Tuesday, 26 August 2014

ಕೆ.ಆರ್.ಪೇಟೆ-ಸುದ್ದಿಗಳು.

ಕೃಷ್ಣರಾಜಪೇಟೆ. ತಾಲೂಕಿನ ಬೂಕನಕೆರೆ ಹೋಬಳಿ ಬಳ್ಳೇಕೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯ ಬಳ್ಳೇಕೆರೆ ಗ್ರಾಮದ ಬಿ.ಜೆ.ಲಕ್ಷ್ಮೀಶ್(ರವಿ) ಅವರು ಚುನಾಯಿತರಾಗಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಮೊಸಳೆಕೊಪ್ಪಲು ಚಂದ್ರೇಗೌಡರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆಯು ನಡೆಯಿತು.
ಬೆಳಿಗ್ಗೆ 10 ಘಂಟೆಗೆ ನಾಮಪತ್ರವನ್ನು ಸಲ್ಲಿಸುವ ಪ್ರಕ್ರಿಯೆಯಲ್ಲಿ ಬಿ.ಜೆ.ಲಕ್ಷ್ಮೀಶ್ ಹಾಗೂ ಕಾಮನಹಳ್ಳಿ ಗ್ರಾಮದ ಆಶಾ ಅಶೋಕ್ ಅವರು ನಾಮಪತ್ರವನ್ನು ಸಲ್ಲಿಸಿದ್ದರು. ನಂತರ ಮಧ್ಯಾಹ್ನ 1 ಘಂಟೆಗೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಜೆ.ಲಕ್ಷ್ಮೀಶ್ 12 ಮತಗಳನ್ನು ಪಡೆದು ಆಯ್ಕೆಯಾದರೆ ವಿರೋಧಿ ಅಭ್ಯರ್ಥಿ ಆಶಾಅಶೋಕ್ ಅವರು 4 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಗಳಾಗಿ ಭಾಗವಹಿಸಿದ್ದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್.ಕೆಂಚಪ್ಪ ಅವರು ವಿಜೇತ ಅಭ್ಯರ್ಥಿಯ ಹೆಸರನ್ನು ಘೋಷಿಸಿದರು.
ಒಟ್ಟು 18 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಇಂದಿನ ಚುನಾವಣಾ ಪ್ರಕ್ರಿಯೆಯಿಂದ ಹೆಮ್ಮಡಹಳ್ಳಿ ಗ್ರಾಮದ ಸದಸ್ಯರುಗಳಾದ ಚಂದ್ರಶೆಟ್ಟಿ ಹಾಗೂ ಹಳೆಯೂರು ಗ್ರಾಮದ ಶಶಿಕಲಾ ಗೈರು ಹಾಜರಾಗಿದ್ದರು. ನೂತನ ಅಧ್ಯಕ್ಷರ ಪರವಾಗಿ ಬಿ.ಜೆ.ಲಕ್ಷ್ಮೀಶ, ಬಿ.ಆರ್.ಯೋಗೇಂದ್ರ, ಜಯಮ್ಮ, ನಾಗರಾಜು, ಕುಮಾರ್, ಸರ್ವಮಂಗಳ ವೆಂಕಟೇಶ್, ಸ್ವಾಮಿಗೌಡ, ಗೀತಾ, ನಂಜಪ್ಪ, ಚಂದ್ರೇಗೌಡ, ಗೀತಾ ಬಸವರಾಜು, ರವಿ ಮತ ನೀಡಿದರೆ ರಾಜು, ಭಾಗ್ಯಮ್ಮ, ನಾಗಮಣಿ ಮತ್ತು ಆಶಾ ವಿರುದ್ಧವಾಗಿ ಮತ ಚಲಾಯಿಸಿದರು. ಸಹಾಯಕ ಚುನಾವಣಾಧಿಕಾರಿಗಳಾಗಿ ತಾಲೂಕು ಪಂಚಾಯಿತಿ ಕಚೇರಿ ವ್ಯವಸ್ಥಾಪಕ ಶಿವಕುಮಾರ್ ಭಾಗವಹಿಸಿದ್ದರು.
ಅಭಿನಂದನೆ: ನೂತನ ಅಧ್ಯಕ್ಷರನ್ನು ಮಾಜಿ ಶಾಸಕರುಗಳಾದ ಕೆ.ಬಿ.ಚಂದ್ರಶೇಖರ್, ಮಾಜಿಸ್ಪೀಕರ್ ಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ ಅಭಿನಂದಿಸಿದ್ದಾರೆ.
ವಿಜಯೋತ್ಸವ ಆಚರಣೆ: ನೂತನ ಅಧ್ಯಕ್ಷರ ಆಯ್ಕೆಯ ಘೋಷಣೆ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಈ ವಿಜಯೋತ್ಸವದಲ್ಲಿ ಮುಖಂಡರುಗಳಾದ ಚೌಡೇನಹಳ್ಳಿ ನಾಗರಾಜು, ಬಳ್ಳೇಕೆರೆ ಸುರೇಶ್, ನಾರ್ಗೋನಹಳ್ಳಿ ನಾಗರಾಜು, ಮಹದೇವೇಗೌಡ, ಜವರಪ್ಪ, ಗುರುಸ್ವಾಮಿಗೌಡ, ರಂಗಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರುಗಳಾದ ಸೋಮಯ್ಯ, ನಾಗರಾಜು, ಮಾಜಿ ಅಧ್ಯಕ್ಷರುಗಳಾದ ಯೋಗೇಂದ್ರ, ಚಂದ್ರೇಗೌಡ, ಮಾಜಿ ಉಪಾಧ್ಯಕ್ಷ ಕಾಮನಹಳ್ಳಿ ಸ್ವಾಮಿ, ಪ್ರದೀಪ್, ಧನಂಜಯ, ವಿಜಯಕುಮಾರ್, ನಾಟನಹಳ್ಳಿ ದಿನೇಶ್, ಮುರಳಿ, ಬೂವನಹಳ್ಳಿ ರಾಮಕೃಷ್ಣ, ಹೆಮ್ಮಡಹಳ್ಳಿ ದೇವರಾಜು, ತಿಮ್ಮಪ್ಪ ಮತ್ತಿತರರು ಇದ್ದರು.

No comments:

Post a Comment