Sunday, 3 August 2014

ಕೃಷ್ಣರಾಜಪೇಟೆ. ರಾಷ್ಟ್ರದ ಮುನ್ನಡೆಯಲ್ಲಿ ಕಾರ್ಮಿಕರ ಪಾತ್ರವು ನಿರ್ಣಾಯಕವಾಗಿದೆ ನ್ಯಾಯಾಧೀಶ ಎಸ್.ಕುಮಾರ್.

ಕೃಷ್ಣರಾಜಪೇಟೆ. ರಾಷ್ಟ್ರದ ಮುನ್ನಡೆಯಲ್ಲಿ ಕಾರ್ಮಿಕರ ಪಾತ್ರವು ನಿರ್ಣಾಯಕವಾಗಿದೆ. ತಮ್ಮ ಪ್ರಾಣದ ಹಂಗನ್ನು ತೊರೆದು ಗಗನಚುಂಬಿ ಕಟ್ಟಡಗಳು, ಸೇತುವೆಗಳು ಹಾಗೂ ಅಣೆಕಟ್ಟೆಗಳನ್ನು ನಿರ್ಮಾಣ ಮಾಡಲು ಬೆವರು ಹರಿಸಿ ದುಡಿಯುತ್ತಿರುವ ಕಾರ್ಮಿಕ ಬಂಧುಗಳು ಸಂಘಟಿತರಾಗಿ ತಮಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸೌಲಭ್ಯಗಳನ್ನು ಕೇಳಿ ಪಡೆಯಬೇಕು ಎಂದು ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಕುಮಾರ್ ಮನವಿ ಮಾಡಿದರು.
ಅವರು ಇಂದು ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಕಾರ್ಮಿಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಟ್ಟಡ ಕಾರ್ಮಿಕರು, ಮರಗೆಲಸಗಾರರು ಹಾಗೂ ಗಾರೆ ಕೆಲಸಗಾರರಿಗೆ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದುವರೆದ ಸುಭದ್ರ ರಾಷ್ಟ್ರಕ್ಕೆ ಅಗತ್ಯವಾಗಿ ಬೇಕಾದ ಕಟ್ಟಡಗಳು, ಸೇತುವೆಗಳು ಹಾಗೂ ಕೈಗಾರಿಕೆಗಳು ಸೇರಿದಂತೆ ಮೂಲಭೂತ ಸೌಲಭ್ಯವನ್ನು ತಮ್ಮ ವೃತ್ತಿಕೌಶಲ್ಯದ ಮೂಲಕ ದೊರಕಿಸಿಕೊಡುತ್ತಿರುವ ಕಾರ್ಮಿಕರ ಸ್ಥಿತಿ-ಗತಿಗಳು ಇಂದು ಚಿಂತಾಜನಕವಾಗಿವೆ. ಶಿಕ್ಷಣದ ಕೊರತೆ ಹಾಗೂ ಅಜ್ಞಾನದಿಂದಾಗಿ ತಮಗೆ ಸಂವಿಧಾನಬದ್ಧವಾಗಿ ಸಿಗುತ್ತಿರುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳದ ಕಾರ್ಮಿಕರು ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಸಂಪೂರ್ಣವಾಗಿ ಖರ್ಚುಮಾಡಿಕೊಂಡು ಸಾಲದ ಬೇಗೆಗೆ ಸಿಕ್ಕಿ ನರಳುತ್ತಿದ್ದಾರೆ. ಬಹುತೇಕ ಕಾರ್ಮಿಕರು ದುಶ್ಚಟಗಳಿಗೆ ದಾಸರಾಗಿರುವುದರಿಂದಾಗಿ ಅಕಾಲಿಕವಾಗಿ ಸಾವಿಗೆ ಶರಣಾಗುವವರ ಸಂಖ್ಯೆಯೇ ಹೆಚ್ಚಾಗಿದೆ. ಕಾರ್ಮಿಕರ ಕಲ್ಯಾಣಕ್ಕಾಗಿಯೇ ಸ್ಥಾಪಿತವಾಗಿರುವ ಕಾರ್ಮಿಕ ಇಲಾಖೆಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಂಡು ಗುರುತಿನ ಚೀಟಿಯನ್ನು ಪಡೆದುಕೊಂಡು ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಕೇಳಿ ಪಡೆದುಕೊಳ್ಳಬೇಕು. ಈ ದಿಕ್ಕಿನಲ್ಲಿ ಕಾರ್ಮಿಕ ಬಂಧುಗಳಲ್ಲಿ ಅರಿವಿನ ಜಾಗೃತಿಯನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳನ್ನು ನಡೆಸಿ ಸಮಾಜದಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯೂ ಆರ್ಥಿಕ ಸಮಾನತೆಯನ್ನು ಸಾಧಿಸಿ ಪ್ರಗತಿಯ ದಿಕ್ಕಿನಲ್ಲಿ ಸಾಗುವಂತೆ ನ್ಯಾಯಾಂಗ ಇಲಾಖೆಯು ಪ್ರೇರೇಪಣೆ ಮಾಡುತ್ತಿದೆ. ಕಾರ್ಮಿಕ ಬಂಧುಗಳು ದುಶ್ಚಟಗಳಿಂದ ದೂರವಿದ್ದು ತಾವು ಕಷ್ಟಪಟ್ಟು ಗಳಿಸಿದ ಹಣದಲ್ಲಿ ಅಲ್ಪ ಭಾಗವನ್ನು ಕೂಡಿಟ್ಟು ಉಳಿತಾಯ ಮಾಡಿದರೆ ಆಹಣವು ನಿಮ್ಮ ಕಷ್ಠಕಾಲದಲ್ಲಿ ಕಾಪಾಡುವುದರಿಂದ ಮೂಡನಂಭಿಕೆಯಿಂದ ಕಾರ್ಮಿಕರು ಹೊರಬಂದು ನೆಮ್ಮದಿಯ ಜೀವನವನ್ನು ನಡೆಸಬೇಕು ಎಂದು ನ್ಯಾಯಾಧೀಶ ಕುಮಾರ್ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಟ್ಟಣದ ಸಿವಿಲ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಎಸ್.ಗೋಪಾಲಪ್ಪ ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ವಿತರಿಸಿ ಮಾತನಾಡಿ ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಎಂಬ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಆಶಯದಂತೆ ಬಡತನದ ಬೇಗೆಯಲ್ಲಿಯೇ ನೊಂದು-ಬೇಯುತ್ತಿರುವ ಕಾರ್ಮಿಕರು ಸಂಘಟಿತರಾಗಿ ತಮಗೆ ನ್ಯಾಯಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕೇಳಿ ಪಡದುಕೊಂಡು ಅಭಿವೃಧ್ಧಿಯ ಪಥದತ್ತ ಸಾಗಬೇಕು. ಕಟ್ಟಡ ನಿರ್ಮಾಣ ಸೇರಿದಂತೆ ಯಾವುದೇ ವಿಭಾಗದಲ್ಲಿ ಕಾರ್ಮಿಕರಿಂದ ದುಡಿಮೆ ಮಾಡಿಸಿಕೊಂಡು ಹಣ ನೀಡದೇ ಶೋಷಣೆ ಮಾಡಿದರೆ ನ್ಯಾಯಾಲಯಕ್ಕೆ ಇಲ್ಲವೇ ಕಾರ್ಮಿಕ ಇಲಾಖೆಗೆ ದೂರು ನೀಡಬೇಕು ಎಂದು ಮನವಿ ಮಾಡಿದ ನ್ಯಾಯಾಧೀಶರು ಕಾರ್ಮಿಕ ಬಂಧುಗಳು ಮೊದಲು ಅಜ್ಞಾನದಿಂದ ಹೊರಬಂದು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣದ ಜ್ಞಾನವನ್ನು ಕೊಡಿಸಬೇಕು. ಶಿಕ್ಷಣದ ಶಕ್ತಿಗೆ ಮಾತ್ರ ಇಂದು ಸಮಾಜದ ಅಸಮಾನತೆಯನ್ನು ಅಳಿಸಿ ಹಾಕಿ ಧನಿಯಿಲ್ಲದವರಿಗೆ ಧ್ವನಿಯನ್ನು ನೀಡುವ ಶಕ್ತಿಯಿರುವುದರಿಂದ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕು ಎಂದು ಕರೆ ನೀಡಿದರು.
ತಾಲೂಕು ಕಾರ್ಮಿಕ ನಿರೀಕ್ಷಕಿ ವನಜಾಕ್ಷಿ ಕಾರ್ಮಿಕ ಇಲಾಖೆಯಿಂದ ನೊಂದಾಯಿತ ಕಾರ್ಮಿಕರಿಗೆ ಸರ್ಕಾರದಿಂದ ಹಾಗೂ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಕಡ್ಡಾಯವಾಗಿ ಇಲಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಗುರುತಿನ ಚೀಟಿಯನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅನಂತರಾಮಯ್ಯ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಜಂಟಿ ಕಾರ್ಯದರ್ಶಿ ಕೆರೆಮೇಗಳಕೊಪ್ಪಲು ಶಂಕರೇಗೌಡ, ಹಿರಿಯ ವಕೀಲರಾದ ಬಿ.ಎಲ್.ದೇವರಾಜು, ಹೆಚ್.ರವಿ, ಬಂಡಿಹೊಳೆಗಣೇಶ್, ಸಿ.ಎನ್.ಮೋಹನ್, ಎನ್.ಆರ್.ರವಿಶಂಕರ್, ಕೆ.ಎನ್.ನಾಗರಾಜು, ಹೆಚ್.ಜಿ.ವೆಂಕಟೇಶ್, ಬಿ.ಆರ್.ಪಲ್ಲವಿ, ಎಸ್.ಡಿ.ಸರೋಜಮ್ಮ, ವಿವಿಧ ಕಾರ್ಮಿಕ ಸಂಘಗಳ ಪದಾಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು.
ತಾಲೂಕು ಕಾರ್ಮಿಕ ನಿರೀಕ್ಷಕಿ ವನಜಾಕ್ಷಿ ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಎನ್.ಮಂಜುನಾಥ್ ವಂದಿಸಿದರು. ಕೆರೆಮೇಗಳಕೊಪ್ಪಲು ಶಂಕರೇಗೌಡ ಕಾರ್ಯಕ್ರಮ ನಿರೂಪಿಸಿದರು.


No comments:

Post a Comment