Wednesday 8 October 2014

ಕೆ.ಆರ್.ಪೇಟೆ(ಮಂಡ್ಯ),ಅ.08- ಆಧುನಿಕ ಭಾರತದಲ್ಲಿ ಜಾತಿಯಾದಾರಿತ ವ್ಯಕ್ತಿ ಪೂಜೆಗೆ ಹೆಚ್ಚು ಆಧ್ಯತೆ ನೀಡಲಾಗುತ್ತಿದೆ. ಪರಿಣಾಮ ವಾಲ್ಮೀಕಿ, ಬುದ್ದ, ಬಸವ, ಅಂಬೇಡ್ಕರ್, ಕುವೆಂಪು, ಕನಕದಾಸ  ಅವರಂತಹ ಮಾನವತಾ ವಾದಿಗಳು ಜಾತಿ ವಾದಿಗಳ ತೆಕ್ಕೆಗೆ ಸಿಲುಕಿ ನರಳುತ್ತಿದ್ದಾರೆ. ಆದ್ದರಿಂದ ಭಾರತೀಯ ಸಂಸ್ಕøತಿಯ ಅಭಿವೃದ್ಧಿಯ ಮಹಾನ್ ಚೇತನಗಳಾದ ಇವರನ್ನು ಜಾತಿಯ ಬಂಧನದಿಂದ ಬಿಡುಗಡೆ ಮಾಡಿಸದಿದ್ದರೆ ದೇಶಕ್ಕೆ ಉಜ್ವಲ ಭವಿಷ್ಯವಿಲ್ಲ ಎಂದು  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಮಂಡ್ಯದ ಪಿಇಎಸ್ ಕಾಲೇಜಿನ ಪ್ರಾಧ್ಯಾಪಕ ಡಾ.ಹೆಚ್.ಎಸ್.ಮುದ್ದೇಗೌಡ ಹೇಳಿದರು.
ಅವರು ತಾಲೂಕು ಆಡಳಿತವು ಪಟ್ಟಣ ಮಾಧ್ಯಮಿಕ ಶಾಲಾ ಆವರಣದ ಕುವೆಂಪು ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡುತ್ತಾ ವಿಶ್ವಕಂಡ ಶ್ರೇಷ್ಠ ಸಂತರಲ್ಲಿ ವಾಲ್ಮೀಕಿಯು ಸಹ ಒಬ್ಬರು ಇವರು ಶೂದ್ರ ಸಮುದಾಯವಾದ ಬೇಡರ ಜಾತಿಗೆ ಸೇರಿದ ಸರ್ವ ಶ್ರೇಷ್ಠ ದಾರ್ಶನಿಕ ಎಂದು ಅಭಿಪ್ರಾಯಪಟ್ಟರು.
ಶೂದ್ರರಿಗೂ ಕೂಡಾ ಆಲೋಚನಾ ಶಕ್ತಿಯಿದೆ ಎಂದು ತ್ರೇತಾಯುಗದಲ್ಲಿಯೇ ತೋರಿಸಿಕೊಟ್ಟ ರಾಮಾಯಣದ ಮೂಲ ಕರ್ತೃವಾದ ವಾಲ್ಮೀಕಿ ಅವರು ಸೂರ್ಯ ಚಂದ್ರರು ಇರುವವರವಿಗೂ ಜೀವಂತವಾಗಿ  ಬದುಕಿರುತ್ತಾರೆ. ಇಡೀ ಪ್ರಪಂಚದ ಎಲ್ಲಾ ಭಾಷೆಗಳಲ್ಲಿಯೂ ಕೂಡಾ ಪೂಜಿಸುವ ಗೌರವಿಸುವ ಗ್ರಂಥಗಳಲ್ಲಿ ಅಗ್ರಸ್ಥಾನದಲ್ಲಿ ಇರುವ ರಾಮಾಯಣ ಮತ್ತು ಮಹಾಭಾರತ ಬರೆದ ಕರ್ತೃಗಳನ್ನು ಗೌರವಿಸುವ ಕೆಲಸವನ್ನು ಎಂದೋ ಮಾಡಬೇಕಿತ್ತು. ಆದರೆ ನಿಧಾನವಾಗಿಯಾದರೂ ಆಗಿದೆ. ಆದ್ದರಿಂದ ದಯಮಾಡಿ ಇವರನ್ನು ಕೇವಲ ಒಂದು ಜಾತಿಯ ಸಂಕೋಲೆಯಲ್ಲಿ ಬಂಧಿಸಬೇಡಿ ಎಂದು ಮುದ್ದೇಗೌಡ ಕಿವಿಮಾತು ಹೇಳಿದರು.
ವಾಲ್ಮೀಕಿ ಬ್ರಾಹ್ಮಣ ಎಂದು ಹೇಳಿಕೊಂಡು ಸಮಾಜದ ಶಾಂತಿಗೆ ಭಂಗತರುತ್ತಿರುವ ಕೆಲವು ಕಿಡಿಗೇಡಿಗಳು ಬ್ರಾಹ್ಮೇತರರಿಗೆ ಕಾವ್ಯ ಬರೆಯುವ ತಾಕತ್ತಿಲ್ಲ ಎಂದು ಮೂಲ ವಾಲ್ಮೀಕಿ ರಾಮಾಯಣ ಕೃತಿಯನ್ನು ಆಧಾರವಾಗಿಟ್ಟುಕೊಂಡು ಬ್ರಾಹ್ಮಣರನ್ನು ವೈಭವೀಕರಿಸಿ ಸಂಶೋಧನಾ ಗ್ರಂಥಗಳನ್ನು ರಚಿಸುವ ಮೂಲಕ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ  ಇದಕ್ಕೆ ನಮ್ಮ ಪೂರ್ಣ ವಿರೋಧವಿದೆ ಎಂದರಲ್ಲದೆ 20ನೇ ಶತಮಾನದಲ್ಲಿ ಶೂದ್ರರಿಗೂ ಕೂಡಾ ಮಹಾಕಾವ್ಯ ಬರೆಯುವ ತಾಕತ್ತಿದೆ ಎಂಬುದನ್ನು ತೋರಿಸಿದ ಕುವೆಂಪು ಅವರನ್ನು ಎಲ್ಲರೂ ಅರತುಕೊಳ್ಳಬೇಕು ಎಂದು ಮುದ್ದೇಗೌಡ ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.  ಕಾರ್ಯುಕ್ರಮದ ನೆನಪಿಗಾಗಿ ಶಾಲಾ ಆವರಣದಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆಯ ವತಿಯಿಂದ ಗಣ್ಯರು ಸಸಿಗಳನ್ನು ನೆಟ್ಟು ನೀರೆರೆಯಲಾಯಿತು. ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ತಂದುಕೊಟ್ಟವು. ಶಾಸಕ ಕೆ.ಸಿ.ನಾರಾಯಣಗೌಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಕಾಂಗ್ರೆಸ್‍ನ ಪರಿಶಿಷ್ಟ ಪಂಗಡ ವಿಭಾಗದ ಮಾಜಿ ಅಧ್ಯಕ್ಷ ಆರ್.ಜಗದೀಶ್ ಅವರು ತಾಲೂಕಿನಲ್ಲಿ ನಾಯಕ ಸಮುದಾಯ ಪರ್ಯಾಯ ಪದಗಳಾದ ಗಂಗಾಮತ, ಬೆಸ್ತ, ತಳವಾರ ಮತ್ತಿತರರ ಹೆಸರಿನಿಂದ ಕರೆಯುತ್ತಿರುವವರಿಗೆ ನಾಯಕ ಜನಾಂಗ ಜಾತಿ ಧೃಢೀಕರಣ ಪತ್ರಪಡೆಯಲು ಅಧಿಕಾರಿಗಳಿಂದ ಆಗುತ್ತಿರುವ ಸಮಸ್ಯೆಯನ್ನು ವಿವರಿಸಿದರು. 
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಮ್ಮಶ್ರೀನಿವಾಸ್, ಪುರಸಭಾ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆ.ಪುರುಷೋತ್ತಮ್, ಸದಸ್ಯರಾದ ನಂಜುಂಡಯ್ಯ, ಡಿ.ಪ್ರೇಂಕುಮಾರ್, ಮಾಜಿ ಸದಸ್ಯ ಟೈಲರ್ ರಾಜು, ತಾ.ಪಂ.ಸದಸ್ಯರಾದ ಮುತ್ತಮ್ಮನಾಗರಾಜು, ಚೆಲುವಯ್ಯ,  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಸ್ವರ್ಣಸಂದ್ರ, ತಹಸೀಲ್ದಾರ್ ಶಿವರಾಂ, ತಾ.ಪಂ.ಇಒ ಕೆಂಚಪ್ಪ, ಬಿಇಒ ಜವರೇಗೌಡ, ಆರೋಗ್ಯಾಧಿಕಾರಿ ಡಾ.ಎಚ್.ಟಿ.ಹರೀಶ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಧಾಕೃಷ್ಣ, ಬಿಸಿಎಂ ಅಧಿಕಾರಿ ನಂದಕುಮಾರ್, ಸಮಾಕ ಕಲ್ಯಾಣಾಧಿಕಾರಿ ಜಿಲ್ಲಾ ವಾಲ್ಮೀಕಿ ನಾಯಕ ಸಂಘಗಳ ಒಕ್ಕೂಟದ ಅಧ್ಯಕ್ಷ ನರೇಂದ್ರನಾಯಕ್, ತಾಲೂಕು ನಾಯಕ ಸಂಘದ ಅಧ್ಯಕ್ಷ ಕೆ.ವಿನೋದ್‍ಕುಮಾರ್, ಉಪಾಧ್ಯಕ್ಷ ಕುಪ್ಪಹಳ್ಳಿ ಮಹೇಶ್, ಸಂಚಾಲಕರಾದ ಜಿ.ಪಿ.ರಾಜು, ಹೊಸಹೊಳಲು ಎಚ್.ಎಂ.ಅಶೋಕ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಪುಟ್ಟಸ್ವಾಮಿ   ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

=================================
ಕೆ.ಆರ್.ಪೇಟೆ(ಮಂಡ್ಯ),ಅ.08- ಚಿನ್ನಾಭರಣಗಳ ಅಡವಿನ ಮೇಲೆ ಪಡೆಯುವ ಸಾಲಕ್ಕೆ ನಿಗಧಿತ ದರಕ್ಕಿಂತ ಹೆಚ್ಚಿನ ಬಡ್ಡಿ ಪಡೆಯುತ್ತಿರುವ ಪಟ್ಟಣದ ಐಐಎಫ್‍ಎಲ್ ಗೋಲ್ಡ್ ಲೋನ್ ಸಂಸ್ಥೆಯ ಜನವಿರೋಧಿ ನೀತಿಯನ್ನು ಖಂಡಿಸಿ ತಾಲೂಕು ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
 ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯಲ್ಲಿರುವ  ಇಂಡಿಯಾ ಇನ್ಪೋಲೈನ್ ಫೈನಾನ್ಸ್ ಲಿಮಿಟೆಡ್ (ಐ.ಐ.ಎಫ್.ಎಲ್)ನ ಶಾಖೆಯು ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.  ಎಲ್ಲಾ ವ್ಯವಹಾರಗಳನ್ನು ಆಂಗ್ಲಮಾಧ್ಯಮದಲ್ಲಿ ನಡೆಸುತ್ತಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ಇವರ ನೀತಿ ನಿಬಂಧನೆಗಳು ಅರ್ಥವಾಗದೇ ಇವರು ಕೇವಲ ಶೇ.1ರ ಬಡ್ಡಿ ಪಡೆಯುತ್ತೇನೆಂದು ನಂಬಿಸಿ ಆಭರಣಗಳನ್ನು ಗಿರವಿ ಇಟ್ಟುಕೊಂಡು ಗ್ರಾಹಕರು ಆಭರಣಗಳನ್ನು ಬಿಡಿಸಿಕೊಳ್ಳಲು ಬಂದಾಗ ಇಲ್ಲಸಲ್ಲದ ಸಬೂಬು ಹೇಳಿ ಶೇ. 2ರಷ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನೀವು ಗಿರವಿ ಇಡುವಾಗ ನಮ್ಮ ಸಂಸ್ಥೆಯ ನಿಬಂಧನೆಗಳ ಫಾರಂಗೆ ಸಹಿ ಮಾಡಿದ್ದೀರಿ ಎಂದು ಮರುಪ್ರಶ್ನೆ ಹಾಕಿ ಹೆಚ್ಚಿನ  ಬಡ್ಡಿ ವಸೂಲಿ ಮಾಡುತ್ತಾ ಗ್ರಾಹಕರಿಗೆ ಮೋಸ ಮಾಡುತ್ತಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿದರು. 
ಫೈನಾನ್ಸ್‍ನಲ್ಲಿ ನಡೆಸುವ ಎಲ್ಲಾ ಪತ್ರವ್ಯವಹಾರಗಳನ್ನು ಕನ್ನಡದಲ್ಲಿ ನಿರ್ವಹಿಸಲು ಮತ್ತು ಬಡ್ಡಿದರದ ಬಗ್ಗೆ ಗ್ರಾಹಕರಿಗೆ ತಿಳಿಯುವ ಭಾಷೆಯಲ್ಲಿ ನಾಮಫಲಕ ಹಾಕುವಂತೆ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯು ಸ್ಥಳೀಯ ಪುರಸಭೆಯಿಂದ ಯಾವುದೇ ಪರವಾನಗಿ ಪತ್ರ ಪಡೆಯದೇ ಇರುವುದು ಬೆಳಕಿಗೆ ಬಂದಿತು. ತಕ್ಷಣ ಪುರಸಭೆಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ನಾಳೆಯೇ ಪುರಸಭೆಯಿಂದ ಪರವಾನಗಿಯನ್ನು ಪಡೆಯುವ ಭರವಸೆಯನ್ನು ಸಂಸ್ಥೆಯ ನೌಕರರು ನೀಡಿದರು. ಅಲ್ಲದೇ ತಕ್ಷಣವೇ ಗ್ರಾಹಕರಿಗೆ ಅರ್ಥವಾಗುವಂತೆ ಸ್ಥಳೀಯ ಭಾಷೆಯಲ್ಲಿ ಸಂಸ್ಥೆಯ ನೀತಿ ನಿಬಂಧನೆಗಳನ್ನು ಮುದ್ರಿಸುವ ಭರವಸೆ ನೀಡಿದರು. ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಎಂ.ಶಿವಕುಮಾರ್ ಅವರ ಮನವೊಲಿಕೆಯ ನಂತರ ಪ್ರತಿಭಟನೆಯನ್ನು ವಾಪಸ್ಸು ಪಡೆಯಲಾಯಿತು.  ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಎಸ್.ವಿ.ವಿನಯ್, ಎಂ.ಸಿ.ಪ್ರವೀಣ್, ಮುರಗೇಶ್, ಪುರ ಮಂಜುನಾಥ್, ಎಂ.ಡಿ.ಚೇತನ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.



No comments:

Post a Comment