Saturday 9 August 2014

ಕೆ.ಆರ್.ಪೇಟೆ-ಅವಿದ್ಯಾವಂತ ಮುಗ್ಧ ಜನರಿಗೆ ಓದು-ಬರಹವನ್ನು ಕಲಿಸಿ ಶಿಕ್ಷಣದ ಜ್ಞಾನವನ್ನು ನೀಡುವುದು ಪುಣ್ಯದ ಕೆಲಸ-ಅಂ.ಚಿ.ಸಣ್ಣಸ್ವಾಮಿಗೌಡ

ಕೃಷ್ಣರಾಜಪೇಟೆ. ಗ್ರಾಮೀಣ ಪ್ರದೇಶದಲ್ಲಿನ ಅವಿದ್ಯಾವಂತ ಮುಗ್ಧ ಜನರಿಗೆ ಓದು-ಬರಹವನ್ನು ಕಲಿಸಿ ಶಿಕ್ಷಣದ ಜ್ಞಾನವನ್ನು ನೀಡುವುದು ಪುಣ್ಯದ ಕೆಲಸವಾಗಿರುವುದರಿಂದ ಜಿಲ್ಲೆಯ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸಿ ಜನಸಾಮಾನ್ಯರಲ್ಲಿ ಶಿಕ್ಷಣದ ಜ್ಞಾನದ ಬಗ್ಗೆ ಅರಿವಿನ ಜಾಗೃತಿಯನ್ನು ಮೂಡಿಸಿ ಸಮಾಜದ ಋಣವನ್ನು ತೀರಿಸಲು ಶಿಕ್ಷಕರು ಮತ್ತು ಸಾಕ್ಷರತಾ ಪ್ರೇರಕರು ಮುಂದಾಗಬೇಕು ಎಂದು ಜಿಲ್ಲಾ ಲೋಕಶಿಕ್ಷಣ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಅಂ.ಚಿ.ಸಣ್ಣಸ್ವಾಮಿಗೌಡ ಕರೆ ನೀಡಿದರು.
ಅವರು ಇಂದು ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆದ 2ನೇ ಹಂತದ ನವಸಾಕ್ಷರರ ಪರೀಕ್ಷಾ ಕಾರ್ಯದ ಉಸ್ತುವಾರಿಯಲ್ಲಿ  ಭಾಗವಹಿಸಿರುವ ಪ್ರೌಢಶಾಲೆಗಳು, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು ಮತ್ತು ಸಾಕ್ಷರತಾ ಪ್ರೇರಕರಿಗೆ ಆಯೋಜಿಸಿದ್ದ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ತಿಂಗಳ ಆಗಷ್ಟ್-24ರಂದು ಬೆಳಿಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯವರೆಗೆ ನವ ಸಾಕ್ಷರರಿಗೆ ನಡೆಯುತ್ತಿರುವ ಜಿಲ್ಲೆಯ 232ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಬಾಳಿಗೆ ಬೆಳಕು ಪುಸ್ತಕದ 24 ಪಾಠಗಳನ್ನು ಓದಿ ಕಲಿತಿರುವ 76ಸಾವಿರ ನವಸಾಕ್ಷರರು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಜಿಲ್ಲೆಯ ಸಾಕ್ಷರತಾ ಪ್ರಮಾಣವು ಹೆಚ್ಚಾಗಿ ಜನರ ಜೀವನದ ಮಟ್ಟವು ಸುಧಾರಣೆಯಾಗಿ ಆರ್ಥಿಕ ಸ್ವಾವಲಂಭನೆ ಸಾಧಿಸಿ ಮುನ್ನಡೆಯಲು ಶಿಕ್ಷಣದ ಜ್ಞಾನವು ವರದಾನವಾಗಿರುವುದರಿಂದ ಪರೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ಶಿಕ್ಷಕರು ಮತ್ತು ಪ್ರೇರಕರು ಅರ್ಪಣಾ ಮನೋಭಾವನೆಯಿಂದ ಕೆಲಸ ಮಾಡಿ ನವಸಾಕ್ಷರರ ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕು, ಹಾಗೆಯೇ ಪರೀಕ್ಷೆಯಲ್ಲಿ ಪ್ರೇರಕರು ತಯಾರಿಸಿರುವ ಪಟ್ಟಿಯಲ್ಲಿರುವ ನವಸಾಕ್ಷರರ ಕೈಯ್ಯಲ್ಲಿ ಮಾತ್ರವೇ ಪರೀಕ್ಷೆಯನ್ನು ಬರೆಸಬೇಕು. ಪರೀಕ್ಷಾ ದಿನದಂದು ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದ ಆಠವರಣಕ್ಕೆ ಸೇರಿಸಬಾರದು. ಪರೀಕ್ಷಾ ಕೆಲಸದಲ್ಲಿ ಯಾವುದೇ ಲೋಪಗಳು ಕಂಡುಬಂದರೆ ಸಂಬಂಧಿಸಿದ ಪರೀಕ್ಷಾಕೇಂದ್ರದ ಮುಖ್ಯಸ್ಥರು ಮತ್ತು ಅಧೀಕ್ಷಕರೇ ನೇರವಾಗಿ ಹೊಣೆಗಾರರಾಗಬೇಕಾಗುತ್ತದೆ ಎಂದು ಅಂಚಿ ಸಣ್ಣಸ್ವಾಮಿಗೌಡ ಎಚ್ಚರಿಸಿದರು.
ಸಂಪನ್ಮೂಲ ಶಿಕ್ಷಕರಾದ ಶಂಕರೇಗೌಡ ಮಾತನಾಡಿ ಜಿಲ್ಲೆಯಾಧ್ಯಂತ ಲೋಕಶಿಕ್ಷಣ ಇಲಾಖೆಯ ಆಶ್ರಯದಲ್ಲಿ ವೃತ್ತಿಕೌಶಲ್ಯ ಕೇಂದ್ರಗಳು ಯಶಸ್ವಿಯಾಗಿ ನಡೆಯುತ್ತಿವೆ. ಈ ಕೇಂದ್ರಗಳಲ್ಲಿ ವೃತ್ತಿ ತರಬೇತಿ ಹಾಗೂ ಶಿಕ್ಷಣದ ಜ್ಞಾನವನ್ನು ಪಡೆದಿರುವ ನವಸಾಕ್ಷರರು ಮೊದಲ ಹಂತದ ಪರೀಕ್ಷೆಯಲ್ಲಿ 1ಲಕ್ಷದ 26ಸಾವಿರ ಜನರು ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ತಮ್ಮ ಬದುಕಿಗೊಂದು ಅರ್ಥಕಂಡುಕೊಂಡಿದ್ದಾರೆ. ಅಂತೆಯೇ 2ನೇ ಹಂತದ ಪರೀಕ್ಷೆಯಲ್ಲಿ 76ಸಾವಿರ ಜನರು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ದೇಶದಾದ್ಯಂತ ಆಗಷ್ಟ್-24ರಂದು ಈ ಪರೀಕ್ಷೆಯು ನಡೆಯುತ್ತಿರುವುದರಿಂದ ಕರ್ತವ್ಯದಲ್ಲಿ ಉದಾಸೀನತೆ ಹಾಗೂ ಬೇಜವಾಬ್ಧಾರಿತನವನ್ನು ಪ್ರದರ್ಶನ ಮಾಡದೇ ಶಿಕ್ಷಕ ಬಂಧುಗಳು ಪರೀಕ್ಷಾ ಕೆಲಸವನ್ನು ಯಶಸ್ವಿಯಾಗಿ ನಡೆಸಿಕೊಟ್ಟು ಸಮಾಜದ ಋಣವನ್ನು ತೀರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಾಗಾರದ ಸಭೆಯಲ್ಲಿ ಬೂಕನಕೆರೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಬಿ.ಟಿ.ಮಸಳಿ, ಲೋಕಶಿಕ್ಷಣ ಇಲಾಖೆಯ ಜಿಲ್ಲಾ ಸಂಯೋಜಕಿ ಜ್ಯೋತಿ. ತಾಲೂಕು ಮೇಲ್ವಿಚಾರಕರಾದ ಬಿ.ಎನ್.ರಾಮಚಂದ್ರು, ಮಾಕವಳ್ಳಿ ಕುಮಾರ್, ತುಳಸಿ, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ, ಪತ್ರಕರ್ತರಾದ ಕಾಡುಮೆಣಸಚಂದ್ರು, ಅಗ್ರಹಾರಬಾಚಹಳ್ಳಿ ಶ್ರೀನಿವಾಸ ಮತ್ತಿತರರು ಭಾಗವಹಿಸಿದ್ದರು.

1 comment:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete