರ್ಕಾರ ರೈತರ ಜೀವನ ಮಟ್ಟ ಸುಧಾರಣೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಕೃಷಿಕರ ಬೆಳೆ ಸಾಲದ ಮೇಲಿನ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮೂರು ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ಒದಗಿಸಲಾಗುತ್ತಿದೆ. ಇತ್ತೀಚೆಗೆ ಹೊಸದಾಗಿ ಕೃಷಿ ಭಾಗ್ಯ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿ ಮೊದಲನೇ ಹಂತದಲ್ಲಿ ಐದು ಮುಖ್ಯ ಒಣ ಭೂಮಿ ವಲಯಗಳ ರಾಜ್ಯದ 23 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೃಷಿ ಭಾಗ್ಯ ಯೋಜನೆಯನ್ನು ಮಿಷನ್ ಮೋಡ್ ಮಾದರಿಯಲ್ಲಿ ಹಂತ ಹಂತವಾಗಿ ಐದುವರ್ಷಳಲ್ಲಿ ಅನುಷ್ಠಾನಗೊಳಿಸಲಾಗುವುದು.
ಮಣ್ಣು ಆರೋಗ್ಯ ಅಭಿಯಾನದಡಿ ರಾಜ್ಯದ ಎಲ್ಲಾ ರೈತ ಹಿಡುವಳಿದಾರರಿಗೆ ಮಣ್ಣು ಮಾದರಿಯನ್ನು ಹಂತ ಹಂತವಾಗಿ ಮೂರುವರ್ಷದಲ್ಲಿ ಸಂಗ್ರಹಿಸಿ , ವಿಶ್ಲೇಷಣೆ ಮಾಡಿ ಮಣ್ಣು ಫಲವತ್ತತೆ ವಿವರ ಹಾಗೂ ಬೆಳೆಗಳಿಗೆ ಅನುಗುಣವಾಗಿ ಪೋಷಕಾಂಶಗಳ ಬಳಕೆ ಬಗ್ಗೆ ಶಿಫಾರಸ್ಸುಗಳನ್ನೊಳಗೊಂಡ ವಿವರಗಳನ್ನು ಕೆ-ಕಿಸಾನ್ ಪ್ರಾಯೋಜನೆಯ ರೈತರ ಪಾಸ್ ಬುಕ್ನಲ್ಲಿ ಅಳವಡಿಸಿ ರೈತರಿಗೆ ವಿತರಿಸಲಾಗುವುದು.
ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ ನಮ್ಮ ಸರ್ಕಾರದ ವಿನೂತನ ಯೋಜನೆ. ಇದರಡಿಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶದ ರೈತರಿಗೆ ಸಕಾಲದಲ್ಲಿ ಮತ್ತು ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ಧತೆ, ಬಿತ್ತನೆ ಹಾಗೂ ನಾಟಿ ಮಾಡುವ ಉಪಕರಣಗಳು, ಕೊಯ್ಲು ಮತ್ತು ಸಂಸ್ಕರಣೆಗೆ ಉಪಯುಕ್ತವಾಗಿರುವ ವಿವಿಧ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು 186 ಹೋಬಳಿಗಳಲ್ಲಿ ಚಾರಿಟಬಲ್ ಟ್ರಸ್ಟ್, ಸರ್ಕಾರೇತರ ಸಂಸ್ಥೆಗಳ ಮೂಲಕ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಕೃಷಿಕರು ಮತ್ತು ಕೃಷಿಕರ ಮಕ್ಕಳಿಗೆ ಕೃಷಿ ವಿಜ್ಞಾನದಲ್ಲಿ ಪದವಿ ಹಾಗೂ ಕೃಷಿ ಡಿಪ್ಲೋಮಾ ತರಗತಿಗಳಲ್ಲಿ ಮೀಸಲಾತಿ ನೀಡಲು ನಿರ್ಧರಿಸಲಾಗಿದೆ.
ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವ ಕೃಷಿ ಬೆಲೆ ಆಯೋಗ ರಚನೆ ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದು. ಇದಕ್ಕೆ ತ್ವರಿತಗತಿಯಲ್ಲಿ ಚಾಲನೆ ನೀಡಲಾಗಿದೆ. ಹಿರಿಯ ಕೃಷಿ ತಜ್ಞ ಡಾ: ಪ್ರಕಾಶ್ ಕಮ್ಮರಡಿ ಅವರನ್ನು ಈ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇದಲ್ಲದೆ, 571 ಹೋಬಳಿಗಳಲ್ಲಿ 57,100 ಹೆಕ್ಟೇರ್ ಪ್ರದೇಶಗಳಲ್ಲಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಲು ಸಾವಯವ ಭಾಗ್ಯ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಸುಮಾರು 53,000 ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ವಾಣಿಜ್ಯ ಬ್ಯಾಂಕ್ಗಳು ಹಾಗೂ ಪ್ರಾದೇಶಿಕ ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಮೂಲಕ ಗರಿಷ್ಠ ಮೊತ್ತ ಒಂದು ಲಕ್ಷ ರೂ. ವರೆಗೆ ಅಲ್ಪಾವಧಿ ಬೆಳೆ ಸಾಲ ಪಡೆದು, ನಿಗದಿತ ಅವಧಿಯೊಳಗೆ ಸಾಲ ಮರು ಪಾವತಿ ಮಾಡಿದ ರೈತರಿಗೆ ರಾಜ್ಯ ಸರ್ಕಾರ ಬಡ್ಡಿಯಲ್ಲಿ ಶೇಕಡಾ ಒಂದರಷ್ಟು ರಿಯಾಯಿತಿ ನೀಡುತ್ತಿದೆ.
ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಧ್ಯೆ ಸಮನ್ವಯ ಸಾಧಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು
ನಿಯಂತ್ರಣ) ಅಧಿನಿಯಮ 2013ಕ್ಕೆ ತಿದ್ದುಪಡಿ ಮಾಡಲಾಗಿದೆ. 2013-14ನೇ ಸಾಲಿನ ಘೋಷಣೆಯ ಪ್ರಕಾರ ಸುಮಾರು ಐದು ಲಕ್ಷ ರೈತರಿಂದ ಸಕ್ಕರೆ ಕಾರ್ಖಾನೆಗಳಿಗೆ ಸರಬರಾಜು ಮಾಡಲಾದ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 150 ರೂ. ಪ್ರೋತ್ಸಾಹ ಧನದಂತೆ ಒಟ್ಟಾರೆ 563.23 ಕೋಟಿ ರೂ. ಗಳನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗಿದೆ. ಕೇಂದ್ರ ಸರ್ಕಾರವು ನಿಗದಿ ಮಾಡಿದ ನ್ಯಾಯಯುತ ಮತ್ತು ಲಾಭದಾಯಕ ಕಬ್ಬಿನ ಬೆಲೆ ಪಾವತಿಸಲು ತಪ್ಪಿದ ಕಾರ್ಖಾನೆಗಳಿಗೆ ವಸೂಲಾತಿ ಪ್ರಮಾಣ ಪತ್ರ ನೀಡಿ ಜಿಲ್ಲಾಧಿಕಾರಿಗಳ ಮೂಲಕ ರೈತರಿಗೆ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಹೊಲಕ್ಕೆ ಹೋಗುವ ದಾರಿ, ರೈತರ ಕಣ, ರೈತರ ಜಮೀನಿನಲ್ಲಿ ಭೂ ಅಭಿವೃದ್ಧಿ, ಕುರಿ, ದನದ ದೊಡ್ಡಿ, ಆಟದ ಮೈದಾನ, ಸ್ಮಶಾನಾಭಿವೃದ್ಧಿ, ಕೆರೆಗಳ ಪುನಶ್ಚೇತನ ಯೋಜನೆಗಳಿಗೆ ಅವಕಾಶ ನೀಡಿರುವುದು ರಾಜ್ಯದಲ್ಲಿ ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಪುಷ್ಠಿ ನೀಡಿದೆ.
ರಾಸಾಯನಿಕಗಳಿಂದ ಕಲುಷಿತಗೊಂಡಿರುವ ಕುಡಿಯುವ ನೀರು ಮೂಲಗಳಿರುವ ಗ್ರಾಮೀಣ ಜನವಸತಿಗಳಲ್ಲಿ ಶುದ್ಧ ಕುಡಿಯುವ ನೀರಿನ 1000 ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇವುಗಳಲ್ಲಿ 300 ಘಟಕಗಳನ್ನು ಈಗಾಗಲೇ ಲೋಕಾರ್ಪಣೆ ಮಾಡಲಾಗಿದೆ.
ರಾಜ್ಯದಲ್ಲಿ 5.05 ಲಕ್ಷ ವೈಯುಕ್ತಿಕ ಶೌಚಾಲಯಗಳನ್ನು ನಿರ್ಮಿಸಿರುವುದನ್ನು ಪ್ರಪ್ರಥಮ ಬಾರಿಗೆ ಸಾಮಾಜಿಕ ತಪಾಸಣೆ ನಡೆಸಿ ದೃಢಪಡಿಸಲಾಗಿದೆ.
ನಿರ್ಮಲ ಭಾರತ್ ಅಭಿಯಾನ ಯೋಜನೆಯಡಿ ಗೃಹ ಶೌಚಾಲಯದ ಜೊತೆಗೆ ಸ್ನಾನ ಗೃಹಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಡಿ ಗ್ರಾಮಾಂತರ ಪ್ರದೇಶದ ಪ್ರತಿ ಕುಟುಂಬಕ್ಕೆ 2000 ರೂ. ಸಹಾಯಧನ ನೀಡಲಾಗುವುದು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಐದು ಲಕ್ಷ ಮನೆಗಳಿಗೆ ಜಲಧಾರ ಹೆಸರಿನಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಜಾರಿಗೆ ತರಲಾಗಿದೆ.
ಆರೋಗ್ಯ ಕ್ಷೇತ್ರ ನಮ್ಮ ಸರ್ಕಾರದ ಕಾಳಜಿಯ ಕ್ಷೇತ್ರಗಳಲ್ಲೊಂದು. ಇದೇ ಉದ್ದೇಶದಿಂದ ಗ್ರಾಮೀಣ ಪ್ರದೇಶದ ಜೊತೆಯಲ್ಲಿ ನಗರ ಪ್ರದೇಶಗಳಿಗೂ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ವಿಸ್ತರಿಸಲಾಗಿದೆ. ದೇಶದಲ್ಲಿಯೇಪ್ರಥಮ ಬಾರಿಗೆ ರಾಜೀವ್ ಗಾಂಧಿ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಲಾಗಿದೆ. ಈ ಸೌಲಭ್ಯದ ಅನ್ವಯ ಸುಮಾರು ನಾಲ್ಕು ಕೋಟಿ ಬಡವರು ದೊಡ್ಡ ಆಸ್ಪತ್ರೆಗಳಲ್ಲಿ ವಿವಿಧ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.
ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಔಷಧಿ ಒದಗಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಜನೆರಿಕ್ ಔಷಧ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗೆಳು ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಳಪಟ್ಟ ದೊಡ್ಡ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯ ಕಲ್ಪಿಸಲಾಗಿದೆ. ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಪ್ರಾಯೋಗಿಕವಾಗಿ ಬಾಗಲಕೋಟೆ ಮತ್ತು ಬಿಜಾಪುರ ಜಿಲ್ಲೆಗಳ ಅಂಗನವಾಡಿ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಆಯುಷ್ ಪುಷ್ಠಿ ಬಿಸ್ಕತ್ತನ್ನು ರಾಜ್ಯದ ಹಿಂದುಳಿದ ಹತ್ತು ಜಿಲ್ಲೆಗಳ ತಲಾ ಒಂದು ತಾಲ್ಲೂಕಿಗೆ ವಿಸ್ತರಿಸಲಾಗುವುದು.
ಅಪಘಾತಕ್ಕೀಡಾಗಿ ತುರ್ತು ಚಿಕಿತ್ಸೆಗಾಗಿ ಸರ್ಕಾರದಿಂದ ಗುರುತಿಸಲ್ಪಟ್ಟ ಆಸ್ಪತ್ರೆಗಳಿಗೆ ದಾಖಲಾದವರಿಗೆ ಮುಖ್ಯಮಂತ್ರಿಗಳ ಸಾಂತ್ವನ ಯೋಜನೆಯಡಿ 25 ಸಾವಿರ ರೂ. ಪರಿಹಾರ ಧನವನ್ನು ನೀಡಲಾಗುವುದು.
ವೈದ್ಯಕೀಯ ಶಿಕ್ಷಣವನ್ನು ಇನ್ನಷ್ಟು ಸಾರ್ವತ್ರೀಕರಣಗೊಳಿಸುವ ಉದ್ದೇಶದಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಯೋಜಿಸಲಾಗಿದೆ. ಕಳೆದ ಸಾಲಿನಲ್ಲಿ ತುಮಕೂ ರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬಾಗಲಕೋಟೆ, ಹಾವೇರಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಚಾಮರಾಜನಗರ, ಕೊಡಗು, ಕೊಪ್ಪಳ, ಉತ್ತರ ಕನ್ನಡ, ಗದಗ ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ 150 ಎಂಬಿಬಿಎಸ್ ಸೀಟುಗಳ ಪ್ರವೇಶ ಮಿತಿಯೊಂದಿಗೆ ಹೊಸ ವೈದಕೀಯ ಕಾಲೇಜುಗಳನ್ನು ಪ್ರಾರಂಭಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶಿಕ್ಷಣ
ಕ್ಷೀರಭಾಗ್ಯ ಯೋಜನೆಯ ಮೂಲಕ 40 ಲಕ್ಷಕ್ಕೂ ಹೆಚ್ಚು ಅಂಗನವಾಡಿ ಮಕ್ಕಳು ಮತ್ತು 60 ಲಕ್ಷಕ್ಕೂ ಹೆಚ್ಚು ಶಾಲಾ ಮಕ್ಕಳೂ ಸೇರಿದಂತೆ ಒಂದು ಕೋಟಿಗೂ ಹೆಚ್ಚು ಮಕ್ಕಳಿಗೆ ವಾರಕ್ಕೆ ಮೂರು ದಿನ ಪ್ರತಿ ಮಗುವಿಗೆ 150 ಮಿಲಿ ಲೀಟರ್ ಹಾಲು ನೀಡುತ್ತಿರುವುದು ನಮ್ಮ ಸರ್ಕಾರದ ಗಮನಾರ್ಹ ಸಾಧನೆಗಳಲ್ಲೊಂದು.
ಶಾಲೆಗಳಲ್ಲಿ ಒಂದನೇ ತರಗತಿಗೆ ಹೆಣ್ಣು ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಉತ್ತೇಜಿಸಲು ಪ್ರತಿ ಹೆಣ್ಣು ಮಗುವಿನ ಪ್ರತಿದಿನದ ಹಾಜರಾತಿಗೆ ಎರಡು ರೂ. ಪ್ರೋತ್ಸಾಹಧನ ನೀಡುವ ವಿನೂತನ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೆ ತಂದಿದೆ. ಈ ಸೌಲಭ್ಯದಿಂದಾಗಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಒಟ್ಟಾರೆ ದಾಖಲಾತಿ ಹೆಚ್ಚಾಗಿದೆ. ಅಲ್ಲದೆ, ಶಾಲೆ ತೊರೆಯುವ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.
ಶಿಕ್ಷಣದ ಹಕ್ಕು ಕಾಯಿದೆಯ (ಆರ್.ಟಿ.ಇ.) ಅಡಿಯಲ್ಲಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಬಡವರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ವೇಶಾವಕಾಶವನ್ನು ಒದಗಿಸುವ ದೃಷ್ಟಿಯಿಂದ ವಾರ್ಷಿಕ ಆದಾಯ ಮಿತಿ ಒಂದು ಲಕ್ಷ ರೂ. ಒಳಗಿರುವ ಪಾಲಕರ ಮಕ್ಕಳಿಗೆ ಪ್ರಥಮ ಆದ್ಯತೆಯನ್ನು ನೀಡಲಾಗುತ್ತಿದೆ. ಈ ಆದ್ಯತೆಯನ್ನು ಪೂರೈಸಿದ ಮೇಲೆಯೂ ಸೀಟುಗಳು ಲಭ್ಯವಿದ್ದಲ್ಲಿ, ವಾರ್ಷಿಕ ಆದಾಯ ಮಿತಿ ಒಂದು ಲಕ್ಷ ರೂ. ನಿಂದ 3.50 ಲಕ್ಷ ರೂ. ಒಳಗಿರುವವರಿಗೂ ಪ್ರವೇಶ ಹಂಚಿಕೆ ಮಾಡಲಾಗುತ್ತದೆ. ಪ್ರಸ್ತುತ ಸಾಲಿನಲ್ಲಿ 98,000ಕ್ಕೂ ಹೆಚ್ಚು ಮಕ್ಕಳು ಈ ಯೋಜನೆಯ ಲಾಭ ಪಡೆದಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ 9511 ಹುದ್ದೆಗಳು, ಪ್ರೌಢ ಶಾಲಾ ಶಿಕ್ಷಕರ 1137 ಹುದ್ದೆಗಳು ಹಾಗೂ ಪದವಿ ಪೂರ್ವ ಕಾಲೇಜು ಉಪನ್ಯಾಸಕರ 1130 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 66 ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲು ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರು ಮತ್ತು ಅದರ ತಂತ್ರಜ್ಞಾನದ ಒಕ್ಕೂಟ ಸಂಸ್ಥೆಗಳ ಸಂಯೋಜನೆಯೊಡನೆ ಪ್ರಾಯೋಗಿಕವಾಗಿ ಗ್ರಾಮೀಣ ಭಾಗದ 1000 ಶಾಲೆಗಳಲ್ಲಿ ಟೆಲಿ ಶಿಕ್ಷಣ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗುತ್ತಿದೆ.
ಸಾರ್ವತ್ರಿಕ ಶಿಕ್ಷಣ ಸರ್ಕಾರದ ಗುರಿಯಾಗಿದೆ. ಸಮಾಜದಲ್ಲಿ ಯಾರೂ ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯನ್ನು ಖಚಿತವಾಗಿ ಕಂಡು ಹಿಡಿಯಲು ಸಮೀಕ್ಷೆ ನಡೆಸಲಾಗಿದೆ.
ಅಲ್ಲದೆ, ಅಂತಹ 1.68 ಲಕ್ಷ ಮಕ್ಕಳನ್ನು ಗುರುತಿಸಲಾಗಿದೆ. ವಿವಿಧ ಹಂತದ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಿ ಈವರೆಗೆ ಸುಮಾರು 99,000 ಮಕ್ಕಳನ್ನು ಮತ್ತೆ ಶಾಲೆಗೆ ಕರೆತಂದು ಅವರು ವಿದ್ಯಾಭ್ಯಾಸ ಮುಂದುವರಿಸಿಕೊಂಡು ಹೋಗುವಂತೆ ನೋಡಿಕೊಳ್ಳಲಾಗಿದೆ.
ಹತ್ತು ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಬಳಸಿಕೊಂಡು ಕಾಲೇಜುಗಳಲ್ಲಿನ ಉಪನ್ಯಾಸಕರ ಕೊರತೆಯನ್ನು ನೀಗಿಸಲಾಗಿದೆ. ಮಹಿಳಾ ಕಾಲೇಜುಗಳು ಇಲ್ಲದಿರುವ ಹಲವು ತಾಲ್ಲೂಕುಗಳಲ್ಲಿ 24 ಮಹಿಳಾ ಕಾಲೇಜುಗಳನ್ನು ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶಗಳಲ್ಲಿ 26 ಪೂರ್ಣ ಪ್ರಮಾಣದ ಸಾಮಾನ್ಯ ಕಾಲೇಜುಗಳನ್ನು ಈ  ಶೈಕ್ಷಣಿಕ ವರ್ಷದಲ್ಲಿಯೇ ಪ್ರಾರಂಭಿಸಿರುವುದು ನಮ್ಮ ಸರ್ಕಾರದ ಸಾಧನೆಯಾಗಿದೆ.
ಅನುದಾನಿತ ಕಾಲೇಜುಗಳಲ್ಲಿ ಅನುದಾನಿತ ಕೋರ್ಸುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ತಿ ವಿದ್ಯಾರ್ಥಿನಿಗೆ ತಲಾ 1200 ರೂ. ನಂತೆ ಬೋಧನಾ ಶುಲ್ಕ ಮತ್ತು ಪ್ರಯೋಗಾಲಯ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ ಹಾಗೂ ಅಷ್ಟೇ ಮೊತ್ತದ ಅನುದಾನವನ್ನು ಖಾಸಗಿ ಅನುದಾನಿತ ಕಾಲೇಜುಗಳಿಗೆ ಮರುಪಾವತಿಸಲಾಗುತ್ತಿದೆ.
ಸಮಾಜ ಕಲ್ಯಾಣ
ಸಾಮಾಜಿಕ ನ್ಯಾಯದ ಸಿದ್ದಾಂತಕ್ಕೆ ನಮ್ಮ ಬದ್ಧತೆ ರಾಜಿ ಇಲ್ಲದ್ದು. ಸಾಮಾಜಿಕ ನ್ಯಾಯ ಎಂದರೆ ಯಾರಿಂದಲೋ ಕಿತ್ತು ಇನ್ಯಾರಿಗೋ ಕೊಡುವುದಲ್ಲ. ಅದು ಲಭ್ಯ ಇರುವ ಸಂಪತ್ತು, ಅಧಿಕಾರ ಮತ್ತು ಅವಕಾಶಗಳನ್ನು ಎಲ್ಲರಿಗೂ ನೀಡುವ ಸಮಾನವಾದ ನ್ಯಾಯ. ಸಮಾನತೆಯ ತಳಹದಿಯ ಮೇಲೆ ಸಮಾಜವನ್ನು ಕಟ್ಟುವುದು ಸಾಮಾಜಿಕ ನ್ಯಾಯದ ಉದ್ದೇಶವಾಗಿದೆ. ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಎಲ್ಲರಿಗೂ ಅವರವರ ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ಕೊಡುವುದೇ ನಿಜವಾದ ಸಾಮಾಜಿಕ ನ್ಯಾಯ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಈ ಉದ್ದೇಶದಿಂದಲೇ ಹಿಂದುಳಿದ ಜಾತಿಗಳ ಜನರನ್ನು ಗುರುತಿಸಲು ಜಾತಿ ಗಣತಿ ನಡೆಸಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ತ್ವರಿತಗತಿಯ ಚಾಲನೆ ನೀಡಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ನೂತನ ಅಧ್ಯಕ್ಷರನ್ನೂ ನೇಮಿಸಲಾಗಿದೆ.
ಮೆಟ್ರಿಕ್ ನಂತರದ ಎಲ್ಲಾ ಕಾಲೇಜು ಶಿಕ್ಷಣ ಮತ್ತು ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವೃತ್ತಿ ಶಿಕ್ಷಣ ಕೈಗೊಳ್ಳುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಶಿಕ್ಷಣ ಸಂಸ್ಥೆಗಳಿಗೆ ನೇರವಾಗಿ ಪಾವತಿಸುವ ನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ಈ ವಿದ್ಯಾರ್ಥಿಗಳು ಶುಲ್ಕ ಪಾವತಿಸದೆಯೇ ನೇರವಾಗಿ ವೇಶ ಪಡೆಯಬಹುದಾಗಿದೆ.
ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ದೊರೆಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿ ಸಹಾಯ ಯೋಜನೆಯಡಿ (ವಿದ್ಯಾಸಿರಿ) ಮಾಸಿಕ 1500 ರೂ. ಗಳನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ.
ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯಿದೆ ನಮ್ಮ ಸರ್ಕಾರದ ಹೆಮ್ಮೆಯ ಕೊಡುಗೆ. ಇದರಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕ್ರಮವಾಗಿ 15,834 ಕೋಟಿ ರೂ. ಮತ್ತು 4,315 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಇದೊಂದು ದಾಖಲೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿಭಾವಂತ ಬಡವಿದ್ಯಾರ್ಥಿಗಳಿಗಾಗಿ ಸಕ್ತ ಸಾಲಿನಲ್ಲಿ 100 ವಸತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು. ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ, ಧಾರವಾಡ, ಬೆಳಗಾವಿ ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗಾಗಿ ಮೆಟ್ರಿಕ್ ನಂತರದ 100 ಹೊಸ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಗುವುದು.
ಮಹಿಳಾ ಕಲ್ಯಾಣ
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ನಮ್ಮೆಲ್ಲರ ಮನಸ್ಸನ್ನು ಕಲಕಿರುವುದು ನಿಜ. ಇದನ್ನು ತಡೆಯಲು ನಮ್ಮ ಸರ್ಕಾರ ಕಟಿಬದ್ದವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಾನೂನುಗಳನ್ನು ಬಿಗಿಗೊಳಿಸಲಾಗಿದೆ. ಪೊಲೀಸರನ್ನು ಜಾಗೃತಗೊಳಿಸಲಾಗಿದೆ. ಹೆಣ್ಣಿನ ಮಾನ ಮತ್ತು ಪ್ರಾಣಗಳ ಮೇಲೆ ದೌರ್ಜನ್ಯ ನಡೆಸುವ ದುಷ್ಕರ್ಮಿಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತಿದೆ.
ಅತ್ಯಾಚಾರ ಎಸಗುವವರನ್ನು ಗೂಂಡಾ ಕಾಯಿದೆಯಡಿ ಬಂಧಿಸಲು ಸರ್ಕಾರವು ಕಾಯಿದೆ ತಿದ್ದುಪಡಿ ಮಾಡಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಹತ್ತು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಜ್ಞಾನದೇಗುಲಗಳೆಂದು ಬಣ್ಣಿಸಲಾಗುವ ಶಾಲಾ-ಕಾಲೇಜುಗಳಲ್ಲಿಯೂ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಕಳವಳಕಾರಿ ಬೆಳವಣಿಗೆ. ಇದನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಅದು ಸರ್ಕಾರಿ ಶಾಲೆ ಇರಲಿ ಅಥವಾ ಖಾಸಗಿ ಶಾಲೆ ಇರಲಿ, ಮಕ್ಕಳು ಶಾಲಾ ಆವರಣಕ್ಕೆ ಪ್ರವೇಶಿಸಿದ ಕ್ಷಣದಿಂದ ಅವರು ಶಾಲೆ ಮುಗಿಸಿ ಹೊರಬರುವವರೆಗೂ, ಮಕ್ಕಳ ಸುರಕ್ಷತೆಗೆ ಶಾಲೆಯೇ ಹೊಣೆ. ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲಿನ ಲೈಂಗಿಕ ಕಿರುಕುಳ ಹಾಗೂ ಇತರೆ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಪ್ರತಿ ಶಾಲೆಯಲ್ಲೂ ಮಕ್ಕಳ ಸುರಕ್ಷಾ ಸಮಿತಿ ರಚಿಸುವಂತೆ ಸರ್ಕಾರ ಸೂಚಿಸಿದೆ.
ಅಲ್ಲದೆ, ಶಾಲೆಯಲ್ಲಿ ಕಾರ್ಯ ನಿರ್ವಹಿಸುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಪೂರ್ವಾಪರ ಹಾಗೂ ಹಿನ್ನೆಲೆಯ ಸವಿವರ ತಪಾಸಣೆಯ ನಂತರವೇ, ಅವರನ್ನು ನೇಮಕ ಮಾಡಿಕೊಳ್ಳಬೇಕೆಂದು ಎಲ್ಲಾ ಶಾಲೆಗಳ ಆಡಳಿತ ಮಂಡಳಿಗಳಿಗೆ ನಿರ್ದೇಶನ ನೀಡಲಾಗಿದೆ.
ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಕಾನೂನು ಮತ್ತು ಆರ್ಥಿಕ ನೆರವು ಒಳಗೊಂಡಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯದ ಎಲ್ಲಾ 30 ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಬೆಂಗಳೂರು ನಗರದ ಐದು ಆಸ್ಪತ್ರೆಗಳಲ್ಲಿ ಮಹಿಳಾ ವಿಶೇಷ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗುವುದು. ಅಂತೆಯೇ, ದೌರ್ಜನ್ಯ ಮತ್ತುಸಂಕಷ್ಟಕ್ಕೊಳಗಾದ ಮಕ್ಕಳಿಗೆ ತುರ್ತು ಪರಿಹಾರವನ್ನು ಒದಗಿಸಲು 25 ಲಕ್ಷ ರೂ. ಮೊತ್ತದ ಮಕ್ಕಳ ನಿಧಿಯನ್ನು ಸ್ಥಾಪಿಸಲಾಗುವುದು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಕಾನೂನಿಗೆ ತಿದ್ದುಪಡಿ ತರುವ ಹಾಗೂ ಶಿಕ್ಷೆಯ ಮಾಣವನ್ನು ಹೆಚ್ಚಿಸುವ ಕುರಿತು ಅಧ್ಯಯನ ಮಾಡಿ ಸರ್ಕಾರಕ್ಕೆ ಶಿಫಾರಸ್ಸು ನೀಡಲು ಮಾಜಿ ಸಚಿವರಾದ ಶ್ರೀ ಎಂ.ಸಿ. ನಾಣಯ್ಯ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ಮೂರು ತಿಂಗಳೊಳಗೆ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ.
ಆದರೆ, ಹೆಣ್ಣಿನ ಮೇಲಿನ ದೌರ್ಜನ್ಯದ ಬಹುತೇಕ ಪ್ರಕರಣಗಳು ಸಮೀಪದ ಬಂಧು-ಮಿತ್ರರಿಂದ ಹಾಗೂ ಪರಿಚಿತರಿಂದಲೇ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದಕಾರಣ, ಇಂತಹ ಅಪರಾಧಗಳ ನಿಯಂvಣ ಕೇವಲ ಸರ್ಕಾರ ಇಲ್ಲವೇ ಕಾನೂನಿಂದಲೇ ಸಾಧ್ಯವಾಗದು. ಇದನ್ನು ತಡೆಯಬೇಕಾದರೆ ಸರ್ಕಾರದ ಜೊತೆಯಲ್ಲಿ ಸಮಾಜವೂ ಕೈಜೋಡಿಸಬೇಕಾಗುತ್ತದೆ. ಹೆಣ್ಣಿನ ಮಾನ ರಕ್ಷಣೆಯ ಕಾರ್ಯ ಒಂದು ಸಾಮಾಜಿಕ ಚಳುವಳಿಯ ರೀತಿಯಲ್ಲಿಯೇ ನಡೆಯಬೇಕೆಂಬುದು ನನ್ನ ಆಶಯ.
ಇಂಧನ
ರಾಜೀವ್ ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯ ಅಡಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುದ್ದೀಕರಣಗೊಳ್ಳದೆಯೇ ಉಳಿದು ಹೋಗಿರುವ ಗ್ರಾಮಗಳು, ಜನವಸತಿಗಳು ಹಾಗೂ ಮನೆಗಳನ್ನು ವಿದ್ಯುದ್ದೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಅಲ್ಲದೆ, ಮುಂದಿನ ಆರು ತಿಂಗಳ ಅವಧಿಯಲ್ಲಿ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಬಡತನ ರೇಖೆಗಿಂತಲೂ ಕೆಳಗಿರುವ ಕುಟುಂಬಗಳ 1.16 ಲಕ್ಷ ಮನೆಗಳನ್ನು ವಿದ್ಯುದ್ದೀಕರಣಗೊಳಿಸಲು ಯೋಜಿಸಲಾಗಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ ನವೀಕರಿಸಬಹುದಾದ ಇಂಧನ ನೀತಿಯನ್ನು ಸರ್ಕಾರ ಸದ್ಯದಲ್ಲಿಯೇಪರಿಷ್ಕರಿಸಲಿದೆ.
ಗಣಿ
ಅಕ್ರಮ ಗಣಿಗಾರಿಕೆಯನ್ನು ತಡೆಯಲು ನಮ್ಮ ಸರ್ಕಾರ ಕಟಿಬದ್ದವಾಗಿದೆ. ಇದಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರನ್ನು ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ. 2014-15ನೇ ಸಾಲಿನಲ್ಲಿ ಏಪ್ರಿಲ್ನಿಂದ ಜುಲೈ 2014ರ ತಿಂಗಳವರೆಗೆ ಕಬ್ಬಿಣದ ಅದಿರು ಗಣಿ ಗುತ್ತಿಗೆಯಿಂದ 7.8 ದಶಲಕ್ಷ ಮೆಟ್ರಿಕ್ ಟನ್ ಅದಿರು ಮಾರಾಟವಾಗಿ, 216.80 ಕೋಟಿ ರೂ. ರಾಜಧ  ಸಂಗ್ರಹವಾಗಿದೆ.
ರಾಜ್ಯದಲ್ಲಿ ಗೂಂಡಾ ಕಾಯಿದೆಗೆ ತಿದ್ದುಪಡಿ ಮಾಡಿ ಮರಳು ಸೇರಿದಂತೆ ಎಲ್ಲಾ ಖನಿಜ ಆಧಾರಿತ ಅಪರಾಧಗಳನ್ನು ಆeಠಿಡಿeಜಚಿಣoಡಿ oಜಿ ಇಟಿviಡಿoಟಿmeಟಿಣ ಎಂದು ವ್ಯಾಖ್ಯಾನಿಸಿ ಗೂಂಡಾ ಕಾಯಿದೆಯ ವ್ಯಾಪ್ತಿಗೆ ತರಲಾಗಿದೆ. ರಾಜ್ಯದಲ್ಲಿ ನದಿ ಮರಳಿನ ಕೊರತೆ ಇರುವುದರಿಂದ ಪರ್ಯಾಯವಾಗಿ ಉತ್ಪಾದಿತ ಮರಳು ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತಿದೆ. ಅದರಂತೆ ನಿಯಮಾವಳಿಯಲ್ಲಿ ಕಲ್ಲುಗಣಿ ಗುತ್ತಿಗೆ ಗರಿಷ್ಠ ವಿಸ್ತೀರ್ಣ ಮಿತಿಯನ್ನು 50 ಎಕರೆಗೆ ಹಾಗೂ ಗುತ್ತಿಗೆ ಅವಧಿಯನ್ನು 20 ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ.
ರಾಜ್ಯದಲ್ಲಿ ಹೊಸ ಖನಿಜ ನೀತಿ-2014 ಸದ್ಯದಲ್ಲಿಯೇ ಜಾರಿಗೊಳಿಸಲಾಗುವುದು. ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ‘ಸಿ' ವರ್ಗದ ಗಣಿ ಗುತ್ತಿಗೆಗಳಲ್ಲಿ ಭಾರತ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗುವುದು. ರಾಜ್ಯದಲ್ಲಿ ಪ್ರಸ್ತುತ 15 ದಶಲಕ್ಷ ಟನ್ ಕಬ್ಬಿಣದ ಅದಿರು ವಾರ್ಷಿಕವಾಗಿ ಉತ್ಪಾದನೆಯಾಗುತ್ತಿದೆ. 2014-15ನೇ ಸಾಲಿನಲ್ಲಿ ಇದು ಸುಮಾರು 23 ದಶಲಕ್ಷ ಟನ್ ಗುರಿ ತಲುಪುವ ನಿರೀಕ್ಷೆ ಇದೆ.
ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆಯಿಂದ ಪರಿಸರದ ಮೇಲೆ ಆಗಿರುವ ಹಾನಿಯನ್ನು ಸರಿದೂಗಿಸಲು ಗಣಿ ಪರಿಣಾಮ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆ (ಅomಠಿಡಿeheಟಿsive ಇಟಿviಡಿoಟಿmeಟಿಣ Pಟಚಿಟಿ ಜಿoಡಿ ಒiಟಿiಟಿg Imಠಿಚಿಛಿಣ Zoಟಿe) ಅನುಷ್ಠಾನಗೊಳಿಸಲು ರಾಜ್ಯದಲ್ಲಿ ಕರ್ನಾಟಕ ಗಣಿ ಪರಿಸರ ಮರುಸ್ಥಾಪನಾ ನಿಗಮ (ಏಚಿಡಿಟಿಚಿಣಚಿಞಚಿ ಒiಟಿiಟಿg ಇಟಿviಡಿoಟಿmeಟಿಣ ಖesಣoಡಿಚಿಣioಟಿ ಅomಠಿಚಿಟಿಥಿ ಐimiಣeಜ) ಎಂಬ ಸಂಸ್ಥೆಯನ್ನು ರಚಿಸಲಾಗಿದೆ.
ಕೈಗಾರಿಕೆ
ಕೈಗಾರಿಕಾ ಕ್ಷೇತ್ರ ನಮ್ಮ ಪ್ರಮುಖ ಆದ್ಯತೆಗಳಲ್ಲೊಂದು.ಈ ನಿಲುವಿಗೆ ಅನುಗುಣವಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ 25,966 ಘಟಕಗಳು ಸ್ಥಾಪನೆಯಾಗಿವೆ. ಇದರಲ್ಲಿ 2,850 ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. ಇದರಿಂದ 1,67,347 ಜನರಿಗೆ ಉದ್ಯೋಗ ಲಭಿಸಿದೆ. ಜನವರಿ 2014ರಿಂದ ಇಲ್ಲಿಯವರೆಗೆ 12,034.63 ಕೋಟಿ ರೂ. ಬಂಡವಾಳ ಹೂಡಿಕೆಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ 43 ಪ್ರಸ್ತಾವನೆಗಳಿಗೆ ನಮ್ಮ ಸರ್ಕಾರ ಮಂಜೂರಾತಿ ನೀಡಿದೆ.
ಗ್ರಾಮೀಣ ಪ್ರದೇಶದಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಯುವಕ ಹಾಗೂ ಯುವತಿಯರಿಗೆ ಪೂರಕ ವಾತಾವರಣ ನಿರ್ಮಿಸಲಾಗಿದೆ. ಹತ್ತು ಲಕ್ಷ ರೂ. ಮೊತ್ತದವರೆಗೆ ಬಂಡವಾಳ ಹೂಡಿ, 1000 ಕಿರು ಕೈಗಾರಿಕೆಗಳನ್ನು ಸ್ಥಾಪಿಸಲು ಅನುವು ಮಾಡಿಕೊಡಲಾಗಿದೆ. ನಕ್ಸಲ್ ಪೀಡಿತ ದ ಶಗಳಾದ ಕಾರ್ಕಳ ಹಾಗೂ ಶೃಂಗೇರಿ ತಾಲ್ಲೂಕುಗಳಲ್ಲಿ ತೆಂಗಿನ ನಾರು ತರಬೇತಿ ಮತ್ತು ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಲಾಗಿದೆ.
ಜವಳಿ ಮತ್ತು ಉಡುಪು ವಲಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಮುಂದಿನ ಐದು ವರ್ಷಗಳ ಅವಧಿಗೆ ಅನ್ವಯವಾಗುವಂತೆ ನೂತನ ಜವಳಿ ನೀತಿಯನ್ನು  ಘೋಷಿಸಲಾಗಿದೆ. ಈ ಅವಧಿಯಲ್ಲಿ ಐದು ಲಕ್ಷ ಉದ್ಯೋಗಾವಕಾಶ ಸೃಷ್ಠಿಸಲಾಗುವುದು. ಈ ಉದ್ದೇಶಕ್ಕಾಗಿ ಈಗಾಗಲೇ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಅರಣ್ಯ ಮತ್ತು ಪರಿಸರ
ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣಾ ಕಾರ್ಯಗಳಲ್ಲದೆ ಅರಣ್ಯ ಕೃಷಿ, ನಗರ ಹಸರೀಕರಣ, ನೆಡುತೋಪು ಚಟುವಟಿಕೆಗಳಿಗೆ ಇಂಬು ನೀಡಲಾಗಿದೆ. ಅಗಾಧ ಪ್ರಮಾಣದ ಹಾಗೂ ಅಪಾರ ಮೌಲ್ಯದ ಅರಣ್ಯ ಸಂಪತ್ತಿರುವ ಪಶ್ಚಿಮಘಟ್ಟ ಪ್ರದೇಶವನ್ನು ವಾಣಿಜ್ಯ ಬಳಕೆಗೆ ನಿಷೇಧಿಸಲಾಗಿದೆ.
ಸಾರ್ವಜನಿಕರನ್ನು, ವಿಶೇಷವಾಗಿ ರೈತರನ್ನು, ಅರಣ್ಯೀಕರಣ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಜಾರಿಗೆ ತರಲಾಗಿದೆ.
ಜೈವಿಕ ವೈವಿಧ್ಯಗಳ ಸಂಶೋಧನೆ, ಸುಸ್ಥಿರ ಬಳಕೆ, ತರಬೇತಿ ಹಾಗೂ ಜಾಗೃತಿಗಾಗಿ ಕರ್ನಾಟಕ ಜೀವ ವೈವಿಧ್ಯ ಮಂಡಳಿಯನ್ನು ಸ್ಥಾಪಿಸಲಾಗಿದೆ. ಪಶ್ಚಿಮ ಘಟ್ಟ ಹಾಗೂ ಇತರೆ ಪ್ರದೇಶಗಳಲ್ಲಿನ ಔಷಧೀಯ ಸಸ್ಯಗಳು ಹಾಗೂ ಅಳಿವಿನ ಅಂಚಿನಲ್ಲಿರುವ ಜೀವ ಪ್ರಭೇಧಗಳ ಸಂರಕ್ಷಣಾ ಕಾರ್ಯಗಳನ್ನು ಮಂಡಳಿಯು ಅನುಷ್ಠಾನಗೊಳಿಸುತ್ತಿದೆ.
ರಾಜ್ಯದಲ್ಲಿನ ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ತಯಾರಿಸಿರುವ ಕ್ರಿಯಾ ಯೋಜನೆಯ ವರದಿಯು ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ. ಈ ವರದಿಯಲ್ಲಿ ಪ್ರಮುಖವಾಗಿ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ, ಆರೋಗ್ಯ, ಇಂಧನ, ಜಲ ಸಂಪನ್ಮೂಲ ಹಾಗೂ ಅರಣ್ಯ ಇಲಾಖೆಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ, ಹವಾಮಾನ ಬದಲಾವಣೆ ತಡೆಗಟ್ಟುವ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಕನ್ನಡ ಮತ್ತು ಸಂಸ್ಕೃತಿ
ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೂನಿಕೋಡ್ ಅಕ್ಷರ ವಿನ್ಯಾಸ, ಪರಿವರ್ತಕಗಳು, ಮೊಬೈಲ್ನಲ್ಲಿ ಕನ್ನಡ ಬಳಕೆ, ಬ್ರೈಲ್ ಲಿಪಿಯಲ್ಲಿ ಕನ್ನಡ ಬಳಕೆ ಒಳಗೊಂಡಂತೆ ಕನ್ನಡದಲ್ಲಿ  ನಾಲ್ಕು ಯೂನಿಕೋಡ್ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಮಾಡಲಾಗಿದೆ.
ಸಮಗ್ರ ಸಾಂಸ್ಕೃತಿಕ ನೀತಿ ರೂಪಿಸಲು ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿರುವ ಸಾಂಸ್ಕೃತಿಕ ನೀತಿಯ ಕರಡು ಪರಿಶೀಲನಾ ಹಂತದಲ್ಲಿದೆ. ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯಪರಿಷತ್ತಿನ ಶತಮಾನೋತ್ಸವ ಸ್ಮಾರಕ ಭವನ ನಿರ್ಮಾಣ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಐದು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಮಂಡ್ಯ ಜಿಲ್ಲೆ ಸ್ಥಾಪನೆಯಾಗಿ 75 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆಯನ್ನು ಸ್ಮರಿಸಲು ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಮೂಲಕ ಸಂತಶ್ರೇಷ್ಠ ಕನಕದಾಸರ ನಾಲ್ಕು ಕಾವ್ಯ ಆವೃತ್ತಿಗಳು ಮತ್ತು ಸಮಗ್ರ ಕೀರ್ತನೆಗಳನ್ನು ಆಂಗ್ಲಭಾಷೆ ಸೇರಿದಂತೆ 15 ಭಾಷೆಗಳಿಗೆ ಅನುವಾದ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ.
ಆಡಳಿತ ಸುಧಾರಣೆ
ಆಡಳಿತದಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ತರಬೇಕೆಂಬುದು ಸರ್ಕಾರದ ಅಭಿಲಾಷೆ ಮತ್ತು ಆಶಯ. ಅದಕ್ಕಾಗಿ ಆಡಳಿತ ಯಂತ್ರವನ್ನು ಚುರುಕುಗೊಳಿಸಿದ್ದೇವೆ. ನೇಮಕಾತಿಗಳಲ್ಲಿ ಪಾವಿತ್ರ್ಯ ಕಾಯ್ದುಕೊಳ್ಳುವುದೂ ಸೇರಿದಂತೆ ಹಲವು ವಿಷಯಳಲ್ಲಿ ಕೆಲವು ಕಠಿಣ ನಿರ್ಣಯಗಳನ್ನು ಕೈಗೊಂಡಿದ್ದೇವೆ. ನೇಮಕಾತಿಗಳಲ್ಲಿ ವ್ಯಾಪಕವಾದ ಅಕ್ರಮಗಳು ತನಿಖೆಯಿಂದ ಸ್ಪಷ್ಟಪಟ್ಟಿದ್ದರೂ ಸಹ ಕೆಲವು ಪಟ್ಟಭದ್ರ  ಹಿತಾಸಕ್ತಿಗಳು ಭಾವುಕತೆಯ ಬಡಿದೆಬ್ಬಿಸಲು ಯತ್ನಿಸುತ್ತಿವೆ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದ ನಡವಳಿಕೆ ಎಂಬುದನ್ನು ಜನತೆ ಗಮನಿಸಬೇಕು. ಅಕ್ರಮಗಳಿಗೆ ಮಾನವೀಯತೆಯ ಮುಖ ತೊಡಿಸಲು ಮುಂದಾಗುವವರನ್ನು ಹಿಮ್ಮೆಟ್ಟಿಸಬೇಕು.
ಕಳೆದ 15 ತಿಂಗಳ ಅವಧಿಯಲ್ಲಿ ನಮ್ಮ ಸರ್ಕಾರ ಜನರ ಕಷ್ಟ ಸಂಕಷ್ಟಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಕಾಲದಲ್ಲಿ ಕರಾರುವಕ್ಕಾದ ನಿರ್ಣಯಗಳನ್ನು ಕೈಗೊಂಡಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಸಮಾಜದ ಎಲ್ಲಾ ವರ್ಗಗಳ ಎಲ್ಲಾ ಜನರ ಶ್ರೇಯೋಭಿವೃದ್ಧಿಗಾಗಿ ಸ್ವಯಂ  ರಿತವಾಗಿ ಹಲವು ನೀತಿಗಳನ್ನು ರೂಪಿಸಿದೆ. ಅಲ್ಲದೆ, ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇವೆಲ್ಲವೂ ನಮ್ಮ ಸರ್ಕಾರದ ಸದ್ದುಗದ್ದಲವಿಲ್ಲದ ಸಾಧನೆಯೇ ಆಗಿದೆ. ಇಷ್ಟಾದರೂ ನಮ್ಮ ನ್ಯಾಯಯುತ ನಿರ್ಣಯಗಳಲ್ಲೂ ಕೆಲವರು ತಪ್ಪು ಹುಡುಕಲು ಯತ್ನಿಸುತ್ತಿರುವುದು ದುರದೃಷ್ಟಕರ. ಇದಕ್ಕಾಗಿ ನಾವು ಧೃತಿಗೆಡುವುದಿಲ್ಲ. ರಾಜ್ಯದ ಅಭ್ಯುದಯದತ್ತ ದಿಟ್ಟ ಹೆಜ್ಜೆಯನ್ನಿಡಲು ಪಣತೊಟ್ಟಿದ್ದೇವೆ. ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮುನ್ನಡೆಯುತ್ತೇವೆ.
ಖಿheಡಿe is ಚಿ higheಡಿ ಅouಡಿಣ ಣhಚಿಟಿ ಅouಡಿಣs oಜಿ ಎusಣiಛಿe ಚಿಟಿಜ ಣhಚಿಣ is ಣhe ಅouಡಿಣ oಜಿ ಅoಟಿsಛಿieಟಿಛಿe. Iಣ suಠಿeಡಿseಜes ಚಿಟಟ oಣheಡಿ ಅouಡಿಣs. (ನ್ಯಾಯದಾನ ಮಾಡುವ ನ್ಯಾಯಾಲಯಗಳಿಗಿಂತಲೂ ಉನ್ನತ ನ್ಯಾಯಾಲಯವೊಂದಿದೆ. ಅದುವೇ ಆತ್ಮಸಾಕ್ಷಿಯ ನ್ಯಾಯಾಲಯ, ಅದು ಇತರೆ ಎಲ್ಲಾ ನ್ಯಾಯಾಲಯಗಳನ್ನೂ ರದ್ದುಗೊಳಿಸುತ್ತದೆ) ಎಂಬ ಮಹಾತ್ಮ ಗಾಂಧಿ ಅವರ ಮಾತುಗಳನ್ನು ಸ್ಮರಿಸುತ್ತಾ, ಕರ್ನಾಟಕದ ವಿಕಾಸಕ್ಕೆ ನಾವು ಬದ್ಧ ಎಂಬುದನ್ನು ಪುನರುಚ್ಚರಿಸುತ್ತಾ, ತಮ್ಮೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಮತ್ತೊಮ್ಮೆ ಹಾರೈಸುತ್ತೇನೆ.
ಜೈ ಹಿಂದ್ - ಜೈ ಕರ್ನಾಟಕ






No comments:

Post a Comment