Saturday 11 October 2014

ಮಂಡ್ಯ: ಪ್ರೀತಿ, ಸೇವೆ, ತ್ಯಾಗ ಮನೋಭಾವದಿಂದ ಪ್ರಾಮಾಣಿಕ ಬದುಕನ್ನು ರೂಪಿಸಿಕೊಂಡಾಗ ದೇವರ ಮೆಚ್ಚುಗೆಗೆ ಪಾತ್ರರಾಗಬಹುದು ಎಂದು ಮೈಸೂರು ಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಅಂತೋನಿ ಥಾಮಸ್ ವಾಳಪಳ್ಳಿ ಹೇಳಿದರು.
ನಗರ ಸಂತ ಜೋಸೆಫರ ದೇವಾಲಯದಲ್ಲಿ ಆಯೋಜಿಸಿರುವ ಮೂರು ದಿನಗಳ 'ತೇಜಸ್ಸು-2014' ನವೀಕರಣ ಸುವಾರ್ತಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.
ಆಧುನಿಕ ಪ್ರಪಂಚದಲ್ಲಿ ಜೀವನ ಪರಿವರ್ತನೆಯೊಂದಿಗೆ ಪಾವಿತ್ರ್ಯತೆಯ ಬದುಕನ್ನು ಕಟ್ಟಿಕೊಂಡಾಗ ಕುಟುಂಬ ಹಾಗೂ ಸಮಾಜದಲ್ಲಿ ನೆಮ್ಮದಿ, ಶಾಂತಿ, ಸಮಾಧಾನ ಹೊಂದಬಹುದು. ಉಪ್ಪಿನಂತೆ ರುಚಿ ನೀಡಿ, ಬೆಳಕಿನಂತೆ ಪ್ರಕಾಶಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕ್ರೈಸ್ತ ಎಂದರೆ ದೇವರು ನೀಡಿರುವ ಆಜ್ಞೆಗಳನ್ನು ಸದಾ ಪಾಲಿಸುವುದು. ಇದನ್ನು ನಿರಂತರವಾಗಿ ಪಾಲಿಸಿ ನಡೆಯಬೇಕು. ನ್ಯಾಯ- ನೀತಿ, ಸತ್ಯ- ಧರ್ಮದ ಮಾರ್ಗದಲ್ಲಿ ನಡೆದು ಜೀವನದಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು.
ತಲಚೇರಿ ಮಹಾ ಧರ್ಮಾಧ್ಯಕ್ಷರಾದ ಜಾರ್ಜ್ ಜ್ಞರಳಕಟ್ ಮಾತನಾಡಿ, ಸತ್ಯ, ಧರ್ಮ, ನ್ಯಾಯ ನೀತಿಯ ಹಾದಿಯಲ್ಲಿ ನಿರಂತರವಾಗಿ ನಡೆಯಬೇಕಾದರೆ ಪ್ರಾರ್ಥನೆ ಬಹುಮುಖ್ಯ ಶಕ್ತಿಯಾಗಿದೆ. ಆಧ್ಯಾತ್ಮಿಕ ನವೀಕರಣವನ್ನು 1967ರಲ್ಲಿ ಅಮೇರಿಕಾ ದೇಶದಲ್ಲಿ ಪ್ರಾರಂಭಿಸಲಾಯಿತು. ಇಂದು 16 ಕೋಟಿ ಜನತೆ ವಿಶ್ವದಾದ್ಯಂತ ಪ್ರಾರ್ಥನೆಯ ವಿಶ್ವಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬೈಬಲ್ ಆಧಾರದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ವಿವರಿಸಿದರು.
ಯೇಸು ಕ್ರಿಸ್ತರ ತ್ಯಾಗ, ಸೇವೆ, ಪ್ರೀತಿಯನ್ನು ಪರಸ್ಪರ ಹಂಚಿ ದೇವರ ಪ್ರೀತಿಯಲ್ಲಿ ಜೀವಿಸಬೇಕು. ಪೋಪ್ ಫ್ರಾನ್ಸಿಸ್ ಅವರು ಹೇಳಿರುವ ಪ್ರಕಾರ ಈ ಪ್ರಾರ್ಥನಾ ನವೀಕರಣವು ದೇವರು ಕೊಟ್ಟ ಕೊಡುಗೆ ಎಂದು ಹೇಳಿದ್ದಾರೆ. ಆದ್ದರಿಂದ ದೇವರು ಮೆಚ್ಚುವ ರೀತಿಯಲ್ಲಿ, ಜ್ಞಾನದಲ್ಲಿ ಜೀವಿಸಬೇಕಾದರೆ ವೈಯಕ್ತಿಕ ಪರಿವರ್ತನೆ ಹೊಂದಿ, ಪವಿತ್ರಾತ್ಮರ ಪ್ರೇರಣೆಯಲ್ಲಿ ಬಾಳಬೇಕು ಎಂದು ತಿಳಿಸಿದರು.
ಧರ್ಮ ಗುರುಗಳಾದ ಫಾದರ್ ಎನ್.ಟಿ.ಜೋಸೆಫ್ ಪ್ರಾಸ್ತಾವಿಕ ಭಾಷಣ ಮಾಡಿದರು. ಫಾದರ್ ಕೊಲಾಸೋ ತಮ್ಮ 25 ವರ್ಷದ ನವೀಕರಣದ ಜೀವನದ ಅನುಭವಗಳನ್ನು ಹಂಚಿಕೊಂಡರು. ಫಾದರ್ ಅರುಳ್‍ರಾಜ್, ಫಾದರ್ ರೋಮನ್ ಪಿಂಟೋ, ಫಾದರ್ ಡೇವಿಡ್ ಸಗಾಯ್‍ರಾಜ್, ಫಾದರ್ ಪ್ರಶಾಂತ್‍ಕುಮಾರ್, ಫಾದರ್ ಫ್ರಾಂಕ್ಲಿನ್ ಡಿಸೋಜಾ, ಫಾದರ್ ಮೈಕಲ್, ಡಾ.ದಯಾನಂದ ಪ್ರಭು, ಬ್ರದರ್ ಟಿ.ಕೆ.ಜಾರ್ಜ್, ಕೆ.ಜೆ.ಜಾರ್ಜ್, ಜಾಯ್ ಅಂತೋನಿ, ಜಪ್‍ಮಲೈಮುತ್ತು, ಮೈಕಲ್ ನೊರೊನ ಇತರರು ಭಾಗವಹಿಸಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ಸಾವಿರಾರು ಮಂದಿ ಭಾಗವಹಿಸಿದ್ದು, ಮೂರು ದಿನಗಳ ಸಮಾವೇಶದಲ್ಲಿ ವಿಶ್ವ ಶಾಂತಿಗಾಗಿ ಪ್ರಾರ್ಥನೆ, ರೋಗ ಸೌಖ್ಯಕ್ಕಾಗಿ ವಿಶೇಷ ಪ್ರಾರ್ಥನೆಗಳು ಜರುಗಲಿವೆ. ಸಮಾವೇಶಕ್ಕೆ ಆಗಮಿಸಿರುವ ಸಮುದಾಯವರಿಗೆ ಊಟ, ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.


No comments:

Post a Comment