Tuesday, 10 March 2015


       ಮೈಸೂರು,ಮಾ.10-ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಎಚ್ಚರವಹಿಸಲು ಎಲ್ಲಾ ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಮುನ್ನೆಚ್ಚರಿಕೆಯ ಕ್ರಮಗಳನ್ನು ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದರು.
     ಇಂದು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಕೆ ಸಂಬಂಧ ಕರೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರನ ಸಮಸ್ಯೆಗೆ ಅವಕಾಶ ನೀಡಬಾರದು. ಸದ್ಯದ ಸಂದರ್ಭದಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲದಿದ್ದರೂ, ಮುಂಬರುವ ಎರಡು ತಿಂಗಳನ್ನು ಗುರಿಯಾಗಿಸಿಕೊಂಡು ಕುಡಿಯುವ ನೀರಿನ ಸಮಸ್ಯೆ ಉದ್ಭ್ಬವಿಸದಂತೆ ಮುಂಚಿತವಾಗಿಯೇ  ಕ್ರಮ ಕೈಗೊಳ್ಳಬೇಕು ಎಂದರು
     ಪಂಚಾಯತ್ ರಾಜ ಎಂಜಿನಿಯರಿಂಗ್ ಇಲಾಖೆಯವರು ತಾಲ್ಲೂಕುಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳ ಪಟ್ಟಿ ಸಿದ್ಧ ಪಡಿಸಿ ಅಲ್ಲಿನ ನೀರಿನ ಸಮಸ್ಯೆ ನೀಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಾರ್ಯನ್ಮುಖರಾಗಬೇಕು. ಗ್ರಾಮಸ್ಥರಿಂದ ದೂರುಗಳು ಕೇಳಿಬರದಂತೆ ಅವರ ಸಮಸ್ಯೆಗಳಿಗೆ ಸ್ಪಂದಿಸಿ ತುಂಬ ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಯೊಂದಿಗೆ ಜಂಟಿಯಾಗಿ ಜಿಲ್ಲಾ ಪ್ರವಾಸ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಶಿಖಾ ಹೇಳಿದರು.
     ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಶೀಘ್ರದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಕ್ರಿಯಯೋಜನೆಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಮಾರ್ಚ್ 15 ರೊಳಗೆ ವರದಿ ಸಲ್ಲಿಸಬೇಕು. ಒಮ್ಮೆ ಕ್ರಿಯಾಯೋಜನೆ ಸಲ್ಲಿಸಿದ ಮೇಲೆ ಯಾವುದೇ ಕಾರಣಕ್ಕೂ ಹೆಚ್ಚುವರಿ ಕಾಮಗಾರಿಗಳನ್ನು ಪ್ರಸ್ತಾಪಿಸಲು ಅವಕಾಶ ನೀಡದಂತೆ ಅಧಿಕಾರಿಗಳು ಬಹಳ ಎಚ್ಚರದಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
    ಬೇಸಿಗೆ ಸಮೀಪಿಸುತ್ತಿರುವುದರಿಂದ ನೀರಿಗೆ ಸಂಬಂಧಪಟ್ಟ ಕಾಲರಾ, ಕರುಳುಬೇನೆ ಹಾಗೂ ಇತರೆ ಮಾರಕ ಕಾಯಿಲೆಗಳು ಹೆಚ್ಚಾಗಿ ಬರುವ ಸಾಧ್ಯತೆಗಳಿವೆ. ಆರೋಗ್ಯ ಇಲಾಖೆ ವತಿಯಿಂದ ಸ್ವಚ್ಛತೆ, ಕುಡಿಯುವ ನೀರನ ಟ್ಯಾಂಕ್ ಶುದ್ಧಿಕರಣ ಒಳಚರಂಡಿ ವ್ಯವಸ್ಥೆ, ಕಸದ ಗುಂಡಿ ನಿರ್ವಹಣೆ ಹಾಗೂ ನೈರ್ಮಲ್ಯ ಕುರಿತು ಗ್ರಾಮಾಂತರ ಪ್ರದೇಶದಲ್ಲಿ ಅರಿವು ಮೂಡಿಸುವ ಚಟುವಟಿಕೆಗಳು ಹೆಚ್ಚಾಗಿ ಹಮ್ಮಿಕೊಳ್ಳಬೇಕು. ಕಾಯಿಲೆ ಬಂದ ನಂತರ ಕ್ರಮವಹಿಸುವ ಬದಲು ಮುಂಜಾಗ್ರತ ಕ್ರಮಕ್ಕೆ ಆದ್ಯತೆ ನೀಡಬೇಕು. ವೈದ್ಯಕೀಯ ಸಿಬ್ಬಂದಿಗಳು ಗ್ರಾಮ ಪಂಚಾಯತಿ ಕಚೇರಿಗಳಿಗೆ ಭೇಟಿ ನೀಡಿ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮುದಾಯದಲ್ಲಿ ಉಂಟಾಗಿರುವ ರೋಗ ಪ್ರಕರಣಗಳ ಬಗ್ಗೆ ಸೂಕ್ತ ಮುನ್ನೆಚ್ಚರಿಕಾ ಕ್ರಮವÀನ್ನು ಕೈಗೊಳ್ಳಲು ಟಾಂ ಟಾಂ ಮೂಲಕ ಪ್ರಚಾರ ಮಾಡಲು ಸ್ಥಳೀಯ ಆಡಳಿತದ ಸಹಯೋಗದಲ್ಲಿ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
      ಗ್ರಾಮಾಂತರ ಪ್ರದೇಶದಗಳಿಗೆ ಸರಬರಾಜು ಮಾಡುವ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗಾಗಿ  ಜಿಲ್ಲಾ ಪ್ರಯೋಗ ಶಾಲೆಗಳಿಗೆ ಸಲ್ಲಿಸಬೇಕು. ಪರೀಕ್ಷೆಯ ವೇಳೆ ನೀರಿನ ಮಾದರಿಗಳು ಉಪಯೋಗಕ್ಕೆ ಯೋಗ್ಯವಲ್ಲವೆಂದು ಫಲಿತಾಂಶ ಬಂದಲ್ಲಿ ಕುಡಿಯಲು ಯೋಗ್ಯವಾಗುವಂತೆ ಪರಿವರ್ತಿಸಲು ಸೂಕ್ತವಾದ ಕ್ರಮವಹಿಸಬೇಕು. ತುರ್ತು ಸಂದರ್ಭದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆದು ರೋಗಿಗಳಿಗೆ ಚಿಕಿತ್ಸೆ ಮತ್ತು ಸಲಹೆ ನೀಡಬೇಕು. ಪ್ರತಿನಿತ್ಯ ನೀರಿಗೆ ಕ್ಲೋರಿನೇಷನ್ ಮಾಡಿ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್ ಅವರು ಮಾತನಾಡಿ ಸ್ವಚ್ಛ ಭಾರತ್ ಅಭಿಯಾನದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಛತಾ ಸಪ್ತಾಹ ಆಚರಣೆಯನ್ನು ಜಿಲ್ಲೆಯಲ್ಲಿ ಮಾರ್ಚ್ 16 ರಿಂದ 24 ರವರೆಗೆ ಹಮ್ಮಿಕೊಳ್ಳಲಾಗಿದ್ದು, ಗ್ರಾಮಾಂತರ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕುರಿತು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರು ಈ ಅಭಿಯಾನದ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ  ಮಾರ್ಚ್ 15 ರಂದು ಕೊಪ್ಪಳ ಜಿಲ್ಲೆಯಲ್ಲಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
     ಇದೇ ವೇಳೆ ಮಾತನಾಡಿದ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ದೇವ್‍ದಾಸ್ ಅವರು ಜಿಲ್ಲೆಯಲ್ಲಿ ಸಾಕಷ್ಟು ಮೇವನ್ನು ಸಂಗ್ರಹಿಸಲಾಗಿದೆ. ಮುಂಬರುವ 36 ವಾರಗಳಿಗೆ ಬೇಕಾಗುವಷ್ಟು ಮೇವನ್ನು ವಿವಿಧ ಸ್ಥಳಗಳಲ್ಲಿ  ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ ಕಾಲು ಬಾಯಿ ರೋಗಕ್ಕೆ ಸಂಬಂಧಿಸಿದ ಲಸಿಕೆ ಕಾರ್ಯಕ್ರಮದಲ್ಲಿ ಶೇ.88 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರಿಗೆ ತಿಳಿಸಿದರು.
     ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಹೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪುಟ್ಟಸ್ವಾಮಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ವೈದ್ಯಾಧಿಕಾರಿಗಳು ಹಾಗೂ ಇತರೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.
(ಛಾಯಚಿತ್ರ ಲಗ್ತಸಿದೆ)
     
ಕೊಳಚೆ ಪ್ರದೇಶ ನಿರ್ಮೂಲನ ಮಾಡಲು ರಾಜೀವ ಆವಸ್ ಯೋಜನೆ
     ಮೈಸೂರು,ಮಾ.10.ಮೈಸೂರು ನಗರದಲ್ಲಿ 172 ಸ್ಲಂಗಳನ್ನು ಗುರುತಿಸಲಾಗಿದ್ದು, ಇವುಗಳನ್ನು ನಿರ್ಮೂಲನ ಮಾಡಲು ರಾಜೀವ್ ಆವಾಸ್ ಯೋಜನೆಯನ್ನು ಜಾರಿಗೆ  ತರಲಾಗಿದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅವರು ತಿಳಿಸಿದರು.
     ಅವರು ಇಂದು ಕಿಂಗ್ಸ್ ಕೋರ್ಟ್‍ನಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯೋಜಿಸಿದ್ದ ಕೊಳಚೆ ಪ್ರದೇಶ ಮುಕ್ತ ಮೈಸೂರು ನಗರದ ಭಾಗಿದಾರರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
     ಮೈಸೂರು ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಮೈಸೂರು ನಗರವನ್ನು ಕೊಳಚೆ ಪ್ರದೇಶ ಮುಕ್ತ ಮಾಡಿದರೆ ಇನ್ನು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು. ರಾಜೀವ್ ಆವಾಸ್ ಯೋಜನೆ 10 ವರ್ಷಗಳ ಅವಧಿಯದಾಗಿದ್ದು, ಈ ಯೋಜನೆಯಲ್ಲಿ ವಸತಿಯ ಜೊತೆ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರಿನ ಸರಬರಾಜು, ಒಳಚರಂಡಿ, ಆರೋಗ್ಯ, ಶಿಕ್ಷಣ, ಸಮುದಾಯ ಕೇಂದ್ರಗಳಿಗೂ ಆದ್ಯತೆ ನೀಡಲಾಗುವುದು. ಈ ಯೋಜನೆ ಯಶಸ್ವಿಯಾಗಬೇಕಾದರೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. ನಗರಪಾಲಿಕೆ ಸದಸ್ಯರು ತಮ್ಮ ವ್ಯಾಪ್ತಿಯ ವಾರ್ಡ್‍ನಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದರು.
    ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ನಿಗಧಿಪಡಿಸಲಾಗಿದೆ ಇದರಲ್ಲಿ ಕೇಂದ್ರ ಸರ್ಕಾರ ಶೇ. 50 ಹಾಗೂ ರಾಜ್ಯ ಸರ್ಕಾರದ ಶೇ. 40 ಸಹಾಯ ಧನ ನೀಡಲಿದೆ. ಉಳಿದ ಶೇ. 10 ಅಂದರೆ 50,000/- ರೂಗಳನ್ನು ಫಲಾನುಭವಿ ನೀಡಬೇಕಾಗುತ್ತದೆ. ಈ ಯೋಜನೆಯನ್ನು ಮೈಸೂರು ಮಹಾನಗರ ಪಾಲಿಕೆ ಹಾಗೂ ಕೊಳಚೆ ನಿರ್ಮೂಲನ ಮಂಡಳಿ ಅನುಷ್ಠಾನಗೊಳಿಸಲಿದೆ. ಮೈಸೂರು ಮಹಾನಗರ ಪಾಲಿಕೆ ಸದಸ್ಯರು, ಶಾಸಕರು ಒಟ್ಟಾಗಿ ಚರ್ಚಿಸಿ ಈ ಯೋಜನೆಯನ್ನು ಉತ್ತಮಪಡಿಸಲು ಸಲಹೆ ನೀಡಬೇಕು ಎಂದರು.
    ರಾಜೀವ್ ಆವಾಸ್ ಯೋಜನೆಯಡಿಯಲ್ಲಿ ಮೈಸೂರು ನಗರಕ್ಕೆ 2800 ಮನೆಗಳು ಮಂಜೂರಾಗಿದೆ. ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕಾಲೋನಿ, ಕೊಳಚೆ ಪ್ರದೇಶ 116 ಮನೆಗಳು ಮಂಜೂರಾಗಿದ್ದು, ಕಾಮಗಾರಿಯ ಫಲಾನುಭವಿಗಳಿಗೆ ತಾತ್ಕಾಲಿಕ ವಸತಿ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ.
   ನರಸಿಂಹರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೆ.ಎನ್.ಪುರದಲ್ಲಿ 700 ಮನೆಗಳು ಹಾಗೂ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 8 ವಿವಿಧ ಕೊಳಚೆ ಪ್ರದೇಶಗಳಲ್ಲಿ 1329 ಮನೆಗಳು ಹಾಗೂ ಚಾಮರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 4 ವಿವಿಧ ಕೊಳಚೆ ಪ್ರದೇಶಗಳಲ್ಲಿ 655 ಮನೆಗಳು ಮಂಜೂರಾಗಿದೆ.
    ಸಭೆಯಲ್ಲಿ ಶಾಸಕ ವಾಸು, ತನ್ವೀರ್ ಸೇಠ್, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಆರ್. ಲಿಂಗಪ್ಪ, ಉಪ ಮಹಾಪೌರರಾದ ಮಹಾದೇವಮ್ಮ, ಆಯುಕ್ತರಾದ ಸಿ.ಜಿ.ಬೆಟಸೂರ್ ಮಠ್ ಹಾಗೂ ರಾಜೀವ್ ಆವಾಸ್ ಯೋಜನೆಯ ರಾಜ್ಯ ಸಮನ್ವಯಾಧಿಕಾರಿ ಬಾಲಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು.
ಶುಲ್ಕವಿಲ್ಲದೆ ಅರ್ಜಿ ಸಲ್ಲಿಸಲು ಅವಕಾಶ
ಮೈಸೂರು,ಮಾ.10-ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ ವತಿಯಿಂದ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದಲ್ಲಿ ಮೈಸೂರು ನಂಜನಗೂಡು-ಊಟಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಮೈಸೂರು ನಗರದಿಂದ 25 ಕಿ.ಮೀ. ದೂರದ ರೀಡ್ ಅಂಡ್ ಟೈಲರ್ ಪ್ಯಾಕ್ಟರಿ ಹತ್ತಿರ ಹೊಸದಾಗಿ ಕೈಗಾರಿಕಾ ವಸಾಹತು ಅಭಿವೃದ್ದಿಪಡಿಸಿ  ವಿವಿಧ ಮಾದರಿ /ಅಳತೆ 20,000 ಚ.ಅಡಿ, 10,000 ಚ.ಅಡಿ, 5,000 ಚ.ಅಡಿ ಮತ್ತು 3,000 ಚ.ಅಡಿ ಹಾಗೂ ವಿಶೇಷ ಮಾದರಿ ನಿವೇಶನಗಳನ್ನು ಸೂಕ್ತ ಅರ್ಹ ಭಾವಿ ಉದ್ದಿಮೆದಾರರಿಗೆ ಕೈಗಾರಿಕೆ ಚಟುವಟಿಕೆ ನಡೆಸಲು ಹಂಚಿಕೆ ಮಾಡಲಾಗುವುದು.
ಈ ಹಿನ್ನೆಲೆಯಲ್ಲಿ ಆಸಕ್ತಿಯುಳ್ಳ ಭಾವಿ ಉದ್ಯಮಿಗಳು, ಹಾಲಿ ಕೈಗಾರಿಕೋದ್ಯಮಿಗಳು ತಮ್ಮ ತಮ್ಮ ಯೋಜನೆಗೆ ಅನುಗುಣವಾಗಿ ಬೇಕಾಗುವ ನಿವೇಶನಗಳ ಅಳತೆಯನ್ನು ನಮೂದಿಸಿ ಬೇಡಿಕೆ ಪತ್ರವನ್ನು ಯಾವುದೇ ಡಿ.ಡಿ. ಶುಲ್ಕವಿಲ್ಲದೆ  ಸ್ವವಿವರವುಳ್ಳ ಅರ್ಜಿಯನ್ನು ಕೈಗಾರಿಕಾ ವಸಾಹತು, ಯಾದವಗಿರಿ, ಮೈಸೂರು ಇವರಿಗೆ  ಮಾರ್ಚ್ 31 ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2515630ನ್ನು ಸಂಪರ್ಕಿಸುವಂತೆ ಕೋರಿದೆ.

ಅಭಿನಂದನಾ ಸಮಾರಂಭಕ್ಕೆ ಹೆಸರು ನೋಂದಣಿ
     ಮೈಸೂರು,ಮಾ.10.ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ 2014-15ನೇ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಪಿಹೆಚ್.ಡಿ ಪಡೆದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಅಭ್ಯರ್ಥಿ ಮತ್ತು ಅಧ್ಯಾಪಕರುಗಳಿಗೆ ಏಪ್ರಿಲ್ 14 ರಂದು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.
   ಆಸಕ್ತ ವಿದ್ಯಾರ್ಥಿ/ಅಧ್ಯಾಪಕರು ತಮ್ಮ ಹೆಸರನ್ನು ಮಾರ್ಚ್ 31 ರೊಳಗಾಗಿ ಉಪ ಕುಲಸಚಿವರ ಕಚೇರಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗ ವಿಶೇಷ ಘಟಕ, ಮಹಾರಾಜ ಕಾಲೇಜು ಶತಮಾನೋತ್ಸವಭವನ, ಮೈಸೂರು ಇಲ್ಲಿ ನೋಂದಾಯಿಸಿಕೊಳ್ಳಬಹುದು. 

No comments:

Post a Comment