Friday 15 August 2014

ಬೆಳ್ಳಿ ತೆರೆಯ ಬೆಡಗಿ ಭಾರತಿಯವರಿಗೆ ಸುವರ್ಣ ಸಂಭ್ರಮ

ಸಿ.ಪಿ.ಮೂರ್ತಿ ಪತ್ರಕರ್ತರು ಬೆಂಗಳೂರು

                      ಬೆಳ್ಳಿ ತೆರೆಯ ಬೆಡಗಿ ಭಾರತಿಯವರಿಗೆ ಸುವರ್ಣ ಸಂಭ್ರಮ

             ಕನ್ನಡ ಬೆಳ್ಳಿ ತೆರೆಗೆ ಈಗ 80 ರ ಸಂಭ್ರಮ. ಕನ್ನಡ ಚಿತ್ರರಂಗದ ಅವಿಭಜಿತ ಭಾಗವಾಗಿರುವ ಹಿರಿಯ ತಾರೆಯರು ತಮ್ಮ ಮನೋಙ್ನ ಅಬಿನಯದಿಂದ ಕನ್ನಡಿಗರ ಮನಸೋರೆಗೊಂಡು ಮೈಮನ ಪುಳಕವಾಗುವಂತೆ ಮಾಡಿದ ಕೆಲವೆ  ಚಿತ್ರ ನಟನಟಿಯರುಗಳುಲ್ಲಿ ಭಾರತಿವಿಷ್ಣುವರ್ಧನ್ ಅಗ್ರಗಣ್ಯರು. ಚಿತ್ರರಂಗದ .ಹಿರಿಯ ತಾರೆಯರಾದ ಬಿ.ಸರೋಜದೇವಿ, ಲೀಲಾವತಿ, ಜಯಂತಿ, ಕಲ್ಪನ,ಮಂಜುಳ ಅವರುಗಳೂ ತಮ್ಮ ಪ್ರಬುದ್ದ ಅಬಿನಯದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಸರು ತಂದುಕೊಟ್ಟರೆ ಭಾರತಿಯವರು ತಮ್ಮ ಗ್ಲಾಮರ್ ನಿಂದ ರಸಿಕರ ಮನಗೆದ್ದವರು.
            ಕನ್ನಡ ಚಿತ್ರರಂಗಕ್ಕೆ ಗ್ಲಾಮರಸ್ ತಂದುಕೊಟ್ಟ ಈ ಬೆಳ್ಳಿ ಬೆಡಗಿಗೆ ಈಗ ಸುವರ್ಣ ಸಂಭ್ರಮ. ಕನ್ನಡ ಚಿತ್ರಲೋಕಕ್ಕೆ ಬಂದು 50 ವರ್ಷಧಾರೆಗಳನ್ನ ಕಳೆದಿರುವ ಹಿರಿಯ ತಾರೆ ಭಾರತಿ ವಿಷ್ಣುವರ್ಧನ್ ಇಂದಿಗೂ ರಸಿಕರ ಹೃದಯದಲ್ಲಿ ಸ್ದಾನ ಗಿಟ್ಟಿಸಿರುವ ಉತ್ತಮ ಅಭಿನೇತ್ರಿ.
             ಈ  ಐವತ್ತು ವರ್ಷಗಳಲ್ಲಿ ತನ್ನ ಅಸಾಧಾರಣ ವೃತ್ತಿಪರತೆಯಿಂದಾಗಿ ದಕ್ಷಿಣ ಭಾರತದಲ್ಲೆ ಹೆಸರು ಮಾಡಿದ್ದಲ್ಲದೆ ಬಹುತೇಕ ಮಾಸ್ ಹಿರೋಗಳ ಜೊತೆ ಜನಪ್ರಿಯ ಜೋಡಿಯಾಗಿ ಎಲ್ಲರನ್ನು ಮೋಡಿ ಮಾಡಿದ್ದು ಇತಿಹಾಸ.
             ದಕ್ಷಿಣ ಭಾರತದ ಎಲ್ಲಾ ಮೇರು ನಟರುಗಳ ಜೊತೆ ನಟಿಸಿದ ಕೀರ್ತಿ ಭಾರತಿ ಅವರದ್ದು. ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಜೊತೆಗೆ ಬಾಲಿವುಡ್ ನಲ್ಲೂ ಸೈ ಎನಿಸಿಕೊಂಡ ಮಹಾ ಚತುರೆ. ಬೆಳ್ಳಿ ತೆರೆಯ ಅಂಗಳದಲ್ಲಿ ಬಾಲ ನಟಿಯಾಗಿ ಪ್ರವೇಶಿಸಿದ ಈ ಬೆಡಗಿ ತನ್ನ 50 ವರ್ಷಗಳ ಸುದೀರ್ಘ ಸಿನಿ ಪಯಣದಲ್ಲಿ ಪ್ರೇಯಸಿಯಾಗಿ, ಗೃಹಿಣಿಯಾಗಿ, ಸಹೋದರಿಯಾಗಿ, ಕೊನೆಗೆ ತಾಯಿಯಾಗೂ ನಟಿಸುವ ಮೂಲಕ ಎಲ್ಲರ ಹೃದಯವನ್ನು  ಗೆದ್ದವರು.
            ಇದುವರೆಗೂ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ತಮ್ಮ ಕಲಾವಂತಿಕೆಯನ್ನ ಮೆರೆಸಿರುವ ಭಾರತಿ ಅವರು ದಕ್ಷಿಣ ಬಾರತ ಚಿತ್ರರಂಗದ ಇತಿಹಾಸದಲ್ಲಿ ತಮ್ಮದೆ ಛಾಪನ್ನು ಒತ್ತಿದವರು.
            1960 ರಲ್ಲೆ ಮೇರು ನಟರಾಗಿದ್ದ ಡಾ.ರಾಜ್ ಕುಮಾರ್, ಎಂ.ಜಿ.ರಾಮಚೆಂದ್ರನ್, ನಡಿಗರ ತಿಲಕಂ ಶಿವಾಜಿ ಗಣೇಶನ್, ಜಮಿನಿ ಗಣೇಶ, ಅಕ್ಕಿನೇನಿ ನಾಗೇಶ್ವರ ರಾವ್, ಎನ್.ಟಿ.ರಾಮರಾವ್, ಕೃಷ್ಣ,  ಹಿಂದಿ ಚಿತ್ರಂಗದ ಮನೋಜ್ ಕುಮಾರ್ ಹಾಗೂ  ಇನ್ನೂ ಅನೇಕ  ಹಿರಿ ನಟರೊಂದಿಗೆ ಜೋಡಿಯಾಗಿ ನಟಿಸಿದ ಕೀರ್ತಿ ಭಾರತಿ ಅವರದ್ದು.
            ಕನ್ನಡ ಚಿತ್ರರಂಗದ  1980 ರ ದಶಕದಲ್ಲಿ ಹೊಸ ಇತಿಹಾಸ ಸೃಷ್ಠಿಸಿದ " ಬಂಗಾರದ ಮನುಷ್ಯ " ಚಿತ್ರದ ನಾಯಕಿಯಾಗಿ ರಸಿಕರ ಮನದಲ್ಲಿ ಪ್ರತಿಷ್ಠಾಪನೆಗೊಂಡ ಭಾರತಿ ಅವರು ಕನ್ನಡಿಗರು ಹೆಮ್ಮೆ ಪಡುವಂತ ನಾಯಾಕಿಯಾಗಿ ರೂಪಗೊಂಡವರು. ಇವರು ನಟಿಸಿದ ಅನೇಕ ಚಿತ್ರಗಳು ಕನ್ನಡ ಬೆಳ್ಳಿ ಹಬ್ಬ ಆಚರಿಸುವ ಮೂಲಕ ಚಿತ್ರರಂಗಕ್ಕೆ ಮೆರಗು ನೀಡಿವೆ.
            ಕನ್ನಡ ಚಿತ್ರರಂಗದ ಜೋಡಿಗಳಲ್ಲಿ ಹೆಚ್ಚು ಜನಪ್ರಿಯವಾಗಿದ್ದು  ಡಾ.ರಾಜ್-ಭಾರತಿ ಜೋಡಿ. ಬಿ.ಆರ್.ಪಂತಲು ಅವರ ನಿರ್ದೇಶನದ ಗಂಡೊಂದು ಹೆಣ್ಣಾರು ಚಿತ್ರ ಬರುವವರೆಗೂ ರಾಜ್ ಕುಮಾರ್ ಅವರಿಗೆ ಜೋಡಿಯಾಗಿದ್ದು ಲೀಲಾವತಿ ಅವರು . ಅನಂತರ ಭಾರತಿ ಪ್ರವೇಶವಾದ ಮೇಲೆ ಸುಮಾರು ಎರಡು ದಶಕಗಳ ಕಾಲ ಈ ಜೋಡಿ ಚಿತ್ರ ರಸಿಕರ ಮನಗೆದ್ದುದ್ದು ಇತಿಹಾಸ. ಚಿತ್ರರಂಗದಲ್ಲಿ ಜನಪ್ರಿಯ ಜೋಡಿ ಶುರುವಾಗಿದ್ದೇ ಈ ಬೆಡಗಿ ಚಿತ್ರರಂಗ ಪ್ರವೇಶಿದ ಮೇಲೆ ಎಂದರೆ ಅತಿಶಯೋಕ್ತಿಯಾಗಲಾರದು.
           ಡಾ.ರಾಜ್ ಹಾಗೂ ಭಾರತಿ ಅವರ ಜೋಡಿ ಮೋಡಿ ಮಾಡಿದ ರೀತಿ ಇನ್ಯಾವ ಜೋಡಿಯೂ ಮೋಡಿ ಮಾಡಲಿಲ್ಲ. ಈ ಜೋಡಿ ಅನೇಕ ಸಾಂಸಾರಿಕ ಚಿತ್ರಗಳನ್ನ ನೀಡಿತಲ್ಲದೆ ಕನ್ನಡ ಚಿತ್ರರಂಗಕ್ಕೂ ಒಂದು ಮೆರಗನ್ನು ನೀಡಿತು. ಡಾ.ರಾಜ್ ಅವರ ಜೊತೆ ನಟಿಸಿದ ಮೇಯರ್ ಮುತ್ತಣ್ಣ, ಸ್ವಯಂವರ,ನಮ್ಮ ಸಂಸಾರ, ಕುಲಗೌರವ, ಬಾಳು ಬೆಳಗಿತು, ಮನಸಾಕ್ಷಿ,  ಹಸಿರು ತೋರಣ, ತಾಯಿ ದೇವರು, ಬಿಡುಗಡೆ ಹಾಗೂ ಇನ್ನಿತರ ಚಿತ್ರಗಳು ಸಾಮಾಜಿಕ ಚಿತ್ರಗಳಾದರೆ ಸಂದ್ಯಾರಾಗದಲ್ಲಿ ಸಂಗೀತಕಾರನ ಧರ್ಮ ಪತ್ನಿಯಾಗಿ ನೀಡಿದ ಅಬಿನಯವನ್ನು ಚಿತ್ರ ರಸಿಕರು ಮರೆಯಲಾರರು.
         ಸಾಮಾಜಿಕ ಚಿತ್ರಗಳ ಜೊತೆ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳಲ್ಲು ಸೈ ಎನಿಸಿಕೊಂಡಿರುವ ಭಾರತಿ ಡಾ.ರಾಜ್ ಜೊತೆ ನಟಿಸಿದ  ಶ್ರೀಕೃಷ್ಣದೇವರಾಯ  ಚಿತ್ರದ ಚಿನ್ನಮ್ಮನ ಪಾತ್ರವನ್ನು ಜನತೆ ಇಂದಿಗೂ ನೆನಸುತ್ತಾರೆ. ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ, ಗಂಗೆ ಗೌರಿಯಲ್ಲಿನ ಪಾತ್ರಗಳಿಂದಾಗಿ ತಾವು ಯಾವುದೆ ಪಾತ್ರಕ್ಕೂ ಸೈ ಎಂದೆ ತೋರಿಸಿದವರು.
        ಸುಮಾರು ಎರಡು ದಶಕಗಳ ಕಾಲ ಡಾ.ರಾಜ್ ಜೋಡಿಯಾಗಿದ್ದ ಭಾರತಿ ಅವರು ದೂರದ ಬೆಟ್ಟ ಚಿತ್ರದ ನಂತರ ಈ ಜೋಡಿ ಮುಂದುವರೆಯಲೆ ಇಲ್ಲ. ಈ ಜೋಡಿ ಬ್ರೇಕ್ ಆಗಿದ್ದಕ್ಕೆ ಇದುವರೆಗೂ ಕಾರಣ ಸಿಕ್ಕಿಲ್ಲ. ಆದರೆ ಭಾರತಿ ಅವರು ಡಾ.ವಿಷ್ಣವರ್ಧನ್ ಅವರನ್ನು ಮದುವೆಯಾದ ನಂತರವೂ ವಿಷ್ಣು ಜೋಡಿಯಾಗಿ ಮನೆಮಾತಾದರು.
        ವಿಷ್ಣುವಿನೊಂದಿಗೆ ವಿವಾಹದ ಮುಂಚೆಯೆ  ದೇವರ ಗುಡಿ ಚಿತ್ರದಲ್ಲಿ ನಟಿಸಿದ ಬಾರತಿ ಅನಂತರ ನಾಗರಹೊಳೆ, ಭಾಗ್ಯಜ್ಯೋತಿ, ಮಕ್ಕಳ ಭಾಗ್ಯ, ಬಂಗಾರದ ಜಿಂಕೆ,, ಅಣ್ಣ ಅತ್ತಿಗೆ, ಹಾಗೂ ಇನ್ನಿತರ ಚಿತ್ರಗಳಲ್ಲಿ ಯಶಸ್ವಿ ಜೋಡಿಯಾಗಿ ಇತಿಹಾಸ ನಿರ್ಮಿಸಿದರು. ಬಿ.ಆರ್. ಪಂತಲು ನಿರ್ಮಾಣದ ದುಡ್ಡೆ ದೊಡ್ಡಪ್ಪ ಚಿತ್ರದಲ್ಲಿ  ಕಾಣಿಸಿಕೊಂಡು ಗಮನ ಸೆಳೆದ ಈ ಚೆಲುವೆ ಡಾ.ರಾಜ್ ಜೊತೆ ಗಂಡೊಂದು ಹೆಣ್ಣಾರು ಚಿತ್ರದಲ್ಲಿ ನಟಿಸಿದ ನಂತರ ಹಿಂತಿರುಗಿನೋಡಿದ್ದೆ ಇಲ್ಲ,
        1964 ರಲ್ಲಿ ಗೀತ ಗಾಯ ಪತ್ತರೋನೆ ಹಿಂದಿ ಚಿತ್ರದಲ್ಲಿ ಎರಡನೆ ಹಿರೋಯಿನ್ ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ಅಚ್ಚ ಕನ್ನಡತಿ ಮನೋಜ್ ಕುಮಾರ್ ಅವರ ಪೂರಬ್ ಔರ್ ಪಶ್ಚಿಮ್ ಚಿತ್ರದಲ್ಲಿ ಬಾರತಿಯ ಸಂಸ್ಕøತಿ ಪ್ರತಿ ಬಿಂಬಿಸುವ ನಾರಿಯಾಗಿ ನಟಿಸಿ ಇಡಿ ಭಾರತದ ಚಿತ್ರ ರಸಿಕರ ಮನೆಸೆಳೆದವರು.. ಕಲ್ಯಾಣಕುಮಾರ್ ಅವರ ಲವ್ ಇನ್ ಬೆಂಗಳೂರು ಮೂಲಕ ಕನ್ನಡ ಚಿತ್ರರಂಗವನ್ನು  1964 ರಲ್ಲಿ ಪ್ರವೇಶಿಸಿದ ಭಾರತಿ ಅವರು ಕನ್ನಡದಲ್ಲಿ ಕುಮಾರ ತ್ರಯರೊಂದಿಗೆ ನಟಿಸಿದ ಹೆಗ್ಗಳಿಕೆ ಗಳಿಸಿಕೊಂಡವರು.,
  ಹಿಂದಿ ಚಿತ್ರರಂಗದ ದಿಗ್ಗಜರಾಗಿದ್ದ ದಿಲೀಪ್ ಕುಮಾರ್, ವಿನೋದ್ ಖನ್ನಾ, ರಾಕೇಶ್ ರೋಷನ್, ವಿನೋದ್ ಮೆಹ್ರಾ ಅಂತಹ ನಾಯಕರೊಂದಿಗೆ ಬಾಲಿವುಡ್‍ನಲ್ಲಿ ಮಿಂಚಿದ್ದ ಭಾರತಿಯವರು ಮಲಯಾಳದ ಸೂಪರ್ ಸ್ಟಾರ್ ಮೋಹನಲಾಲ್ ಅವರ ತಾಯಿಯಾಗಿ ಪಾತ್ರ ಮಾಡಿ ಹೆಸರು ಮಾಡಿದವರು. ತೆಲುಗಿನ ಅಕ್ಕಿನೇನಿ ನಾಗೇಶ್ವರರಾವ್, ಎನ್ಟಿಆರ್ ಅಂತಹ ಮಹಾನಟರ ಜೊತೆ ಕುಣಿದು ಕುಪ್ಪಳಿಸಿದ ಈ ಬೆಳ್ಳಿ ಬೆಡಗಿ ದಕ್ಷಿಣ ಭಾರತೀಯ ಚಿತ್ರರಂಗ ಕಂಡ ಪಂಚಭಾಷ ತಾರೆ. ಕನ್ನಡದ ಬಹುತೇಕ ನಾಯಕ ನಟರೊಂದಿಗೆ ನಟಿಸಿರುವ ಖ್ಯಾತಿ ಇವರದ್ದಾಗಿದೆ.
      ಕನ್ನಡ ಚಿತ್ರರಂಗದ ಬಹುತೇಕ ನಿರ್ದೆಶನದಲ್ಲಿ ತಮ್ಮ ಚೆಲುವು ಹಾಗೂ ಅಬಿನಯವನ್ನು ಅನಾವರಣಗೊಳಿಸಿರುವ ಇವರು ಖ್ಯಾತ ನಿರ್ದೆಶಕ ಪುಟ್ಟಣ್ಣ ಕಣಗಾಲ್ ಅವರ ಋಣಮುಕ್ತದಲ್ಲಿ ತಮ್ಮ ಪ್ರಬುದ್ದತೆ ತೋರಿದ್ದರು. ನಾಗಾಭರಣ, ಸಿದ್ದಲಿಂಗಯ್ಯ, ಅವರಿಂದ ಹಿಡಿದು ಇತ್ತಿಚಿನ ಕವಿತಾ ಲಂಕೇಶ್ ಅವರ ನಿರ್ದೇಶನ ತನಕ ಎಲ್ಲಾ ಚಿತ್ರಬ್ರಹ್ಮರ ಗರಡಿಯಲ್ಲಿ ನಟಿಸಿದ ಕೀರ್ತಿ ಇವರದ್ದು.
      ತನ್ನ 50 ವರ್ಷಗಳ ಚಿತ್ರ ಜೀವನದಲ್ಲಿ ಯಾವುದೆ ವಿವಾದ ಮಾಡಿಕೊಳ್ಳದೆ, ಗಾಸಿಪ್ ಗಳಿಗೆ ಆಸ್ಪದ ಕೊಡದೆ ಶುದ್ದ ಭಾರತಿಯ ನಾರಿಯಂತೆ ವಿಷ್ಣುವಿನೋಡನೆ ತುಂಬು ಜೀವನ ನೆಡೆಸಿರುವ ಭಾರತಿ ಅವರು ವಿಷ್ಣು ನಿಧನದ ನಂತರವು ಸಮಾಜದ ವಿವಿದ ಸ್ತರಗಳಲ್ಲಿ ಸಕ್ರಿಯವಾಗೆ ತೊಡಗಿಕೊಂಡವರು.
     ಸಿನಿಮಾದಲ್ಲಿ ಅನೇಕ ಏರಿಳಿತ ಕಂಡಿರುವ ಭಾರತಿ ಮಹಿಳೆಗಿರಬೇಕಾದ ಸಂಯಮಶೀಲತೆ ಹಾಗೂ ವೃತ್ತಿಪರತೆಯಿಂದಾಗಿ ತಮ್ಮ ಚಿತ್ರ ಜೀವನದ ಪಯಣದಲ್ಲಿ ಸುವರ್ಣ ಸಂಭ್ರಮ ಕಾಣಲು ಸಾಧ್ಯವಾಗಿದೆ.  ಸೀತರಾಮ್ ಅವರ ಟಿವಿ ಸೀರಿಯಲ್ ಮುಕ್ತ ಮುಕ್ತ ಸೀರಿಯಲ್ ನಲ್ಲೂ ಕಾಣಿಸಿಕೊಂಡಿರುವ ಭಾರತಿ 2012 ರಲ್ಲಿ ಪ್ರಸಾರಗೊಂಡ ಜನನಿ ಧಾರವಾಹಿಯಲ್ಲಿ ತಮ್ಮ ಪ್ರಬುದ್ದತೆಯನ್ನು ಸಾಬೀತುಗೊಳಿಸಿದ್ದಾರೆ.
      ತಮ್ಮ ಬಾಳ ಸಂಗಾತಿ ಡಾ.ವಿಷ್ಣುವರ್ಧನ್ ಅವರೊಂದಿಗಿನ ದಾಂಪತ್ಯ ಜೀವನದಲ್ಲಿ ಇತರರಿಗೆ ಮಾದರಿಯಾಗಿ ಬಾಳ್ವೆ ನಡೆಸಿ ತೋರಿಸಿರುವ ಭಾರತಿಯವರು ವಿಷ್ಣು ಇಹಲೋಕವನ್ನು ತ್ಯಜಿಸಿದರೂ ಅವರ ಸಂಕಲ್ಪಗಳನ್ನ ಈಡೇರಿಸಲು ಅವಿರತ ಶ್ರಮಿಸುತ್ತಿದ್ದಾರೆ. ಡಾ.ವಿಷ್ಣು ನೆನಪಿಗಾಗಿ ಸ್ವಾರಕ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಭಾರತಿ ಸ್ನೇಹಲೋಕ ಸಂಘಟನೆಯ ಮೂಲಕ ಪ್ರತಿವರ್ಷ ಕ್ರಿಕೇಟ್ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
       ಕನ್ನಡ ಚಿತ್ರಲೋಕದಲ್ಲಿ ದೃವತಾರೆಯಾಗಿ ಕಂಗೂಳಿಸಿ ಸುವರ್ಣ ಸಂಭ್ರಮ ಆಚರಿಸುತ್ತಿರುವ ಭಾರತಿ ವಿಷ್ಣುÀ್ಣವರ್ಧನ್ ಅವರ ಕಲಾ ಸೇವೆಯನ್ನು ಗುರುತಿಸಿ ಗೌರವಿಸುವಲ್ಲಿ ನಮ್ಮ ಚಿತ್ರರಂಗ ಯಾಕೋ ನಿರ್ಲಿಪ್ತವಾಗಿದೆ. ಕನ್ನಡ ಚಿತ್ರರಂಗದ ವಾಣಿಜ್ಯ ಮಂಡಳಿಯಾಗಲಿ, ಅಂಬಿ ಅಧ್ಯಕ್ಷರಾಗಿರುವ ಕಲಾವಿದರ ಸಂಘವಾಗಲಿ, ಚಿತ್ರ ಕಲಾ ಪರಿಷತ್ ಆಗಲಿ,  ನಮ್ಮ ಕರ್ನಾಟಕ ಸರ್ಕಾರವಾಗಲಿ ಕನ್ನಡ ಚಿತ್ರರಂಗಕ್ಕೆ ಬೆಳ್ಳಿ ಬೆರಗನ್ನು ತಂದುಕೊಟ್ಟ ಭಾರತಿವಿಷ್ಣುವರ್ಧನ್ ಅವರಿಗೆÉ ಒಂದು ಅಭಿನಂದನೆ ಸಲ್ಲಿಸದಿರುವುದು ಆಶ್ಚರ್ಯವಾಗಿದೆ.
       ನಮ್ಮ ರಾಜ್ಯದಲ್ಲಿನ ಕನ್ನಡ ಸಂಘಟನೆಗಳು, ಸಾಹಿತ್ಯ ಪರಿಷತ್, ಕಲಾವಿದರು, ರಂಗಕರ್ಮಿಗಳು ಇಂತಹ ಅಪರೂಪದ ಕಲಾವಿದೆಯನ್ನು ಗೌರವಿಸುವ ಮೂಲಕ್ ಕನ್ನಡ ಸಂಸ್ಕøತಿಯನ್ನ ಎತ್ತಿ ಹಿಡಿಯಬೇಕಿದೆ. ನಮ್ಮ ಕನ್ನಡ ಚಿತ್ರರಂಗದಲ್ಲಿರುವ ಅನೇಕ ಮಹೋನ್ನತ ತಾರೆಯರ ಸೇವಾ ಹಿರಿತನವನ್ನು ಗುರುತಿಸುವ ಕಾರ್ಯ ಮತ್ತು ಅವರ ಜೀವನ ವೃತ್ತಾಂತದ ಬಗ್ಗೆ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಕನ್ನಡ ಸಂಸ್ದೆಗಳು ಹೃದಯ ವೈಶಾಲ್ಯವನ್ನು ತೋರಿಸುವುದು ಅಗತ್ಯವಾಗಿದೆ. ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು, ನೀನಾಡು ಬೊಂಬೆ ನಾನಯ್ಯ ಎಂದು ಬಂಗಾರದ ಮನುಷ್ಯ ಚಿತ್ರದಲ್ಲಿ ಕುಣಿದು ಕುಪ್ಪಳಿಸಿ ಚಿತ್ರ ರಸಿಕರ ಮನಸೋರೆಗೊಂಡ ಈ ನಾಯಕಿಯನ್ನು ಮರೆಯಲಾದೀತೆ.
       ಹಿರಿಯ ತಾರೆ ಭಾರತಿ ವಿಷ್ಣುವರ್ಧನ್ ಅವರ ರೀತಿ ಬಹಳಷ್ಟು ಕಲಾವಿದರುಗಳು ಚಿತ್ರಂಗದಲ್ಲಿ ಸೇವೆ ಸಲ್ಲಿಸಿದ್ದು ಪ್ರತಿಯೊಬ್ಬರನ್ನು ಅವರ ಸೇವಾ ಹಿರಿತನದ ಮೇಲೆ ಗೌರವಿಸುವುದು ಎಲ್ಲಾ ಕನ್ನಡಿಗರ ಕರ್ತವ್ಯ. ಈಗ ಭಾರತಿ ವಿಷ್ಣುವರ್ಧನ್ ಅವರಿಗೆ ಕನ್ನಡಿಗರು ಶುಭ ಹಾರೈಕೆ ಮೂಲಕ ಎಲ್ಲರೂ ಗೌರವ ಸಲ್ಲಿಸೋಣ.

No comments:

Post a Comment