Thursday 9 October 2014

ರಾಜ್ಯದಲ್ಲಿ ಪ್ರಪ್ರಥಮ ಸಂಚಾರಿ ಎ.ಸಿ.ಕೋರ್ಟ್ ಕೆ.ಆರ್.ಪೇಟೆಯಲ್ಲಿ ಆರಂಭ
ವಿಶೇಷ ವರದಿ: ಆರ್.ಶ್ರೀನಿವಾಸ್
ಕೆ.ಆರ್.ಪೇಟೆ,ಅ.09- ರಾಜ್ಯದಲ್ಲಿಯೇ ಪ್ರಪ್ರಥಮ ಎನ್ನಬಹುದಾದ ಸಂಚಾರಿ ಎ.ಸಿ.ಕೋರ್ಟ್ ಅನ್ನು(ಉಪವಿಭಾಗಾಧಿಕಾರಿಗಳ ನ್ಯಾಯಾಲಯ) ಪಟ್ಟಣದ ಮಿನಿ ವಿಧಾನಸೌಧದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜು ಅವರು ಆರಂಭಿಸಿ ಕಲಾಪ ನಡೆಸುವ ಮೂಲಕ ಸುಮಾರು 200ಕ್ಕೂ ಅಧಿಕ ರೈತರ ವಿವಿಧ ಜಮೀನು ಸಂಬಂಧಿತ ಮೊಕದ್ದಮೆಗಳನ್ನು ಇತ್ಯರ್ಥ ಪಡಿಸಿದರು.
ರೈತರು ದೂರದ(40ಕಿಮೀ ದೂರ) ಪಾಂಡವಪುರ ಪಟ್ಟಣದ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಹೋಗಬೇಕಾಗಿತ್ತು. ಆದರೆ ವಾರಕ್ಕೊಮ್ಮೆ  ಸಂಚಾರಿ ಪೀಠವನ್ನು ನಡೆಸಲು ತೀರ್ಮಾನಿಸಿರುವುದು ರೈತರ ಮೊಗದಲ್ಲಿ ಹರ್ಷವನ್ನುಂಟು ಮಾಡಿದೆ.
ಪಹಣಿ ತಿದ್ದುಪಡಿ, ಖಾತೆ ಮತ್ತಿತರ ಕೆಲವು ಭೂ ವಿವಾದದ ಪ್ರಕರಣಗಳು ಕಂದಾಯ ಇಲಾಖೆಯ ನೌಕರರ ಕಣ್ಣು ತಪ್ಪಿನಿಂದಲೂ, ರೈತರ ನಿರ್ಲಕ್ಷದಿಂದಲೂ ಅಥವಾ ಸಣ್ಣಪುಟ್ಟ ತಕರಾರುಗಳಿಂದಲೂ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದ ಕಟಕಟೆಗೆ ಬೀಳುತ್ತವೆ. ಇಂತಹ ಕಡತಗಳು ಸಕಾಲಕ್ಕೆ ವಿಲೇ ಆಗದೆ ರೈತರು ವರ್ಷಾನುಗಟ್ಟಲೆ ಪಾಂಡವಪುರದ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಸಾವಿರಾರು ರೈತರು ಅಲೆಯಬೇಕಾಗಿತ್ತು. ಇದರಿಂದ ರೈತರ ಅಮೂಲ್ಯ ಸಮಯ ಮತ್ತು ಹಣ ವ್ಯಯಗೊಳ್ಳುತ್ತಿತ್ತು. ಆದರೂ ವಿವಾದಗಳು ಸಕಾಲಕ್ಕೆ ಬಗೆಹರಿಯುತ್ತಿರಲಿಲ್ಲ. ಇದನ್ನು ಮನಗಂಡ ಪಾಂಡವಪುರ ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್. ನಾಗರಾಜು ಅಧಿಕಾರ ವಹಿಸುಕೊಂಡು ಕೇವಲ 1ತಿಂಗಳು ಕಳೆಯುವ ಮುನ್ನವೇ ಯಾವುದೇ ಪ್ರಚಾರದ ಅಬ್ಬರವಿಲ್ಲದೆ ಮೌನ ಕ್ರಾಂತಿಯ ಮೂಲಕ ಸದ್ದಿಲ್ಲದೆ ಪಟ್ಟಣದ ಮಿನಿ ವಿಧಾನ ಸೌಧದ ಆವರಣದಲ್ಲಿ ಭೂ ನ್ಯಾಯ ಪರಿಹಾರದ ಕಡತ ವಿಲೇವಾರಿಯನ್ನು ಆರಂಭಿಸಿದ್ದಾರೆ.  ತಾಲೂಕಿನ ವಿವಿಧ ಹೋಬಳಿಗಳ 220 ಕಡತಗಳಗಳನ್ನು ವಾದಿ ಪ್ರತಿವಾದಿಗಳ ಸಮ್ಮುಖದಲ್ಲಿ ವಿಲೇ ಮಾಡಿದರಲ್ಲದೆ ಬಗೆಹರಿದ ಕಡತಗಳ ಭೂ ದಾಖಲೆಗಳನ್ನು ಸ್ಥಳದಲ್ಲಿಯೇ ತಿದ್ದುಪಡಿ ಮಾಡುವ ಕಾರ್ಯಕ್ಕೆ ಚಾಲನೆ ಕೊಟ್ಟರು.
ಈ ಸಂದರ್ಭದಲ್ಲಿ ತಮ್ಮ ಹೊಸ ಚಿಂತನೆಯ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಅವರು ಈ ಹಿಂದೆ ನಾನು ಕೆ.ಆರ್.ಪೇಟೆಯಲ್ಲಿ ತಹಸೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಕಾರಣಾಂತರಗಳಿಂದ ಎಸಿ ಕೋರ್ಟಿಗೆ ವರ್ಗಾಹಿಸಲ್ಪಟ್ಟಿದ್ದ ಎಷ್ಟೂ ಕಡತಗಳು ಇಂದಿಗೂ ವಿಲೇ ಆಗದೆ ಉಪ ವಿಭಾಗಾಧಿಕಾರಿಗಳ ನ್ಯಾಯಾಲದಲ್ಲಿಯೇ ತೀರ್ಮಾನಕ್ಕಾಗಿ ಕಾದು ಕುಳಿತಿವೆ.  ರೈತರಿಗೆ ತ್ವರಿತ ನ್ಯಾಯ ನೀಡಬೇಕು. ರೈತಾಪಿ ವರ್ಗ ಅನಗತ್ಯವಾಗಿ ಪದೇ ಪದೇ ಪಾಂಡವಪುರದ ಎಸಿ ನ್ಯಾಯಾಲಯಕ್ಕೆ ಬರುವುದನ್ನು ತಪ್ಪಿಸುವ ದೃಷ್ಠಿಯಿಂದ ಎಸಿ ನ್ಯಾಯಾಲಯವನ್ನು ಆಯಾ ತಾಲೂಕು ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಅಲ್ಲಿನ ಜನರ ಸಮ್ಮುಖದಲ್ಲಿಯೇ ವಿವಾದ ಬಗೆ ಹರಿಸಲು ನಿರ್ಧರಿಸಿದ್ದೇನೆ. ಈ ಸಂಚಾರಿ ನ್ಯಾಯಾಲಯವು ಪಾಂಡವಪುರ ಉಪವಿಭಾಗದ ವ್ಯಾಪ್ತಿಯ ತಾಲೂಕುಗಳಾದ ಕೆ.ಆರ್.ಪೇಟೆ, ನಾಗಮಂಗಲ, ಶ್ರೀರಂಗಪಟ್ಟಣ ತಾಲೂಕುಗಳಲ್ಲಿಯೂ ಪ್ರತಿ ವಾರಕ್ಕೊಮ್ಮೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಒಟ್ಟಾರೆ ಕೆ.ಆರ್.ಪೇಟೆಯಲ್ಲಿ ತಹಸೀಲ್ದಾರ್ ಆಗಿದ್ದ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ರಾಜ್ಯ ಸರ್ಕಾರದ ಉತ್ತಮ ಸೇವಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಡಾ.ಹೆಚ್.ಎಲ್.ನಾಗರಾಜು ಅವರು ಕಂದಾಯ ಇಲಾಖೆಯಲ್ಲಿ ಏನಾದರೂ ಬದಲಾವಣೆಯನ್ನು ತಂದು ರೈತರ ಅಭಿವೃದ್ಧಿಗೆ ಸದಾ ದುಡಿಯುತ್ತಿದ್ದಾರೆ ಇವರ ಸಂಚಾರಿ ಎ.ಸಿ.ನ್ಯಾಯಾಲಯ ಆರಂಭದ ಹೊಸ ಚಿಂತನೆಯು ಬಹುಷಃ ರಾಜ್ಯದಲ್ಲಿಯೇ ಅಥವಾ ದೇಶದಲ್ಲಿಯೇ ಪ್ರಥಮ ಎಂದೂ ಸಹ ಹೇಳಲಾಗುತ್ತಿದೆ. ಇದು ಯಶಸ್ವಿಯಾಗಿ ರಾಜ್ಯಾದ್ಯಂತ ವಿಸ್ತರಣೆಯಾಗಿ ರೈತರಿಗೆ ಅನುಕೂಲವಾಗಲಿ ಎಂಬುದೇ ಅಶಯವಾಗಿದೆ.

No comments:

Post a Comment