Monday, 30 March 2015


ಮಂಡ್ಯದ ವಿಬ್‍ಸೆಟಿ ಸಭಾಂಗಣದಲ್ಲಿ ಸೋಮವಾರ 2015-16ನೇ ಸಾಲಿನ ‘ಮಂಡ್ಯ ಜಿಲ್ಲಾ ಕ್ರೆಡಿಟ್ ಪ್ಲಾನ್’ ಅನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿದರು. ಆರ್.ಬಿ.ಐ. ಜಿಲ್ಲಾ ಮಾರ್ಗದರ್ಶಿ ಅಧಿಕಾರಿ ಸುಜಾತಾ ಶ್ರೀಕಂಠಯ್ಯ, ಮಂಡ್ಯ ಜಿಲ್ಲಾ ಮಾರ್ಗದರ್ಶಿ ಮ್ಯಾನೇಜರ್ ಜಿ. ಬಸವರಾಜಪ್ಪ, ನಬಾರ್ಡ್‍ನ ಬಿಂಧು ಮಾಧವ ವಡವಿ, ವಿಜಯಾ ಬ್ಯಾಂಕ್‍ನ ರೀಜನಲ್ ಮ್ಯಾನೇಜರ್ ದಯಾಕರಶೆಟ್ಟಿ ಇದ್ದಾರೆ.

ಮುಖ್ಯಾಂಶಗಳು:
- ಒಟ್ಟು ರೂ. 3353.29 ಕೋಟಿ ಸಾಲ ಯೋಜನೆ ಬಿಡುಗಡೆ
- ಆದ್ಯತಾ ವಲಯಕ್ಕೆ ರೂ. 3111.25 ಕೋಟಿ
- 2014g-15ನೇ ಸಾಲಿನ ಡಿಸೆಂಬರ್ ತಿಂಗಳಾಂತ್ಯಕ್ಕೆ ಶೇ 98ರಷ್ಟು ಸಾಧನೆ

2015-16ನೇ ಸಾಲು
ಒಟ್ಟು ರೂ. 3353.29 ಕೋಟಿ ಸಾಲ ಯೋಜನೆ ಬಿಡುಗಡೆ
ಮಂಡ್ಯ: 2015-16ನೇ ಸಾಲಿನ ‘ಮಂಡ್ಯ ಜಿಲ್ಲಾ ಸಾಲ ಯೋಜನೆ’ (ಮಂಡ್ಯ ಜಿಲ್ಲಾ ಕ್ರೆಡಿಟ್ ಪ್ಲಾನ್) ಅನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಬಿಡುಗಡೆ ಮಾಡಿದರು.
ಜಿಲ್ಲೆಯ ಮಾರ್ಗದರ್ಶಿ ಬ್ಯಾಂಕ್ ಆಗಿರುವ ವಿಜಯಾ ಬ್ಯಾಂಕ್‍ನ ನಗರದ ವಿಬ್‍ಸೆಟಿ ಸಭಾಂಗಣದಲ್ಲಿ ಸೋಮವಾರ ಬ್ಯಾಂಕ್‍ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಒಟ್ಟು 3353.29 ಕೋಟಿ ರೂಪಾಯಿಯ ಸಾಲ ಯೋಜನೆಯನ್ನು ಅವರು ಬಿಡುಗಡೆಗೊಳಿಸಿದರು.
ಒಟ್ಟು ಸಾಲ ಯೋಜನೆಯಲ್ಲಿ ಆದ್ಯತಾ ವಲಯಕ್ಕೆ 3111.25 ಕೋಟಿ ರೂಪಾಯಿ ಹಾಗೂ ಇತರೆ ವಲಯಕ್ಕೆ ಒಟ್ಟು 242.04 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ ಎಂದರು.
ಆದ್ಯತಾ ವಲಯದ ಕೃಷಿ ಕ್ಷೇತ್ರಕ್ಕೆ ರೂ. 2069.95 ಕೋಟಿ ಒದಗಿಸಲಾಗಿದೆ. ಇದರಲ್ಲಿ ಬೆಳೆ ಸಾಲಕ್ಕೆ ರೂ. 1511.59 ಕೋಟಿ ಹಾಗೂ ಹೂಡಿಕೆ ಸಾಲಕ್ಕೆ ರೂ. 558.39 ಕೋಟಿ ಕಲ್ಪಿಸಲಾಗಿದೆ. ಇನ್ನು, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ವಲಯಕ್ಕೆ ರೂ. 175.54 ಕೋಟಿ, ಇತರೆ ವಲಯಕ್ಕೆ ರೂ. 865.76 ಕೋಟಿ ಒದಗಿಸಲಾಗಿದೆ ಎಂದು ಹೇಳಿದರು.
ಈ ಒಂದು ಯೋಜನೆ ಸಂಪೂರ್ಣವಾಗಿ ಯಶಸ್ಸು ಕಾಣಬೇಕೆಂದರೆ ಬ್ಯಾಂಕ್‍ಗಳು ಮತ್ತು ಸರ್ಕಾರದ ವಿವಿಧ ಇಲಾಖೆಗಳು ಸಾಲ ಯೋಜನೆಯ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಸಾಧನೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಹೇಳಿದರು.
ನಬಾರ್ಡ್‍ನ ಬಿಂಧು ಮಾಧವ ವಡವಿ ಮಾತನಾಡಿ, 2014-15ನೇ ಸಾಲಿನ ಡಿಸೆಂಬರ್ ತಿಂಗಳಾಂತ್ಯಕ್ಕೆ ಆದ್ಯತಾ ವಲಯದಲ್ಲಿ ಶೇ 98ರಷ್ಟು ಸಾಧನೆ ಆಗಿದೆ ಎಂದರು.
ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಕೃಷಿ ಕ್ಷೇತ್ರಕ್ಕೆ ಶೇ 35, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕಾ ವಯಲಕ್ಕೆ ಶೇ 4 ಹಾಗೂ ಇತರೆ ವಲಯಕ್ಕೆ ಶೇ 25ರಷ್ಟು ಹೆಚ್ಚಿನ ಹಣ್ಣವನ್ನು ಕಲ್ಪಿಸಲಾಗಿದೆ. ಒಟ್ಟಾರೆ, ಆದ್ಯತಾ ವಲಯಕ್ಕೆ ಶೇ 25ರಷ್ಟು ಹೆಚ್ಚಿನ ಹಣ ನೀಡಲಾಗಿದೆ ಎಂದು ಹೇಳಿದರು.
ಆದ್ಯತಾ ವಲಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಶೇ 61, ಕಾವೇರಿ ಗ್ರಾಮೀಣ ಬ್ಯಾಂಕ್‍ಗೆ ಶೇ 13, ಸಹಕಾರ ಕ್ಷೇತ್ರದ ಬ್ಯಾಂಕ್‍ಗಳಿಗೆ ಶೇ 25 ಹಾಗೂ ಕೆ.ಎಸ್.ಎಫ್.ಸಿ.ಗೆ ಶೇ 1ರಷ್ಟು ಹಣವನ್ನು ನೀಡಲಾಗಿದೆ ಎಂದು ತಿಳಿಸಿದರು.
ರಾಜೀವ್‍ಗಾಂಧಿ ಚೈತನ್ಯ ಯೋಜನೆ, ನ್ಯಾಷನಲ್ ಲೈವ್ಲಿವುಡ್ ಮಿಷನ್ (ಎನ್.ಆರ್.ಎಲ್.ಎಂ) ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಿಗೆ 549.12 ಕೋಟಿ ರೂಪಾಯಿ ಒದಗಿಸಲಾಗಿದೆ. ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳಿಂದ ಪ್ರಧಾನಮಂತ್ರಿ ಜನ್-ಧನ್ ಯೋಜನೆಯಡಿ ಶೇ 100ರಷ್ಟು ಕುಟುಂಬಗಳು ಬ್ಯಾಂಕ್ ಖಾತೆಯನ್ನು ಹೊಂದಿವೆ ಎಂದರು.
ಹಣ ಹೊಂದಾಣಿಕೆ ಮಾಡದಂತೆ ಸೂಚನೆ:  ಸ್ವಚ್ಛ ಭಾರತ್ ಮಿಷನ್ (ಎಸ್‍ಬಿಎಂ) ಅಡಿಯಲ್ಲಿ ಶೌಚಾಲಯ ನಿಮಿಸಿಕೊಂಡ ಫಲಾನುಭವಿಗಳಿಗೆ ನೀಡುವ ಪ್ರೋತ್ಸಾಹಧನವನ್ನು ಇತರೆ ಯಾವುದೇ ಸಾಲಗಳಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಸಂಪೂರ್ಣ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸುವಂತೆ ವಿವಿಧ ಬ್ಯಾಂಕ್‍ಗಳ ಅಧಿಕಾರಿಗಳಿಗೆ ಸಿಇಒ ರೋಹಿಣಿ ಸಿಂಧೂರಿ ಸೂಚಿಸಿದರು.
ಆರ್.ಬಿ.ಐ. ಜಿಲ್ಲಾ ಮಾರ್ಗದರ್ಶಿ ಅಧಿಕಾರಿ ಸುಜಾತಾ ಶ್ರೀಕಂಠಯ್ಯ, ವಿಜಯಾ ಬ್ಯಾಂಕ್‍ನ ರೀಜನಲ್ ಮ್ಯಾನೇಜರ್ ದಯಾಕರಶೆಟ್ಟಿ, ಮಂಡ್ಯ ಜಿಲ್ಲಾ ಮಾರ್ಗದರ್ಶಿ ಮ್ಯಾನೇಜರ್ ಜಿ. ಬಸವರಾಜಪ್ಪ ಮತ್ತಿತರರು ಹಾಜರಿದ್ದರು.

No comments:

Post a Comment