Sunday 3 May 2015

ಕೃಷ್ಣರಾಜಪೇಟೆ. ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಅಣೆಕಟ್ಟೆಯ ಹಿಂಭಾಗದಲ್ಲಿ ಕೇವಲ 50 ಅಡಿಗಳ ಅಂತರದಲ್ಲಿಯೇ ಭಾರೀ ಸ್ಪೋಟಕಗಳು ಹಾಗೂ ಸಿಡಿಮದ್ದನ್ನು ಬಳಸಿ ಹೇಮಗಿರಿ ನಾಲೆಗೆ ಹೆಚ್ಚಿನ ನೀರು ಹರಿದುಹೋಗುವಂತೆ ಮಾಡಲು ಕಾಲುವೆಯನ್ನು ತ್ರಿಶೂಲ್ ಜಲ ವಿದ್ಯುತ್ ಕಂಪನಿಯು ನೀರಾವರಿ ಇಲಾಖೆಯ ಅನುಮತಿಯನ್ನು ಪಡೆಯದೇ ಆಳಗೊಳಿಸಿ ಅಗಲೀಕರಣ ಮಾಡುತ್ತಿರುವುದರಿಂದ ಅಣೆಕಟ್ಟೆಗೆ ಅಪಾಯ ಎದುರಾಗಿದೆ.
ತಾಲೂಕಿನ ಜೀವನದಿ ಹೇಮಾವತಿ ನದಿಯ ನೀರನ್ನು ಬಳಸಿಕೊಂಡು ಮಂದಗೆರೆ ಅಣೆಕಟ್ಟೆಯ ಬಳಿ ಭೊರೂಕ ಜಲ ವಿದ್ಯುತ್ ಕಂಪನಿಯು 12 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರೆ ಅಕ್ಕಿಹೆಬ್ಬಾಳಿನ ಹೊಸಪಟ್ಟಣ ದ್ವೀಪದಲ್ಲಿ ಕಾವೇರಿ ಹೈಡ್ರೋ ಎಲೆಕ್ಟ್ರಿಕಲ್ ಪ್ರಾಜೆಕ್ಟ್ ಕಂಪನಿಯು 6 ಮೆಗಾವ್ಯಾಟ್ ವಿದ್ಯುತ್ ಹಾಗೂ ಹೇಮಗಿರಿ ಅಣೆಕಟ್ಟೆಯ ಬಳಿ ಹೇಮಾವತಿ ನದಿಯ ಮೂಲಕ ಹೇಮಗಿರಿ ನಾಲೆಯ ನೀರನ್ನು ಬಳಸಿಕೊಂಡು ಹೈದರಾಬಾದ್ ಮೂಲದ ತ್ರಿಶೂಲ್ ಜಲವಿದ್ಯುತ್ ಕಂಪನಿಯು 6ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಪ್ರಸ್ತುತ ನದಿಯ ನೀರಿನ ಮೂಲಕ ತಯಾರಿಕೆಯಾಗುತ್ತಿರುವ ವಿದ್ಯುತ್ ಎಲ್ಲವೂ ತಾಲೂಕಿನ ರೈತಾಪಿ ವರ್ಗದ ಬಳಕೆಗೆ ದೊರೆಯದೇ ಬೇರೆಡೆಗೆ ಮಾರಾಟವಾಗುತ್ತಿದೆ ಎಂಬುದೇ ವಿಶೇಷವಾಗಿದೆ.
ಹೇಮಗಿರಿ ಅಣೆಕಟ್ಟೆಯಿಂದ ಹಾದು ಹೋಗಿದ್ದು ಕಸಬಾ ಹೋಬಳಿ ಮತ್ತು ಬೂಕನಕೆರೆ ಹೋಬಳಿಯ ರೈತರ ಬದುಕನ್ನು ಹಸನುಗೊಳಿಸುತ್ತಿರುವ ಹೇಮಗಿರಿ ನಾಲೆಯು 35ಕಿ.ಮೀಗೂ ಹೆಚ್ಚಿನ ಉದ್ದವಿದ್ದು ಈಗಾಗಲೇ ನಾಲೆಯು ಆಧುನೀಕರಣಗೊಂಡಿದ್ದು ರೈತರ ಜಮೀನಿಗೆ ನೀರು ಸರಾಗವಾಗಿ ಹರಿದು ರೈತರು ನೆಮ್ಮದಿಯಿಂದ ಬೇಸಾಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಹೇಮಗಿರಿ ನಾಲೆಯಲ್ಲಿ 500ಕ್ಯೂಸೆಕ್ಸ್ ನೀರು ಹರಿಯುವ ಸಾಮಥ್ರ್ಯವಿದ್ದರೆ ತ್ರಿಶೂಲ್ ಜಲವಿದ್ಯುತ್ ಕಂಪನಿಯು 5ಸಾವಿರ ಕ್ಯೂಸೆಕ್ಸ್ ನೀರನ್ನು ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಂಡಿಉ ಹೆಚ್ಚುವರಿ ನೀರನ್ನು ನದಿಗೆ ಬಿಡುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದರೂ ಇನ್ನೂ ಹೆಚ್ಚಿನ ವಿದ್ಯುತ್ ಉತ್ಪಾದನೆಯ ದುರಾಸೆಗೆ ಮುಂದಾಗಿರುವ ಕಂಪನಿಯು ಜನರ ವಿರೋಧದ ನಡುವೆಯು ಹೇಮಗಿರಿ ನಾಲೆಯನ್ನು 10ಸಾವಿರ ಕ್ಯೂಸೆಕ್ಸ್ ನೀರು ಹರಿಯುವಂತೆ ಅಗಲ ಮತ್ತು ಆಳಗೊಳಿಸಲು ಹೇಮಗಿರಿ ಅಣೆಕಟ್ಟೆಯ ಹಿಂಭಾಗದಲ್ಲಿ ನಾಲೆಯನ್ನು ಅಗಲ ಮತ್ತು ಆಳಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಭಾರೀ ಪ್ರಮಾಣದಲ್ಲಿ ಸ್ಪೋಟಕಗಳು ಮತ್ತು ಸಿಡಿಮದ್ದನ್ನು ಬಳಸಿಕೊಂಡು ರಜಾದಿನಗಳಲ್ಲಿಯೂ ಸಮರೋಪಾಧಿಯಲ್ಲಿ ಕೆಲಸ ಮಾಡುತ್ತಿದೆ. ವಿಶೇಷವೆಂದರೆ ಇಲಾಖೆಯ ಗಮನಕ್ಕೂ ತರದೇ ಕೇವಲ ರಾಜಕೀಯ ಪ್ರಭಾವದಿಂದಲೇ ನಾಲೆಯ ಅಗಲೀಕರಣ ಕೆಲಸವು ನಡೆಯುತ್ತಿದೆ ಎಂಬುದು ವಿಶೇಷವಾಗಿದೆ.
ಸಿಡಿಮದ್ದುಗಳು ಮತ್ತು ಸ್ಪೋಟಕಗಳನ್ನು ಬಳಸಿಕೊಂಡು ಕಾನೂನು ಬಾಹಿರವಾಗಿ ಕೆಲಸ ನಡೆಯುತ್ತದ್ದರೂ ನೀರಾವರಿ ಇಲಾಖೆಯ ಒಬ್ಬನೇ ಒಬ್ಬ ಎಂಜಿನಿಯರ್ ಆಗಲೀ, ಸಹಾಯಕ ಎಂಜಿನಿಯರ್ ಆಗಲೀ ಖುದ್ದು ಹಾಜರಿದ್ದು ಅಣೆಕಟ್ಟೆಯ ಸುರಕ್ಷತೆಯ ಕಡೆಗೆ ಗಮನ ಹರಿಸಿಲ್ಲದಿರುವುದು ಆಶ್ಚರ್ಯ ಮೂಡಿಸಿದೆ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ತಾಲೂಕು ರೈತ ಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಅಣೆಕಟ್ಟೆಯ ಸುರಕ್ಷತೆಯ ಕಡೆಗೆ ಗಮನ ಹರಿಸದೇ ಕೇವಲ ಹಣ ಸಂಪಾದನೆಯ ದುರಾಸೆಯಿಂದ ತ್ರಿಶೂಲ್ ಜಲ ವಿದ್ಯುತ್ ಕಂಪನಿಯು ಆರಂಬಿಸಿರುವ ಹೇಮಗಿರಿ ನಾಲೆಯ ಅಗಲ ಮತ್ತು ಆಳಗೊಳಿಸುವ ಕಾಮಗಾರಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಕಾನೂನು ಬಾಹಿರವಾದ ಕೃತ್ಯದಲ್ಲಿ ತೊಡಗಿ ನಮ್ಮ ತಾಲೂಕಿನ ರೈತರ ಹೊಟ್ಟೆಯ ಮೇಲೆ ಹೊಡೆಯಲು ಹೊರಟಿರುವ ಹೈದರಾಬಾದ್ ಮೂಲದ ಕಂಪನಿಗೆ ರೈತರೇ ಗೇಟ್‍ಪಾಸ್ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹೇಮಗಿರಿ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಬಹುತೇಕ ನೀರನ್ನು ತ್ರಿಶೂಲ್ ಜಲವಿದ್ಯುತ್ ಕಂಪನಿಯೇ ಬಳಸಿ ನದಿಯ ನೀರನ್ನು ಖಾಲಿ ಮಾಡುವುದರಿಂದ ನದಿಯಲ್ಲಿ ನೀರಿಲ್ಲದೇ ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ಅಕ್ಕಿಹೆಬ್ಬಾಳಿನ 50ಕ್ಕೂ ಹೆಚ್ಚಿನ ಗ್ರಾಮಗಳಿಗೆ ಹೇಮಗಿರಿ ಅಣೆಕಟ್ಟೆಯ ಮೂಲಕ ಸರಬರಾಜಾಗುವ ನೀರಿಲ್ಲದೇ ಜನರು ಪರದಾಡಬೇಕಾಗುತ್ತದೆ. ಆದ್ದರಿಂದ ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಅಭಿಯಂತರರು ಹಾಗೂ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ತ್ರಿಶೂಲ್ ಜಲವಿದ್ಯುತ್ ಕಂಪನಿಯು ಹೇಮಾವತಿ ನದಿಯ ನೀರನ್ನು ಕಬಳಿಸಲು ಹಮ್ಮಿಕೊಂಡಿರುವ ಅಕ್ರಮ ಕಾಮಗಾರಿಯನ್ನು ನಿಲ್ಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಚಿತ್ರಶೀರ್ಷಿಕೆ: 03-ಏಖPಇಖಿಇ-02 ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ಅಣೆಕಟ್ಟೆಯ ಹಿಂಭಾಗದಲ್ಲಿ ಕೇವಲ 50 ಅಡಿಗಳ ಅಂತರದಲ್ಲಿಯೇ ಭಾರೀ ಸ್ಪೋಟಕಗಳು ಹಾಗೂ ಸಿಡಿಮದ್ದನ್ನು ಬಳಸಿ ಹೇಮಗಿರಿ ನಾಲೆಗೆ ಹೆಚ್ಚಿನ ನೀರು ಹರಿದುಹೋಗುವಂತೆ ಮಾಡಲು ಕಾಲುವೆಯನ್ನು ತ್ರಿಶೂಲ್ ಜಲ ವಿದ್ಯುತ್ ಕಂಪನಿಯು ನೀರಾವರಿ ಇಲಾಖೆಯ ಅನುಮತಿಯನ್ನು ಪಡೆಯದೇ ಹೇಮಾವತಿ ನದಿಯ ನೀರನ್ನು ಕಬಳಿಸಲು ಹೇಮಗಿರಿ ಕಾಲಕುವೆಯನ್ನು ಆಳಗೊಳಿಸಿ ಅಗಲೀಕರಣ ಮಾಡುತ್ತಿರುವುದರಿಂದ ಹೇಮಗಿರಿ ಅಣೆಕಟ್ಟೆಗೆ ಅಪಾಯ ಎದುರಾಗಿದೆ.

No comments:

Post a Comment