Thursday 7 August 2014

ಮಂಡ್ಯ-ಪ್ರಮುಖ ಸದ್ದಿಗಳು.

ಮಂಡ್ಯ, ಆ.07- ಜಿಲ್ಲಾ ಮಟ್ಟದ ಕರಾಟೆ ಹಾಗೂ ಜುಡೋ ಸ್ಪರ್ಧೆಗಳಲ್ಲಿ ಸದ್ವಿದ್ಯಾ ಚಿಲ್ಡ್ರನ್ಸ್ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಶಾಲೆಯ ಕರಾಟೆ ತರಬೇತಿದಾರ ಲೋಕೇಶ್ ಅವರು ತಿಳಿಸಿದ್ದಾರೆ.
ನಗರದ ಗುರುಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕರಾಟೆ ಮತ್ತು ಜುಡೋ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 14 ವರ್ಷದೊಳಗಿನ ವಿಭಾಗದ ವಿದ್ಯಾರ್ಥಿನಿಯರು ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ಸುಹಾನಿ, ಬೃಂದಾ, ನಿರೀಕ್ಷಾ, ಮೇಘನಾ, ತ್ರಿಶಾ, ವರ್ಷಿತ, ಕೀರ್ತಿಕುಮಾರಿ ಸೇರಿದಂತೆ ಹಲವರಿಗೆ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಕೃತಿಕ್, ಸಿರೀಶ್ ಪಟೇಲ್, ಶಶಾಂಕ್ ಅವರನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.

ವಿಶ್ವ ಸ್ತನ್ಯಪಾನ ಕಾರ್ಯಕ್ರಮ
ಮಂಡ್ಯ, ಆ.07- ಹಾಲಿನ ಮಹತ್ವದ ಬಗ್ಗೆ ತಾಯಂದಿರು ತಿಳಿದುಕೊಂಡು ತಮ್ಮ ಮಕ್ಕಳಿಗೆ ಎದೆ ಹಾಲನ್ನು ಉಣಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹೆಚ್.ಎಂ.ದಕ್ಷಿಣಮೂರ್ತಿ ತಿಳಿಸಿದರು.
ತಾಲ್ಲೂಕಿನ ಮೊಳೆಕೊಪ್ಪಲು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಗು ಹುಟ್ಟಿದ ಅರ್ಧ ಗಂಟೆಯಲ್ಲೇ ಎದೆಹಾಲನ್ನು ಕುಡಿಸುವುದರಿಂದ ಮಗು ಆರೋಗ್ಯ ಪೂರ್ಣವಾಗಿ ಬೆಳೆಯಲು ಸಹಕಾರಿಯಾಗುತ್ತದೆ.
ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಶೀತ, ವಿಷಮಪೂರಿತ ಜ್ವರದಿಂದ ಮುಕ್ತಿ ಹೊಂದಲು ಸಹಕರಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮೇಲ್ವಿಚಾರಕ ಕೆ.ಶಿವಶಂಕರ್ ಮಾತನಾಡಿ, ಪರಿಸರ ಸ್ವಚ್ಛತೆ ಹಾಗೂ ಮಲೇರಿಯಾ ರೋಗದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಪುಟ್ಟಲಿಂಗಮ್ಮ, ವಿಜಯಲಕ್ಷ್ಮಮ್ಮ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.

No comments:

Post a Comment