Tuesday, 31 March 2015

ಕೃಷ್ಣರಾಜಪೇಟೆ. ತಾಲೂಕಿನ ಕಿಕ್ಕೇರಿ ಹೋಬಳಿಯ ಸಾಸಲುಕೊಪ್ಪಲು ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಕುಟುಂಬದ ಮೇಲೆ ಹೆಜ್ಜೇನು ದಾಲಿ ನಡೆಸಿದ ಪರಿಣಾಮವಾಗಿ ರೈತ ಚಿಕ್ಕೇಗೌಡರ ಮಗನಾದ ಸ್ವಾಮೀಗೌಡ(38) ಸಾವನ್ನಪ್ಪಿದರೆ ತೀವ್ರವಾಗಿ ಗಾಯಗೊಂಡಿರುವ ಸ್ವಾಮೀಗೌಡರ ಪತ್ನಿ ಮೀನಾಕ್ಷಿ ಮತ್ತು ಪುತ್ರ ಚಂದ್ರಶೇಖರ್ ಚನ್ನರಾಯಪಟ್ಟಣದ ನಾಗೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಜೆ 5ಗಂಟೆಯ ಸಮಯದಲ್ಲಿ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಸ್ವಾಮೀಗೌಡರ ಕುಟುಂಬದ ಮೇಲೆ ಏಕಾಏಕಿ ಹೆಜ್ಜೇನಿನ ಹಿಂಡು ದಾಳಿ ನಡೆಸಿತು. ತೀವ್ರವಾಗಿ ಗಾಯಗೊಂಡಿದ್ದ ಸ್ವಾಮೀಗೌಡರು ಸಮೀಪದ ಶ್ರವಣಬೆಳಗೊಳ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿಯೇ ಮೃತರಾದರೆ ಮೀನಾಕ್ಷಿ(28) ಮತ್ತು ಚಂದ್ರಶೇಖರ್(12) ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯ ಬಗ್ಗೆ ಕಿಕ್ಕೇರಿ ಪೋಲಿಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ. ಬಡರೈತ ಕುಟುಂಬಕ್ಕೆ ಸೇರಿದ ಸ್ವಾಮೀಗೌಡ ಅವರ ಅಕಾಲಿಕ ಸಾವಿನಿಂದ ಇಡೀ ಕುಟುಂಬವು ಕಂಗಾಲಾಗಿದೆ. ಸರ್ಕಾರವು ಮಾನವೀಯ ನೆಲೆಗಟ್ಟಿನಲ್ಲಿ ಸ್ಪಂದಿಸಿ ಸ್ವಾಮೀಗೌಡರ ಕುಟುಂಬಕ್ಕೆ 5ಲಕ್ಷರೂ ಪರಿಹಾರ ನೀಡಬೇಕು ಎಂದು ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸಾಸಲು ಈರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಮಂಜೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೃಷ್ಣರಾಜಪೇಟೆ. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕಲ್‍ನ ಸಿವಿಲ್’ಎಂಜಿನಿಯರಿಂಗ್  ವಿಭಾಗದಲ್ಲಿ ನಾಲ್ಕನೇ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿದ್ದ  ತಾಲೂಕಿನ ರಾಜಘಟ್ಟದ ಕೆಂಪೇಗೌಡರ ಪುತ್ರ ಪುನೀತ್ ತೊಣ್ಣೂರು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾಗಿದ್ದಾನೆ.
ನಿನ್ನೆ ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ಪಾಲಿಟೆಕ್ನಿಕಲ್‍ಗೆ ಸಾಂದರ್ಭಿಕ ರಜೆಯನ್ನು ನೀಡಲಾಗಿತ್ತು. ರಜೆಯ ಮಜೆಯನ್ನು ಸವಿಯಲು ತನ್ನ ಸ್ನೇಹಿತರೊಂದಿಗೆ ತೊಣ್ಣೂರು ಕೆರೆಗೆ ಹೋದ ಪುನೀತ್ ತನ್ನ ಸ್ನೇಹಿತರ ಗುಂಪಿನೊಂದಿಗೆ ಈಜಲು ಕೆರೆಗೆ ಇಳಿದಿದ್ದಾಗ ಕೈಗೆ ಸಿಕ್ಕ ಹಗ್ಗದ ತುಂಡನ್ನು ಹಿಡಿದುಕೊಂಡು ಗಾಬರಿಗೊಂಡು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ತನ್ನ ಸಹಪಾಟಿಗಳು ನೋಡ ನೋಡುತ್ತಿದ್ದಂತೆಯೇ ನೀರಿನಲ್ಲಿ ಮುಳುಗಿ ದುರಂತ ಸಾವಿಗೀಡಾದ ಪುನೀತ್ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನ ಈಜುಗಾರರು ಮತ್ತು ಅಗ್ನಿಶಾಮಕ ಠಾಣೆಯ ನೆರವಿನಿಂದ ಶವವನ್ನು ನೀರಿನಿಂದ ಹೊರಕ್ಕೆ ತೆಗೆಯಲಾಯಿತು. ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮೃತರ ತಂದೆ-ತಾಯಿಗಳಿಗೆ ಶವವನ್ನು ಹಸ್ತಾಂತರ ಮಾಡಲಾಯಿತು.
ಸಂಸದ ಸಿ.ಎಸ್.ಪುಟ್ಟರಾಜು, ಸರ್ಕಾರಿ ಪಾಲಿಟೆಕ್ನಿಕಲ್ ಪ್ರಾಂಶುಪಾಲ ಎನ್.ಡಿ.ವಿವೇಕಾನಂದ, ಸಿವಿಲ್ ವಿಭಾಗದ ಮುಖ್ಯಸ್ಥರಾದ ನಾಗೇಶ್, ಎನ್.ಎಸ್.ಎಸ್ ಅಧಿಕಾರಿ ವಿಶ್ವರಾಜು ಮೃತನ ತಂದೆತಾಯಿಗಳಿಗೆ ಸಾಂತ್ವನ ಹೇಳಿದರು.

No comments:

Post a Comment