Sunday 17 May 2015

ನಾನು ಜಾತಿ ಗಣತಿಯ ವಿರೊದಿಯಲ್ಲ.ಕೆಎಸ್.ಈಶ್ವರಪ್ಪ.

ಬೆಂಗಳೂರು: ನಾನು ಜಾತಿಗಣತಿ ವಿರೋಧಿ ಅಲ್ಲ. ಆದರೆ, ಪ್ರಾಮಾಣಿಕವಾಗಿ ಜಾತಿಗಣತಿ ಆಗಬೇಕು. ಈಗ ನಡೆಯುತ್ತಿರುವ ಗಣತಿ ಸರಿ ಇಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಹಾಲುಮತ ಮಹಾಸಭಾ ಸಮುದಾಯ ಸಮೃದ್ಧಿಗೊಂದು ಸಮೂಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಈಗ ಆಗುತ್ತಿರುವ ಸರ್ವೆ ಸರಿಯಿಲ್ಲ. ಕ್ರಿಶ್ಚಿಯನ್ ಕುರುಬ, ವಿಶ್ವಕರ್ಮ ಸೇರಿದಂತೆ ಉಪಜಾತಿ ಕಾಲಂನಲ್ಲಿ ಇಲ್ಲಸಲ್ಲದ ಜಾತಿಗಳಿವೆ. ಆ ಜಾತಿಗಳು ಎಲ್ಲಿವೆ? ಆ ಜನ ಎಲ್ಲಿದ್ದಾರೆ? ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಪ್ರಾಮಾಣಿಕ ಸರ್ವೆ ಆಗಬೇಕು. ಅದಕ್ಕಾಗಿ ನಾವು ಹೋರಾಟ ನಡೆಸಿಯೇ ತೀರುತ್ತೇವೆ' ಎಂದರು.

ಜಾತಿ ಪತ್ತೆ ಮಾಡಲು ಸರ್ಕಾರ ಅನು ಸರಿರುವ `ಆಲ್ಫಬೆಟ್' ತಂತ್ರ ಸರಿಯಲ್ಲ. ಕುರುಬರಿಗೆ ಕೆ, ಹಾಲು ಮತದವರಿಗೆ ಎಚ್, ತಿಗಳರಿಗೆ ಟಿ.. ಹೀಗೆ ಅಕ್ಷರಗಳಿಂದ ಅವರನ್ನು ಗುರುತಿಸಿರುವುದು ಸಹ ಸರಿಯಲ್ಲ. ಈ ಅಂಶಗಳು ಸೇರಿದಂತೆ ಲೋಪದೋಷ ಗಳ ತಿದ್ದುಪಡಿ ಆಗಬೇಕು. ಲೋಪದೋಷ ತೋರಿಸಿ ದ್ದಕ್ಕೆ ಈಶ್ವರಪ್ಪ ಜಾತಿ ಗಣತಿಗೆ ವಿರೋಧಿ ಎಂಬ ಪಟ್ಟ ಕಟ್ಟಿದರು. ನನ್ನ ವಿರೋಧ ಗಣತಿಗಲ್ಲ, ಆ ಕೆಲಸ ಸರಿಯಾಗಿ ಆಗಲಿ ಎಂಬುದು ನಮ್ಮ ಅಭಿಪ್ರಾಯ ಎಂದರು.

ಆಶೀರ್ವಚನ ನೀಡಿದ ಹೊಸದುರ್ಗ ಶ್ರೀ ಕನಕ ಗುರುಪೀಠದ ಶ್ರೀ ಈಶ್ವರಾ ನಂದಪುರಿ ಸ್ವಾಮೀಜಿ, `ಸಮುದಾಯದ ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಶಾಶ್ವತ ನಿಧಿ ಸಂಗ್ರಹ ಯೋಜನೆಯಡಿ `ಕನಕ ನಿಧಿ' ಸ್ಥಾಪಿಸಲಾಗುವುದು. ಕಾಗಿನೆಲೆಯಲ್ಲಿ 35 ಅಡಿ ಎತ್ತರದ ಏಕಶಿಲಾ ಕನಕಮೂರ್ತಿಯನ್ನು ಸ್ಥಾಪಿಸುತ್ತಿದ್ದು, ಕೆಲವೇ ದಿನಗಳಲ್ಲಿ ಕೆತ್ತನೆ ಕೆಲಸ ಆರಂಭವಾಗಲಿದೆ.

ಅದಕ್ಕೆ ದಾನಿಗಳು ಕಲ್ಲನ್ನು ದಾನ ಮಾಡಬಹುದು. ಒಂದು ಕಲ್ಲಿಗೆ ರು.15 ಸಾವಿರ ವೆಚ್ಚ ತಗುಲಲಿದ್ದು, ಶ್ರೀಮಂತರು ನೆರವು ನೀಡುವಂತೆ ಹೇಳಿದರು. ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಾಸಭಾ ಅಧ್ಯಕ್ಷ ರುದ್ರಣ್ಣ ಗುಳಗುಳಿ, ಎಂ.ನಿಕೇತರಾಜ್ ಮತ್ತಿತರರು ಇದ್ದರು.

ಎಚ್.ಎಂ. ರೇವಣ್ಣಗೆ ಸಚಿವ ಸ್ಥಾನ ನೀಡಿ
ವಿಧಾನಪರಿಷತ್  ಸದಸ್ಯ ಎಚ್.ಎಂ.ರೇವಣ್ಣ ಅವರು ಹಲವು ವರ್ಷಗಳಿಂದ ಪಕ್ಷಕ್ಕೆ ನಿಷ್ಠಾವಂತರಾಗಿದ್ದಾರೆ. ಹಾಗಾಗಿ ಗ್ರಾ.ಪಂ ಚುನಾವಣೆ ನಂತರ ಸಂಪುಟ ವಿಸ್ತರಣೆ ವೇಳೆ ರೇವಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆ ಎಂದು ಮುಖ್ಯಮಂತ್ರಿಗಳನ್ನು ಆಗ್ರಿಹಿಸಿದ ಈಶ್ವರಪ್ಪ, ಈ ಸಂಬಂಧ ಮಾತುಕತೆ ನಡೆಸಲಾಗುವುದು, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹಾಲುಮತದ ಸೊಸೈಟಿಗಳನ್ನು ಸ್ಥಾಪಿಸಬೇಕು. ಸಮುದಾಯದ ಬಡವರಿಗೆ ಅಗತ್ಯಕ್ಕನುಗುಣವಾಗಿ ಸಾಲ ನೀಡುವ ಮೂಲಕ ಅವರಿಗೆ ನೆರವಾಗಬೇಕು ಎಂದು ಹೇಳಿದರು

Sunday 3 May 2015

ರಾಜ್ಯ ಮಟ್ಟದ ಕವಿ ಬಿ.ಎಂ.ಶ್ರೀ. ಕಾವ್ಯ ಪುರಸ್ಕಾರಕ್ಕೆ ಆಯ್ಕೆ

 ರಾಜ್ಯ ಮಟ್ಟದ ಕವಿ ಬಿ.ಎಂ.ಶ್ರೀ. ಕಾವ್ಯ ಪುರಸ್ಕಾರಕ್ಕೆ ಆಯ್ಕೆ
ಮಂಡ್ಯ : ಜಿಲ್ಲಾ ಯುವ ಬರಹಗಾರರ ಬಳಗದ ವತಿಯಿಂದ ನೀಡಲಾಗುವ ರಾಜ್ಯ ಮಟ್ಟದ ಕನ್ನಡದ ಕಣ್ವ ಖ್ಯಾತಿಯ ಕವಿ ಬಿ.ಎಂ.ಶ್ರೀಕಂಠಯ್ಯ ಕಾವ್ಯ ಪ್ರಶಸ್ತಿಗೆ ವಿವಿಧ ಜಿಲ್ಲೆಯ 6 ಮಂದಿ ಪ್ರತಿಭಾವಂತ ಕವಿ-ಕವಯತ್ರಿಯರು ಆಯ್ಕೆಯಾಗಿದ್ದಾರೆ ಎಂದು ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ತಿಳಿಸಿದ್ದಾರೆ.
     ಪ್ರತಿಭಾವಂತ ಸೃಜನಶೀಲ ಯುವ ಕವಯತ್ರಿಯರಾದ ಶಿವಮೊಗ್ಗದ ಶ್ರೀಮತಿ ದೀಪ್ತಿ ಭದ್ರಾವತಿ, ಹಾಸನದ ಕುಮಾರಿ ಮಮತಾ ಅರಸೀಕೆರೆ ಹಾಗೂ ಯುವಕವಿಗಳಾದ ಕೊಪ್ಪಳದ ಅಲ್ಲಾಗಿರಿರಾಜ್ ಕನಕಗಿರಿ, ಮಂಡ್ಯದ ಡಾ. ಅಮೃತಿ ಜೆ.ರಾಜೇಶ್, ಬೆಂಗಳೂರಿನ ಹಂದಲಗೆರೆ ಗಿರೀಶ್, ದಾವಣಗೆರೆಯ ವಿ.ಬಸವರಾಜಪ್ಪ ಬೇವಿನಮರ ಆಯ್ಕೆಯಾಗಿದ್ದಾರೆ.
   ಮೇ 9 ರಂದು ಮಂಡ್ಯದ ಗಾಂಧಿ ಭವನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕವಿಮೇಳದ ಸಮಾರೋಪ ಸಮಾರಂಭದಲ್ಲಿ ಪ್ರಸಿದ್ಧ ಸಾಹಿತಿ ಡಾ.ಸಿ.ಪಿ.ಕೆ. ಅವರು  ಬಿ.ಎಂ.ಶ್ರೀ. ಕಾವ್ಯ ಪುರಸ್ಕಾರವನ್ನು ಪ್ರದಾನ ಮಾಡುವರು. ಮೈಸೂರು ವಿ.ವಿ.ಯ ಡಾ. ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣ ಕೇಂದ್ರದ ವಿಶ್ರಾಂತ ನಿರ್ದೇಶಕ ಎಂ.ಬಿ.ಜಯಶಂಕರ್ ಅಧ್ಯಕ್ಷತೆ ವಹಿಸುವರು.  
ಕೃಷ್ಣರಾಜಪೇಟೆ. ಕೆ.ಆರ್.ಪೇಟೆ ಪಟ್ಟಣದಲ್ಲಿ ದುಷ್ಕರ್ಮಿಯಿಂದ ಅತ್ಯಾಚಾರಕ್ಕೀಡಾಗಿ ಕೊಲೆಯಾದ 9 ವರ್ಷದ ಮುಸ್ಲಿಂ ಬಾಲಕಿ ಮೆಹಖ್‍ಬಾನು ಮತ್ತು ಇತ್ತೀಚೆಗೆ ಗುಡ್ಡೇನಹಳ್ಳಿಯ ಬಳಿ ಕಟ್ಟೆಯಲ್ಲಿ ಈಜಲು ಹೋಗಿ ಮೂವರೂ ಮಕ್ಕಳು ಜಲಸಮಾಧಿಯಾದ ಅಬ್ದುಲ್‍ಖಲೀಲ್ ಅವರ ಮನೆಗಳಿಗೆ ಇಂದು ಭೇಟಿ ನೀಡಿದ ಕೇಂದ್ರದ ಮಾಜಿಸಚಿವ ಕೆ.ರೆಹಮಾನ್‍ಖಾನ್ ಎರಡೂ ಕುಟುಂಬಗಳ ಪೋಷಕರು ಮತ್ತು ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ ಸರ್ಕಾರದಿಂದ ದೊರೆಯುವ ಪರಿಹಾರ ಧನವನ್ನು ಕೊಡಿಸಿಕೊಡುವುದಾಗಿ ಭರವಸೆ ನೀಡಿದರು.
ಅನಿರೀಕ್ಷಿತವಾಗಿ ಅಸಹಜವಾದ ಘಟನೆಗಳು ಸಂಭವಿಸಿ ಇಡೀ ಕುಟುಂಬಗಳು ನೋವಿನಲ್ಲಿ ಮುಳುಗಿವೆ. ನಾನು ಸಂಸತ್ ಅಧಿವೇಶನದಲ್ಲಿ ಭಾಗಿಯಾಗಲು ನವದೆಹಲಿಯಲ್ಲಿ ಇದ್ದುದರಿಂದಾಗಿ ಅಂದು ಬರಲಾಗಲಿಲ್ಲ. ಆದ್ದರಿಂದ ಇಂದು ಬಿಡುವು ಮಾಡಿಕೊಂಡು ಹುಟ್ಟೂರಿಗೆ ಬಂದು ಎರಡೂ ಮುಸ್ಲಿಂ ಕುಟುಂಬಗಳ ಮನೆಗಳಿಗೆ ಭೇಟಿ ನೀಡಿ ಮಾನಸಿಕವಾಗಿ ಧೈರ್ಯವನ್ನು ತುಂಬಿದ್ದೇನೆ. ಪಟ್ಟಣದ ಸುಭಾಷ್‍ನಗರದಲ್ಲಿ ವಾಸವಾಗಿರುವ ಸಮೀಉಲ್ಲಾ ಅವರ ಮಗಳಾದ ಮೆಹಖ್‍ಬಾನು ಪಟ್ಟಣದ ಸರ್ಕಾರಿ ಉರ್ದು ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದಾಳೆ, ಈ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಅಮಾನುಶವಾಗಿ ಕೊಲೆ ಮಾಡಲಾಗಿದೆ. ಪೋಲಿಸರು ಆರೋಪಿಯನ್ನು ಬಂಧಿಸಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ, ನ್ಯಾಯಾಂಗವು ಇಂತಹ ಪಾಪಿಗಳ ಮೇಲೆ ಕರುಣೆತೋರದೇ ಗಲ್ಲು ಶಿಕ್ಷೆಯನ್ನು ನೀಡಬೇಕು, ಮಿಂಚಿನಂತೆ ಕಾರ್ಯನಿರ್ವಹಿಸಿರುವ ವೃತ್ತ ನಿರೀಕ್ಷಕ ಕೆ.ರಾಜೇಂದ್ರ ಮತ್ತು ಸಿಬ್ಬಂಧಿಗಳ ಕಾರ್ಯವೈಖರಿಯನ್ನು ರೆಹಮಾನ್‍ಖಾನ್ ಪ್ರಶಂಸಿಸಿದರು.
ಪಟ್ಟಣದ ಮುಸ್ಲಿಂ ಬ್ಲಾಕಿನಲ್ಲಿ ವಾಸವಾಗಿರುವ ಮಾವಿನಹಣ್ಣಿನ ವ್ಯಾಪಾರಿ ಅಬ್ದುಲ್‍ಖಲೀಲ್ ಅವರ 1ನೇ ಪುತ್ರ ಮಹಮ್ಮದ್‍ಫಿದರ್(9), 2ನೇ ಮಗ ಮಹಮ್ಮದ್‍ಕುರ್ಸಾನ್(7) ಹಾಗೂ ಮೂರನೇ ಪುತ್ರ ಮಹ್ಮಮದ್‍ಅಯಾನ್(5) ಮೂವರೂ ಸಹೋದರರು ಕಟ್ಟೆಯ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾರೆ. ಮಗುವನ್ನು ಅತ್ಯಾಚರವೆಸಗಿ ಕೊಲೆ ಮಾಡಿರುವ ಪಾನಿಪುರಿ ವ್ಯಾಪಾರಿ ಪ್ರಕಾಶ(35)ನನ್ನು ಕೆ.ಆರ್.ಪೇಟೆ ಪೋಲಿಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎರಡು ಮುಸ್ಲಿಂ ಕುಟುಂಬಗಳ ಮನೆಯಲ್ಲಿ ಶೋಖದ ಛಾಯೆಯು ಆವರಿಸಿದೆ. ದಯಾಮಯನಾದ ಅಲ್ಲಾಹನು ಎರಡೂ ಕುಟುಂಬಗಳಿಗೆ ದುಃಖ ಹಾಗೂ ನೋವನ್ನು ಮರೆಸುವ ಶಕ್ತಿಯನ್ನು ನೀಡಬೇಕಿದೆ ಎಂದು ಪ್ರಾರ್ಥಿಸಿದ ರೆಹಮಾನ್‍ಖಾನ್ ಸರ್ಕಾರದ ವತಿಯಿಂದ ದೊರೆಯಬಹುದಾದ ಪರಿಹಾರವನ್ನು ಪ್ರಾಮಾಣಿಕವಾಗಿ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
 ಈ ಸಂದರ್ಭದಲ್ಲಿ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್, ಪುರಸಭಾ ಅಧ್ಯಕ್ಷ ಕೆ.ಗೌಸ್‍ಖಾನ್, ಮುಸ್ಲಿಂ ಸಮಾಜದ ಮುಖಂಡರಾದ ಓಬೇದುಲ್ಲಾಷರೀಫ್., ಕೆ.ಯೂನಸ್‍ಖಾನ್, ತಾಲೂಕು ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ಪುರಸಭೆ ಸದಸ್ಯರಾದ ತಂಜೀಮಾಕೌಸರ್, ಡಿ.ಪ್ರೇಮಕುಮಾರ್, ಯುವಮುಖಂಡ ಶ್ರೀಧರ್ ಸಿರಿವಂತ್, ವೃತ್ತನಿರೀಕ್ಷಕ ಕೆ.ರಾಜೇಂದ್ರ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ ಮತ್ತಿತರರು ಉಪಸ್ಥಿತರಿದ್ದರು.
  ಕೆ.ಆರ್.ಪೇಟೆ ಪಟ್ಟಣದ ಮುಸ್ಲಿಂ ಬ್ಲಾಕ್ ನಿವಾಸಿ ಅಬ್ದುಲ್‍ಖಲೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಕೇಂದ್ರದ ಮಾಜಿಸಚಿವ ಕೆ.ರೆಹಮಾನ್‍ಖಾನ್ ಇತ್ತೀಚೆಗೆ ಮೂವರೂ ಮಕ್ಕಳು ಈಜಲು ಹೋಗಿ ಜಲಸಮಾಧಿಯಾದ ಅಬ್ದುಲ್ ಖಲೀಲ್ ಮತುಲ್ಕೊಲೆಯಾದ ಬಾಲಕಿ ಮೆಹಕ್‍ಬಾನು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಸರ್ಕಾರದ ವತಿಯಿಂದ ವಿಶೇಷ ಧನಸಹಾಯವನ್ನು ಕೊಡಿಸಿಕೊಡುವುದಾಗಿ ಭರವಸೆ ನೀಡಿದರು. ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಮತ್ತಿತರರು ಚಿತ್ರದಲ್ಲಿದ್ದಾರೆ.

ಕೃಷ್ಣರಾಜಪೇಟೆ. ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಅಣೆಕಟ್ಟೆಯ ಹಿಂಭಾಗದಲ್ಲಿ ಕೇವಲ 50 ಅಡಿಗಳ ಅಂತರದಲ್ಲಿಯೇ ಭಾರೀ ಸ್ಪೋಟಕಗಳು ಹಾಗೂ ಸಿಡಿಮದ್ದನ್ನು ಬಳಸಿ ಹೇಮಗಿರಿ ನಾಲೆಗೆ ಹೆಚ್ಚಿನ ನೀರು ಹರಿದುಹೋಗುವಂತೆ ಮಾಡಲು ಕಾಲುವೆಯನ್ನು ತ್ರಿಶೂಲ್ ಜಲ ವಿದ್ಯುತ್ ಕಂಪನಿಯು ನೀರಾವರಿ ಇಲಾಖೆಯ ಅನುಮತಿಯನ್ನು ಪಡೆಯದೇ ಆಳಗೊಳಿಸಿ ಅಗಲೀಕರಣ ಮಾಡುತ್ತಿರುವುದರಿಂದ ಅಣೆಕಟ್ಟೆಗೆ ಅಪಾಯ ಎದುರಾಗಿದೆ.
ತಾಲೂಕಿನ ಜೀವನದಿ ಹೇಮಾವತಿ ನದಿಯ ನೀರನ್ನು ಬಳಸಿಕೊಂಡು ಮಂದಗೆರೆ ಅಣೆಕಟ್ಟೆಯ ಬಳಿ ಭೊರೂಕ ಜಲ ವಿದ್ಯುತ್ ಕಂಪನಿಯು 12 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರೆ ಅಕ್ಕಿಹೆಬ್ಬಾಳಿನ ಹೊಸಪಟ್ಟಣ ದ್ವೀಪದಲ್ಲಿ ಕಾವೇರಿ ಹೈಡ್ರೋ ಎಲೆಕ್ಟ್ರಿಕಲ್ ಪ್ರಾಜೆಕ್ಟ್ ಕಂಪನಿಯು 6 ಮೆಗಾವ್ಯಾಟ್ ವಿದ್ಯುತ್ ಹಾಗೂ ಹೇಮಗಿರಿ ಅಣೆಕಟ್ಟೆಯ ಬಳಿ ಹೇಮಾವತಿ ನದಿಯ ಮೂಲಕ ಹೇಮಗಿರಿ ನಾಲೆಯ ನೀರನ್ನು ಬಳಸಿಕೊಂಡು ಹೈದರಾಬಾದ್ ಮೂಲದ ತ್ರಿಶೂಲ್ ಜಲವಿದ್ಯುತ್ ಕಂಪನಿಯು 6ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಪ್ರಸ್ತುತ ನದಿಯ ನೀರಿನ ಮೂಲಕ ತಯಾರಿಕೆಯಾಗುತ್ತಿರುವ ವಿದ್ಯುತ್ ಎಲ್ಲವೂ ತಾಲೂಕಿನ ರೈತಾಪಿ ವರ್ಗದ ಬಳಕೆಗೆ ದೊರೆಯದೇ ಬೇರೆಡೆಗೆ ಮಾರಾಟವಾಗುತ್ತಿದೆ ಎಂಬುದೇ ವಿಶೇಷವಾಗಿದೆ.
ಹೇಮಗಿರಿ ಅಣೆಕಟ್ಟೆಯಿಂದ ಹಾದು ಹೋಗಿದ್ದು ಕಸಬಾ ಹೋಬಳಿ ಮತ್ತು ಬೂಕನಕೆರೆ ಹೋಬಳಿಯ ರೈತರ ಬದುಕನ್ನು ಹಸನುಗೊಳಿಸುತ್ತಿರುವ ಹೇಮಗಿರಿ ನಾಲೆಯು 35ಕಿ.ಮೀಗೂ ಹೆಚ್ಚಿನ ಉದ್ದವಿದ್ದು ಈಗಾಗಲೇ ನಾಲೆಯು ಆಧುನೀಕರಣಗೊಂಡಿದ್ದು ರೈತರ ಜಮೀನಿಗೆ ನೀರು ಸರಾಗವಾಗಿ ಹರಿದು ರೈತರು ನೆಮ್ಮದಿಯಿಂದ ಬೇಸಾಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಹೇಮಗಿರಿ ನಾಲೆಯಲ್ಲಿ 500ಕ್ಯೂಸೆಕ್ಸ್ ನೀರು ಹರಿಯುವ ಸಾಮಥ್ರ್ಯವಿದ್ದರೆ ತ್ರಿಶೂಲ್ ಜಲವಿದ್ಯುತ್ ಕಂಪನಿಯು 5ಸಾವಿರ ಕ್ಯೂಸೆಕ್ಸ್ ನೀರನ್ನು ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಂಡಿಉ ಹೆಚ್ಚುವರಿ ನೀರನ್ನು ನದಿಗೆ ಬಿಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದರೂ ಇನ್ನೂ ಹೆಚ್ಚಿನ ವಿದ್ಯುತ್ ಉತ್ಪಾದನೆಯ ದುರಾಸೆಗೆ ಮುಂದಾಗಿರುವ ಕಂಪನಿಯು ಜನರ ವಿರೋಧದ ನಡುವೆಯು ಹೇಮಗಿರಿ ನಾಲೆಯನ್ನು 10ಸಾವಿರ ಕ್ಯೂಸೆಕ್ಸ್ ನೀರು ಹರಿಯುವಂತೆ ಅಗಲ ಮತ್ತು ಆಳಗೊಳಿಸಲು ಹೇಮಗಿರಿ ಅಣೆಕಟ್ಟೆಯ ಹಿಂಭಾಗದಲ್ಲಿ ನಾಲೆಯನ್ನು ಅಗಲ ಮತ್ತು ಆಳಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಭಾರೀ ಪ್ರಮಾಣದಲ್ಲಿ ಸ್ಪೋಟಕಗಳು ಮತ್ತು ಸಿಡಿಮದ್ದನ್ನು ಬಳಸಿಕೊಂಡು ರಜಾದಿನಗಳಲ್ಲಿಯೂ ಸಮರೋಪಾಧಿಯಲ್ಲಿ ಕೆಲಸ ಮಾಡುತ್ತಿದೆ. ವಿಶೇಷವೆಂದರೆ ಇಲಾಖೆಯ ಗಮನಕ್ಕೂ ತರದೇ ಕೇವಲ ರಾಜಕೀಯ ಪ್ರಭಾವದಿಂದಲೇ ನಾಲೆಯ ಅಗಲೀಕರಣ ಕೆಲಸವು ನಡೆಯುತ್ತಿದೆ ಎಂಬುದು ವಿಶೇಷವಾಗಿದೆ.
ಸಿಡಿಮದ್ದುಗಳು ಮತ್ತು ಸ್ಪೋಟಕಗಳನ್ನು ಬಳಸಿಕೊಂಡು ಕಾನೂನು ಬಾಹಿರವಾಗಿ ಕೆಲಸ ನಡೆಯುತ್ತದ್ದರೂ ನೀರಾವರಿ ಇಲಾಖೆಯ ಒಬ್ಬನೇ ಒಬ್ಬ ಎಂಜಿನಿಯರ್ ಆಗಲೀ, ಸಹಾಯಕ ಎಂಜಿನಿಯರ್ ಆಗಲೀ ಖುದ್ದು ಹಾಜರಿದ್ದು ಅಣೆಕಟ್ಟೆಯ ಸುರಕ್ಷತೆಯ ಕಡೆಗೆ ಗಮನ ಹರಿಸಿಲ್ಲದಿರುವುದು ಆಶ್ಚರ್ಯ ಮೂಡಿಸಿದೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಅಣೆಕಟ್ಟೆಯ ಸುರಕ್ಷತೆಯ ಕಡೆಗೆ ಗಮನ ಹರಿಸದೇ ಕೇವಲ ಹಣ ಸಂಪಾದನೆಯ ದುರಾಸೆಯಿಂದ ತ್ರಿಶೂಲ್ ಜಲ ವಿದ್ಯುತ್ ಕಂಪನಿಯು ಆರಂಬಿಸಿರುವ ಹೇಮಗಿರಿ ನಾಲೆಯ ಅಗಲ ಮತ್ತು ಆಳಗೊಳಿಸುವ ಕಾಮಗಾರಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಾನೂನು ಬಾಹಿರವಾದ ಕೃತ್ಯದಲ್ಲಿ ತೊಡಗಿ ನಮ್ಮ ತಾಲೂಕಿನ ರೈತರ ಹೊಟ್ಟೆಯ ಮೇಲೆ ಹೊಡೆಯಲು ಹೊರಟಿರುವ ಹೈದರಾಬಾದ್ ಮೂಲದ ಕಂಪನಿಗೆ ರೈತರೇ ಗೇಟ್‍ಪಾಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹೇಮಗಿರಿ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಬಹುತೇಕ ನೀರನ್ನು ತ್ರಿಶೂಲ್ ಜಲವಿದ್ಯುತ್ ಕಂಪನಿಯೇ ಬಳಸಿ ನದಿಯ ನೀರನ್ನು ಖಾಲಿ ಮಾಡುವುದರಿಂದ ನದಿಯಲ್ಲಿ ನೀರಿಲ್ಲದೇ ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ಅಕ್ಕಿಹೆಬ್ಬಾಳಿನ 50ಕ್ಕೂ ಹೆಚ್ಚಿನ ಗ್ರಾಮಗಳಿಗೆ ಹೇಮಗಿರಿ ಅಣೆಕಟ್ಟೆಯ ಮೂಲಕ ಸರಬರಾಜಾಗುವ ನೀರಿಲ್ಲದೇ ಜನರು ಪರದಾಡಬೇಕಾಗುತ್ತದೆ. ಆದ್ದರಿಂದ ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ತ್ರಿಶೂಲ್ ಜಲವಿದ್ಯುತ್ ಕಂಪನಿಯು ಹೇಮಾವತಿ ನದಿಯ ನೀರನ್ನು ಕಬಳಿಸಲು ಹಮ್ಮಿಕೊಂಡಿರುವ ಅಕ್ರಮ ಕಾಮಗಾರಿಯನ್ನು ನಿಲ್ಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಚಿತ್ರಶೀರ್ಷಿಕೆ: 03-ಏಖPಇಖಿಇ-02 ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಅಣೆಕಟ್ಟೆಯ ಹಿಂಭಾಗದಲ್ಲಿ ಕೇವಲ 50 ಅಡಿಗಳ ಅಂತರದಲ್ಲಿಯೇ ಭಾರೀ ಸ್ಪೋಟಕಗಳು ಹಾಗೂ ಸಿಡಿಮದ್ದನ್ನು ಬಳಸಿ ಹೇಮಗಿರಿ ನಾಲೆಗೆ ಹೆಚ್ಚಿನ ನೀರು ಹರಿದುಹೋಗುವಂತೆ ಮಾಡಲು ಕಾಲುವೆಯನ್ನು ತ್ರಿಶೂಲ್ ಜಲ ವಿದ್ಯುತ್ ಕಂಪನಿಯು ನೀರಾವರಿ ಇಲಾಖೆಯ ಅನುಮತಿಯನ್ನು ಪಡೆಯದೇ ಹೇಮಾವತಿ ನದಿಯ ನೀರನ್ನು ಕಬಳಿಸಲು ಹೇಮಗಿರಿ ಕಾಲಕುವೆಯನ್ನು ಆಳಗೊಳಿಸಿ ಅಗಲೀಕರಣ ಮಾಡುತ್ತಿರುವುದರಿಂದ ಹೇಮಗಿರಿ ಅಣೆಕಟ್ಟೆಗೆ ಅಪಾಯ ಎದುರಾಗಿದೆ.

ಬಡವರಿಗೆ ಅಕ್ಕಿ,ಗೋಧಿ ಉಚಿತ ವಿತರಣೆ ಕಾರ್ಯಕ್ರಮಕ್ಕೆ ಸಚಿವರಿಂದ ಚಾಲನೆ
ಮಂಡ್ಯಮೇ. 3. ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ಆಹಾರಧಾನ್ಯ ವಿತರಣಾ ಕಾರ್ಯಕ್ರಮಕ್ಕೆ ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಎಚ್. ಅಂಬರೀಷ್ ಅವರು ಚಾಲನೆ ನೀಡಿದರು.
ಮಂಡ್ಯ ತಾಲ್ಲೂಕು ಕೆರಗೋಡು ಗ್ರಾಮದಲ್ಲಿ ಶನಿವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ನಮ್ಮ ಸರ್ಕಾರ ಈ ವರೆಗೂ 1 ರೂಪಾಯಿಗೆ ಬಡವರಿಗೆ ಅಕ್ಕಿ ಕೊಡುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರು ಕನಿಷ್ಠ ಎರಡು ಹೊತ್ತಾದರೂ ನೆಮ್ಮದಿಯಿಂದ ಊಟ ಮಾಡಲಿ ಎಂಬ ಉದ್ದೇಶದಿಂದ ಮೇ ತಿಂಗಳಿಂದ ಸಂಪೂರ್ಣ ಉಚಿತವಾಗಿ ಅಕ್ಕಿ, ಗೋಧಿಯನ್ನು ಪಡಿತರ ವ್ಯವಸ್ಥೆಯಲ್ಲಿ ನೀಡುವುದರಿಂದ ಸಂತೋಷ ಪಡಬೇಕು ಎಂದು ಹೇಳಿದರು.
ಇದಲ್ಲದೆ, ರಿಯಾಯಿತಿಯಲ್ಲಿ 25 ರೂ. ದರದಲ್ಲಿ 1 ಲೀಟರ್ ತಾಳೆ ಎಣ್ಣೆ, ಹಾಗೂ 2 ರೂ.ಗೆ ಉಪ್ಪನ್ನು ನೀಡುತ್ತಿದೆ ಎಂದು ಅವರು ಹೇಳಿದರು.
ಅಂತ್ಯೋದಯ ಚೀಟಿದಾರರಿಗೆ 29 ಕೆ.ಜಿ. ಅಕ್ಕಿ, 6 ಕೆ.ಜಿ. ಗೋಧಿ, ಬಿ.ಪಿ.ಎಲ್. ಚೀಟಿದಾರರಿಗೆ ಕನಿಷ್ಠ 1 ಯೂನಿಟ್‍ಗೆ 4 ಕೆ.ಜಿ. ಅಕ್ಕಿ, 1 ಕೆ.ಜಿ. ಗೋಧಿಯಂತೆ ಗರಿಷ್ಠ 30 ಕೆ.ಜಿ. ಆಹಾರಧಾನ್ಯವನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಹೇಳಿದರು.
ಎ.ಪಿ.ಎಲ್. ಕುಟುಂಬಗಳಿಗೂ ಸಹ ಮುಂದಿನ ತಿಂಗಳಿಂದ ರಿಯಾಯಿತಿ ದರದಲ್ಲಿ ಆಹಾರಧಾನ್ಯ ವಿತರಿಸಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ
ಮಂಡ್ಯ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 4.65 ಲಕ್ಷ ಬಿ.ಪಿ.ಎಲ್. ಕುಟುಂಬಗಳು ಹಾಗೂ 69 ಸಾವಿರ ಎ.ಪಿ.ಎಲ್ ಕುಟುಂಬಗಳು ಸೌಲಭ್ಯ ಪಡೆಯುತ್ತವೆ ಎಂದು ಹೇಳಿದರು.
ಕೆಶಿಪ್ ಯೋಜನೆಯಡಿ ಹಿರಿಯೂರು, ಕೌಡ್ಲೆ, ಕೆರಗೋಡು, ಮಂಡ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ರಸ್ತೆಗೆ ಕಳೆದ 7-8 ವರ್ಷಗಳಿಂದ ಗ್ರಹಣ ಹಿಡಿದಿತ್ತು. ಎಲ್ಲಾ ವಿಘ್ನಗಳನ್ನು ಈಗ ನಿವಾರಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಬಾರ್ಡ್‍ನ 19ನೇ ಯೋಜನೆಯಡಿ 50 ಲಕ್ಷ ರೂ.ಗಳ ಅಂದಾಜಿನಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಹೊಡಘಟ್ಟ, ಶಿವಾರ ಮಾರಗೌಡನಹಳ್ಳಿ ರಸ್ತೆಯ ಶಂಕುಸ್ಥಾಪನೆ ನೆರವೇರಿಸಲಾಯಿತು.
ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಸ್. ವಿಜಯಾನಂದ, ಪಡಿತರ ವಿತರಕರ ಸಂಘದ ಮುಖಂಡರಾದ ಕೃಷ್ಣಪ್ಪ, ಮುಖಂಡರಾದ, ಅಮರಾವತಿ ಚಂದ್ರಶೇಖರ್, ಚಿದಂಬರ್ ಮತ್ತಿತರರು ಉಪಸ್ಥಿತರಿದ್ದರು.

Saturday 2 May 2015

ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರವಹಿಸಲು ಮುಖ್ಯಮಂತ್ರಿ ಸೂಚನೆ
ಮೈಸೂರು,ಮೇ,೨. ಯಾವುದೇ ಕಾರಣಕ್ಕೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
  ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಮುಖ್ಯಮಂತ್ರಿಯವರು ಕುಡಿಯುವ ನೀರಿನ ಸಮಸ್ಯೆಯಿಂದ ಜನರು ತೊಂದರೆ ಅನುಭವಿಸಬಾರದು. ನಗರ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಲಭ್ಯವಿದ್ದರೂ ಜನರು ನೀರಿನ ಸಮಸ್ಯೆಯಿಂದ ಬಳಲುತಿದ್ದಾರೆ. ನೀರಿನ ಅಕ್ರಮ ಸೋರಿಕೆಗೆ ಮೊದಲು ಕಡಿವಾಣ ಆಕಬೇಕು. ಅಧಿಕಾರಿಗಳು ಯಾವ ಒತ್ತಡಕೆ ಮಣಿಯದೆ ಅಕ್ರಮ ನೀರಿನ ನಿಯಂತ್ರಣಕ್ಕೆ ಮುಂದಾಗುವ ಮೂಲಕ ನಗರ ವಾಸಿಗಳು ನೀರಿನ ಸಮಸ್ಯೆಯಿಂದ ತೊಂದರೆ ಅನುಭವಿಸದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
   ಗ್ರಾಮಾಂತರ ಪ್ರದೇಶದ ಕೆಲವು ಭಾಗದಲ್ಲಿ ಮಳೆಯಾಗಿದೆ. ಆದರೆ ನೀರಿನ ಸಮಸ್ಯೆ ಮಾತ್ರ ಕುಂದಿಲ್ಲ. ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ ಸಮಸ್ಯೆಗೆ ಪರಿಹಾರ ನೀಡಬೇಕು. ಒಟ್ಟಿನಲ್ಲಿ ನಗರ ಹಾಗೂ ಗ್ರಾಮಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮವಹಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
  ಮೈಸೂರು ನಗರ ಅಭಿವೃದ್ಧಿಗಾಗಿ ಎರಡು ಬಾರಿ 100 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಆರಂಭಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ಜೊತೆಯಲ್ಲಿ ಹೊಸ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಬೇಕು. ನೀಡಿರುವ ಅನುದಾನವನ್ನು ವ್ಯವಸ್ಥಿತವಾಗಿ ವೆಚ್ಚ ಮಾಡುವುದರೊಂದಿಗೆ ಕಾಮಗಾರಿಗಳು  ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ತಿಳಿಸಿದರು.
  ಮೈಸೂರು ನಗರ ಪಾಲಿಕೆವತಿಯಿಂದ ನಿರಂತರ ತೆರಿಗೆ ವಸುಲಾತಿಯಾಗಬೇಕು. ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸರ್ಕಾರದ ಅನುದಾನವನ್ನೇ ನಿರೀಕ್ಷಿಸದೆ ಪಾಲಿಕೆಯು ಸ್ವಂತ ಸಂಪ್ಮೂಲವನ್ನು ಕಂಡುಕೊಳ್ಳಬೇಕು. ನಗgದಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು. ಬಹಳಷ್ಟು ಐತಿಹಾಸಿಕ ಕಟ್ಟಡವಿರುವ ಸಾಂಸ್ಕøತಿಕ ನಗರಿ ಮೈಸೂರಿನ ಸೌಂದರ್ಯಕ್ಕೆ ದಕ್ಕೆಯಾಗದಂತೆ ಮೈಸೂರು ನಗರ ಪಾಲಿಕೆವತಿಯು ಎಚ್ಚರವಹಿಸಬೇಕು. ಎಂದು ಸೂಚಿಸಿದರು.  
  ಗ್ರಾಮೀಣ ಭಾಗದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳ ಗ್ರಾಮೀಣ ರಸ್ತೆ ಅಭಿವೃದ್ಧಿ ನಿಧಿಯಿಂದ (ಲಮ್ ಸಮ್ ಗ್ರಾಂಟ್) 53 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಕಾಮಗಾರಿ ಕೆಲವು ಕಡೆ ಪ್ರಾರಂಭವಾಗಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಮುಂದಿನ ಮೂರು ತಿಂಗಳೊಳಗೆ ರಸ್ತೆ ಕಾಮಗಾರಿಗಳು ಪೂರ್ಣಗೊಂಡಿರಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರಾಗಿ ಮಾಡಲಾಗುವುದು ಎಂದು ತಿಳಿಸಿದರು.
  ಶೈಕ್ಷಣಿಕ ಹಾಗೂ ಸಾಮಾಜಿಕ ಸಮೀಕ್ಷೆ ಕಾರ್ಯದ ಪ್ರಗತಿ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮೈಸೂರು ಜಿಲ್ಲೆಯಾದ್ಯಂತ ನಗರ  ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೇ 1ರ ಅಂತ್ಯದೊರಗೆ ಶೇ. 99.44 ಗುರಿ ಮುಟ್ಟಲಾಗಿದೆ. 2011 ಗಣತಿಯಂತೆ ಮೈಸೂರು ಜಿಲ್ಲೆಯಲ್ಲಿ ಒಟ್ಟು 7,00,968 ಮನೆಗಳಿದ್ದು, 2015ರ ಸಮೀಕ್ಷೆಯಂತೆ 32,825 ಹೆಚ್ಚುವರಿ ಮನೆಗಳು ನಿರ್ಮಾಣವಾಗಿವೆ ಹಾಗೂ 215 ಹೊಸ ಬ್ಲಾಕ್ ಹೆಚ್ಚವರಿಯಾಗಿದೆ ಎಂದರು. ಸಮೀಕ್ಷೆ ಕಾರ್ಯವು 100 ರಷ್ಟು ಪ್ರಗತಿ ಹೊಂದಬೇಕು. ನಗರ ಹಾಗೂ ಗ್ರಾಮಾಂತರ ಚಾರ್ಜ್ ನಿಯೋಜಿಸಿ ಬಿಟ್ಟಿರುವ ಜನರ ಮಾಹಿತಿಯನ್ನು ಸೇರಿಸಲು ಅವಕಾಶ ಕಲ್ಪಿಸಲು ಕ್ರಮವಹಿಸಿ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
  ಅನ್ನ ಭಾಗ್ಯ ಯೋಜನೆಯ ಆಹಾರ ದಾನ್ಯ ಕಾಲಸಂತೆಯಲ್ಲಿ ಮಾರಾಟವಾಗದಂತೆ ಎಚ್ಚರವಹಿಸಬೇಕು. ಅರ್ಹ ಪಲಾನುಭವಿಗಳಿಗೆ ಸೌಲಭ್ಯ ಸಿಗಬೇಕು. ಮಧ್ಯವರ್ತಿಗಳಿಗೆ ಯೋಜನೆ ಪಲಸಿಗದಂತೆ ಕ್ರಮವಹಿಸಬೇಕು. ಒಟ್ಟಿನಲ್ಲಿ ಸರ್ಕಾರದ ಉದ್ದೇಶ ಸಫಲಗೊಳ್ಳಬೇಕು ಎಂದು ಹೇಳಿದರು.
 ಇದೇ ವೇಳೆ ಸರ್ಕಾರಿ ಅತಿಥಿಗೃಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಾಂಬಳೆ, ಮುಡಾ ಆಯುಕ್ತರಾದ ಪಾಲಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್, ಮೈಸೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದರು.