Wednesday 24 September 2014

ಬಾಲಗಂಗಾಧರ ಶ್ರೀಗಳ ದೂರದೃಷ್ಠಿಯ ಫಲ ಶ್ರೀಮಠ : ಸೊರಕೆ
ಆದಿಚುಂಚನಗಿರಿ,ಸೆ.23-ಬಾಲಗಂಗಾಧರರ ದೂರದೃಷ್ಟಿಯ ಫಲವಾಗಿಯೇ ಇಂದು ಶ್ರೀಮಠ ಕಂಗೊಳಿಸುತ್ತಿದೆ. ಶಿಕ್ಷಣ, ಆರೋಗ್ಯ, ಸಮಾಜಸೇವೆಯಲ್ಲಿ ಬಹುದೊಡ್ಡದಾದ ಕೊಡುಗೆ ನೀಡುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್‍ಕುಮಾರ್ ಸೊರಕೆ ಶ್ಲಾಘಿಸಿದರು.
ಶ್ರೀಕ್ಷೇತ್ರದಲ್ಲಿ ಇಂದಿನಿಂದ ಆರಂಭವಾಗಿರುವ 36ನೇ ರಾಜ್ಯಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಮೇಳ ಮತ್ತು ಗುರುಸ್ಮರಣೆ ಸಮಾರಂಭದಲ್ಲಿ ಡಾ.ಎಚ್.ಎಲ್.ನಾಗೇಗೌಡ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳು ಕೆಳಹಂತದ ಬಡವರೊಂದಿಗೆ ಉತ್ತಮ ಸಂಪರ್ಕ ಹೊಂದಿ ಅವರಿಗೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಾ ಅವರನ್ನು ಮೇಲ್ಪಂಕ್ತಿಗೆ ತರಲು ದುಡಿದ ಮಹಾನ್ ಸಂತರು ಎಂದು ಬಣ್ಣಿಸಿದರು.
ಬಡ ಮಕ್ಕಳಿಗೆ ಶಿಕ್ಷಣ ನೀಡುವ ಉತ್ತಮ ಕಾರ್ಯವನ್ನು ಶ್ರೀಮಠ ಮಾಡುತ್ತಾ ಬಂದಿದೆ. ಇದು ಸದಾ ಕಾಲ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಮಾನವರಲ್ಲಿ ಮೂಡನಂಬಿಕೆ, ಅಜ್ಞಾನ ತೊಲಗಬೇಕೆಂದರೆ ವಿದ್ಯಾಭ್ಯಾಸ ಅತ್ಯಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಮೂಡನಂಬಿಕೆ, ಅಜ್ಞಾನಕ್ಕೆ ಮಾರು ಹೋಗುತ್ತಿದ್ದಾರೆ. ಇದನ್ನು ತಡೆಯಬೇಕೆಂದರೆ ವಿದ್ಯೆಯಿಂದ ಮಾತ್ರ ಸಾಧ್ಯವಿದ್ದು, ಶ್ರೀಮಠ ವಿದ್ಯೆ ನೀಡುವ ಕೆಲಸ ಮಾಡುತ್ತಿರುವುದು ಉತ್ತಮ ಕಾರ್ಯ ಎಂದರು.
ಶ್ರೀಕ್ಷೇತ್ರದಲ್ಲಿ ನಡೆಯುವ ಜಾನಪದ ಕಲಾಮೇಳ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಜಾನಪದ ಕಲಾಮೇಳ, ನಾಡಹಬ್ಬ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳು ರಾಜ್ಯದಲ್ಲಿ ಜರುಗುವ ಮೂಲಕ ನಮ್ಮ ನೆಲದ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಪಸರಿಸುವ ಕೆಲಸಗಳು ಜರುಗುತ್ತಿರುವುದು ಶ್ಲಾಘನೀಯ ಎಂದರು.
ಪಾಶ್ಚಿಮಾತ್ಯ ಸಂಸ್ಕøತಿಯಿಂದ ಕಲೆ, ಸಂಸ್ಕøತಿಗೆ ಧಕ್ಕೆಯುಂಟಾಗುತ್ತಿದ್ದು, ಪಾಶ್ಚಿಮಾತ್ಯ ಕಲೆಗಳ ಹಾವಳಿಯನ್ನು ತಡೆಯಬೇಕೆಂದರೆ, ನಮ್ಮ ಕಲೆ, ಸಾಹಿತ್ಯ, ಸಂಸ್ಕøತಿಗೆ ಹೆಚ್ಚಿನ ಒತ್ತು ನೀಡಬೇಕೆಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ, ಕಲಾವಿದರಿಗೆ ಸರ್ಕಾರದಿಂದ ಬರಬೇಕಾದ ಮಾಶಾಸನದಲ್ಲಿ ತೊಡಕಾಗುತ್ತಿದ್ದು, ರಾಜ್ಯ ಸರ್ಕಾರ ಸಮರ್ಪಕ ಮಾಶಾಸನ ಒದಗಿಸುವಲ್ಲಿ ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಎಚ್.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಕೆ.ಸುರೇಶ್‍ಗೌಡ, ತಾ.ಪಂ. ಅಧ್ಯಕ್ಷ ಮೂಡ್ಲಿಗಿರಿಗೌಡ, ಗ್ರಾ.ಪಂ. ಅಧ್ಯಕ್ಷ ನಿಂಗೇಗೌಡ, ಜಾನಪದ ಪರಿಷತ್‍ನ ಇಂದಿರಾಬಾಲಕೃಷ್ಣ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇಂದಿರಾಬಾಲಕೃಷ್ಣ, ಜಯಮ್ಮ, ರಾಮಮೂರ್ತಿ ಅವರಿಗೆ ಎಚ್.ಎಲ್.ನಾಗೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.

No comments:

Post a Comment