ಮಂಡ್ಯ: ಶಾಲಾ ಮಕ್ಕಳ ಮನೆಯಲ್ಲಿ ಶೌಚಾಲಯ ನಿರ್ಮಿಸುವಂತೆ ಪ್ರೇರೇಪಿಸಿ, ನಿಗದಿತ ಗುರಿ ಸಾಧಿಸುವಲ್ಲಿ ವಿಫಲರಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (ಬಿಇಒ) ಕಾರಣಕೇಳಿ ನೋಟೀಸ್ ಅನ್ನು ಜಿಲ್ಲಾ ಪಂಚಾಯಿತಿ ಸಿಇಒ ರೋಹಿಣಿ ಸಿಂಧೂರಿ ಜಾರಿಗೊಳಿಸುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ‘ಎಸ್ಸೆಸ್ಸೆಲ್ಸಿ ಪರೀಕ್ಷಾ ಪೂರ್ವ ಸಿದ್ಧತೆ ಹಾಗೂ ಶಾಲಾ ಮಕ್ಕಳ ಮನೆಯ ಶೌಚಾಲಯ ನಿರ್ಮಾಣದ ಪ್ರಗತಿ ಪರಿಶೀಲನೆ’ ಸಭೆ ನಡೆಸಿದರು. ಶೌಚಾಲಯ ನಿರ್ಮಾಣದಲ್ಲಿ ನಿರೀಕ್ಷಿತ ಪ್ರಗತಿ ಇಲ್ಲದಿರುವುದಕ್ಕೆ ನೋಟೀಸ್ ಜಾರಿಗೊಳಿಸುವುದಕ್ಕೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಹೇಳಿದರು.
ಮಕ್ಕಳ ದಿನಾಚರಣೆ ದಿನದಿಂದಲೂ ಶಾಲಾ ಮಕ್ಕಳ ಮನೆಯಲ್ಲಿ ಶೌಚಾಲಯ ನಿರ್ಮಿಸಲು ಪ್ರೇರೇಪಿಸುವಂತೆ ಹೇಳುತ್ತಿದ್ದರೂ ನಿರೀಕ್ಷಿತ ಫಲಿತಾಂಶ ದೊರೆತಿಲ್ಲ. ನನಗೆ ಶಿಕ್ಷಣ ಇಲಾಖೆ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಾ ಸವಲತ್ತುಗಳನ್ನು ಕೊಡುತ್ತೇವೆ ಎಂದು ಹೇಳಿದ್ದರೂ ಜಿಲ್ಲೆಯ ಯಾವುದೇ ತಾಲ್ಲೂಕಿನಲ್ಲೂ ಶೇ 50ರಷ್ಟೂ ಸಾಧನೆ ಆಗಿಲ್ಲ ಏಕೆ? ಇದು, ನಿರ್ಲಕ್ಷ್ಯವಲ್ಲವೇ ಎಂದು ಬೇಸರ ವ್ಯಕ್ತಪಡಿಸಿದರು.
ಬ್ಲಾಕ್‍ವಾರು ಸಾಧನೆ: ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಒಟ್ಟು 2,21,200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ 1,32,473 ಮಕ್ಕಳ ಮನೆಯಲ್ಲಿ ಶೌಚಾಲಯ ಇದ್ದರೆ, 88,727 ವಿದ್ಯಾರ್ಥಿಗಳ ಮನೆಯಲ್ಲಿ ಶೌಚಾಲಯವಿಲ್ಲ. ಒಟ್ಟಾರೆ, ಶೇ 33.50ರಷ್ಟು ಶಾಲಾ ವಿದ್ಯಾರ್ಥಿಗಳ ಮನೆಗಳಲ್ಲಿ ಮಾತ್ರ ಶೌಚಾಲಯವಿದೆ.
ಕೃಷ್ಣರಾಜಪೇಟೆ (ಶೇ 34.5), ಮದ್ದೂರು (ಶೇ 30.83), ಮಳವಳ್ಳಿ (ಶೇ 22.38), ಮಂಡ್ಯ ಉತ್ತರ (ಶೇ 36.44), ಮಂಡ್ಯ ದಕ್ಷಿಣ (ಶೇ 30), ನಾಗಮಂಗಲ (ಶೇ 45.78), ಪಾಂಡವಪುರ (ಶೇ 34.57) ಹಾಗೂ ಶ್ರೀರಂಗಪಟ್ಟಣ (ಶೇ 31.68).
ಎಸ್ಸೆಸ್ಸೆಲ್ಸಿ ಪರೀಕ್ಷೆ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 25,626 ವಿದ್ಯಾರ್ಥಿಗಳು ಹೊಸದಾಗಿ ಪರೀಕ್ಷೆ ತೆಗೆದುಕೊಂಡಿದ್ದಾರೆ. ಒಟ್ಟು 96 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಐ ಎಂ.ಶಿವಮಾದಪ್ಪ ಹೇಳಿದರು.
ಮಾ. 30 ರಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ. ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಂಡ್ಯದಲ್ಲಿ ನಡೆಯಲಿದ್ದು, ಆರು ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಎಲ್ಲಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿಷಯ ಪರಿವೀಕ್ಷಕರು ಸಭೆಯಲ್ಲಿ ಹಾಜರಿದ್ದರು.
No comments:
Post a Comment