Wednesday 29 October 2014

ಕೃಷ್ಣರಾಜಪೇಟೆ. ಮಹಿಳೆಯರು ಆತ್ಮವಿಶ್ವಾಸದಿಂದ ಮುನ್ನಡೆದು ತಮ್ಮಲ್ಲಿನ ವೃತ್ತಿಕೌಶಲ್ಯವನ್ನು ಸದ್ಭಳಕೆ ಮಾಡಿಕೊಂಡು ಗುಡಿ ಕೈಗಾರಿಕೆಗಳ ಮೂಲಕ ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡಿ ಆರ್ಥಿಕ ಸ್ವಾವಲಂಭನೆಯನ್ನು ಸಾಧಿಸಿ ಪ್ರಗತಿಯ ದಿಕ್ಕಿನತ್ತ ಸಾಗಬೇಕು ಎಂದು ಪುರಸಭೆಯ ಸ್ವರ್ಣಜಯಂತಿ ಶಹರಿ ರೋಜ್‍ಗಾರ್ ಯೋಜನೆಯ ಅಧ್ಯಕ್ಷೆ ಚಂದ್ರಕಲಾ ರಮೇಶ್ ಮನವಿ ಮಾಡಿದರು.
ಅವರು ಪಟ್ಟಣದ ಪುರಸಭೆ ವ್ಯಾಪ್ತಿಯ ಬಸವನಗುಡಿ ಬಡಾವಣೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಹಟ್ಟಿಲಕ್ಕಮ್ಮ ಸ್ತ್ರೀಶಕ್ತಿ ಸ್ವಸಹಾಯ ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಇಂದು ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಸ್ವಾಭಿಮಾನ ಹಾಗೂ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಾ ತಾವೂ ಮುನ್ನಡೆಯುವ ಜೊತೆಗೆ ದೇಶವನ್ನೂ ಅಭಿವೃಧ್ಧಿಯ ಪಥದತ್ತ ಕೊಂಡೊಯ್ಯುತ್ತಿದ್ದಾರೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಹಿರಿಯರ ನಾಣ್ಣುಡಿಯಂತೆ ತಮ್ಮಲ್ಲಿನ ವೃತ್ತಿಕೌಶಲ್ಯವನ್ನು ತಮ್ಮ ಬಡಾವಣೆಯ ಎಲ್ಲಾ ಮಹಿಳೆಯರಿಗೂ ಕಲಿಸಿಕೊಟ್ಟು ಮೇಣದ ಬತ್ತಿ ತಯಾರಿಕೆ, ಊಟದ ತಟ್ಟೆ, ಗಂಧಧ ಕಡ್ಡಿ, ಲೆದರ್ ಬ್ಯಾಗುಗಳ ತಯಾರಿಕೆ ಹಾಗೂ ಟೈಲರಿಂಗ್ ಎಂಬ್ರಾಯಿಡರಿಂಗ್ ವೃತ್ತಿಯನ್ನು ಮಾಡುತ್ತಾ ಆರ್ಥಿಕವಾಗಿ ಸ್ವಾವಲಂಭಿಗಳಾಗಿ ತಮ್ಮ ಸ್ತ್ರೀಶಕ್ತಿ ಗುಂಪನ್ನೂ ಪ್ರಗತಿಯ ದಿಕ್ಕಿನತ್ತಕೊಂಡೊಯ್ದು ಒಂದೇ ವರ್ಷದ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಲಾಭ ಸಂಪಾದಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಣ್ಣು ಮಕ್ಕಳು ಸಮಾಜದಲ್ಲಿ ಟೀಕೆ-ಟಿಪ್ಪಣಿಯ ಮಾತುಗಳಿಗೆ ತಲೆಕೆಡಿಕೊಳ್ಳದೇ ಆತ್ಮವಿಶ್ವಾಸದಿಂದ ಮುನ್ನಡೆದು ಸಾಮಾಜಿಕ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಕಂಕಣತೊಟ್ಟು ಕೆಲಸ ಮಾಡಬೇಕು. ಪರಿಸರ ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯದ ಬಗ್ಗೆ ಜನಜಾಗೃತಿಯನ್ನು ಮೂಡಿಸಿ ಶಿಕ್ಷಣದ ಮಹತ್ವದ ಬಗ್ಗೆ ತಿಳುವಳಿಕೆ ನೀಡಿ ಸಮಾಜದ ಒಂದೇ ಒಂದು ಮಗುವೂ ಕೂಡ ಶಿಕ್ಷಣದ ಹಕ್ಕಿನಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು ಎಂದು ಚಂದ್ರಕಲಾ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಕೆ.ಆರ್.ಹೇಮಂತ್‍ಕುಮಾರ್, ಮಾಜಿಅಧ್ಯಕ್ಷ ಕೆ.ಹೆಚ್.ರಾಮಕೃಷ್ಣ, ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯ ನಗರ ಸಂಚಾಲಕಿ ಕಾಂತಿಕಾಮಣಿ ಸೇವಾ ಪ್ರತಿನಿಧಿ ಭಾರತಿ, ಹಟ್ಟಿಲಕ್ಕಮ್ಮ ಪ್ರಗತಿಬಂಧು ಸ್ತ್ರೀಶಕ್ತಿ ಸಂಘದ ಪ್ರತಿನಿಧಿಗಳಾದ ಸರೋಜಮ್ಮ, ಅನುಜಮ್ಮ, ಶಾಂಭವಿ, ಮಮತ, ಸುಮಲತಾ, ಜಯಮ್ಮ, ಲತಾ, ಸಲ್ಮಾಭಾನು, ರತ್ನಮ್ಮ ಮತ್ತಿತರರು ಭಾಗವಹಿಸಿದ್ದರು.
ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯ ಸೇವಾ ಪ್ರತಿನಿಧಿ ಭಾರತಿ ಸ್ವಾಗತಿಸಿದರು, ಅನುಜಮ್ಮ ವಂದಿಸಿದರು. ಶಾಂಭವಿ ಮತ್ತು ಲತಾ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment