Friday 8 August 2014

ಮೈಸೂರು-ಸಂದಿಗ್ಧ ಸಮಯದಲ್ಲಿ ಸಕ್ಕರೆ ಕಾರ್ಖಾನೆಗಳು: ಡಾ. ಬಾಜಪಾಯಿ



ಸಂದಿಗ್ಧ ಸಮಯದಲ್ಲಿ ಸಕ್ಕರೆ ಕಾರ್ಖಾನೆಗಳು: ಡಾ. ಬಾಜಪಾಯಿ
ಮೈಸೂರು, ಆ.8. ಕಬ್ಬಿನ ಬೆಲೆ ಈಗ ತುಂಬಾ ದುಬಾರಿಯಾಗಿದೆ. ಸಕ್ಕರೆ ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಿದ್ದು, ಸಕ್ಕರೆ ದರ ಏರಿಳಿತಕ್ಕೆ ಒಳಗಾಗಿರುವುದರಿಂದ ಸಕ್ಕರೆ ಕಾರ್ಖಾನೆಗಳು ಅತ್ಯಂತ ಸಂದಿಗ್ಧ ಸಮಯ ಎದುರಿಸುತ್ತಿವೆ ಎಂದು ಕಾನ್ಪುರದ ನ್ಯಾಷನಲ್ ಸುಗರ್ ಇನ್ಸ್‍ಟಿಟ್ಯೂಟ್‍ನ ಸಕ್ಕರೆ ತಂತ್ರಜ್ಞಾನ ಪ್ರಾಧ್ಯಾಪಕರಾದ ಡಾ. ಬಾಜಪಾಯಿ ಅವರು ಹೇಳಿದರು.
ಮೈಸೂರಿನಲ್ಲಿ ಕಾನ್ಪುರದ ನ್ಯಾಷನಲ್ ಸುಗರ್ ಇನ್ಸ್‍ಟಿಟ್ಯೂಟ್, ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಮಂಡ್ಯದ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬು ಸಂಶೋಧನಾ ಸಂಸ್ಥೆ ವತಿಯಿಂದ ಶುಕ್ರವಾರ ದೇಶ ವಿದೇಶಗಳ ಅಗತ್ಯಗಳಿಗಾಗಿ ಸಕ್ಕರೆ ಉತ್ಪಾದನೆಯ ಸಂಸ್ಕರಣಾ ಆಯ್ಕೆಗಳು ಕುರಿತು ಮೈಸೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಕ್ಕರೆ ಕಾರ್ಖಾನೆಗಳು ಈಗ ಉತ್ಪಾದನಾ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವ ಜತೆಗೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕಾಗಿದೆ. ಸಕ್ಕರೆ ಹಾಗೂ ಅದರ ಉಪ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸುವ ಸಾಧ್ಯಗಳನ್ನು ಸಹ ಕಂಡು ಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.
ಸಕ್ಕರೆ ತಯಾರಿಕೆಗೆ ಬೇಕಾದ ಇತರ ವೆಚ್ಚಗಳಿಗೆ ಹೋಲಿಸಿದರೆ ಸಕ್ಕರೆ ಸಂಸ್ಕರಣೆ ವೆಚ್ಚ ಸಿಂಹ ಪಾಲು ತೆಗೆದುಕೊಳ್ಳುತ್ತದೆ. ಆದ್ದರಿಂದ ಸಂಸ್ಕರಣಾ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಗುಣಮಟ್ಟದ ಸಕ್ಕರೆಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ದರ ಸಿಗುವುದರಿಂದ ಗುಣಮಟ್ಟದ ಸಕ್ಕರೆ ತಯಾರಿಸುವ ಮೂಲಕ ಸಂಸ್ಕರಣ ವೆಚ್ಚದಲ್ಲಾಗುವ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ವಿವಿಧ ಗುಣಮಟ್ಟದ ಸಕ್ಕರೆ ಉತ್ಪಾದನೆ ಮಾಡುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಹಿಡಿತ ಸಾಧಿಸಬಹುದು. ಇದರಿಂದ ಉತ್ತಮ ಆದಾಯ ಸಹ ದೊರೆಯುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕರಾದ ಡಾ. ಖಂಡಗಾವೆ ಆರ್.ಬಿ. ಅವರು ಮಾತನಾಡಿ, ಕಬ್ಬು ಉತ್ಪಾದನೆಯಲ್ಲಿ ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದ ನಂತರ ಕರ್ನಾಟಕ 3ನೇ ಸ್ಥಾನದಲ್ಲಿದೆ. ಸಕ್ಕರೆ ಇಳುವರಿಯಲ್ಲಿ ಮಹಾರಾಷ್ಟ್ರದ ನಂತರ 2 ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 72 ಸಕ್ಕರೆ ಕಾರ್ಖಾನೆಗಳಿದ್ದು, 2013-14 ನೇ ಸಾಲಿನಲ್ಲಿ 60 ಕಾರ್ಖಾನೆಗಳು ಕಾರ್ಯನಿರ್ವಹಿಸಿವೆ. 383.14 ಲಕ್ಷ ಕಬ್ಬು ನುರಿಸಲಾಗಿದ್ದು, ಸರಾಸರಿ 10.97 ಸಕ್ಕರೆ ಇಳುವರಿ ದೊರೆತಿದೆ. 42.05 ಲಕ್ಷ ಟನ್ ಸಕ್ಕರೆ ತಯಾರಿಸಲಾಗಿದೆ ಎಂದು ಹೇಳಿದರು.
ಸಕ್ಕರೆ ಕಾರ್ಖಾನೆಗಳು ಬಗಾಸ್, ಮೊಲಾಸಸ್ ಸೇರಿದಂತೆ ಇತರೆ ಉಪ ಉತ್ಪನ್ನಗಳನ್ನು ತಯಾರಿಸುತ್ತವೆ. ಒಂದು ಟನ್ ಕಬ್ಬಿನಿಂದ 100-110 ಕೆ.ಜಿ. ಸಕ್ಕರೆ, 250-300 ಕೆ.ಜಿ. ಬಗಾಸ್, 40-50 ಕೆ.ಜಿ. ಮೊಲಾಸಸ್, ಇತರೆ ಉತ್ಪನ್ನಗಳು ದೊರೆಯುತ್ತದೆ. ಹೆಚ್ಚಿನ ಆದಾಯ ಗಳಿಸಲು ಈ ಎಲ್ಲಾ ಉಪ ಉತ್ಪನ್ನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಒಂದು ಟನ್ ಮೊಲಾಸಸ್‍ನಿಂದ 250 ಲೀಟರ್ ಆಲ್ಕೋಹಾಲ್ ದೊರೆಯುತ್ತದೆ. ಕಚ್ಚಾ ಸಕ್ಕರೆ ಹಾಗೂ ಶುದ್ಧೀಕರಿಸಿದ ಸಕ್ಕರೆ ತಯಾರಿಕೆಯಿಂದ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತಾರಗೊಳ್ಳುತ್ತದೆ. ಇದರಿಂದ ಆರ್ಥಿಕ ಪರಿಸ್ಥಿತಿ ಕೂಡ ಸುಧಾರಿಸುತ್ತದೆ ಎಂದು ತಿಳಿಸಿದರು.
ಸಕ್ಕರೆ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಂಡ್ಯ ಹಾಗೂ ಬೆಳಗಾವಿಯಲ್ಲಿ ಕಬ್ಬು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು.
ಕಾರ್ಯಾಗಾರದಲ್ಲಿ 7 ತಾಂತ್ರಿಕ ಪ್ರಬಂಧಗಳನ್ನು ಮಂಡಿಸಲಾಯಿತು. ಕಾರ್ಯಕ್ರಮದಲ್ಲಿ ಪುಣೆಯ ಹಿರಿಯ ಸಕ್ಕರೆ ತಜ್ಞರಾದ ಜಗದೀಶ್, ಸಿಂಬೋಲಿ ಸುಗರ್ಸ್‍ನ ಹಿರಿಯ ಉಪಾಧ್ಯಕ್ಷರಾದ ಎ.ಎಂ. ಶ್ರೀವತ್ಸ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

No comments:

Post a Comment