ಭಗವದ್ಗೀತೆ ಶೋಷಿತರಿಗೆ ಮರಣ ಶಾಸನ- ಬಂಜಗೆರೆ ಜಯಪ್ರಕಾಶ್
ಮೈಸೂರು, ಮಾ.14- ಪ್ರಾಚೀನ ಭಾರತದಲ್ಲಿ ಮೊದಮೊದಲು ಮೂಲ ಭಗವದ್ಗೀತೆ ಹುಟ್ಟಿದ್ದು ಶೊಷಿತರಿಗಾಗಿ, ವೇದಗಳನ್ನು ವಿರೋಧಿಸುವುದಕ್ಕಾಗಿ, ಮೂಲ ಭಗವದ್ಗೀತೆಯನ್ನು ನಂತರದ ದಿನಗಳಲ್ಲಿ ತಿರುಚಿ ಬ್ರಾಹ್ಮಣ ಶ್ರೇಷ್ಠತಾ ಸಾಲುಗಳನ್ನು ಸೇರಿಸಲಾಗಿದೆ ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಪುನರುಚ್ಚರಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಇಂದು ಮೈಸೂರು ವಿಭಾಗೀಯ ಎಸ್.ಸಿ, ಎಸ್.ಟಿ ನೌಕರರ ಸಂಘದ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಭಗವದ್ಗೀತೆ ಬಗ್ಗೆ ಮಾತನಾಡುವ, ಅವಲೋಕನ ಮಾಡುವ ಹಕ್ಕನ್ನು ಹತ್ತಿಕ್ಕುತ್ತಿದ್ದಾರೆ, ಭಗವದ್ಗೀತೆ ಬಗ್ಗೆ ಮಾತನಾಡುವುದೇ ತಪ್ಪು ಎನ್ನುವಂತೆ ಸೃಷ್ಟಿಸುತ್ತಾ ಈ ಮೂಲಕ ಭಯೋತ್ಪಾದನೆ ತಲೆಎತ್ತಲು ಅವಕಾಶ ಮಾಡಿಕೊಡುತ್ತಿದ್ದಾರೆ. ಆದ್ದರಿಂದ ಭಗವದ್ಗೀತೆ ದಲಿತರಿಗೆ ಶೋಷಿತರಿಗೆ ಮರಣ ಶಾಸನವಾಗಿದೆ ಎಂದು ಹೇಳಿದರು.
ದೇಶದಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಶಕ್ತಿಗಳು ಇವೆ. ಕೇಂದ್ರ ಸರ್ಕಾರದ ಹಿಂದೆ ಆರ್‍ಎಸ್‍ಎಸ್, ವಿಎಚ್‍ಪಿ, ಭಜರಂಗದಳ ಇವೆ. ಮೋದಿ ಸರ್ಕಾರ ದಲಿತರ, ಶೋಷಿತರ, ಮಹಿಳೆಯರ ಪರವಾಗಿಲ್ಲದೆ ಮತಾಂಧ ಶಕ್ತಿಗಳ, ಬಲಾಢ್ಯರ ಪರವಾಗಿದೆ. ನಮಗೆ ಸಾಮರಸ್ಯ ಬ್ರಾತೃತ್ವ ಎತ್ತಿ ಹಿಡಿಯುವ ಸರ್ಕಾರ ಬೇಕು. ಅದನ್ನು ಅದಕ್ಕಾಗಿ ಒತ್ತಾಯಿಸುವುದು ನಮ್ಮ ಮೂಲಭೂತ ಹಕ್ಕು ಎಂದರು.
ಕೇಂದ್ರದ ವಿದೇಶಾಂಗ ಸಚಿವೆ ಸುಸ್ಮಸ್ವರಾಜ್ ಸಂವಿಧಾನದ ಆಶಯದ ಪ್ರಕಾರ ಪ್ರಮಾಣ ವಚನ ಸ್ವೀಕರಿಸಿದ್ದು, ಅಧಿಕಾರ ಪಡೆದುಕೊಂಡ ತಕ್ಷಣ ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿಸಬೇಕು ಎಂದು ಕರೆಕೊಟ್ಟರು, ಆದರೆ ಅವರ ಹೇಳಿಕೆ ವಿರುದ್ಧ ಯಾರೂ ಸಹ ಕೇಸ್ ಹಾಕಲಿಲ್ಲ, ಆದರೆ ಶೋಷಿತರು ಭಗವದ್ಗೀತೆ ಬಗ್ಗೆ ಮಾತಾಡಿದ್ದಕ್ಕೆ ಹೊಡಿತೀವಿ, ಕಡೀತೀವಿ, ನಡುರಸ್ತೆಯಲ್ಲಿ ಸುಡುತ್ತೇವೆ ಎಂಬಿತ್ಯಾದಿ ಮಾತುಗಳು ಕೇಳಿಬಂತು. ನಮ್ಮ ಬಗ್ಗೆ ಮೊಕದ್ದಮೆ ದಾಖಲಿಸಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.
ಎನ್‍ಡಿಎ ಸರ್ಕಾರ ಅಂದರೆ ರಾಷ್ಟ್ರೀಯ ವಿದ್ವಂಸಕರ ಕೂಟ ಎನಿಸಿದೆ ಎಂದ ಅವರು, ಮತಾಂತರ ನಿಷೇಧ ಎಂಬುದೇ ಸಂವಿಧಾನಕ್ಕೆ ವಿರೋಧವಾದದ್ದು ಎಂದರು.
ಸಾಹಿತಿ ಕೆ.ಎಸ್. ಭಗವಾನ್ ಮಾತನಾಡಿ, ಘರ್ ವಾಪಸಿ ಎಂಬುದು ಅರ್ಥಹೀನ ಪದ. ಆ ರೀತಿ ಹಿಂದುಗಳೇನಾದರೂ ಘರ್ ವಾಪಸಿ ಆದರೆ ಶೋಷಿತ ಹಿಂದುಗಳೆಲ್ಲರು ಬುದ್ಧ ದರ್ಮಕ್ಕೆ ಹೋಗಬೇಕಾಗುತ್ತದೆ. ಆಗ ಯಾರೂ ಹಿಂದುಗಳಾಗಿ ಉಳಿಯುವುದಿಲ್ಲ ಎಂದರಲ್ಲದೆ, ಭಗವದ್ಗೀತೆಯಲ್ಲಿ ಶೋಷಿತ ವರ್ಗದ 98 ರಷ್ಟು ಜನರನ್ನು ಪಾಪಿಗಳು ಎಂದು ಹೇಳಲಾಗಿದೆ. ಹಾಗಾದರೆ ದೇಶದಲ್ಲಿರುವ ಶೇ. 98 ರಷ್ಟು ಜನ ಪಾಪಿಗಳಾಗುತ್ತಾರೆ. ಇದು ಭಗವದ್ಗೀತೆಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇದನ್ನು ದೇಶದ ಎಲ್ಲಾ ಮಹಿಳೆಯರು, ಶೋಷಿತರು ವಿರೋಧಿಸಬೇಕಿದೆ. ಆದ್ದರಿಂದ ನಾವೀಗಲೂ ಭಗವದ್ಗೀತೆಗೆ ವಿರೋಧವಾಗಿದ್ದೇವೆ ಎಂದರು.
ಹಿಂದು ವಿರಾಟ್ ಸಮಾವೇಶದಲ್ಲಿ ಗೋಪಾಲ್ ಅವರು ಅಜ್ಞಾನದಿಂದ ಮಾತನಾಡಿದ್ದಾರೆ. ಅವರಿಂದ ನಾವು ಏನೂ ಕಲಿಯಬೇಕಾದ ಅವಶ್ಯಕತೆಯಿಲ್ಲ. ಭಗವದ್ಗೀತೆಯಲ್ಲಿ ಏನು ಲೋಪವಿದೆಯೆಂದು ಅವರಿಗೂ ಚೆನ್ನಾಗಿ ಗೊತ್ತಿದೆ. ಇವರ ಭಗವದ್ಗೀತೆ ಮಾರ್ಗದಲ್ಲಿ ನಡೆದರೆ ದೇಶದಲ್ಲಿ ಅಶಾಂತಿ ತಾಂಡವವಾಡಿ ರಕ್ತಪಾತವಾಗುತ್ತದೆ ಎಂದರಲ್ಲದೆ, ನಾವು ಬೌದ್ಧ ಧರ್ಮದ ಅಹಿಂಸಾ ಮಾರ್ಗದಲ್ಲಿ ಬಂದವರು. ರಕ್ತಪಾತಕ್ಕೆ ಅವಕಾಶ ಕೊಡುವುದಿಲ್ಲ. ಅಂಬೇಡ್ಕರ್ ಏನಾದರೂ ಹಿಂಸಾ ಮಾರ್ಗಕ್ಕೆ ಇಳಿದಿದ್ದರೆ ಅದೇ ರೀತಿ ಶೋಷಿತ ವರ್ಗದವರಿಗೆ ಕರೆ ಕೊಟ್ಟಿದ್ದರೆ ಪ್ರತಿಯೊಂದು ಹಳ್ಳಿಯಲ್ಲೂ ರಕ್ತಕ್ರಾಂತಿ, ಶಿರಚ್ಛೇಧಗಳು ಎಗ್ಗಿಲ್ಲದೆ ನಡೆಯುತ್ತಿದ್ದವು. ಆದರೆ ಈ ಮಾರ್ಗ ನಮಗೆ ಅವಶ್ಯಕತೆಯಿಲ್ಲ. ಸಮಾನತೆ, ಭ್ರಾತೃತ್ವದ ಸಮಾಜ ನಮಗೆ ಬೇಕಾಗಿರುವುದರಿಂದ ಇದನ್ನು ಸಹಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಾಹಿತಿಗಳಾದ ಅರವಿಂದ ಮಾಲಗತ್ತಿ, ಪ್ರೊ.ಮಹೇಶ್‍ಚಂದ್ರುಗುರು, ಪರಿಶಿಷ್ಟ ವರ್ಗಗಳ ನೌಕರರ ಸಂಘದ ಅಧ್ಯಕ್ಷ ಶಾಂತರಾಜು ಉಪಸ್ಥಿತರಿದ್ದರು.
No comments:
Post a Comment