ಕೋಲಾರ ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರಿನ ಯೋಜನೆ: ವಿಧಾನಸಭೆಯಲ್ಲಿ ಕೋಲಾಹಲ.
ಬೆಂಗಳೂರು: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಶಾಶ್ವತ ಕುಡಿಯುವ ನೀರಿನ ಯೋಜನೆ ವಿಚಾರ ಸೋಮವಾರ ವಿಧಾನಸಭೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.
ಇಂದು ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಸದನಕ್ಕೆ-ಚಿಕ್ಕಬಳ್ಳಾಪುರ ಕ್ಷೇತ್ರದ ಶಾಶ್ವತ ಕುಡಿಯುವ ನೀರಿನ ಯೋಜನೆ ಕುರಿತಂತೆ ಮಾಹಿತಿ ನೀಡಿದರು. ನಿಯಮ 69ರ ಅಡಿಯಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನದವರೆಗೂ ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಶ್ರೀನಿವಾಸ ಪುರ ಶಾಸಕ ರಮೇಶ್ ಕುಮಾರ್ ಅವರು ಸರ್ಕಾರ ಇಚ್ಛಾಶಕ್ತಿಯನ್ನು ಪ್ರದರ್ಶನ ಮಾಡಬೇಕು. ನಾವೇನಾದರು ಈಜಿಪ್ಟ್ ಮಮ್ಮಿಗಳಂತೆ ಇದ್ದೇವಾನಾವೂ ಬದುಕಿದ್ದಿವೇ ಎಂದು ತೋರಿಸಬೇಕೆ ಎಂದು ರಮೇಶ್ ಕುಮಾರ್ ತೀವ್ರ ಸಿಟ್ಟಿನಿಂದ ಹೇಳಿದರು. ಅಲ್ಲದೆ ಮಾನವೀಯತೆ ಯಿಂದ ನಮಗೆ ನೀರು ಕೊಡಿ. ಇಲ್ಲ ಎಂದಾದರೆ ನಮಗೆ ಎರಡೇ ಆಯ್ಕೆಗಳಿದ್ದು,ಒಂದು ಆತ್ಮಹತ್ಯೆ ಇನ್ನೊಂದು ಸದನ ಬಿಟ್ಟು ಹೊರಹೋಗುವುದು. ಹೀಗಾಗಿ ನಮ್ಮ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬಜೆಟ್ ನಂತರದ ಭಾಷಣದಲ್ಲಿ ಸಿಎಂ ಸೂಕ್ತ ಉತ್ತರ ನೀಡಬೇಕು ಎಂದು ರಮೇಶ್ ಕುಮಾರ್ ಒತ್ತಾಯಿಸಿದರು. ರಮೇಶ್ ಕುಮಾರ್ ಅವರಿಗೆ ಕೋಲಾರ-ಚಿಕ್ಕಬಳ್ಳಾಪುರದ ಶಾಸಕರು ಸಾಥ್ ನೀಡಿದರು. ಚಿಂತಾಮಣಿ ಶಾಸಕ ಜೆ.ಕೃಷ್ಣಾರೆಡ್ಡಿ, ಮಾಲೂರು ಶಾಸಕ ಮಂಜುನಾಥ್ ಗೌಡ ಅವರು ರಮೇಶ್ ಕುಮಾರ್ ಗೆ ಸಾಥ್ ನೀಡಿದರು.
ಇದೇ ವೇಳೆ ಚಿಂತಾಮಣಿ ಶಾಸಕ ಕೃಷ್ಣಾರೆಡ್ಡಿ ಮಾತನಾಡಿ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಬಜೆಟ್ ನಲ್ಲಿ ಪ್ರಸ್ತಾಪ ಮಾಡದೇ ಇರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಯೋಜನೆಯನ್ನು ಸರ್ಕಾರ ಕೈ ಬಿಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ನರೇಂದ್ರ ಸ್ವಾಮಿ ಅವರು, ಯಾವುದೇ ಕಾರಣಕ್ಕೂ ಚಾಲಿತ ಯೋಜನೆಗಳನ್ನು ಪ್ರಸ್ತಾಪ ಮಾಡುವ ಅಗತ್ಯವಿಲ್ಲ. ಹೀಗಾಗಿ ಬಜೆಟ್ ನಲ್ಲಿ ಈ ಯೋಜನೆಗಳ ಪ್ರಸ್ತಾಪ ಮಾಡಿಲ್ಲ ಎಂದು ಸರ್ಕಾರವನ್ನು ಸಮರ್ಥನೆ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್ ಅವರು, ಸಿಂಗಟಾಲೂರು ಯೋಜನೆಯನ್ನು ಪ್ರಸ್ತಾಪ ಮಾಡಿರುವ ಸರ್ಕಾರ ಎತ್ತಿನ ಹೊಳೆ ಯೋಜನೆಯನ್ನು ಏಕೆ ಪ್ರಸ್ತಾಪ ಮಾಡಿಲ್ಲ ಎಂದು ಕೇಳಿದರು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಪದೇ ಪದೇ ಮಾತನಾಡುತ್ತಿದ್ದ ರಮೇಶ್ ಕುಮಾರ್ ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಎಲ್ಲ ವಿಚಾರಗಳಿಗೂ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಪದೇ-ಪದೇ ಮಾತನಾಡಿದರೆ ಗೌರವ ಉಳಿಯುತ್ತದೆಯೇ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್ ಅವರ ಹೇಳಿಕೆಯಿಂದ ಆಕ್ರೋಶಗೊಂಡ ರಮೇಶ್ ಕುಮಾರ್ ತಮಗೆ ಗೌರವವಿಲ್ಲದ ಮೇಲೆ ಸದನದಲ್ಲಿ ನಾನೇಕೆ ಕುಳಿತುಕೊಳ್ಳಬೇಕು ಎಂದು ಆಕ್ರೋಶ ಭರಿತರಾಗಿ ಸದನದಿಂದ ಹೊರಹೋಗಲು ಮುಂದಾದರು.
ಇದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಾಸಕರ ಆಕ್ರೋಶಕ್ಕೆ ಕಾರಣವಾಯಿತು. ಮಾಲೂರು ಶಾಸಕ ಮಂಜುನಾಥ್ ಗೌಡ ಅವರು ಸ್ಪೀಕರ್ ಮತ್ತು ಸರ್ಕಾರದ ವಿರುದ್ಧ ಟೀಕಾಪ್ರಹಾರವನ್ನೇ ನಡೆಸಿದರು. ಸದನದ ಬಾವಿಗಿಳಿದ ರಮೇಶ್ ಕುಮಾರ್ ಅವರು ತಮ್ಮ ಜಿಲ್ಲೆಯ ಇತರೆ ಶಾಸಕರೊಂದಿಗೆ ಧರಣಿ ನಡೆಸಿದರು. ಈ ವೇಳೆ ಮಂಜುನಾಥ್ ಅವರು ಸ್ಪೀಕರ್ ಅವರಿಗೆ ಪಕ್ಷಪಾತಿಯಾಗಿ ವರ್ತಿಸುತ್ತಿದ್ದೀರಿ ಎಂದು ಆರೋಪಿಸಿದರು. ಅಲ್ಲದೆ ತಮಗೆ ಮಾತನಾಡಲೂ ಕೂಡ ಅವಕಾಶ ನೀಡುತ್ತಿಲ್ಲ ಎಂದು ಹೇಳಿದರು. ಮತ್ತೆ ಮಾತಿನ ಚಕಮಕಿ ಮತ್ತು ಶಾಸಕರ ಧರಣಿ ಮುಂದುವರೆದಾಗ ಎಚ್ಚರಿಕೆ ನೀಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಮಂಜುನಾಥ್ ಗೌಡ ಅವರನ್ನು ಹೊರಹಾಕಲು ಮಾರ್ಷಲ್ ಗಳಿಗೆ ಸೂಚಿಸಿದರು.
ಪ್ರತಿಪಕ್ಷ ಸದಸ್ಯರು ಸಂಧಾನಕ್ಕೆ ಮುಂದಾದರೂ ಧರಣಿ ನಿರತ ಶಾಸಕರು ಪ್ರತಿಭಟನೆ ನಿಲ್ಲಿಸದ ಹಿನ್ನಲೆಯಲ್ಲಿ ಹಿನ್ನಲೆಯಲ್ಲಿ ಸ್ಪೀಕರ್ ಸದನವನ್ನು ಮುಂದೂಡಿದರು
.
No comments:
Post a Comment