Sunday 17 August 2014

ಮೈಸೂರು ಸುದ್ದಿಗಳು.

ಯುವ ದಸರಾಗೆ ಮೈಸೂರು ಸಜ್ಜಾಗುತ್ತಿದೆ

ಮೈಸೂರು,ಆ.16.ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಯುವ ದಸರಾಗೆ ಸಿದ್ಧತೆ ಪ್ರಾರಂಭವಾಗಿದೆ. ಯುವ ಸಂಭ್ರಮ ಹಾಗೂ ಯುವ ದಸರಾ ಸಿದ್ಧತೆಗಾಗಿ ಇಂದು ಮಹಾರಾಜ ಕಾಲೇಜಿನ ಶತಮಾನೊತ್ಸವ ಭವನದಲ್ಲಿ ಪ್ರಾಂಶುಪಾಲರ ಸಭೆ ಕರೆದು ಯುವ ದಸರಾದ ಬಗ್ಗೆ ಚರ್ಚಿಸಲಾಯಿತು.
ಉತ್ತಮ ಸಂಸ್ಕøತಿಯುಳ್ಳ ಕಾರ್ಯಕ್ರಮಗಳನ್ನು ಯುವ ಸಂಭ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರು ಆಯ್ಕೆ ಮಾಡಿ ಕಳುಹಿಸಿಕೊಡಬೇಕು ಹಾಗೂ ಅರ್ಥಗರ್ಭಿತವಲ್ಲದ ಸಾಹಿತ್ಯವುಳ್ಳ ಗೀತೆಗಳ ನೃತ್ಯ ರೂಪಕವನ್ನು ನೀಡುವಂತಿಲ್ಲ, ನೃತ್ಯ ರೂಪಕದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಧರಿಸುವ  ಉಡುಪುಗಳು ಸಭ್ಯವಾಗಿರಬೇಕು ಎಂದು ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ ಎನ್ ನಟರಾಕ್ ತಿಳಿಸಿದರು. ನೃತ್ಯದ ಪರಿಕಲ್ಪನೆಗಳು ಮುಖ್ಯವಾಗಿ ನಾರಿ ಶಕ್ತಿ, ಕನ್ನಡ ಮತ್ತು ಸಂಸ್ಕøತಿ, ಪಾರಂಪರಿಕ ರಕ್ಷಣೆ, ರಾಷ್ಟ್ರೀಯ ಭಾವೈಕ್ಯತೆ, ಪರಿಸರ ಹಾಗೂ ಸಾತಂತ್ರ್ಯ ಚಳುವಳಿಗಳ ಆಧಾರಿತವಗಿರಬೇಕು ಎಂದರು.
ಯುವ ಸಂಭ್ರಮದಲ್ಲಿ ಕಾರ್ಯಕ್ರಮ ನೀಡುವ ತಂಡದಲ್ಲಿ ಕನಿಷ್ಠ 25 ಹಾಗೂ ಗರಿಷ್ಠ 60 ಕಾಲೇಜು ವಿದ್ಯಾರ್ಥಿಗಳು ಸೇರಿ ಒಂದು ತಂಡ ರಚಿಸಿಕೊಂಡು ಕಾರ್ಯಕ್ರಮ ನೀಡಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ  ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಿಗೆ ಯುವದಸರಾ ಸಮಿತಿಯ ಈ ಮೇಲ್ ವಿಳಾಸ ನೀಡಲಾಗುವುದು. ಪ್ರಾಂಶುಪಾಲರು ತಮ್ಮ ಕಾಲೇಜಿನ ತಂಡದಿಂದ ಕಾರ್ಯಕ್ರಮ ನೀಡಲು ಆಯ್ಕೆ ಮಾಡಿಕೊಳುವ ಪರಿಕಲ್ಪನೆ , ತಂಡದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ, ವಸ್ತ್ರ ವಿನ್ಯಾಸಕ್ಕೆ , ನೃತ್ಯ ತರಬೇತಿ ಇತ್ಯಾದಿಗಳಿಗೆ ತಗುಲುವ ವೆಚ್ಚದ ವಿವರವನ್ನು ಸೆಪ್ಟೆಂಬರ್ 5 ರೊಳಗಾಗಿ ರವಾನಿಸಲು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸುವ ತಂಡಗಳಿಗೆ ವಸ್ತ್ರಾಲಂಕಾರ ಕೊಠಡಿಗಳ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು , ಹೊರ ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳಿಂದ ಭಾಗವಹಿಸಲು ಬರುವ ಕಾಲೇಜಿನ ತಂಡಗಳಿಗೆ ಕಾರ್ಯಕ್ರಮ ನೀಡಲು ಮೊದಲು ಅವಕಾಶ ನೀಡಬೇಕು, ಒಂದು ತಂಡದ ಪ್ರದರ್ಶನಕ್ಕೆ  ಗರಿಷ್ಟ 12 ನಿಮಿಷಗಳ ಕಾಲಾವಕಾಶ ನಿಗದಿಪಡಿಸಿಕೊಳ್ಳಬೇಕು 10 ಪ್ರದರ್ಶನ ನೀಡಲು ಹಾಗೂ 2 ನಿಮಿಷ ಪ್ರದರ್ಶನ ನೀಡಿದ ತಂಡಕ್ಕೆ  ನೆನಪಿನ ಕಾಣಿಕೆ ನೀಡಲು ಬಳಸಿಕೊಂಡಲ್ಲಿ ಕಾರ್ಯಕ್ರಮ ಸುಸೂತ್ರವಾಗಿ ನಡೆಯುತ್ತದೆ  ಎಂದು ವಿವಿಧ ಕಾಲೇಜುಗಳಿಂದ ಸಭೆಗೆ ಆಗಮಿಸಿದ ಪ್ರಾಂಶುಪಾಲರುಗಳು ಸಲಹೆ ನೀಡಿದರು.
ಸಭೆಯಲ್ಲಿ ವಿವಿಧ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.

ಹೇಮಗಂಗೋತ್ರಿಯಲ್ಲಿ ಐದು ಹೊಸ ಕೋರ್ಸ್‍ಗಳು
   ಮೈಸೂರು,ಆ.16. ಮೈಸೂರು ವಿಶ್ವವಿದ್ಯಾನಿಲಯ, ಹೇಮಗಂಗೋತ್ರಿ, ಸ್ನಾತಕೋತ್ತರ ಕೇಂದ್ರದಲ್ಲಿ 2014-15ನೇ ಸಾಲಿನಿಂದ ಐದು ಹೊಸ ವಿಭಾಗಗಳಾದ ಗಣಿತ, ಇತಿಹಾಸ, ಅರ್ಥಶಾಸ್ತ್ರ, ಮಾಸ್ಟರ್ ಆಫ್ ಫೈನಾನ್ಸಿಯಲ್ ಮ್ಯಾನೇಜ್‍ಮೆಂಟ್ ಮತ್ತು ಸಸ್ಯಶಾಸ್ತ್ರವನ್ನು ಪ್ರಾರಂಭಿಸಲಾಗುತ್ತಿದೆ. ಈ ಹೊಸ ಸ್ನಾತಕೋತ್ತರ ಕೋರ್ಸ್‍ಗಳಿಗೆ ಅರ್ಜಿಗಳನ್ನು ಈ ಮೊದಲೇ ಸಲ್ಲಿಸಿದ ಆಸಕ್ತ ವಿದ್ಯಾರ್ಥಿಗಳು ಕೇಂದ್ರವನ್ನು ವ್ಯಾಸಂಗಕ್ಕಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಕೇಂದ್ರದ ನಿರ್ದೇಶಕರಾದ ಡಾ.ಟಿ.ಎಸ್. ದೇವರಾಜ್ ಅವರು ತಿಳಿಸಿದ್ದಾರೆ.

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ.
    ಮೈಸೂರು,ಆ.16. 6 ವರ್ಷ ಮೇಲ್ಪಟ್ಟ 15 ವರ್ಷದೊಳಗಿನ ಮಕ್ಕಳು ತಮ್ಮ ಪ್ರಾಣದ ಹಂಗನ್ನು ತೊರೆದು, ಇತರರ ಪ್ರಾಣ ರಕ್ಷಣೆಗಾಗಿ ಅಸಾಧಾರಣ ಧೈರ್ಯ, ಸಾಹಸ ಪ್ರದರ್ಶಿಸಿದ ಬಾಲಕರಿಗೆ “ಹೊಯ್ಸಳ ಪ್ರಶಸ್ತಿ” ಮತ್ತು ಬಾಲಕಿಯರಿಗೆ “ಕೆಳದಿ ಚೆನ್ನಮ್ಮ ಪ್ರಶಸ್ತಿ” ಗಳನ್ನು ನೀಡಿ ಗೌರವಿಸಲು ಅರ್ಜಿ ಆಹ್ವಾನಿಸಿದೆ.  ಈ ಪ್ರಶಸ್ತಿಯು ರೂ.10,000/-ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.
     ಅಸಾಧಾರಣ ಧೈರ್ಯ, ಶೌರ್ಯ ಸಾಧಿಸಿರುವ ಪ್ರಕರಣವು ಆಗಸ್ಟ್-2013 ರಿಂದ ಜುಲೈ-2014 ರೊಳಗೆ ನಡೆದಿರಬೇಕು. ಈ ಸಾಧನೆಯು ಜಿಲ್ಲಾ ಮಟ್ಟದಲ್ಲಿ ಗುರುತಿಸಿರಬೇಕು. ಶೌರ್ಯ ಸಾಧನೆ ತೋರಿದ ಬಗ್ಗೆ, ಆರಕ್ಷಕ ಇಲಾಖೆಯ ಪ್ರಾಥಮಿಕ ತನಿಖಾ ವರದಿ (ಎಫ್.ಐ.ಆರ್) ಅನ್ನು ಲಗತ್ತಿಸಬೇಕು.  ಈ ಹಿಂದೆ ಯಾವುದಾದರೂ ವರ್ಷಗಳಲ್ಲಿ ತಮ್ಮ ಪ್ರಸ್ತಾವನೆಯು ಜಿಲ್ಲಾ/ರಾಜ್ಯ/ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಪರಿಗಣಿಸಲ್ಪಟ್ಟಿದ್ದಲ್ಲಿ ಮತ್ತೊಮ್ಮೆ ಸಲ್ಲಿಸಲು ಅವಕಾಶವಿರುವುದಿಲ್ಲ.
ಅರ್ಜಿ ನಮೂನೆಗಳನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ನಂ:9/ಎ, 3ನೇ ಮಹಡಿ, ಕೃಷ್ಣಧಾಮ ಎದುರು, ಸಾಹುಕಾರ್ ಚೆನ್ನಯ್ಯ ರಸ್ತೆ, ಸರಸ್ವತಿಪುರಂ, ಮೈಸೂರು ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ತ್ರಿಪ್ರತಿಯಲ್ಲಿ        ದಿನಾಂಕ:10-09-2014ರೊಳಗೆ ಸಲ್ಲಿಸುವುದು.
   ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:2498031 ಅಥವಾ 2495432ನ್ನು ಸಂಪರ್ಕಿಸಬಹುದಾಗಿದೆ.                                            


ಗ್ರಾಮೀಣ, ದಸರಾ ಹಾಗೂ ಆರ್‍ಜಿಕೆಎ ಕ್ರೀಡಾ ಕೂಟ
ಮೈಸೂರು,ಆ.16.ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ 2014-15ನೇ ಸಾಲಿನ ಮೈಸೂರು ಜಿಲ್ಲೆಯ ಟಿ.ನರಸೀಪುರ, ಹುಣಸೂರು ಮತ್ತು ನಂಜನಗೂಡು ತಾಲ್ಲೂಕುಗಳಲ್ಲಿ ತಾಲ್ಲೂಕುಮಟ್ಟದ ರಾಜೀವ್ ಗಾಂಧಿ ಕ್ರೀಡಾ ಮತ್ತು ಖೇಲ್ ಅಭಿಯಾನ (ಆರ್‍ಜಿಕೆಎ)  ಗ್ರಾಮೀಣ ಕ್ರೀಡಾಕೂಟ, ದಸರಾ ಕ್ರೀಡಾಕೂಟ ಮತ್ತು ಆರ್‍ಜಿಕೆಎ ಮಹಿಳಾ ಕ್ರೀಡಾಕೂಟ ನಡೆಸಲಾಗುವುದು.
ತಾಲ್ಲೂಕುಮಟ್ಟದ ಆರ್‍ಜಿಕೆಎ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಥಮ ಸ್ಥಾನ ಪಡೆದವರಿಗೆ ರೂ. 250-00, ದ್ವಿತೀಯ ಸ್ಥಾನ ಪಡೆದವರಿಗೆ ರೂ. 150-00, ತೃತೀಯ ಸ್ಥಾನ ಪಡೆದವರಿಗೆ ರೂ. 100-00 ಗಳಂತೆ ಚೆಕನ್ನು ಕೇಂದ್ರ ಸರ್ಕಾರದಿಂದ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಕ್ರೀಡಾಪಟುಗಳು ಕ್ರೀಡಾಕೂಟ ನಡೆಯುವ ಸ್ಥಳಗಳಲ್ಲಿ ಬೆಳಿಗ್ಗೆ 9.00 ಗಂಟೆಯೊಳಗೆ ಕ್ರೀಡಾ ಸಂಘಟನೆಯ ವ್ಯವಸ್ಥಾಪಕರಲ್ಲಿ ವರದಿ ಮಾಡಿಕೊಳ್ಳುವುದು.

ಟಿ.ನರಸೀಪುರ ತಾಲ್ಲೂಕಿನಲ್ಲಿ ಆಗಸ್ಟ್ 23 ರಂದು ತುರುಗನೂರಿನ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪ್ರೌಢಶಾಲೆಯಲ್ಲಿ ಆರ್‍ಜಿಕೆಎ ಗ್ರಾಮೀಣ ಕ್ರೀಡಾಕೂಟ ಹಾಗೂ ಆಗಸ್ಟ್ 24 ರಂದು ಟಿ.ನರಸೀಪುರ ವಿದ್ಯೋದಯ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ದಸರಾ ಕ್ರೀಡಾಕೂಟ ಮತ್ತು ಆರ್‍ಜಿಕೆಎ ಮಹಿಳಾ ಕ್ರೀಡಾಕೂಟ ನಡೆಯಲಿದೆ, ಹೆಚ್ಚಿನ ಮಾಹಿತಿಗೆ ಬ್ಯಾಸ್ಕೆಟ್‍ಬಾಲ್ ತರಬೇತುದಾರರು ಎಂ.ಬಿ.ಪಾಟೀಲ್ ದೂರವಾಣಿ ಸಂಖ್ಯೆ 8867792703 ಇವರನ್ನು ಸಂಪರ್ಕಿಸುವುದು
ಹುಣಸೂರು ತಾಲ್ಲೂಕು ಕ್ರೀಡಾಂಗಣದಲ್ಲಿ ಆಗಸ್ಟ್ 25 ರಂದು ಆರ್‍ಜಿಕೆಎ ಗ್ರಾಮೀಣ ಕ್ರೀಡಾಕೂಟ ಹಾಗೂ ಆಗಸ್ಟ್ 26 ರಂದು ] ದಸರಾ ಕ್ರೀಡಾಕೂಟ ಮತ್ತು ಆರ್‍ಜಿಕೆಎ ಮಹಿಳಾ ಕ್ರೀಡಾಕೂಟ ನಡೆಯಲಿದೆ, ಹೆಚ್ಚಿನ ಮಾಹಿತಿಗೆ ಜಿಮ್ನಾಸ್ಟಿಕ್ ತರಬೇತುದಾರರು ಎಂ.ಬಿ.ಪಾಟೀಲ್ ದೂರವಾಣಿ ಸಂಖ್ಯೆ 9449175644 ಇವರನ್ನು ಸಂಪರ್ಕಿಸುವುದು.
ನಂಜನಗೂಡು ತಾಲ್ಲೂಕು ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 2  ರಂದು ಆರ್‍ಜಿಕೆಎ ಗ್ರಾಮೀಣ ಕ್ರೀಡಾಕೂಟ ಹಾಗೂ ಸೆಪ್ಟೆಂಬರ್ 3  ರಂದು ದಸರಾ ಕ್ರೀಡಾಕೂಟ ಮತ್ತು ಆರ್‍ಜಿಕೆಎ ಮಹಿಳಾ ಕ್ರೀಡಾಕೂಟ ನಡೆಯಲಿದೆ, ಹೆಚ್ಚಿನ ಮಾಹಿತಿಗೆ ಖೋ-ಖೋ ತರಬೇತುದಾರರು ಎಂ.ಎಲ್ ಗೋಪಿನಾಥ್ ದೂರವಾಣಿ ಸಂಖ್ಯೆ 9900877944ಇವರನ್ನು ಸಂಪರ್ಕಿಸುವುದು

   ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 0821-2564179 ರ ಮೂಲಕ ಸಂಪರ್ಕಿಸಬಹುದಾಗಿದೆ.


ಅಪರ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು,ಆ.16.ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಅಪರ ಸರ್ಕಾರಿ ವಕೀಲರ ಹುದ್ದೆಯನ್ನು ಹೊಸ ಅಭ್ಯರ್ಥಿಗಳಿಂದ ಭರ್ತಿ ಮಾಡುವ ಸಲುವಾಗಿ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
   ಸದರಿ ಹುದ್ದೆಗೆ ನೇಮಕಾತಿ ಬಯಸುವ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತು) ನಿಯಮಾವಳಿ 1977 ನಿಯಮ 26 ರಲ್ಲಿ ತಿಳಿಸಿರುವ ಅಗತ್ಯ ಷರತ್ತುಗಳನ್ನು ಪೂರೈಸಿರುವ ಅರ್ಹ
   ಆಸಕ್ತ ಅಭ್ಯರ್ಥಿಗಳು ಹೆಸರು/ವಿಳಾಸ/ಜಾತಿ ವರ್ಗ/ವಿದ್ಯಾರ್ಹತೆ/ವಕೀಲ ವೃತ್ತಿಯಲ್ಲಿನ ಅನುಭವ ಇತ್ಯಾದಿ ವಿವರಗಳನ್ನು ನಮೂದಿಸಿದ ಸ್ವಯಂ ವಿವರಣೆಯ ಮಾಹಿತಿಯೊಂದಿಗೆ ರಾಜ್ಯ ಬಾರ್ ಕೌನ್ಸಿಲ್ ನೋಂದಣಿ ಮತ್ತು ವಕೀಲ ವೃತ್ತಿಯಲ್ಲಿ ಹೊಂದಿರುವ ಅನುಭವದ ಬಗ್ಗೆ ಸ್ಥಳೀಯ ವಕೀಲರ ಸಂಘದ ದೃಢೀಕರಣ ಪತ್ರ ಇತ್ಯಾದಿ ದಾಖಲಾತಿಗಳೊಂದಿಗೆ ಅರ್ಜಿಯನ್ನು ಆಗಸ್ಟ್ 31 ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು.
ಆ 18 ರಿಂದ ಸೆ.7 ರವರಗೆ ಕಾನೂನು ಸಾಕ್ಷರತಾ ರಥ ಸಂಚಾರ
     ಮೈಸೂರು,ಆ.16.ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಧ್ಯೇಯೋದ್ದೇಶಗಳನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸುವ ದಿಸೆಯಲ್ಲಿ ದಿನಾಂಕ 18-08-2014 ರಿಂದ 07-09-2014 ರವರೆಗೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕಾನೂನು ಸಾಕ್ಷರತಾ ರಥ ಮತ್ತು ಜನತಾ ನ್ಯಾಯಾಲಯ ಸಂಚಾರಿ ವಾಹನದ ಮೂಲಕ ಕಾನೂನು ಸಾಕ್ಷರತಾ ಕಾರ್ಯಕ್ರಮ ನಡೆಸಲಾಗುವುದು.   
   ಆಗಸ್ಟ್ 18 ಮತ್ತು 20 ರವರೆಗೆ ಮೈಸೂರು ನಗರ ಮತ್ತು ತಾಲ್ಲೂಕು, ಆಗಸ್ಟ್ 21 ರಿಂದ 23 ರವರೆಗೆ ನಂಜನಗೂಡು, ಆಗಸ್ಟ್ 24 ರಿಂದ 26 ರವರೆಗೆ ತಿ.ನರಸೀಪುರ, ಆಗಸ್ಟ್ 27 ರಿಂದ 29 ರವರೆಗೆ ಕೆ.ಆರ್.ನಗರ, ಆಗಸ್ಟ್ 30, 31 ಮತ್ತು  ಸೆಪ್ಟೆಂಬರ್ 1 ರಂದು ಹೆಚ್.ಡಿ.ಕೋಟೆ ಸೆಪ್ಟೆಂಬರ್ 2 ರಿಂದ ಸೆಪ್ಟೆಂಬರ್ 4 ರವರೆಗೆ ಹುಣಸೂರು ಹಾಗೂ ಸೆಷ್ಟೆಂಬರ್ 5 ರಿಂದ 7 ರವರೆಗೆ ಪಿರಿಯಾಪಟ್ಟಣ.
   ಸಾರ್ವಜನಿಕರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
 
ಆಗಸ್ಟ್ 19 ರಂದು ಸಾಮಾನ್ಯ ಕೌನ್ಸಿಲ್ ಸಭೆ
     ಮೈಸೂರು,ಆ.16.ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಆಗಸ್ಟ್ 19 ರಂದು ಬೆಳಿಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ.


ಆಗಸ್ಟ್ 20 ರಂದು ಡಿ.ದೇವರಾಜ ಅರಸು ಜನ್ಮದಿನಾಚರಣೆ
     ಮೈಸೂರು,ಆ.16.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸಾಮಾಜಿಕ ಕ್ರಾಂತಿಯ ನೇತಾರ, ಹಿಂದುಳಿದ ವರ್ಗಗಳ ಧೀಮಂತ ನಾಯಕ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಡಿ. ದೇವರಾಜ ಅರಸು ಅವರ 99ನೇ ಜನ್ಮ ದಿನಾಚರಣೆಯನ್ನು ಆಗಸ್ಟ್ 20 ರಂದು ಬೆಳಿಗ್ಗೆ 11 ಗಂಟೆಗೆ ಸೆನೆಟ್ ಭವನದಲ್ಲಿ ಆಯೋಜಿಸಲಾಗಿದೆ.
 ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ವಾಸು ಅವರು ಅಧ್ಯಕ್ಷತೆ ವಹಿಸುವರು. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಚಿಂತಕರು ಹಾಗೂ ನಿರ್ದೇಶಕರಾದ ಡಾ|| ಸಿ. ನಾಗಣ್ಣ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು.   
    ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಎನ್.ಎಂ. ರಾಜೇಶ್ವರಿ ಸೋಮು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ| ಪುಷ್ಪಾವತಿ ಅಮರನಾಥ್, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್, ಪ್ರತಾಪ ಸಿಂಹ, ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಎಂ.ಕೆ.ಸೋಮಶೇಖರ್,  ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಸಾ.ರಾ.ಮಹೇಶ್, ಹೆಚ್.ಪಿ. ಮಂಜುನಾಥ್, ಚಿಕ್ಕಮಾದು,  ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಉಪ ಮಹಾಪೌರರಾದ ವಿ. ಶೈಲೇಂದ್ರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಲೋಕಮಣಿ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.

ಆಗಸ್ಟ್ 19 ರಂದು ಕಾರ್ಯಗಾರ
     ಮೈಸೂರು,ಆ.16.ಬಿಳಿ ಜೋಳ ಮತ್ತು ರಾಗಿ ಅಧಿಕ ಉತ್ಪಾದನೆ ಮಾಡಿ ನೇರವಾಗಿ ಅನ್ನಭಾಗ್ಯ ಯೋಜನೆಯಡಿ ಖರೀದಿಸುವ ಬಗ್ಗೆ ದಿನಾಂಕ 19-08-2014 ರಂದು ಒಂದು ದಿನದ ವಿಭಾಗಮಟ್ಟದ ಕಾರ್ಯಾಗಾರವನ್ನು ಭಾರತೀಯ ಭಾಷಾ ಅಧ್ಯಯನ ಸಂಸ್ಥೆ, ಹುಣಸೂರು ರಸ್ತೆ, ಮೈಸೂರು ಇಲ್ಲಿ ಬೆಳಿಗ್ಗೆ 10-00 ಗಂಟೆಗೆ ಏರ್ಪಡಿಸಲಾದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾಸ ಕಾರ್ಯಕ್ರಮ
     ಮೈಸೂರು,ಆ.16.ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ;ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು ಆಗಸ್ಟ್ 18 ರಿಂದ 20 ರವರಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳಲಿದ್ದಾರೆ. ಆಗಸ್ಟ್ 18 ರಂದು ಅವರು ಮಧ್ಯಾಹ್ನ 3 ಗಂಟೆಗೆ ಮದ್ದೂರಿನ ಎಳೆನೀರು ಮಾರುಕಟ್ಟೆಗೆ ಭೇಟಿ ನೀಡಿದ ನಂತರ ರಾತ್ರಿ 7 ಗಂಟೆಗೆ ಮೈಸೂರು ಜಿಲ್ಲೆಗೆ ಆಗಮಿಸಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
 ಆಗಸ್ಟ್ 19 ರಂದು ಬೆಳಿಗ್ಗೆ 10 ಗಂಟೆಗೆ ರಾಗಿ ಬೆಳೆ ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ ಮೈಸೂರು ಎ.ಪಿ.ಎಂ.ಸಿ ಗೆ ಭೇಟಿ ನೀಡಿದ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆಗಸ್ಟ್ 20 ರಂದು ಸಿಎಫ್‍ಟಿಆರ್‍ಐ ಗೆ ಭೇಟಿ ನೀಡಿ ತಜ್ಞರೊಡನೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ವಿಚಾರಗಳ ಬಗ್ಗೆ ಚರ್ಚಿಸಿದ ನಂತರ ಮಂಡ್ಯ ಜಿಲ್ಲೆಗೆ ತೆರಳಲಿದ್ದಾರೆ.

ಮೈಸೂರು ನಗರ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ.
             ಮೈಸೂರು,ಆ.16.ಮೈಸೂರು ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಿನಾಂಕ. 17-08-2014 ಭಾನುವಾರ ರಂದು ಬೆಳಿಗ್ಗೆ 11-30 ಗಂಟೆಯಿಂದ ಮದ್ಯಾಹ್ನ 1-30 ಗಂಟೆಯವರೆಗೆ ಸಾರ್ವಜನಿಕ ಕುಂದುಕೊರತೆ ಸಭೆ  ನಡೆಯಲಿದೆ. ಪೊಲೀಸ್ ನಿರೀಕ್ಷಕರು, ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಸಭೆಯಲ್ಲಿ ಹಾಜರಿದ್ದು ಸಾರ್ವಜನಿಕರ ಅವಹಾಲುಗಳನ್ನು ಸ್ವೀಕರಿಸಿ ಸ್ಪಂದಿಸಿ ಪರಿಹಾರ ನೀಡಲಿದ್ದಾರೆ.
        ಸಾರ್ವಜನಿಕರಿಗೆ ಪೊಲೀಸರ ಸಹಾಯ/ನೆರವು ಬೇಕಾಗಿದ್ದಲ್ಲಿ ತಮ್ಮ ವಾಸ ವಿಳಾಸದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಗಳಲ್ಲಿ ಅಹವಾಲುಗಳನ್ನು ನೀಡಿ, ಅಭಿಪ್ರಾಯ ಮಾಹಿತಿಗಳನ್ನು ಕಾನೂನಿನ ಅಡಿಯಲ್ಲಿ ಸಹಕಾರಿಯಾಗುವಂತೆ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಪೊಲೀಸ್ ಕಮೀಷನರ್ ರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

No comments:

Post a Comment