Tuesday 26 August 2014

ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯಕೆ.ಆರ್.ಪೇಟೆಗೆ.

ಕೆ.ಆರ್.ಪೇಟೆ,ಆ.26-ತಾಲೂಕಿನ ಬೂಕನಕೆರೆ ಸಮೀಪದ ಬಣ್ಣೇನಹಳ್ಳಿ ಬಳಿ 300ಎಕರೆ ಕೈಗಾರಿಕೆಗಳ ಅಭಿವೃದ್ಧಿಗೆ ಭೂಮಿಯನ್ನು ಮೀಸಲಿಡಲಾಗಿದೆ. ಇದರಲ್ಲಿ 129ಎಕರೆ ವಿಸ್ತೀರ್ಣದಲ್ಲಿ ಫೇವರಿಚ್ ಮೆಘಾ ಪುಢ್ ಪಾರ್ಕ್ ಎಂಬ ಸಂಸ್ಥೆಯು 123ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ತಂತ್ರಜ್ಞಾನದಲ್ಲಿ ಬೃಹತ್ ಆಹಾರ ವಸ್ತುಗಳ ತಯಾರಿಕಾ ಘಟಕ ಮತ್ತು ಸಂರಕ್ಷಣಾ ಘಟಕವನ್ನು ಆರಂಭಿಸಲು ಮುಂದೆ ಬಂದಿದೆ. ಇದರ ಭೂಮಿ ಪೂಜೆಯನ್ನು ಇದೇ ಆ.27ರಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ ಎಂದು ಶಾಸಕ ಕೆ.ಸಿ.ನಾರಾಯಣಗೌಡ ತಿಳಿಸಿದ್ದಾರೆ.
ಅವರು ಇಂದು ಸಂಬಂಧಪಟ್ಟ ಅಧಿಕಾರಿಗಳ ತಂಡದೊಂದಿಗೆ ಬಣ್ಣೇನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಬೇಟಿ ನೀಡಿ ಮುಖ್ಯಮಂತ್ರಿಗಳ ಹೆಲಿಕ್ಯಾಪ್ಟರ್ ಇಳಿಯಲು ಬೇಕಾದ ಸ್ಥಳ ಮತ್ತು ಭೂಮಿ ಪೂಜೆ ಸಿದ್ದತೆ ಮಾಡಬೇಕಾದ ಸ್ಥಳಗಳನ್ನು ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಫುಡ್ ಪಾರ್ಕ್ ನಿರ್ಮಾಣದಿಂದ ತಾಲೂಕಿನ ಸುಮಾರು 2ರಿಂದ 3ಸಾವಿರ ನೇರ ಉದ್ಯೋಗ ಫುಡ್ ಪಾರ್ಕ್ ಸಂಸ್ಥೆಯೊಳಗೆ ದೊರೆಯಲಿದೆ. ಅಲ್ಲದೇ ಪರೋಕ್ಷವಾಗಿ ಸುಮಾರು 15ಸಾವಿರ ಉದ್ಯೋಗವು ಫುಡ್ ಪಾರ್ಕ್ ನಿರ್ಮಾಣದಿಂದ ಸೃಷ್ಠಿಯಾಗಲಿದೆ. ಸ್ಥಳೀಯವಾಗಿ ದೊರೆಯುವ 6ಬಗೆಯ ಕಚ್ಚಾ ರೈತ ಉತ್ಪನ್ನಗಳನ್ನು ರೈತರಿಂದಲೇ ನೇರವಾಗಿ ಖರೀದಿ ಮಾಡಲಾಗುವುದು. ಈ ಕಚ್ಚಾ ವಸ್ತುಗಳನ್ನು ಬಳಸಿ ಸಿದ್ದ ವಸ್ತುಗಳನ್ನಾಗಿ ರೂಪಿಸಲಾಗವುದು. ಅದರಲ್ಲಿಯೂ ಭೂಮಿ ಕಳೆದುಕೊಂಡಿರುವ ಬಣ್ಣೇನಹಳ್ಳಿ ಗ್ರಾಮದ ನಿರುದ್ಯೋಗಿಗಳಿಗೆ ಪ್ರಥಮ ಆಧ್ಯತೆ ನೀಡಿ ಉದ್ಯೋಗ ಒದಗಿಸಿಕೊಡಲಾಗುವುದು. ನಂತರ ತಾಲೂಕಿನ ಇತರೆ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಕ್ರಮ ವಹಿಸಲಾಗುವುದು. ಆ.27ರಂದು ಬೆಳಿಗ್ಗೆ 11ಗಂಟೆಯ ಸುಮಾರಿಗೆ ಹೆಲಿಕ್ಯಾಪ್ಟರ್‍ನಲ್ಲಿ ಮುಖ್ಯಮಂತ್ರಿಗಳು ಆಗಮಿಸಿ ಭೂಮಿ ಪೂಜೆ ನೆರವೇರಿಸುವರು ಮುಖ್ಯಮಂತ್ರಿಗಳೊಂದಿಗೆ  ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದ ದಿನೇಶ್ ಗುಂಡೂರಾವ್, ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ, ಸಂಸದ ಸಿ.ಎಸ್.ಪುಟ್ಟರಾಜು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.
ಈ ಹಿಂದೆ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ತಾಲೂಕಿನ ಬೂಕನಕೆರೆಯವರೇ ಆದ ಬಿ.ಎಸ್.ಯಡಿಯೂರಪ್ಪ ಅವರು ಕೈಗಾರಿಕಾ ಅಭಿವೃದ್ಧಿಗೆ ಭೂಮಿಯನ್ನು ಮೀಸಲಿಟ್ಟು ಬೇಸಾಯ ಮಾಡುತ್ತಿದ್ದ ರೈತರಿಗೆ ಸೂಕ್ತ ಪರಿಹಾರ ನೀಡಿ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ನೀಡಿದ್ದಾರೆ. ತಾಲೂಕಿನಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ತಾಲೂಕಿನ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎಂಬುದು ಬಹುದಿನದ ನನ್ನ ಕನಸು ಸಾಕಾರವಾಗುವ ಸಮಯವು ಕೂಡಿ ಬಂದಿದೆ.  ತಾಲೂಕಿನ ವಿದ್ಯಾವಂತ ಯುವಜನರು ಸಣ್ಣ ಕೈಗಾರಿಕಾ ಘಟಕಗಳನ್ನು ಸ್ಥಾಪನೆ ಮಾಡಲು ಪೂರಕವಾದ ಮೂಲಭೂತ ಸೌಲಭ್ಯಗಳನ್ನು ಇದೇ ಕೈಗಾರಿಕಾ ಪ್ರದೇಶದಲ್ಲಿ ಆರೆಂಭಿಸಲು ಮುಂದೆ ಬರಬೇಕು. ತಮಗೆ ಎಲ್ಲಾ ಸೌಲಭ್ಯಗಳನ್ನು ಕೈಗಾರಿಕಾ ಅಭಿವೃದ್ಧಿ ಮಂಡಳಿಯು ನೀಡಲಿದೆ. ಜೊತೆಗೆ ನನ್ನ ಎಲ್ಲಾ ಬೆಂಬಲವನ್ನು ನೀಡುತ್ತೇನೆ ಇದನ್ನು ಸದ್ಬಳಕೆ ಮಾಡಿಕೊಂಡು ಸಣ್ಣ ಕೈಗಾರಿಕೆಗಳನ್ನು ತೆರೆಯಲು ಮುಂದೆ ಬನ್ನಿ ಎಂದು ತಾಲೂಕಿನ ಯುವಕರಿಗೆ ನಾರಾಯಣಗೌಡ ಕರೆ ನೀಡಿದರು.
ಫುಡ್ ಪಾರ್ಕ್ ನಿರ್ಮಾಣದಿಂದ ಆಹಾರ ಸಂಸ್ಕರಣಾ ಘಟಕಗಳು, ಬೃಹತ್ ಕೋಲ್ಡ್ ಸ್ಟೋರೇಜ್, ಆಹಾರ ಸಂಸ್ಕರಣಾ ಪಾರ್ಕ್, ಶುದ್ಧ ಕುಡಿಯುವ ನೀರಿನ ಪ್ಯಾಕೇಜಿಂಗ್ ಉತ್ಪನ್ನ ಘಟಕ ಸ್ಥಾಪನೆ ಸೇರಿದಂತೆ ವಿವಿಧ ಆಹಾರ ಸಂಸ್ಕರಣಾ ಘಟಕಗಳು ಫುಡ್ ಪಾರ್ಕಿನಲ್ಲಿ ಕಾರ್ಯಾರಂಭ ಮಾಡಲಿವೆ. ಇದರಿಂದ ತಾಲೂಕಿನ 20ಸಾವಿರ  ಯುವಕ ಯುವತಿಯರಿಗೆ ಉದ್ಯೋಗ ದೊರೆಯುವುದಲ್ಲದೇ ತಾಲೂಕಿನ ಸಮಗ್ರ ಅಭಿವೃದ್ಧಿ ನಾಂದಿಯಾಗಲಿದೆ.  ಕೈಗಾರಿಕೆಗಳು ಅಭಿವೃದ್ಧಿಗಾಗಿ ಸರ್ಕಾರವು ಗ್ರಾಮೀಣ ರಸ್ತೆಗಳನ್ನು ತ್ವರಿತಗತಿಯಲ್ಲಿ ಅಭಿವೃದ್ಧಿಪಡಿಸಲಿದೆ.
300ಎಕರೆ ಭೂಮಿಯಲ್ಲಿ 129 ಎಕರೆ ಭೂಮಿಯು ಫುಡ್ ಪಾರ್ಕಿನ ಸ್ಥಾಪನೆಗೆ ಸದ್ವಿನಿಯೋಗವಾಗುತ್ತಿದ್ದು ಉಳಿದ 200ಎಕರೆ ಭೂಮಿಯಲ್ಲಿ ಬೃಹತ್ ಗಾರ್ಮೆಂಟ್ಸ್ ಕಾರ್ಖಾನೆಗಳು, ಕೈಗಾರಿಕಾ ವಸಹಾತುಗಳು ಸದ್ಯದಲ್ಲಿಯೇ ಆರಂಭವಾಗಲಿವೆ. ಅನಂತರ ಕೈಗಾರಿಕೆಗಳ ಸ್ಥಾಪನೆಯ ವಿಚಾರದಲ್ಲಿ ಹಿಂದುಳಿದ್ದ ತಾಲೂಕಿನಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ. ತಾಲೂಕಿನಲ್ಲಿ ನಿರುದ್ಯೋಗ ದೂರವಾಗಲಿದೆ. ಉದ್ಯೋಗಕ್ಕಾಗಿ ತಾಲೂಕಿನ ಯುವಕರು ದೂರದ ಬೆಂಗಳೂರು, ಮೈಸೂರು, ಮುಂಬೈಗೆ ಹೋಗುವುದು ತಪ್ಪಲಿದೆ ತಾಲೂಕಿನಲ್ಲಿಯೇ ತಮ್ಮ ತಂದೆ-ತಾಯಿಗಳನ್ನು ನೋಡಿಕೊಂಡು ಕೈತುಂಬಾ ಸಂಬಳ ಪಡೆಯಲು ಸಾಧ್ಯವಾಗಲಿದೆ ಎಂದು ನಾರಾಯಣಗೌಡ ಹೇಳಿದರು.
 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ.ಮಂಜೇಗೌಡ, ಗೌರಮ್ಮಶ್ರೀನಿವಾಸ್, ತಾಲೂಕು ಪಂಚಾಯತಿ ಸದಸ್ಯರಾದ ಹೆಳವೇಗೌಡ, ನಾಗರತ್ನಮ್ಮಸುಬ್ಬಣ್ಣ, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಂಗನಾಥ್, ಫೇವರಿಚ್ ಮೆಘಾ ಪುಢ್ ಪಾರ್ಕ್ ಸಂಸ್ಥೆಯ ಉಪಾಧ್ಯಕ್ಷ ದಯಾನಂದ್, ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮದ ವಿಶೇಷ ಭೂಸ್ವಾಧೀನಾಧಿಕಾರಿ ಕೃಷ್ಣೇಗೌಡ,  ತಹಶೀಲ್ದಾರ್ ಹೆಚ್.ಎಲ್.ಶಿವರಾಮ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್.ಕೆಂಚಪ್ಪ, ನಾಗಮಂಗಲ ಡಿವೈಎಸ್‍ಪಿ ಸವಿತಾ.ಪಿ.ಹೂಗಾರ್,  ವೃತ್ತನಿರೀಕ್ಷಕ ಕೆ.ರಾಜೇಂದ್ರ,  ಉಪಸ್ಥಿತರಿದ್ದರು.
ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಬಳಿಯ ಬಣ್ಣೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 123ಕೋಟಿ ರೂ  ವೆಚ್ಚದಲ್ಲಿ ಫುಡ್ ನಿರ್ಮಿಸಲು ಉದ್ದೇಶಿಸಿರುವ ಘಟಕದ ಭೂಮಿ ಪೂಜೆಗೆ ಇದೇ ಆ.27ರಂದು ಮುಖ್ಯಮಂತ್ರಿಗಳು ಆಗಮಿಸುವ ಹಿನ್ನೆಲೆಯಲ್ಲಿ ಶಾಸಕ ನಾರಾಯಣಗೌಡ ಅಧಿಕಾರಿಗಳತಂಡದೊಂದಿಗೆ ಕೈಗಾರಿಕಾ ಪ್ರದೇಶವನ್ನು ವೀಕ್ಷಣೆ ಮಾಡಿ ಕೈಗೊಳ್ಳಬೇಕಾದ ಸಿದ್ದತೆಗಳ ಬಗ್ಗೆ ಚರ್ಚಿಸಿದರು.

No comments:

Post a Comment