Wednesday 8 October 2014

ಮಂಡ್ಯ, ಅ.8- ಬಗರ್‍ಹುಕುಂ ಸಾಗುವಳಿ ಸಕ್ರಮಕ್ಕೆ ಆಗ್ರಹಿಸಿ ಬೆಂಗಳೂರು ವಿಧಾನಸೌಧದ ಎದುರು ರೈತರು ಮತ್ತು ಕೂಲಿಕಾರರು ಅ.13ರಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸಲಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಂದ ಬಗರ್‍ಹುಕುಂ ಭೂಮಿಯನ್ನು ಕಸಿಯಲು ಸರ್ಕಾರ ಸಿದ್ಧತೆ ನಡೆಸಿದೆ. ಭೂ ಸುಧಾರಣೆ ಕಾನೂನಿನ್ವಯ ಸರ್ಕಾರಿ ಜಮೀನನನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ನಗರ ಮತ್ತು ಪಟ್ಟಣ ಪ್ರದೇಶಗಳ ಹೊರಗಡೆ ಗಡಿಯಿಂದ ಹಲವು ಕಿ.ಮೀ ವ್ಯಾಪ್ತಿಯೊಳಗಿನ ದರಖಾಸ್ತು ಗೋಮಾಳ, ತೋಪು, ಸರ್ಕಾರಿ ಜಮೀನು ಮಂಜೂರು ಮಾಡದಂತೆ ಸರ್ಕಾರ ನಿರ್ಬಂಧ ವಿಧಿಸಿದೆ ಎಂದು ಹೇಳಿದರು.
ಇದರಿಂದ ಅಕ್ರಮ-ಸಕ್ರಮ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಲಕ್ಷಾಂತರ ರೈತರಿಗೆ ಅನ್ಯಾಯವಾಗಿದೆ. ಇದರ ಜೊತೆಗೆ ಮನೆ ನಿರ್ಮಿಸಿಕೊಳ್ಳಲು ಹಲವು ಪ್ರದೇಶಗಳಲ್ಲಿ ಗುಡಿಸಲು ನಿರ್ಮಿಸಿದ್ದಾರೆ. ಇವರನ್ನು ಸಹ ತೆರವುಗೊಳಿಸುವ ಹುನ್ನಾರವನ್ನು ಸರ್ಕಾರ ನಡೆಸಿದೆ. ಭೂ ಸುಧಾರಣೆ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಭೂ ಕಬಳಿಕೆದಾರರು, ವಿದೇಶಿ ಕಂಪನಿಗಳು ಶ್ರೀಮಂತರಿಗೆ ಕೃಷಿ ಭೂಮಿ ಹೊಂದುವ ಪ್ರಯತ್ನ ಮಾಡಲಾಗಿದೆ ಎಂದು ಆರೋಪಿಸಿದರು.
ಬಕರ್‍ಹುಕುಂ ಸಾಗುವಳಿದಾರರಿಗೆ ಸ್ವಾಧೀನ ತೆರವುಗೊಳಿಸಲು ನೋಟಿಸ್ ನೀಡುವ ಕ್ರಮವನ್ನು ನಿಲ್ಲಿಸಬೇಕು. ಬಡವರು ಮನೆ, ನಿವೇಶನ ಹಾಗೂ ಭೂಮಿಯ ಹಕ್ಕಿಗಾಗಿ ಭೂಕಂದಾಯ ಹಾಗೂ ಅರಣ್ಯ ಕಾಯಿದೆಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದರು.
ಅದೇ ರೀತಿ ಕೆಎಂಎಫ್ ಮೇಘಾ ಡೈರಿ ನಿರ್ಮಾಣಕ್ಕಾಗಿ ರೈತರಿಂದ ಪ್ರತಿ ಲೀಟರ್‍ಗೆ 1.50 ರೂ. ವಸೂಲಿ ಮಾಡುತ್ತಿರುವ ಕ್ರಮ ರೈತ ವಿರೋಧಿಯಾಗಿದೆ. ತಕ್ಷಣ ಹಣ ವಸೂಲಿ ಪ್ರಕ್ರಿಯೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.
ಮುಖಂಡರಾದ ಟಿ.ಯಶವಂತ, ಎನ್.ಎಲ್.ಭರತ್‍ರಾಜ್, ಧನಂಜಯ ಗೋಷ್ಠಿಯಲ್ಲಿ ಹಾಜರಿದ್ದರು.

No comments:

Post a Comment