Friday, 13 March 2015

 
ಕಂದಾಯ ಅದಾಲತ್‍ನಲ್ಲಿ ಪ್ರಕರಣಗಳ ವಿಲೇವಾರಿಗೆ ನ್ಯಾಯಾಧೀಶರ ಶ್ಘಾಘನೆ 



    ಮಂಡ್ಯ, ಮಾ. 13: ಗ್ರಾಮ ಮಟ್ಟದಲ್ಲಿ ಕಂದಾಯ ಅದಾಲತ್ ಆಯೋಜಿಸುವ ಮೂಲಕ ಒಂದೇ ದಿನ 393 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸುವ ಕ್ರಮ ಹೆಚ್ಚು ಶ್ಘಾಘನೀಯ ಎಂದು ಮಂಡ್ಯ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಚಂದ್ರಶೇಖರ್ ಪಾಟೀಲ್ ಅವರು ಹೇಳಿದರು.
   ಮಂಡ್ಯ ತಾಲ್ಲೂಕು ಹಳೆ ಬೂದನೂರು ಗ್ರಾಮದಲ್ಲಿ ಗುರುವಾರ ಮಾ. 12 ರಂದು ಕಂದಾಯ ಇಲಾಖೆ  ಆಯೋಜಿಸಿದ್ದ ಕಂದಾಯ ಅದಾಲತ್ ಉದ್ಘಾಟಿಸಿ ಅವರು ಮಾತನಾಡಿದರು.
  ಜಿಲ್ಲಾದ್ಯಂತ ಅದಾಲತ್‍ಗಳನ್ನು ನಡೆಸಿ ರೈತರ ಸಮಸ್ಯೆ ಬಗೆಹರಿಸುವ ಕ್ರಮ ತುಂಬಾ ಉತ್ತಮವಾದುದು. ರೈತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಳೆದ ಮೂರ್ನಾಲ್ಕು ತಿಂಗಳಿಂದ ನಡೆಸಿದ ಅದಾಲತ್‍ಗಳ ಮೂಲಕ ಸುಮಾರು 40 ಸಾವಿರ ಪ್ರಕರಣಗಳು ಇತ್ಯರ್ಥವಾಗಿರುವುದು ಪ್ರಶಂಸನೀಯ ಸಾಧನೆ ಎಂದು ಹೇಳಿದರು.
   ನ್ಯಾಯಾಲಯದಲ್ಲಿ ಬಾಕಿ ಇರುವ ಕಂದಾಯ ಪ್ರಕರಣಗಳ ವಿಲೇವಾರಿಗಾಗಿ ಮಾರ್ಚ್‍ನಲ್ಲಿ ವಿಶೇಷ ಅದಾಲತ್ ನಡೆಸಲಾಗುವುದು. ಇಂತಹ ಪ್ರಕರಣಗಳು ಬಾಕಿ ಇದ್ದರೆ ರೈತರು ಜಿಲ್ಲಾ ನ್ಯಾಯಾಲಯದಲ್ಲಿ ಕಾನೂನು ಸೇವಾ ಪ್ರಾಧಿಕಾರ ನಡೆಸುವ ಅದಾಲತ್‍ನಲ್ಲಿ ಇತ್ಯರ್ಥ ಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.
   ಉಪವಿಭಾಗಾಧಿಕಾರಿಗಳಾದ ಅರುಳ್ ಕುಮಾರ್ ಅವರು ಮಾತನಾಡಿ, ಆರ್.ಟಿ.ಸಿ. ತಿದ್ದುಪಡಿ, ಪೌತಿಖಾತೆ ಬದಲಾವಣೆ, ಎ ಖರಾಬು ಮತ್ತು ಬಿ ಖರಾಬುಗೆ ಸಂಬಂಧಿಸಿದ ಪ್ರಕರಣಗಳನ್ನು ಅದಾಲತ್‍ಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ ಎಂದು ಹೇಳಿದರು. 
   ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸದಾನಂದ ಎಂ. ದೊಡ್ಡಮನಿ, ಮಂಡ್ಯ ಪ್ರಭಾರ ತಹಶೀಲ್ದಾರ್ ದಿನೇಶ್ಚಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ರಘು ಮತ್ತಿತರ ಗಣ್ಯರು ಉಪಸ್ಥಿತರಿದ್ದರು. (ಛಾಯಾಚಿತ್ರ ಲಗತ್ತಿಸಿದೆ) 
       ಪ್ರವಾಸಿ ಟ್ಯಾಕ್ಸಿ ಖರೀದಿಗಾಗಿ ಸಹಾಯಧನ: ಅಂತಿಮ ಆಯ್ಕೆ ಪಟ್ಟಿ ಪ್ರಕಟ
    2013-14 ನೇ ಎಸ್‍ಸಿಎಸ್‍ಪಿ/ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಗಾಗಿ ಸಹಾಯಧನ ನೀಡಲು ಮಂಡ್ಯ ಜಿಲ್ಲೆಯಲ್ಲಿ ಫಲಾನುಭವಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಮಂಡ್ಯರವರು ಮಾರ್ಚ್ 12 ರಂದು ಅನುಮೋದನೆ ನೀಡಿ ಬಿಡುಗಡೆಗೊಳಿಸಿರುತ್ತಾರೆ. ಸದರಿ ಅಂತಿಮ ಆಯ್ಕೆ ಪಟ್ಟಿಯನ್ನು ದಿನಾಂಕ 12.3.2015 ರಂದು ಸಹಾಯಕ ನಿರ್ದೇಶಕರು, ಪ್ರಾದೇಶಿಕ ಪ್ರವಾಸಿ ಕಚೇರಿ, ಮಂಡ್ಯ ರವರ ಕಚೇರಿಯಲ್ಲಿ ಪ್ರಕಟಣೆ ಮಾಡಲಾಗಿರುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾತ್ಕಾಲಿಕ ಪಟ್ಟಿ ಪ್ರಕಟ: ಆಕ್ಷೇಪಣೆಗಳಿಗೆ ಆಹ್ವಾನ
       2013-14ನೇ ಸಾಲಿನ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದವರಿಗೆ ಹಾಗೂ 2014-15ನೇ ಸಾಲಿನ ಮಂಡ್ಯ ಜಿಲ್ಲೆಯಲ್ಲಿ ಎಸ್‍ಸಿಎಸ್‍ಪಿ/ಟಿಎಸ್‍ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪ್ರವಾಸಿ ಟ್ಯಾಕ್ಷಿ ಖರೀದಿಗಾಗಿ ಸಹಾಯಧನ ನೀಡಲು  ಫಲಾನುಭವಿಗಳ ತಾತ್ಕಾಲಿಕ ಪಟ್ಟಿಯನ್ನು ಸಹಾಯಕ ನಿರ್ದೇಶಕರು, ಪ್ರಾದೇಶಿಕ ಪ್ರವಾಸಿ ಕಚೇರಿ, ಮಂಡ್ಯರವರ ಕಚೇರಿಯಲ್ಲಿ ಪ್ರಕಟಣೆ ಮಾಡಲಾಗಿರುತ್ತದೆ.     ತಾತ್ಕಾಲಿಕ ಪಟ್ಟಿಗೆ ಸಾರ್ವಜನಿಕರು ಹಾಗೂ ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಈ ಪ್ರಕಟಣೆ ಮಾಡಿದ ದಿನಾಂಕದಿಂದ 15 ದಿನಗಳವರೆಗೆ ಕಾಲಾವಕಾಶ ನೀಡಲಾಗಿರುತ್ತದೆ. ಆಕ್ಷೇಪಣೆಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು, ಮಂಡ್ಯರವರಿಗೆ ಮಾರ್ಚ್ 26 ರೊಳಗೆ ಕಚೇರಿ ವೇಳಯಲ್ಲಿ ಸಲ್ಲಿಸಲು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ತೆಂಗು ಬೇಸಾಯ ಮತ್ತು ಮೌಲ್ಯವರ್ಧನೆ - ತರಬೇತಿ ಕಾರ್ಯಕ್ರಮ
       ತೆಂಗಿನ ಬೆಳೆಗೆ ಅನೇಕ ಅಡೆ ತಡೆಗಳಿದ್ದರೂ ಇವತ್ತಿಗೂ ತೆಂಗಿಗೆ ಬಹಳ ಬೇಡಿಕೆ ಇದೆ. ಇದು ಬಹಳ ಉಪಯುಕ್ತ ಬೆಳೆಯಾದ್ದರಿಂದ ಇದನ್ನು ಕಲ್ಪವೃಕ್ಷವೆಂದೇ ಕರೆಯುತ್ತಾರೆ ಎಂದು ಸಹ ವಿಸ್ತರಣಾ ನಿರ್ದೇಶಕರಾದ  ಡಾ. ಟಿ ಶಿವಶಂಕರ್ ಅವರು ತಿಳಿಸಿದರು.
       ಕೃಷಿ ವಿಜ್ಞಾನ ಕೇಂದ್ರ ಹಾಗೂ ಮ್ಯಾರಿಕೋ ಲಿಮಿಟೆಡ್, ಕೊಯ್‍ಮತ್ತೂರು ಇವರ ಸಂಯುಕ್ತಾಶ್ರಯದಲ್ಲಿ   ಗುರುವಾರ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ “ತೆಂಗು ಬೇಸಾಯ ಮತ್ತು ಮೌಲ್ಯವರ್ಧನೆ” ಬಗ್ಗೆ ಒಂದು ದಿನದ ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು. 
       ರೈತರು ತಮ್ಮಲ್ಲೇ ಇರುವ ಒಳ್ಳೆಯ ತೆಂಗಿನ ಮರಗಳನ್ನು ಗುರುತಿಸಿ ನರ್ಸರಿ ಮಾಡಿ ತಮಗೆ ಬೇಕಾದ ಸಸಿಗಳನ್ನು ಉತ್ತಾದನೆ ಮಾಡಿಕೊಳ್ಳುವುದರ ಜೊತೆಗೆ ಇತರೆ ರೈತರಿಗೂ ಮಾರಾಟ ಮಾಡಬಹುದೆಂದು ತಿಳಿಸಿದರು. 
ಮ್ಯಾರಿಕೋ ಲಿಮಿಟೆಡ್‍ನ ವ್ಯವಸ್ಥಾಪಕರಾದ ಶ್ರೀ. ಅಭಿಷೇಕ್ ಸಾಕಾರಯ್ಯ ಮಾತನಾಡಿ ತೆಂಗಿನ ಕಾಯಿ ಮತ್ತು ಕೊಬ್ಬರಿ ಕೊಳ್ಳುವ ಕೇಂದ್ರಗಳು  ಈಗಾಗಲೇ ಕೊಯಮತ್ತೂರಿನಲ್ಲಿ ಇದ್ದು ಇದರಿಂದ ರೈತರಿಗೆ ಅನುಕೂಲವಾಗಿದೆ, ಇದೇ ರೀತಿಯ ಕೇಂದ್ರಗಳನ್ನು ಮಂಡ್ಯ ಜಿಲ್ಲೆಯಲ್ಲಿಯೂ ತೆರೆಯುವ ಸಾಧ್ಯತೆಗಳಿರುವುದರಿಂದ ಇದಕ್ಕೆ ಪೂರಕವಾಗಿ ರೈತರಿಗೆ ತರಬೇತಿಗಳನ್ನು ಕೃಷಿ ವಿಜ್ಞಾನ ಕೇಂದ್ರ ಹಾಗೂ ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂಬುವುದಾಗಿ ತಿಳಿಸಿದರು. 
ಅಧ್ಯಕ್ಷತೆ ವಹಿಸಿದ್ದ ಡಾ.ಕೆ.ಟಿ. ಪಾಂಡುರಂಗೇಗೌಡ, ಡೀನ್(ಕೃಷಿ), ಕೃಷಿ ಮಹಾವಿದ್ಯಾಲಯ, ವಿ.ಸಿ.ಫಾರಂ, ಮಂಡ್ಯರವರು ಮಾತನಾಡಿ ರೈತರು ಬೆಳೆಗಾರರ ಸಂಘಗಳನ್ನು ಮಾಡಿಕೊಂಡು ಉತ್ತಮ ಬೆಳೆ ಬೆಳೆಯುವುದರ ಜೊತೆಗೆ ಮಾರಾಟ ಮಾಡಿದರೆ ಉಜ್ವಲ ಭವಿಷ್ಯವಿದೆ ಎಂದರು. 
ಡಾ. ಎಂ ವೆಂಕಟೇಶ್, ವಿಷಯ ತಜ್ಞರು (ತೋಟಗಾರಿಕೆ) ಇವರು ವಿಚಾರ ಸಂಕೀರ್ಣದ ಉದ್ದೇಶಗಳನ್ನು ತಿಳಿಸುವುದರ ಜೊತೆಗೆ ಹಾಜರಿದ್ದ ಗಣ್ಯರಿಗೆ ಹಾಗೂ ರೈತರಿಗೆ ಸ್ವಾಗತ ಕೋರಿದರು.
 ಈ ವಿಚಾರ ಸಂಕೀರ್ಣದಲ್ಲಿ ಡಾ. ಟಿ ಶಿವಶಂಕರ್ ರವರು ತೆಂಗಿನ ಬೆಳೆಗೆ ಬರುವ ಕೀಟ-ರೋಗ ಮತ್ತು ಅವುಗಳ ನಿರ್ವಹಣೆ, ಡಾ. ವೆಂಕಟೇಶ್ ರವರು ತೆಂಗಿನ ಬೇಸಾಯ ಕ್ರಮಗಳು ಹಾಗೂ ಡಾ. ಕಮಲಾಬಾಯಿ ಕೂಡಗಿ, ವಿಷಯ ತಜ್ಞರು (ಗೃಹ ವಿಜ್ಞಾನ) ರವರು ತೆಂಗಿನ ಮೌಲ್ಯವರ್ಧನೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. 
ಕಾರ್ಯಕ್ರಮದ ಕೊನೆಯಲ್ಲಿ ಡಾ. ಸಿ. ಎಂ. ಸವಿತ ವಿಷಯ ತಜ್ಞರು (ಕೃಷಿ ವಿಸ್ತರಣೆ) ವಂದನಾರ್ಪಣೆ ಮಾಡಿದರೆ,  ತರಬೇತಿ ಸಹಾಯಕರಾದ ಹೆಚ್.ಎಂ ಮಹೇಶ್ ನಿರೂಪಣೆ ಮಾಡಿದರು.  ತರಬೇತಿಯಲ್ಲಿ ಮಂಡ್ಯ ಜಿಲ್ಲೆಯ ವಿವಿಧ ತಾಲ್ಲೂಕಿನ ರೈತರು ಭಾಗವಹಿಸಿ ಕಾರ್ಯಕ್ರಮದ ಉಪಯೋಗ ಪಡೆದುಕೊಂಡರು.
*******

No comments:

Post a Comment