Thursday 16 October 2014

ಮಂಡ್ಯ, ಅಕ್ಟೋಬರ್ 16.ಜಿಲ್ಲಾಡಳಿತದ ವತಿಯಿಂದ ಬಹಳ ಸಂಭ್ರಮ ಸಡಗರದಿಂದ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಬಿ.ಆರ್.ಪೂರ್ಣಿಮಾ ಅವರು ತಿಳಿಸಿದರು. ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಲು ಮೆರವಣಿಗೆ ಸಮಿತಿ, ಸಾಂಸ್ಕøತಿಕ ಸಮಿತಿ, ವೇದಿಕೆ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿದ ಅವರು, ಸಮಿತಿಗಳು ಪ್ರತ್ಯೇಕವಾಗಿ ಸಭೆ ನಡೆಸಿ, ತಮ್ಮ ಜವಾಬ್ದಾರಿಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು ಎಂದು ಹೇಳಿದರು. ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದ ವರೆಗೆ ಮೆರವಣಿಗೆ ಆಯೋಜಿಸಲಾಗುವುದು. ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳು, ಸಂಸ್ಥೆಗಳು ಸ್ತಬ್ದಚಿತ್ರ ಪ್ರದರ್ಶಿಸಬೇಕು. ಮಂಡ್ಯ ಜಿಲ್ಲೆ ಸ್ಥಾಪನೆಯಾಗಿ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಿಲ್ಲೆಯ ಹಿರಿಮೆ-ಗರಿಮೆಯನ್ನು ಬಿಂಬಿಸುವ ಸ್ತಬ್ದಚಿತ್ರ ಪ್ರದರ್ಶನ ಸೂಕ್ತ ಎಂದು ಅಭಿಪ್ರಾಯಪಟ್ಟರು. ಮೆರವಣಿಗೆಯು ಬೆಳಗ್ಗೆ 7 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾಗಲಿದೆ. ವಿವಿಧ ಕಲಾ ತಂಡಗಳು, ವಿದ್ಯಾರ್ಥಿಗಳು, ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸುವರು. ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಅಂದು ರಜೆ ಮೇಲೆ ತೆರಳದೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಆಯೋಜಿಸಿದ್ದು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸುವರು. ಕಾರ್ಯಕ್ರಮದಲ್ಲಿ ಯಾವುದೇ ಲೋಪ ಆಗದಂತೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಹೇಳಿದರು. ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ತರಗತಿಯಲ್ಲಿ 2014ರ ಸಾಲಿನಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಂದು ಗೌರವಿಸಲಾಗುವುದು. ಸಂಜೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಅರುಳ್ ಕುಮಾರ್, ಜಿಲ್ಲಾಧಿಕಾರಿಗಳ ಕಚೇರಿ ತಹಶೀಲ್ದಾರ್ ರೇಣುಕುಮಾರ್, ನೆಹರು ಯುವ ಕೇಂದ್ರದ ಜಿಲ್ಲಾ ಸಂಯೋಜಕರಾದ ಎಸ್.ಸಿದ್ದರಾಮಪ್ಪ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ. ಎಚ್.ಪಿ. ಮಂಜುಳ ಮತ್ತಿತರರು ಉಪಸ್ಥಿತರಿದ್ದರು. ******

No comments:

Post a Comment