Thursday 16 October 2014

ಮುಖ್ಯ ಮಂತ್ರಿಗಳ ಪ್ರವಾಸ ಕಾರ್ಯಕ್ರಮ ಮಂಡ್ಯ, ಅ.16. ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ಅಕ್ಟೋಬರ್ 18 ರಂದು ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಅವರು ಅಕ್ಟೋಬರ್ 18 ರಂದು ಮಧ್ಯಾಹ್ನ 12 ಗಂಟೆಗೆ ಪಾಂಡವಪುರ ತಾಲ್ಲೂಕಿನ ಬನ್ನಂಗಾಡಿ ಗ್ರಾಮದ ಜೂನಿಯರ್ ಕಾಲೇಜು ಆವರಣದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಇದರ ವ್ಯಾಪ್ತಿಯ ಪಾಂಡವಪುರ ತಾಲ್ಲೂಕಿನ 62 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ಹಾಗೂ ಹೊಸದಾಗಿ ನಿರ್ಮಿಸಿರುವ ಕೊಳವೆ ನೀರು ಸರಬರಾಜು ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 2.00 ಗಂಟೆಗೆ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ನಿಯಮಿತ ವತಿಯಿಂದ ಕಾರ್ಖಾನೆ ಅಭಿವೃದ್ಧಿ ಹಾಗೂ ಯೋಜನೆಗಳ ಅನುಷ್ಠಾನ ಸಂಬಂಧ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮುಖ್ಯ ಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫಲಪುಷ್ಪ ಪ್ರದರ್ಶನ ಪ್ರಯುಕ್ತ ವಿವಿಧ ಸ್ಪರ್ಧೆಗಳು : ಹೆಸರು ನೋಂದಣಿಗೆ ಸೂಚನೆ ತೋಟಗಾರಿಕೆ ಇಲಾಖೆ ವತಿಯಿಂದ 2014-15ನೇ ಸಾಲಿನಲ್ಲಿ ಡಿಸೆಂಬರ್ 23 ರಿಂದ 29 ರವರೆಗೆ ಜಿಲ್ಲೆಯ ತೋಟಗಾರಿಕೆ ಕಚೇರಿಯ ಆವರಣದಲ್ಲಿ ಫಲಪುಷ್ಪ ಪ್ರದರ್ಶನದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಖಾಸಗಿ ಮತ್ತು ವಿವಿಧ ಸಂಘ ಸಂಸ್ಥೆ/ಮನೆ/ಶಾಲೆಗಳ ಗಾರ್ಡನ್ ನಿರ್ವಹಣೆಗೆ ಸಂಬಂಧಿಸಿದಂತೆ ಭಾಗವಹಿಸಲಿಚ್ಛಿಸುವರು ಹಾಗೂ ತಮ್ಮ ಮನೆಯ ಕುಂಡಗಳಲ್ಲಿ ಬೆಳೆಸಿದ ವಿವಿಧ ಹೂವಿನ ಕುಂಡಗಳನ್ನು ಉಚಿತವಾಗಿ ಇಲಾಖೆಯ ಆವರಣದಲ್ಲಿ ಪ್ರದರ್ಶಿಸಲು ಇಚ್ಛಿಸುವವರು ಡಿಸೆಂಬರ್ 10 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ. ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತೋಟಗಾರಿಕಾ ಇಲಾಖೆಯಲ್ಲಿ ನೊಂದಣಿ ಮಾಡಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಪದನಿಮಿತ್ತ ಕಾರ್ಯದರ್ಶಿ, ಜಿಲ್ಲಾ ತೋಟಗಾರಿಕೆ ಸಂಘ (ರಿ) ಮಂಡ್ಯ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08232-220115 ನ್ನು ಸಂಪರ್ಕಿಸಬಹುದಾಗಿದೆ. ಕರ್ನಾಟಕ ಸ್ವಯಂ ಉದ್ಯೋಗ ಕಾರ್ಯಕ್ರಮ :ಗ್ರಾಮೀಣ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 2014-15ನೇ "ಕರ್ನಾಟಕ ಸ್ವಯಂ ಉದ್ಯೋಗ ಕಾರ್ಯಕ್ರಮ" ಎಂಬ ಹೊಸ ಯೋಜನೆಯು ಜಾರಿಗೆ ಬಂದಿದ್ದು, ಗ್ರಾಮೀಣ ಪ್ರದೇಶದಲ್ಲಿ ಸೂಕ್ಷ್ಮ ಕೈಗಾರಿಕಾ/ಸೇವಾ ಘಟಕಗಳು ಸ್ಥಾಪನೆಯಾಗಬೇಕೆಂಬುದು ಈ ಯೋಜನೆಯ ಸದುದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕನಿಷ್ಠ 21 ವರ್ಷದೊಳಗಿದ್ದು, ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ, ವಿಶೇಷ ವರ್ಗದವರಾದ ಮಹಿಳೆ/ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗ/ಅಲ್ಪ ಸಂಖ್ಯಾತರು/ಮಾಜಿ ಯೋಧರು/ಅಂಗವಿಕಲರಿಗೆ ಗರಿಷ್ಠ 45 ವರ್ಷ ವಯೋಮಿತಿ ಹೊಂದಿರಬೇಕು. ಯೋಜನೆಯ ವೆಚ್ಚ ಗರಿಷ್ಠ 10.00 ಲಕ್ಷವಾಗಿದ್ದು, ಸಾಮಾನ್ಯ ವರ್ಗದವರು ಶೇ.10ರಷ್ಟು ಸ್ವಂತ ಬಂಡವಾಳ ಹಾಗೂ ವಿಶೇಷ ವರ್ಗದವರು ಶೇ.5ರಷ್ಟು ಸ್ವಂತ ಬಂಡವಾಳ ಭರಿಸಬೇಕು. ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಗುರುತಿಸಿದ ಶಿಕ್ಷಣ ಸಂಸ್ಥೆಗಳಿಂದ ವೃತ್ತಿಪರ ತರಬೇತಿ, ಐ.ಟಿ.ಐ., ಡಿಪ್ಲೋಮಾ, ಪದವಿ ಹೊಂದಿರಬೇಕು. ಸಾಮಾನ್ಯ ವರ್ಗದವರಿಗೆ ಯೋಜನಾ ವೆಚ್ಚದ ಗರಿಷ್ಠ ಶೇ.25 ರಷ್ಟು ಹಾಗೂ ಗರಿಷ್ಠ 2.50 ಲಕ್ಷ ಸಹಾಯಧನ ದೊರೆಯುವುದು. ವಿಶೇಷ ವರ್ಗದವರಿಗೆ ಯೋಜನೆಯ ವೆಚ್ಚದ ಗರಿಷ್ಟ ಶೇ.35ರಷ್ಟು ಹಾಗೂ ಗರಿಷ್ಟ 3.50 ಲಕ್ಷದವರೆಗೆ ಸಹಾಯಧನ ಲಭ್ಯವಿದೆ. ಈ ಯೋಜನೆಯು ಹೊಸ ಘಟಕಗಳಿಗೆ ಮಾತ್ರ ಅನ್ವಯಿಸುತ್ತದೆ. ವಿಸ್ತರಣೆ/ಆಧುನೀಕರಣ/ವೈವಿದ್ಧೀಕರಣ ಘಟಕಗಳಿಗೆ ಈ ಯೋಜನೆಯ ಸೌಲಭ್ಯ ಅನ್ವಯಿಸುವುದಿಲ್ಲ. ಈ ಯೋಜನೆಗೆ ಆದಾಯದ ಮಿತಿ ಇರುವುದಿಲ್ಲ. ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ಆಯಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳು ಹಾಗೂ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಡ್ಯ ಇವರುಗಳನ್ನು ಸಂಪರ್ಕಿಸಬಹುದು. ಅರ್ಜಿ ಪಡೆಯಲು ಮತ್ತು ಭರ್ತಿ ಮಾಡಿದ ಅರ್ಜಿಯನ್ನು ಜಾತಿ ಪ್ರಮಾಣ ಪತ್ರ, ಗುರುತಿನ ಚೀಟಿ, ಪಡಿತರ ಚೀಟಿ, ಫೋಟೋ ಹಾಗೂ ಇನ್ನಿತರ ಅಗತ್ಯ ದಾಖಲೆಗಳೊಂದಿಗೆ ಅಕ್ಟೋಬರ್ 30 ರೊಳಗೆ ಆಯಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳು ಅಥವಾ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕಾರ್ಮೆಲ್ ಕಾನ್ವೆಂಟ್ ಎದುರು, ಸುಭಾಷ್‍ನಗರ, ಮಂಡ್ಯ ಇವರ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಂದಾಯ ಅದಾಲತ್ ಕಾರ್ಯಕ್ರಮ ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿ, ನಂದಿಹಳ್ಳಿ ಗ್ರಾಮದಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಮಂಡ್ಯ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, 80 ಅರ್ಜಿಗಳನ್ನು ಇತ್ಯರ್ಥಪಡಿಸಿ ಆದೇಶ ನೀಡಲಾಗಿರುತ್ತದೆ. ಸರ್ಕಾರದ ಆದೇಶದಂತೆ ಪ್ರತಿ ವಾರವು ಒಂದು ಗ್ರಾಮದಲ್ಲಿ ಕಂದಾಯ ಅದಾಲತ್ ನಡೆಸಲಾಗುತ್ತದೆ ಹಾಗೂ ಸಾರ್ವಜನಿಕರು ಆರ್.ಟಿ.ಸಿ ತಿದ್ದುಪಡಿ ಪೌತಿ ಖಾತೆಗಳನ್ನು ಮಾಡಿಸಿಕೊಳ್ಳಬಹುದಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. ವಿಶ್ವಕರ್ಮ ಸಮುದಾಯಗಳ ಜನರಿಂದ ಅರ್ಜಿ ಆಹ್ವಾನ 2014-15ನೇ ಸಾಲಿನಲ್ಲಿ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮವು ಅನುಷ್ಟಾನಗೊಳಿಸುತ್ತಿರುವ ವಿಶ್ವಕರ್ಮ ಸಮುದಾಯಗಳ ವಿವಿಧ ಯೋಜನೆಗಳಾದ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ, ಅರಿವು-ಶೈಕ್ಷಣಿಕ ನೇರಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ (ವೈಯಕ್ತಿಕ ಕೊಳವೆ ಬಾವಿ ಯೋಜನೆ) ಗಳಲ್ಲಿ ಸಾಲ ಸೌಲಭ್ಯ ಪಡೆಯಲು ಇಚ್ಛಿಸುವ ವಿಶ್ವಕರ್ಮ ಸಮುದಾಯಗಳ ಜನರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಬಿಳಿ ಹಾಳೆಯಲ್ಲಿ ಮಾಹಿತಿಯನ್ನು ಬರೆದು ಅಥವಾ ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾ ಕಚೇರಿಗಳಿಂದ ಉಚಿತವಾಗಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ನವೆಂಬರ್ 5 ರೊಳಗಾಗಿ ಜಿಲ್ಲಾ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮಂಡ್ಯ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿ., ಜಿಲ್ಲಾ ಪಂಚಾಯತ್ ಕಚೇರಿ ಪಕ್ಕ, ಜಿಲ್ಲಾ ತರಬೇತಿ ಸಂಸ್ಥೆ ಎದುರು, ಮಂಡ್ಯ (ದೂರವಾಣಿ ಸಂಖ್ಯೆ 08232-231804) ನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ. ಉದ್ಯೋಗ ಮೇಳ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಯ ವತಿಯಿಂದÀ ಅಕ್ಟೋಬರ್ 18 ರಂದು ಬೆಳಿಗ್ಗೆ 10.30ಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಪ್ರಾದೇಶಿಕ ಸಾರಿಗೆ ಕಛೇರಿ ಎದುರು, ಮಂಡ್ಯ ಇಲ್ಲಿ ಉದ್ಯೋಗ ಮೇಳ ಆಯೋಜಿಸಿರುತ್ತಾರೆ. ಐ.ಟಿ.ಎಮ್ ಸ್ಕಿಲ್ಸ್ ಅಕಾಡೆಮಿ, ಬೆಂಗಳೂರು ಇವರು ಯಾವುದೇ ಪದವಿ, ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ 18 ರಿಂದ 30 ವರ್ಷ ವಯೋಮಿತಿಯೊಳಗಿನ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಬಿಸಿನೆಸ್ ಡೆವಲಪ್‍ಮೆಂಟ್ ಎಕ್ಸಿಕ್ಯೂಟಿವ್ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಫ್ರೆಶ್‍ವಲ್ರ್ಡ್, ಬೆಂಗಳೂರು ಇವರು 18 ರಿಂದ 28 ವರ್ಷ ವಯೋಮಿತಿಯೊಳಗಿನ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ವಿದ್ಯಾರ್ಹತೆ ಹೊಂದಿರುವ ಪುರುಷ ಅಭ್ಯರ್ಥಿಗಳನ್ನು ಸೇಲ್ಸ್ ಪ್ರೊಮೋಟರ್ಸ್ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಿದ್ದಾರೆ. ಆಸಕ್ತರು ತಮ್ಮ ವಿದ್ಯಾರ್ಹತೆಯ ಮೂಲ ದಾಖಲಾತಿಗಳೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 08232-220126/239400 ನ್ನು ಸಂಪರ್ಕಿಸುವುದು.

No comments:

Post a Comment