Saturday, 30 August 2014

ಮೈಸೂರು ಸುದ್ದಿಗಳು.

ಸೆ. 5 ರಂದು ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ
    ಮೈಸೂರು,ಆ.30.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 5 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರಿನ ಎನ್.ಐ.ಇ. ವಜ್ರ ಮಹೋತ್ಸವ ಸಭಾಂಗಣದಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರು ಜನ್ಮದಿನಾಚರಣೆಯ ಅಂಗವಾಗಿ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ 2014ನೇ ಸಾಲಿನ ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
      ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ರಾಜ್ಯ ಸಚಿವ ಕಿಮ್ಮನೆ ರತ್ನಾಕರ್ ಅವರು ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕರಿಗೆ ಸನ್ಮಾನ ಮಾಡುವರು. ವಿಧಾನಸಭಾ ಸದಸ್ಯರಾದ ಎಂ.ಕೆ.ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.
    ಮೈಸೂರು ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಎನ್.ಎಂ. ರಾಜೇಶ್ವರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ| ಪುಷ್ಪಾವತಿ ಅಮರನಾಥ್, ಲೋಕಸಭಾ ಸದಸ್ಯರಾದ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ತನ್ವೀರ್ ಸೇಠ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ವಾಸು, ಹೆಚ್.ಪಿ. ಮಂಜುನಾಥ್, ಸಾ.ರಾ.ಮಹೇಶ್, ಚಿಕ್ಕಮಾದು,  ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಎಸ್.ನಾಗರಾಜು, ಮರಿತಿಬ್ಬೇಗೌಡ, ಆರ್. ಧರ್ಮಸೇನ, ಮೈಸೂರು ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ವಿ.ಶೈಲೇಂದ್ರ,  ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷ ಲೋಕಮಣಿ ಭಾಗವಹಿಸುವರು.
    ಎಸ್ ಎಸ್ ಎ ಮತ್ತು ಆರ್ ಎಂ ಎಸ್ ಎ ರಾಜ್ಯ ಯೋಜನಾ ನಿರ್ದೇಶಕ ಅದೋನಿ ಸೈಯದ್ ಸಲೀಂ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ| ರಾಜ್‍ಕುಮಾರ್ ಖತ್ರಿ, ಗುಲ್ಬರ್ಗಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ರಾಧಕೃಷ್ಣರಾವ್ ಮದನ್‍ಕರ್ ಹಾಗೂ ಧಾರವಾಡ  ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ವೀರಣ್ಣ ಜಿ ತುರಮರಿ ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.


ವಿಶ್ವವಿಖ್ಯಾತ ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ಸಜ್ಜಾಗುತ್ತಿದೆ ಮೈಸೂರು
   ಮೈಸೂರು,ಆ.30.ವಿಶ್ವವಿಖ್ಯಾತ ದಸರಾದಲ್ಲಿ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ನೋಡುಗರ ಮನದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಲು ಮೈಸೂರು ಜಿಲ್ಲಾಡಳಿತ ಸಜ್ಜಾಗುತ್ತಿದೆ.
    ಕಾರ್ಯಕ್ರಮಗಳನ್ನು ಆಕರ್ಷಿತವಾಗಿ, ವ್ಯವಸ್ಥಿತ ಹಾಗೂ ಪಾರದರ್ಶಕವಾಗಿ ಆಯೋಜಿಸಲು ಮುಖ್ಯಮಂತ್ರಿಗಳು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಉಪಸಮಿತಿಯ ವಿಶೇಷಾಧಿಕಾರಿಗಳು ಸಭೆ ನಡೆಸಿ ಸಿದ್ದತೆಗಳನ್ನು ಪ್ರಾರಂಭಿಸಿದ್ದಾರೆ.
    ಸ್ವಾಗತ ಉಪಸಮಿತಿಯು ಬಾಡಿಗೆ ಆಧಾರದ ಮೇಲೆ ತಾತ್ಕಾಲಿಕ ವೇದಿಕೆ ನಿರ್ಮಾಣ ಫೆಂಡಾಲ್ ಸ್ವಾಗತ ಕಮಾನು ನಿರ್ಮಿಸುವುದು. ಆಸನಗಳ ವ್ಯವಸ್ಥೆ, ಬ್ಯಾರಿಕೇಡಿಂಗ್ ಹಾಕುವುದು. ಫ್ಲೆಕ್ಸ್ ಬೋರ್ಡ್ ಮತ್ತು ಫ್ಲಾಗ್ ಪೋಸ್ಟ್ ಅಳವಡಿಸಲು ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆಯುವ ಯುವ ದಸರಾಕ್ಕೆ ಹಾಗೂ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮಕ್ಕೆ ರೂ. 31,95,000/-, ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ರೂ. 65,75,000/-, ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತುಗೆ ರೂ. 31,90,000/-, ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನೆ, ಕ್ರೀಡಾ ದಸರಾ, ಆಹಾರ ಮೇಳ, ಮಹಿಳಾ ಮತ್ತು ಮಕ್ಕಳ ದಸರಾ, ರೈತ ದಸರಾ ಕಾರ್ಯಕ್ರಮಗಳಿಗೆ ರೂ. 34,60,000/-, ವಿಜಯದಶಮಿ ಮೆರವಣಿಗೆ ಸಾಗುವ ದಾರಿಯ ಕಾರ್ಯಕ್ರಮಗಳಿಗೆ ರೂ 21,75,000/-  ಟೆಂಡರ್ ಕರೆಯಲಾಗಿದೆ.
   ಧ್ವನಿ, ಬೆಳಕು ಹಾಗೂ ಜನರೇಟರ್ ವ್ಯವಸ್ಥೆಗಾಗಿ ಯುವ ದಸರಾಗೆ  45,62,000/-, ಯುವ ಸಂಭ್ರಮಕ್ಕೆ ರೂ. 11,88,000/- ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ರೂ. 21,20,000/-, ಬನ್ನಿಮಂಟಪ ಪಂಜಿನ ಕವಾಯತು, ಕ್ರೀಡಾ ದಸರಾ, ಕುಸ್ತಿ, ಕಾವಾ ಮೇಳ, ವಿಜಯ ದಶಮಿ ಮೆರವಣಿಗೆ ಸಾಗುವ ದಾರಿ, ಏರ್ ಷೋ, ಯೋಗ ದಸರಾ, ಸಾಹಸ ಕ್ರೀಡೆ, ಕಾರ್ಯಕ್ರಮಕ್ಕೆ ರೂ. 24,70,000/-,  ಕಲಾಮಂದಿರ, ಟೌನ್‍ಹಾಲ್, ಚಿಕ್ಕಗಡಿಯಾರ, ಕುಪ್ಪಣ್ಣ ಪಾರ್ಕ್, ರಂಗೋಲಿ ಸ್ಪರ್ಧೆ, ಆಹಾರ ಮೇಳ, ಮಹಿಳಾ ಮತ್ತು ಮಕ್ಕಳ ದಸರಾ, ರೈತ ದಸರಾ, ಜನಪದೋತ್ಸವ, ಚಾಮುಂಡಿ ಬೆಟ್ಟದಲ್ಲಿ ನಡೆಯುವ  ದಸರಾ ಉದ್ಘಾಟನೆಗೆ ರೂ. 10,24,000/-ಟೆಂಡರ್ ಕರೆಯಲಾಗಿದೆ.
    ಮೆರವಣಿಗೆ ಉಪಸಮಿತಿಯಲ್ಲೂ ದಸರಾ ಮಹೋತ್ಸವದ ಕೆಲಸ ಕಾರ್ಯಗಳು ಚುರುಕಾಗಿ ಸಾಗುತ್ತಿದ್ದು, ಧ್ವನಿ ಮತ್ತು ಬೆಳಕು ವ್ಯವಸ್ಥೆ ಬಾಣ ಬಿರುಸು, ಲೇಸರ್ ಷೋ, ಸರ್ವೇ ಕ್ಯಾಮಾರ್ ಹಾಗೂ ಸಿಸಿ ಟಿವಿಗಳ ಅಳವಡಿಕೆ ಕಲಾವಿದರುಗಳಿಗೆ ಊಟ ವ್ಯವಸ್ಥೆ, ಟಿಕೇಟ್/ಪಾಸ್‍ಗಳ ಮುದ್ರಣ ಮತ್ತು ನಿರ್ವಹಣೆಗಾಗಿ ಟೆಂಡರ್ ಕರೆಯಲಾಗಿದ್ದು, ಸೆಪ್ಟೆಂಬರ್ 16 ರಂದು ಟೆಂಡರ್ ತೆರೆದು ಕಾರ್ಯಾದೇಶ ನೀಡಲಾಗುವುದು.
   ಪ್ರಚಾರ ಸಮಿತಿಯು ಕರ್ನಾಟಕ ರಾಜ್ಯಾದ್ಯಂತ ಪ್ರಚಾರ ನೀಡಿ ಹೆಚ್ಚು ಪ್ರವಾಸಿಗರನ್ನು ದಸರಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಮಾಡಲು ದಸರಾ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸಲು ಹಲವಾರು ಕಾರ್ಯಕ್ರಮಗಳನ್ನು ಯೋಜಿಸುತ್ತಿದೆ. ರಾಜ್ಯಾದ್ಯಂತ ಕೆ.ಎಸ್.ಆರ್.ಟಿ.ಸಿ.  ಬಸ್‍ಗಳ ಹಿಂಭಾಗದಲ್ಲಿ 3’*4’ ಅಡಿ ಅಳತೆಯ ಸೆಲ್ಸ್ ಅಡೇಸೀವ್ ವಿನೈಲ್ ಪೋಸ್ಟರ್‍ಗಳನ್ನು ಮುದ್ರಿಸಿ ಅಳವಡಿಸಲು, ರಾಜ್ಯಾದ್ಯಂತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೇರಿದ ಹೆದ್ದಾರಿ ಫಲಕಗಳ ಮೇಲೆ ಫ್ಲೆಕ್ಸ್ ಅಳವಡಿಸಲು 6 ಕಾಮಗಾರಿಗಳನ್ನು ಕರೆಯಲಾಗಿದ್ದು, ಪ್ರತಿ ಕಾಮಗಾರಿಗೆ ರೂ. 4,50,000/- ನಿಗಧಿಪಡಿಸಿದೆ.
    ಕೆಲಸಗಳನ್ನು ಪಾರದರ್ಶಕವಾಗಿ ಉತ್ತಮ ಗುಣಮಟ್ಟದಲ್ಲಿ ಪಡೆದುಕೊಳ್ಳುವುದು ದಸರಾ ಉಪಸಮಿತಿಗಳ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಸಮಿತಿಗಳು ಕಾರ್ಯಪ್ರವೃತ್ತವಾಗಿದೆ. 
    ವಿಶೇಷ ಚಿಕಿತ್ಸಾ ಶಿಬಿರ
   ಮೈಸೂರು,ಆ.30. ಮೈಸೂರಿನ ಬೃಂದಾವನ ಬಡಾವಣೆಯಲ್ಲಿರುವ ಆಯುರ್ವೇದ ಸಿದ್ಧಾಂತ ಸ್ನಾತಕೋತ್ತರ ವಿಭಾಗದಲ್ಲಿ ಬೆನ್ನುನೋವು, ಮಂಡಿನೋವು ಮತ್ತು ಕೀಲುನೋವುಗಳಿಗೆ ಸಂಬಂಧಿಸಿದಂತೆ ಉಚಿತ ವಿಶೇಷ ಚಿಕಿತ್ಸಾ ಶಿಬಿರವನ್ನು ಸೆಪ್ಟೆಂಬರ್ 1 ರಿಂದ 7 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಯೋಜಿಸಲಾಗಿದೆ. 
   ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ  9901994224ನ್ನು ಸಂಪರ್ಕಿಸಬಹುದು.




ಸೆ. 1 ರಿಂದ ಟೆಂಟ್ ಗ್ರಂಥಾಲಯ,
    ಮೈಸೂರು,ಆ.30. ವಿಶ್ವವಿಖ್ಯಾತವಾದ ದಸರಾಗೆಂದು ಮೈಸೂರು ಅರಮನೆ ಆವರಣದಲ್ಲಿ ಮಾವುತರು, ಅವರ ಕುಟುಂಬ ಹಾಗೂ ಮಕ್ಕಳು ಬಂದು ತಂಗುತ್ತಾರೆ. ಈ ಸಂದರ್ಭದಲ್ಲಿ ಅವರಿಗೆಲ್ಲರಿಗೂ ಹಲವಾರು ಸೌಲಭ್ಯಗಳನ್ನು ಯೋಜನೆಗಳನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ, ನಗರ ಕೇಂದ್ರ ಗ್ರಂಥಾಲಯ, ಮೈಸೂರುರವರ ವತಿಯಿಂದ ಮಾವುತರ ಕುಟುಂಬ ಹಾಗೂ ಅವರ ಮಕ್ಕಳಿಗೆ ಟೆಂಟ್ ಶಾಲಾ ಮಾದರಿಯಲ್ಲಿ ಟೆಂಟ್ ಗ್ರಂಥಾಲಯವನ್ನು ತಾತ್ಕಾಲಿಕವಾಗಿ ಸೆಪ್ಟೆಂಬರ್ 1 ರಿಂದ ತೆರೆಯಲಾಗುವುದು ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ. ಮಂಜುನಾಥ್ ಅವರು ತಿಳಿಸಿದ್ದಾರೆ.                                                                              
    ಸರ್ವರಿಗೂ ಪುಸ್ತಕ” ಎಂಬುದು ಗ್ರಂಥಾಲಯ ಸೇವೆಯ ಒಂದು ತತ್ವ. ಆದರೆ ಕೆಲವೊಮ್ಮೆ ಗ್ರಂಥಾಲಯ ಸೇವೆಯಿಂದ ವಂಚಿತರಾಗುವ ಪರಿಸ್ಥಿತಿ ಒದಗಿಬರುತ್ತದೆ. ಇಂತಹ ಸಂದರ್ಭಗಳಲ್ಲಿ ಗ್ರಂಥಾಲಯಗಳು ಸ್ವಯಂಸ್ಫೂರ್ತಿಯಿಂದ ಗ್ರಂಥಾಲಯ ಸೇವೆಯನ್ನು ಅಲಭ್ಯರಿಗೆ ಲಭ್ಯವಾಗುವಂತೆ ಮಾಡುವ ಕಾರ್ಯಕ್ರಮವನ್ನು ಸ್ವ-ಇಚ್ಛೆಯಿಂದ ಕೈಗೊಳ್ಳಬೇಕಾಗುತ್ತದೆ. ಇಂತಹ ಒಂದು ಕಾರ್ಯಕ್ರಮವೇ ‘ಟೆಂಟ್ ಗ್ರಂಥಾಲಯ’.
     ಈ ಕಾರ್ಯಕ್ರಮವನ್ನು ಮೈಸೂರು ಗ್ರಂಥಪಾಲಕರು ಹಾಗೂ ವಿಜ್ಞಾನಿಗಳ ಸಂಘದ(ಮೈಲಿಸಾ) ಸಹಕಾರದೊಂದಿಗೆ ಸಂಯೋಜಿಸಲಾಗಿದೆ. ಮಾವುತರು ಹಾಗೂ ಅವರ ಕುಟುಂಬದವರಿಗೆ ಮಾತ್ರವಲ್ಲದೆ ಹೆಚ್ಚಾಗಿ ಅವರ ಮಕ್ಕಳಿಗೆ ಪುಸ್ತಕ ಪರಪಂಚದ ಪರಿಚಯ ಮಾಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಮಕ್ಕಳಿಗೆ ಟೆಂಟ್ ಗ್ರಂಥಾಲಯದಲ್ಲಿ ಕಥೆ ಹೇಳುವುದು, ಕಥೆ ಪುಸ್ತಕಗಳನ್ನು ಎಲವಲು ನೀಡುವುದು, ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದು, ಪುಸ್ತಕಗಳ ಪರಿಚಯ, ಪುಸ್ತಕಗಳ ಬಳಕೆ, ಪುಸ್ತಕಗಳನ್ನು ಗುರುತಿಸುವುದು, ಪುಸ್ತಕ ಸಂಗ್ರಹಣೆ ಮುಂತಾದ ಹಲವಾರು ವಿಷಯಗಳಲ್ಲಿ ಮಾಹಿತಿ ನೀಡುವುದು ಈ ಟೆಂಟ್ ಗ್ರಂಥಾಲಯದ ಚಟುವಟಿಕೆಯಾಗಿರುತ್ತದೆ.
     ಈ ಕಾರ್ಯಕ್ರಮವನ್ನು ತರಬೇತಿ ಹೊಂದಿದ ವೃತ್ತಿಪರ ಗ್ರಂಥಪಾಲಕರೇ ನಿರ್ವಹಿಸುತ್ತಾರೆ. ಈ ನಿಟ್ಟಿನಲ್ಲಿ ಮೈಲಿಸಾ ಹಾಗೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ಈಗಾಗಲೇ ಒಂದು ನಿಖರವಾದ ಯೋಜನೆಯನ್ನು ತಯಾರಿಸಿದೆ. ಟೆಂಟ್ ಶಾಲಾ ವೇಳಾ ಪಟ್ಟಿಯಲ್ಲಿ ವಾರಕ್ಕೆ ಎರಡು ಗಂಟೆಗಳ ಕಾಲ ಈ ಸೇವೆಯನ್ನು ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲ್ಲೂಕುಮಟ್ಟದ ಕ್ರೀಡಾಕೂಟ
     ಮೈಸೂರು,ಆ.30.ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ 2014-15ನೇ ಸಾಲಿನ ಹೆಚ್.ಡಿ.ಕೋಟೆ ತಾಲ್ಲೂಕುಮಟ್ಟದ ದಸರಾ ಕ್ರೀಡಾಕೂಟ ಮತ್ತು ಆರ್‍ಜಿಕೆಎ ಮಹಿಳಾ ಕ್ರೀಡಾಕೂಟವನ್ನು ಸೆಪ್ಟೆಂಬರ್ 3 ರಂದು  ಹೆಚ್.ಡಿ.ಕೋಟೆ ತಾಲ್ಲೂಕು ಕ್ರೀಡಾಂಗಣದಲ್ಲಿ  ಏರ್ಪಡಿಸಲಾಗಿದೆ.
     ಕ್ರೀಡಾಕೂಟದಲ್ಲಿ ರಕ್ಷಣಾಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಲ್ಲ. ಒಬ್ಬ ಕ್ರೀಡಾಪಟು ಅಥವಾ ತಂಡ ಯಾವುದೇ ತಾಲ್ಲೂಕಿನಲ್ಲಿ ಒಂದು ಬಾರಿ ಭಾಗವಹಿಸಿದ ನಂತರ ಬೇರೆ ಯಾವುದೇ ತಾಲ್ಲೂಕಿನಿಂದ ದಸರಾ ಹಾಗೂ ಆರ್‍ಜಿಕೆಎ ಮಹಿಳಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ. ಭಾಗವಹಿಸುವ ಸ್ಪರ್ಧಿಗಳಿಗೆ ಯಾವುದೇ ರೀತಿಯ ಭತ್ಯೆಯನ್ನು ಹಾಗೂ ಬಹುಮಾನಗಳನ್ನು ವಿತರಿಸಲಾಗುವುದಿಲ್ಲ, ಪ್ರಶಸ್ತಿ ಪತ್ರಗಳನ್ನು ಮಾತ್ರ ನೀಡಲಾಗುವುದು.
      ಸೆಪ್ಟೆಂಬರ್ 4 ರಂದು ಹೆಚ್.ಡಿ.ಕೋಟೆ ತಾಲ್ಲೂಕು ಕ್ರೀಡಾಂಗಣದಲ್ಲಿ ರಾಜೀವ್ ಗಾಂಧಿ ಕ್ರೀಡಾ ಮತ್ತು ಖೇಲ್ ಅಭಿಯಾನ್ (ಆರ್‍ಜಿಕೆಎ) ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ. ವಿಜೇತರಾದ ಕ್ರೀಡಾಪಟುಗಳಿಗೆ ಪ್ರಥಮ ಸ್ಥಾನ ಪಡೆದವರಿಗೆ ರೂ. 250-00, ದ್ವಿತೀಯ ಸ್ಥಾನ ಪಡೆದವರಿಗೆ ರೂ. 150-00, ತೃತೀಯ ಸ್ಥಾನ ಪಡೆದವರಿಗೆ ರೂ. 100-00 ಗಳಂತೆ ಬಹುಮಾನ ನೀಡಲಾಗುವುದು.
   ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ 31-12-1998 ರ ನಂತರ ಜನಿಸಿರಬೇಕು ಹಾಗೂ ಶಾಲೆಯಿಂದ ದೃಢೀಕರಿಸಿ ಜನ್ಮ ದಿನಾಂಕದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಭಾಗವಹಿಸುವ ಕ್ರೀಡಾಪಟುಗಳು ಗ್ರಾಮ ಪಂಚಾಯಿತಿಯಿಂದ ವಾಸಸ್ಥಳ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.     
ಕ್ರೀಡಾಕೂಟ ನಡೆಯುವ  ದಿನಾಂಕಗಳಂದು ಕ್ರೀಡಾಪಟುಗಳು ಕ್ರೀಡಾಕೂಟ ನಡೆಯುವ ಸ್ಥಳಗಳಲ್ಲಿ ಬೆಳಿಗ್ಗೆ 9.00 ಗಂಟೆಯೊಳಗೆ ಕ್ರೀಡಾ ಸಂಘಟನೆಯ ವ್ಯವಸ್ಥಾಪಕರಲ್ಲಿ ವರದಿ ಮಾಡಿಕೊಳ್ಳುವುದು.ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 0821-2564179 ರ ಮೂಲಕ ಸಂಪರ್ಕಿಸಬಹುದಾಗಿದೆ.                                                             

ಅರಿವು -ನೆರವು ಕಾರ್ಯಕ್ರಮ
    ಮೈಸೂರು,ಆ.30.ಟಿ.ನರಸೀಪುರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲ್ಲೂಕು ಶಿಕ್ಷಣ ಇಲಾಖೆ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಟಿ.ನರಸೀಪುರ ತಾಲ್ಲೂಕಿನ ಗುರುಭವನದಲ್ಲಿ ಮಕ್ಕಳ ಅಪೌಷ್ಠಿಕತೆ ತಡೆಗಟ್ಟುವುದು ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಬಗ್ಗೆ ಅರಿವು ನೆರವು ಕಾರ್ಯಕ್ರಮ ನಡೆಯಲಿದೆ.
    ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿನೇಶ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲ್ಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಸಿ.ಚಂದ್ರಶೇಖರ್ ಅವರು ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ 11 ಗಂಟೆಗೆ ಮಕ್ಕಳಲ್ಲಿ ಅಪೌಷ್ಠಿಕತೆ ಕಾರಣ ಮತ್ತು ಪರಿಹಾರ ಹಾಗೂ ಮಕ್ಕಳ ಅಪೌಷ್ಠಿಕತೆ ನಿವಾರಣೆಯಲ್ಲಿ ವಿವಿಧ ಇಲಾಖೆಗಳ ಪಾತ್ರ ಕುರಿತು ಟಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞ ಡಾ| ರವಿಕುಮಾರ್ ಉಪನ್ಯಾಸ ನೀಡುವರು. ಮಧ್ಯಾಹ್ನ 12-30 ಗಂಟೆಗೆ ಮಕ್ಕಳು ಶಾಲೆ ಬಿಡಲು ಕಾರಣ ಮತ್ತು ಪರಿಹಾರ ಹಾಗೂ ಇದನ್ನು ತಡೆಗಟ್ಟುವಲ್ಲಿ ವಿವಿಧ ಇಲಾಖೆಗಳ ಪಾತ್ರ ಕುರಿತು ಟಿ.ನರಸೀಪುರ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೃಷ್ಣಪ್ಪ ಅವರು ಉಪನ್ಯಾಸ ನೀಡುವರು.
ವಿಶೇಷ ಚಿಕಿತ್ಸಾ ಶಿಬಿರ
    ಮೈಸೂರು,ಆ.30.ಮೈಸೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಾಯಚಿಕಿತ್ಸಾ ಹೊರರೋಗಿ ವಿಭಾಗದಲ್ಲಿ  ಖಿನ್ನತೆ, ಅಸಹಾಯಕತೆ ಮತ್ತು ಅಸಮರ್ಥತೆಯ ಭಾವನೆ, ಜೀವನದಲ್ಲಿ ನಿರುತ್ಸಾಹ ಹಾಗೂ ಇನ್ನಿತರೆ ಮಾನಸಿಕ ತೊಂದರೆಗಳಿಗೆ ಸಂಬಂಧಿಸಿದಂತೆ ಉಚಿತ ವಿಶೇಷ ಚಿಕಿತ್ಸಾ ಶಿಬಿರವನ್ನು ಸೆಪ್ಟೆಂಬರ್ 1 ರಿಂದ 30 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಆಯೋಜಿಸಲಾಗಿದೆ. 
   ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ  0821-2443701ನ್ನು ಸಂಪರ್ಕಿಸಬಹುದು.
ಕಾಣೆಯಾಗಿರುವ ಹೆಂಗಸು ಹಾಗೂ ಹುಡುಗ ಪತ್ತೆಗೆ ಮನವಿ
ಮೈಸೂರು,ಆ.30.ಮೈಸೂರು ತಾಲ್ಲೂಕು ವರುಣ ಹೋಬಳಿಯ  ಮಹಾದೇವಿ ಕಾಲೋನಿ ಗ್ರಾಮದ ಪ್ರಭು ಬಿನ್ ಯಲ್ಲಯ್ಯ ಅವರ ಪತ್ನಿ ತಾಯಮ್ಮ 30 ವರ್ಷದ ಆಗಸ್ಟ್ 13 ರಿಂದ ಕಾಣೆಯಾಗಿದ್ದಾರೆÉ. ಹಾಗೂ ಮೈಸೂರು ತಾಲ್ಲೂಕು ವರುಣ ಹೋಬಳಿಯ ಉತ್ತನಹಳ್ಳಿ ಗ್ರಾಮದ ಶಿವರಾಜು ಕೆ.ಎಂ. ಸಮಾಜ ಸೇವಕರು ಅವರು ನೀಡಿರಿರುವ ದಿಲೀಪ. ಪಿ. ಅವರು ಆಗಸ್ಟ್ 8 ರಿಂದ ನಾಪತ್ತೆಯಾಗಿರುವ ಬಗ್ಗೆ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣವನ್ನು ನೋಂದಾಯಿಸಿ ತನಿಖೆ ಕೈಗೊಳ್ಳಲಾಗಿದೆ.
 ಹೆಂಗಸಿನ ಚಹರೆ ಇಂತಿದೆ: 5.5 ಅಡಿ, ಎಣ್ಣೆಗೆಂಪು ಬಣ್ಣ,  ಸಾಧಾರಣ ಮೈಕಟ್ಟು, ಕೆಂಪು ಬಣ್ಣದ ಸೀರೆ-ರವಿಕೆ ಧರಿಸಿರುತ್ತಾರೆ.   ಕನ್ನಡ, ತೆಗಲು ಭಾಷೆ ಮಾತನಾಡುತ್ತಾರೆ.
ಹುಡುಗ ಚಹರೆ ಇಂತಿದೆ: 4 ಅಡಿ, ಬಿಳಿ ಬಣ್ಣ ನೀಲಿ-ಬಿಳಿ ಬಣ್ಣದ ಮಿಶ್ರಿತ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಮಿಶ್ರಿತ ಕಾಫಿ ಬಣ್ಣದ ಚೆಕ್ಸ್ ಷರ್ಟ್ ಧರಿಸಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ.
ಕಾಣೆಯಾದ ಹೆಂಗಸು ಹಾಗೂ ಹುಡುಗನ ಪತ್ತೆಯ ಬಗ್ಗೆ ವಿವರ ಅಥವಾ ಮಾಹಿತಿ ತಿಳಿದು ಬಂದಲ್ಲಿ ಎಸ್.ಪಿ. ದೂ.ಸಂ: 2520040   ಅಥವಾ ಮೈಸೂರು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ: 2444800) ಅಥವಾ ಮೈಸೂರು ಸೌತ್ ಪೊಲೀಸ್ ಠಾಣೆ ದೂ.ಸಂ: 0821-2444955ನ್ನು ಅಥವಾ ಆರಕ್ಷಕ ಉಪ ನಿರೀಕ್ಷಕರವರಿಗಾಗಲಿ ತಿಳಿಸುವಂತೆ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ಕೋರಿದ್ದಾರೆ. 

No comments:

Post a Comment