Thursday, 5 March 2015

ಕೋಪಂ ಸಿಇಒ ರೋಹಿಣಿ ಸಿಂಧೂರಿ ರವರು ಅಧಿಕಾರಿಗಳ ಸಭೆ.


ಮಂಡ್ಯದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ‘ಅಂಗನವಾಡಿ ಮತ್ತು ಶಾಲಾ ಶೌಚಾಲಯಗಳ ನಿರ್ಮಾಣದ ಪ್ರಗತಿ ಪರಿಶೀಲನಾ ಸಭೆ’ಯನ್ನು ಜಿಪಂ ಸಿಇಒ ರೋಹಿಣಿ ಸಿಂಧೂರಿ ನಡೆಸಿದರು.
ಮಂಡ್ಯ: ಜಿಲ್ಲೆಯಲ್ಲಿ ಸ್ವಂತ ಅಂಗನವಾಡಿ ಕಟ್ಟಡಗಳನ್ನು ಹೊಂದಿದ್ದು, ಈವರೆವಿಗೂ ಶೌಚಾಲಯಗಳನ್ನ ಹೊಂದಿರದ ಕೇಂದ್ರಗಳಲ್ಲಿ ಮಾರ್ಚ್ ತಿಂಗಳಾಂತ್ಯಕ್ಕೆ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ‘ಅಂಗನವಾಡಿ ಮತ್ತು ಶಾಲಾ ಶೌಚಾಲಯಗಳ ನಿರ್ಮಾಣದ ಪ್ರಗತಿ ಪರಿಶೀಲನಾ ಸಭೆ’ ನಡೆಸಿದ ಸಿಇಓ, ಎಲ್ಲಾ ತಾಲ್ಲೂಕುಗಳ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‍ಗಳಿಗೆ ಈ ಸೂಚನೆ ನೀಡಿದರು.
2014-15ನೇ ಸಾಲಿನಲ್ಲಿ ಸ್ವಂತ ಕಟ್ಟಡ ಹೊಂದಿರುವ 266 ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಈ ಪೈಕಿ 218 ಕೇಂದ್ರಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಉಳಿದ 48 ಕೇಂದ್ರಗಳಲ್ಲಿ ಕಟ್ಟಡ ಶಿಥಿಲವಾಗಿರುವುದು, ಸ್ವಂತ ಕಟ್ಟಡ, ನಿವೇಶನ ಇಲ್ಲದಿರುವುದು ಸೇರಿದಂತೆ ಇತರೆ ಕಾರಣಗಳಿಂದ ಶೌಚಾಲಯಗಳನ್ನು ನಿರ್ಮಿಸಲು ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 2529 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ 1483 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿದ್ದು, 1068 ಕೇಂದ್ರಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ, ಈ ಹಿಂದೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ 180 ಶೌಚಾಲಯಗಳನ್ನು ಕಾಲಮಿತಿಯಲ್ಲಿ ನಿರ್ಮಿಸಿಕೊಡುವುದಾಗಿ ಹೇಳಿದ್ದರೂ ಇನ್ನೂ ಕೆಲಸ ಆರಂಭಿಸಿಯೇ ಇಲ್ಲ. ಆದುದ್ದರಿಂದ ಈ ಸಂಖ್ಯೆಯ ಶೌಚಾಲಯಗಳನ್ನು ಪಿಆರ್‍ಇಡಿ ವತಿಯಿಂದ ನಿರ್ಮಿಸಬೇಕು. ಅಗತ್ಯ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.
ಮುಂದಿನ ಲೋಕ ಅದಾಲತ್‍ನಲ್ಲಿ ಸ್ವಂತ ಅಂಗನವಾಡಿ ಕಟ್ಟಡ ಹೊಂದಿರುವ ಕೇಂದ್ರಗಳಲ್ಲಿ ಶೌಚಾಲಯ ವ್ಯವಸ್ಥೆ ಇದೆ ಎಂದು ಅಫಿಡೆವಿಟ್ ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ಈ ತಿಂಗಳಾಂತ್ಯಕ್ಕೆ ಕಡ್ಡಾಯವಾಗಿ ಶೌಚಾಲಯವನ್ನು ನಿರ್ಮಿಸಬೇಕು ಎಂದು ಪಿಆರ್‍ಇಡಿ ಎಂಜಿನಿಯರ್‍ಗಳಿಗೆ ಸಿಇಓ ರೋಹಿಣಿ ಸಿಂಧೂರಿ ಸೂಚಿಸಿದರು.
ಸರ್ಕಾರಿ ಶಾಲೆಗಳಲ್ಲಿ: ಜಿಲ್ಲೆಯಲ್ಲಿ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ 128 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ಜರೂರಾಗಿ ನಿರ್ಮಿಸಬೇಕು ಎಂದು ಹೇಳಿದರು.
2014-15ನೇ ಸಾಲಿನಲ್ಲಿ ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ 42, ಮದ್ದೂರಿನಲ್ಲಿ 14, ಮಳವಳ್ಳಿಯಲ್ಲಿ 24, ಮಂಡ್ಯದಲ್ಲಿ 5, ನಾಗಮಂಗಲದಲ್ಲಿ 10, ಪಾಂಡವಪುರದಲ್ಲಿ 19 ಹಾಗೂ ಶ್ರೀರಂಗಪಟ್ಟಣದಲ್ಲಿ 14 ಸೇರಿದಂತೆ ಒಟ್ಟು 128 ಶೌಚಾಲಯಗಳನ್ನು ನಿರ್ಮಿಸಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.



No comments:

Post a Comment