Friday 12 September 2014


 ಶಾಲಾ ಮಕ್ಕಳಿಗೆ ಜಿ.ಪಂ.ಸಿ.ಇ.ಓ. ಅವರಿಂದ ಶೌಚಾಲಯ ಕುರಿತು ಪಾಠ
ಸಮೀಪದ ಮಂಗಲ ಗ್ರಾಮದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಾಹಕ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಶುಕ್ರವಾರ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸರವನ್ನು ವೀಕ್ಷಿಸಿದರು.
       ಸುಮಾರು 3 ಗಂಟೆಯ ಸಮಯದಲ್ಲಿ ಇಲ್ಲಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಭೇಟಿ ಕೊಟ್ಟ ಅವರು ನೇರವಾಗಿ 10ನೇ ತರಗತಿಯ ಕೊಠಡಿಗೆ ತೆರಳಿದರು. ಮೊದಲು ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿ, ಪಾಠ ಪ್ರವಚನದ ಬಗ್ಗೆ ಪ್ರಶ್ನೆ ಕೇಳಿದರು. ಸಿಇಓ ಅವರು ಕೇಳುತ್ತಿದ್ದ, ಪ್ರಶ್ನೆಗಳಿಗೆ ಉತ್ತರ ಹೇಳಲು ವಿದ್ಯಾರ್ಥಿಗಳು ಮುಗಿ ಬೀಳುತ್ತಿದ್ದರು. ನಂತರ ನೇರವಾಗಿ ಶೌಚಾಲಯದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಯಾರ ಮನೆಯಲ್ಲಿ ಶೌಚಾಲಯವಿಲ್ಲ ಅಂತಹವರು ಈ ತಿಂಗಳಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದು ತಿಳುವಳಿಕೆ ಹೇಳಿದರು.
    ನಂತರ ಅಲ್ಲಿಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಅವರು ಮಕ್ಕಳಿಗೆ ಶೌಚಾಲಯದ ಮಹತ್ವ ಹಾಗೂ ವೈಯಕ್ತಿಕ ಶುಚಿತ್ವ ಕುರಿತು ಪ್ರಶ್ನೆಗಳನ್ನು ಕೇಳಿದರು. ಬೆಳಗಿನ ಶಾಲಾ ಪ್ರಾರ್ಥನಾ ಸಮಯದಲ್ಲಿ ಶೌಚಾಲಯ ಹಾಗೂ ಶುಚಿತ್ವದ ಕುರಿತು ಮಕ್ಕಳು ತೆಗೆದುಕೊಳ್ಳುತ್ತಿರುವ ಪ್ರಮಾಣ ವಚನವನ್ನು ಮಕ್ಕಳ ಮೂಲಕವೇ ಹೇಳಿಸಿದರು. ಶೌಚಾಲಯ ದೇವಾಲಯವಿದ್ದಂತೆ, ಬಯಲು ಮಲ ವಿಸರ್ಜನೆಯಿಂದ ಅನೇಕ ರೋಗ ರುಜಿನಗಳು ಬರುತ್ತಿವೆ. ಮಹಿಳೆಯರು ಹಗಲು ರಾತ್ರಿ ಎನ್ನದೇ ಬಯಲಿಗೆ ಹೋಗುತ್ತಾರೆ. ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಶೌಚಾಲಯ ನಿರ್ಮಿಸಿಕೊಂಡು ಅದನ್ನು ಉಪಯೋಗಿಸಿದಾಗ ಮಾತ್ರ ಹಲವು ಕಾಯಿಲೆ ಕಸಾಲೆಗಳಿಗೆ ಮುಕ್ತಿ ನೀಡಬಹುದು. ಆದ್ದರಿಂದ ತಮ್ಮ ತಮ್ಮ ಮನೆಗಳಲ್ಲಿ ಆದಷ್ಟು ಬೇಗನೆ ಶೌಚಾಲಯ ನಿರ್ಮಿಸಲು ತಂದೆ-ತಾಯಿಯರಿಗೆ ತಿಳಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
    ಶಿಸ್ತು ಕ್ರಮದ ಎಚ್ಚರಿಕೆ: ಭೇಟಿ ನೀಡಿದ ವೇಳೆ ಇಲ್ಲಿನ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶೌಚಾಲಯ ನಿರ್ಮಾಣದ ಜಾಗೃತಿಯ ಬಗ್ಗೆ ಪ್ರತಿಜ್ಞೆ ಮಾಡದಿರುವ ವಿಷಯ ಸಿಇಒ ಅವರ ಗಮನಕ್ಕೆ ಬಂದಿತು. ಇನ್ನು ಮುಂದೆ ಪ್ರತಿ ದಿನವೂ ಮಕ್ಕಳಿಗೆ ಶಾಲಾ ಪ್ರಾರ್ಥನೆ ವೇಳೆ ಶೌಚಾಲಯ ಜಾಗೃತಿಯ ಪ್ರತಿಜ್ಞೆ ಸ್ವೀಕಾರ ಮಾಡಿಸಬೇಕು. ಯಾವುದೇ ಶಾಲೆಯಲ್ಲಿ ಇಂಥ ಪ್ರತಿಜ್ಞೆ ಸ್ವೀಕಾರ ಮಾಡದಿದ್ದಲ್ಲಿ ಶಾಲಾ ಮುಖ್ಯಸ್ಥರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
     ಮಂಡ್ಯ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ತಾಲ್ಲೂಕು ಪಂಚಾಯತ್ ಸದಸ್ಯರಾದ ಜವರೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಯ್ಯ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪರಿಶಿಷ್ಟರ ಕಾಲೋನಿಗೆ ಸಿಇಒ ರೋಹಿಣಿ ಸಿಂಧೂರಿ ಭೇಟಿ
ಮಂಡ್ಯ ಸೆ.12- ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಶುಕ್ರವಾರ ಮಂಡ್ಯ ತಾಲ್ಲೂಕು ಮಂಗಲ ಗ್ರಾಮದ ಮಂಗಲ ತಿಟ್ಟು (ಗರೀಬಿ ಕಾಲೋನಿ)ಗೆ ಭೇಟಿ ನೀಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆಯಲ್ಲಿ ಲೋಪ ಆಗಿದೆ ಎಂಬ ದೂರಿನ ಮೇಲೆ ಪರಿಶೀಲನೆ ನಡೆಸಿದರು.
ಎಂಭತ್ತರ ದಶಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ಇಲ್ಲಿ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಆದರೆ ನಿವಾಸಿಗಳು ತಮಗೆ ನೀಡಿರುವ ಹಕ್ಕಿನ ಜಾಗದಲ್ಲಿ ವಾಸಿಸುತ್ತಿಲ್ಲ. ಕೆಲವೊಂದು ಅದಲು ಬದಲು ಆಗಿವೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಅವರು ಇಲ್ಲಿಗೆ ಭೇಟಿ ನೀಡಿದರು.
ಹಕ್ಕು ಪತ್ರ ವಿತರಣೆಯಲ್ಲಿ ಆಗಿರುವ ಲೋಪದ ಬಗ್ಗೆ ಶೀಘ್ರವೇ ವರದಿ ನೀಡುವಂತೆ ಸ್ಥಳದಲ್ಲೇ ಇದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ಹಾಗೂ ಮಂಗಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಯ್ಯ ಅವರಿಗೆ ಸೂಚಿಸಿದರು.

No comments:

Post a Comment