Wednesday 29 October 2014

ಕೆ.ಆರ್.ಪೇಟೆ ಸುದ್ದಿಗಳು.


===============================================
ಕೆ.ಆರ್.ಪೇಟೆ. ಅ.29- ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ  ದೊಡ್ಡಕ್ಯಾತನಹಳ್ಳಿ ಮಾರ್ಗದಲ್ಲಿರುವ ಕೆರೆ ಏರಿಯ ಮೇಲಿನ ಮುಖ್ಯ ರಸ್ತೆಯು ಕಳೆದ ಹತ್ತಾರು ವರ್ಷಗಳಿಂದ ದುರಸ್ತಿ ಕಾಣದೇ ಕಾಡು ರಸ್ತೆಯಂತಾಗಿದ್ದು ತಕ್ಷಣ ದುರಸ್ತಿಗೆ ಮುಂದಾಗಬೇಕು ಎಂದು ಒತ್ತಾಯಿಸಿ ತಾಲೂಕು ತಾಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ತಾಲೂಕು ಅಧ್ಯಕ್ಷ ಎ.ಸಿ.ಕಾಂತರಾಜು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಸದರಿ ಮಾರ್ಗವು ವಿಶ್ವವಿಖ್ಯಾತ ಗೊಮ್ಮಟ ಕ್ಷೇತ್ರವಿರುವ ಶ್ರವಣಬೆಳಗೊಳಕ್ಕೆ, ನಾಗಮಂಗಲಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಆದರೆ ರಸ್ತೆಯ ಅಲ್ಲಲ್ಲಿ ಗುಂಡಿ ಬಿದ್ದಿ ತೀರ ಅದ್ವಾನಗೊಂಡಿದೆ. ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಹಲವು ಅಪಘಾತಗಳು ನಿತ್ಯ ನಡೆಯುತ್ತಿದ್ದ ಈ ರಸ್ತೆಯ ಅವ್ಯವಸ್ಥೆ ನೋಡಿ ನೋಡಿ ಸಾಕಾಗಿರುವ ವಾಹನ ಸವಾರರು ತಮ್ಮ ವಾಹನವನ್ನು ಈ ರಸ್ತೆಯಲ್ಲಿ ಓಡಿಸುವುದನ್ನು ಕಳೆದ 1ವರ್ಷದಿಂದ ನಿಲ್ಲಿಸಿದ್ದಾರೆ.  ಹುಬ್ಬನಹಳ್ಳಿ ಮಾರ್ಗವಾಗಿ ಸುತ್ತಿ ಬಳಿಸಿ ಹೋಗುತ್ತಿದ್ದಾರೆ ಆದರೂ  ಈ ಭಾಗದ ಯಾವುದೇ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸದೇ ಇರುವುದು ತೀವ್ರ ನೋವಿನ ಸಂಗತಿಯಾಗಿದೆ ಎಂದು ಹೇಳಿದ ಕಾಂತರಾಜು ಅವರು ತಕ್ಷಣ ಈ ಮುಖ್ಯ ರಸ್ತೆಯನ್ನು ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.  ಮುಂದಿನ ಒಂದು ತಿಂಗಳೊಳಗೆ ಯಾವುದೇ ಕ್ರಮ ವಹಿಸದೇ ಇದ್ದಲ್ಲಿ ಸಂತೇಬಾಚಹಳ್ಳಿ ಬಂದ್ ನಡೆಸಿ ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಬೇಕಾಗುತ್ತದೆ ಎಂದು ಕಾಂತರಾಜು ಹೇಳಿದರು. ಪ್ರತಿಭಟನೆಯಲ್ಲಿ  ಕರವೇ ಪದಾಧಿಕಾರಿಗಳಾದ ಶಶಿ, ಚೇತನ್, ರಾಜು, ಮಂಜು, ರಾಘು ಮತ್ತಿತರರ ಭಾಗವಹಿಸಿದ್ದರು.


ಕೆ.ಆರ್.ಪೇಟೆ,ಅ.29- ತಾಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಸರ್ಕಾರಿ ಸಾಮ್ಯದ ಕಾವೇರಿ ಗ್ರಾಮೀಣ ಬ್ಯಾಂಕ್‍ನ 423ನೇ ಶಾಖೆಯನ್ನು ತಾಲೂಕು ಪಂಚಾಯಿತಿ ಸದಸ್ಯ ಎಂ.ಸಿ.ರಾಮೇಗೌಡ ಇಂದು(ಬುಧವಾರ) ಉದ್ಘಾಟನೆ ಮಾಡಿದರು.
ಅವರು ಮಾತನಾಡಿ ಗ್ರಾಮೀಣ ಬ್ಯಾಂಕ್‍ಗಳು ದೇಶದ ಜನಸಾಮಾನ್ಯರ ಪ್ರಗತಿಯಲ್ಲಿ ಬ್ಯಾಂಕುಗಳ ಪಾತ್ರ ಅಪಾರವಾಗಿದೆ. ಸಾರ್ವಜನಿಕರು ತಾವು ಗಳಿಸಿದ ಹಣದಲ್ಲಿ ಉಳಿತಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ನಿರುದ್ಯೋಗಿಗಳು ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುವ ಸಾಲ ಸೌಲಭ್ಯವನ್ನು ಪಡೆದುಕೊಂಡು ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಭಿಗಳಾಗಿ ಜೀವನ ಸಾಗಿಸಬೇಕು ಎಂದು ರಾಮೇಗೌಡ ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾವೇರಿ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕರಾದ ಷಣ್ಮುಗಂಸ್ವಾಮಿ ಮಾತನಾಡಿ ಕಾವೇರಿ ಗ್ರಾಮೀಣ ಬ್ಯಾಂಕ್ ಕಾವೇರಿ ಕಣಿವೆ ಜಿಲ್ಲೆಗಳ ಜನರ ವಿಶ್ವಾಸಕ್ಕೆ ಪಾತ್ರವಾದ ಬ್ಯಾಂಕ್ ಆಗಿದೆ. ಮೈಸೂರಿನಲ್ಲಿ ಪ್ರಧಾನ ಕಚೇರಿ ಹೊಂದಿದೆ. ರಾಜ್ಯದ 10ಜಿಲ್ಲೆಗಳಲ್ಲಿ ವಿಸ್ತಾರಗೊಂಡಿದ್ದು ಇಂದು ಉದ್ಘಾಟನೆಗೊಂಡ ಮಾಕವಳ್ಳಿ ಶಾಖೆ ಸೇರಿದಂತೆ ಒಟ್ಟು 423 ಶಾಖೆಗಳನ್ನು ಹೊಂದಿದೆ.  ರಾಜಧಾನಿ ಬೆಂಗಳೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಹಾಸನ, ಮಡಿಕೇರಿ, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳಲ್ಲಿ ತನ್ನ ಶಾಖೆಗಳನ್ನು ತೆರೆದಿದೆ. ಗ್ರಾಮೀಣ ಜನರ ಅಭಿವೃದ್ಧಿಯ ದೃಷ್ಟಿಯಲ್ಲಿಟ್ಟುಕೊಂಡು ಆರಂಭವಾಗಿರುವ ಬ್ಯಾಂಕ್ ಪ್ರದೇಶಗಳಲ್ಲಿಯೇ ಶೇ.90ರಷ್ಟು ಶಾಖೆಗಳನ್ನು ಗ್ರಾಮೀಣ ಪ್ರದೇಶದಲ್ಲಿಯೇ ಆರಂಭಿಸಲಾಗಿದೆ.  ರೈತರಿಗೆ ಪ್ರಥಮ ಆಧ್ಯತೆ ನೀಡಲಾಗುತ್ತಿದೆ.  ಸಣ್ಣ ಸಣ್ಣ ವ್ಯಾಪಾರಸ್ಥರು, ಗೃಹ ಕೈಗಾರಿಕೆ ಆರಂಭಿಸುವವರಿಗೆ, ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘಗಳಿಗೆ, ರೈತರಿಗೆ ವಿವಿಧ ರೀತಿಯ ಬೆಳೆ ಸಾಲಗಳನ್ನು ಸುಲಭ ದಾಖಲಾತಿಗಳನ್ನು ಪಡೆದು ನೀಡಲಾಗುತ್ತಿದೆ. ಇದಲ್ಲದೇ ಗ್ರಾಮೀಣ ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಸಾಲ ನೀಡಲಾಗುತ್ತಿದೆ.  ಒಟ್ಟಾರೆ ಎಲ್ಲಾ ವರ್ಗದ ಗ್ರಾಹಕರಿಗೆ ತೃಪ್ತಿದಾಯಕ ಸೇವೆಯನ್ನು ಬ್ಯಾಂಕ್ ನೀಡುತ್ತಾ ಬಂದಿದ್ದು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಷಣ್ಮುಗಂಸ್ವಾಮಿ  ಹೇಳಿದರು.
ಬ್ಯಾಂಕಿನ ಪ್ರಾದೇಶಿಕ ಹಿರಿಯ ಅಧಿಕಾರಿ ನಂದಕುಮಾರ್, ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ  ಮಾಕವಳ್ಳಿ ಸಣ್ಣಯ್ಯ, ಕೋರಮಂಡಲ್ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ಅಧಿಕಾರಿ ಕೆ.ಬಾಬುರಾಜ್, ಸಹಾಯಕ ಅಧಿಕಾರಿಗಳಾದ ಪುಟ್ಟೇಗೌಡ, ದತ್ತಾತ್ರೇಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಕುಮಾರಿ, ಉಪಾಧ್ಯಕ್ಷೆ ಪಾರ್ವತಮ್ಮ, ಸದಸ್ಯರಾದ ಮಮತಾ, ರಾಜೇಶ್, ರಾಜಶೆಟ್ಟಿ, ವಸಂತಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತಕುಮಾರ್, ವಿ.ಎಸ್.ಎಸ್.ಎನ್.ಬ್ಯಾಂಕ್ ಮಾಜಿ ಅಧ್ಯಕ್ಷ ರವಿಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ರಾಜೇಗೌಡ, ಎಸ್.ಡಿ.ಎಂ.ಸಿ.ಮಾಜಿ ಅಧ್ಯಕ್ಷ ಜಿ.ನಾಗೇಶ್, ಮಾಕವಳ್ಳಿ ಶಾಖಾ ವ್ಯವಸ್ಥಾಪಕ ಧರಣೇಶ್, ಆಲೇನಹಳ್ಳಿ ಶಾಖೆಯ ಮ್ಯಾನೇಜರ್ ಗಂಗಾಧರ್, ಬಂಡಿಹೊಳೆ ವ್ಯವಸ್ಥಾಪಕ ಮಲ್ಲಾರಿರಾವ್,  ಮುಖಂಡರಾದ ಆನಂದ್, ಯೋಗಮೂರ್ತಿ, ನಾಗೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಆಹ್ವಾನಿತರಾಗಿ ಭಾಗವಹಿಸಿದ್ದರು.

No comments:

Post a Comment