Friday, 8 August 2014

ಮೈಸೂರು-ನೇತ್ರ ದಾನದ ಬಗ್ಗೆ ಆ. 9 ರಂದು ಬೃಹತ್ ಜಾಗೃತಿಜಾಥ-ಬಿಜೆಪಿ ಸಚಿವರು ಸಂಸದರುಗಳು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ – ವಿಶ್ವನಾಥ್ ಆರೋಪ

ನೇತ್ರ ದಾನದ ಬಗ್ಗೆ ಆ. 9 ರಂದು ಬೃಹತ್ ಜಾಗೃತಿಜಾಥ

ಮೈಸೂರು.8
ನೇತ್ರದಾನದ ಬಗ್ಗೆ  ಸಾರ್ವಜನಿಕರಲ್ಲಿ  ಅರಿವು ಮೂಡಿಸುವ ಸಲುವ ವಾಗಿ ಆ.9ರಂದು ಮೈಸೂರಿನಲ್ಲಿ ಬೃಹತ್ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಲಾಸಿಕ್ ಅಧ್ಯಕ್ಷ ಲ.ಸಿ.ಕೃಷ್ಣ ತಿಳಿಸಿದರು.
ಇಂದು  ಪತ್ರಕರ್ತರ ಭವನದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರದಾನ ಮಾಡುವುದು ಪುಣ್ಯದ ಕೆಲಸವಾಗಿದೆ. ಅಂಧರನ್ನು ಬೆಳಕಿನೆಡೆಗೆ ಕರೆದೊಯ್ಯುವ  ಕೆಲಸ ಇದಾಗಿರುತ್ತದೆ. ಈ ನಿಟ್ಟಿನಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಲಾಸಿಕ್ ಸಂಸ್ಥೆ ಮೈಸೂರು ಜಿಲ್ಲೆಯಲ್ಲಿಸ ನೇತ್ರದಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ  ಮೂಲಕ ಜನರಲ್ಲಿ ನೇತ್ರದಾನದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ (ಆ.9) ಶನಿವಾರ ಬೆಳಗ್ಗೆ 10.30ಕ್ಕೆ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ನೇತ್ರದಾನ ಮಹತ್ವ ಕುರಿತ ಅರಿವು ಜಾಥವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
 ಲಯನ್ಸ್ ಕ್ಲಬ್ ಆಫ್ ಮೈಸೂರು ಜಿಲ್ಲೆ 317ಎ 2ನೇ ಉಪರಾಜ್ಯಪಾಲ ಲ.ಅನೀಲ್ ಕುಮಾರ್  ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆರ್‍ಬಿಐ ನೋಟು ಮುದ್ರಣಾಲಯದ ವ್ಯವಸ್ಥಾಪಕ ಠಾಕೂರ್ ದೇಸಾಯಿ, ಲಯನ್ಸ್ ಕ್ಲಬ್‍ನ ನೇತ್ರದಾನ ವಿಭಾಗದ ಜಿಲ್ಲಾಧ್ಯಕ್ಷ ಮಂಜುನಾಥ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ. ಕೋಟೆ ಆಂಜನೇಯ ಸ್ವಾಮಿ ದೇವಾಲಯದಿಂದ ಆರಂಭವಾಗುವ ಜಾಗೃತಿ ಜಾಥದಲ್ಲಿ 150 ಮಂದಿ ಅಂಧ ವಿದ್ಯಾರ್ಥಿಗಳು ಒಳಗೊಂಡಂತೆ 300ಕ್ಕೂ ಹೆಚ್ಚು ಮಂದಿ ಲಯನ್ಸ್ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಎಂದರು.
  ಅರಮನೆ  ಮುಂದಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಿಂದ ಆರಂಭವಾಗುವ ನೇತ್ರದಾನ ಜಾಗೃತಿ ಜಾಥ ದೊಡ್ಡ ಗಡಿಯಾರ ವೃತ್ತ, ಮಹಾತ್ಮ ಗಾಂಧಿ ವೃತ್ತ, ಡಿ.ದೇವರಾಜ ಅರಸ್ ರಸ್ತೆಯ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಸಮೀಪವಿರುವ ಲಯನ್ಸ್ ಭವನವನ್ನು ತಲುಪಲಿದೆ. ಈ ಜಾಥದಲ್ಲಿ ಪಾಲ್ಗೊಳ್ಳುತ್ತಿರುವ ಅಂಧ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಕಷ್ಟವನ್ನು ಜನ ಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಬ್ಬ ವ್ಯಕ್ತಿ ಮೃತಪಟ್ಟರೆ ಅವರ ಎರಡು ಕಣ್ಣುಗಳು ಇಬ್ಬರ   ಅಂಧತ್ವವನ್ನು ನಿವಾರಿಸುತ್ತವೆ. ಈ ಹಿನ್ನೆಲೆಯಲ್ಲಿ ನೇತ್ರದಾನ ಮಾಡುವುದಕ್ಕೆ ಎಲ್ಲರೂ ಮುಂದಾಗಬೇಕು. ಈ ಮೂಲಕ ಅಂಧರ ಬಾಳಿನಲ್ಲಿ ಬೆಳಕಾಗಬೇಕೆಂದು ಅವರು ಮನವಿ ಮಾಡಿದರು.
 ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಕ್ಲಾಸಿಕ್ ಸಂಸ್ಥೆಯ ಸಂಸ್ಥಾಪಕ ಸದಸ್ಯ ಲ.ಬಿ.ವಿ.ರವೀಂದ್ರನಾಥ್, ಕಾರ್ಯದರ್ಶಿ ಲ.ಎಫ್.ಡೇವಿಡ್ ಡಿಸೋಜ, ಖಜಾಂಚಿ ಲ.ಎನ್.ಎಸ್.ವಿಶ್ವನಾಥ್ ನೇತ್ರದಾನ ಘಟಕದ ಜಿಲ್ಲಾಧ್ಯಕ್ಷ ಎಲ್.ಮಂಜುನಾಥ್ ಉಪಸ್ಥಿತರಿದ್ದರು.

ಬಿಜೆಪಿ ಸಚಿವರು ಸಂಸದರುಗಳು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ – ವಿಶ್ವನಾಥ್ ಆರೋಪ


ಮೈಸೂರು, ಆ.8-
 ಕೇಂದ್ರ ಸರ್ಕಾರದ ಬಿಜೆಪಿ ಸಂಸದರು ಹಾಗೂ ಮಂತ್ರಿಗಳು ಯಾವುದೇ ವಿಷಯವನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಗೂಂಡಾಗಳಂತೆ ವರ್ತಿಸುವ ಪರಿಪಾಠ ಹೊಂದಿದ್ದಾರೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಆರೋಪಿಸಿದರು.
  ಇಂದು ಮೈಸೂರಿನ  ಪತ್ರಕತ್ರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಗೆಷ್ಟೇ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಸುತ್ತೂರು ಮಠಕ್ಕೆ ವಿಮಾನ ಯಾನ ರಾಜ್ಯ ಸಚಿವ ಸಿದ್ದೇಶ್ವರ ಅವರು ಭೇಟಿ  ನೀಡಿದ್ದ ವೇಳೆ ಮೈಸೂರು ನಗರದಿಂದ ಹಾರಾಟ ಮಾಡುತ್ತಿದ್ದ ಸ್ಪೈಸ್ ಜೆಟ್ ವಿಮಾನ ಸ್ಥಗಿತಗೊಂಡಿರುವುದನ್ನು ಪುನರಾರಂಭಿಸುವಂತೆ ಒತ್ತಾಯಿಸಿದ್ದ ವೇಳೆ ಸಂಸದ ಪ್ರತಾಪ್ ಸಿಂಹ ಅವರು ಮಧ್ಯ ಪ್ರವೇಶಿಸಿ ಇಂಧನ ತೆರಿಗೆ ರಾಜ್ಯ ಸರಕಾರ ಶೇ.28 ರಷ್ಟು ವಿಧಿಸುತ್ತಿದೆ. ಇದರಿಂದ ವಿಮಾನಯಾನ ಸ್ಥಗಿತಗೊಂಡಿದೆ ಎಂದು ರಾಜ್ಯ ಸರಕಾರದ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಈ ವೇಳೆ ರಾಜ್ಯ ಸರಕಾರ ಇಂಧನ ಮೇಲಿನ ತೆರಿಗೆಯನ್ನು ಶೇ.28 ರಿಂದ ಶೇ.5ಕ್ಕೆ ಇಳಿಕೆ ಮಾಡಿದೆ. ಆದರೆ ಇದನ್ನು ಅರಿಯದೇ ಸಂಸದ ಪ್ರತಾಪ್ ಸಿಂಹ ಅವರು ಇಂಧನ ತೆರಿಗೆ ಶೇ.28 ರಷ್ಟು ರಾಜ್ಯ ಸರಕಾರ ವಿಧಿಸಿದೆ ಎಂದು ಸಚಿವರನ್ನು ಹಾದಿ ತಪ್ಪಿಸಿದ್ದಾರೆ. ಈ ವೇಳೆ ಇಂಧನದ ಮೇಲಿನ ತೆರಿಗೆಯನ್ನು ರಾಜ್ಯ ಸರಕಾರ ಶೇ.5 ಇಳಿಸಿದೆ ಎಂದು ಹೇಳಲು ಮುಂದಾದರೂ ಅದಕ್ಕೆ ಅವಕಾಶ ನೀಡದೆ ಎಲ್ಲಾ ವಿಷಯವನ್ನು ತಿಳಿದಿರುವಂತೆ ಮೇಲೆ ಬಿದ್ದು ಮಾತನಾಡಿದ್ದಾರೆ. ಸಂಸದರರ ಈ ವರ್ತನೆ ಗೂಂಡಾ ವರ್ತನೆಯಂತಿದ್ದು ಶ್ರೀಗಳ ಸಮ್ಮುಖದಲ್ಲಿ ಮಾತನಾಡಬಾರದೆಂದು ವಾಪಸ್ಸಾಗಿದ್ದಾಗಿ ಹೇಳಿದರು. 
   ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವುದಕ್ಕೆ ಸಂಬಂಧಿಸಿದಂತೆ ವಿಮಾನಯಾನದ ಸಂಪುಟ ದರ್ಜೆ ಸಚಿವ ಅಶೋಕ್ ಪಲ್ಲಂರಾಜು ಅವರು ಆ.4 ರಂದು ಪರಿಶೀಲನೆ ಮಾಡುವ ಸಂದರ್ಭದಲ್ಲಿಯೂ ಇಂಧನದ ಮೇಲಿನ ತೆರಿಗೆಯನ್ನು ಶೇ.28 ನಿಗಧಿ ಮಾಡಿರುವುದರಿಂದ ಖಾಸಗಿ ವಿಮಾನ ಸಂಸ್ಥೆಗಳು ವಿಮಾನಯಾನ ಆರಂಭಿಸುವುದಕ್ಕೆ ಹಿಂದೇಟು ಹಾಕುತ್ತಿವೆ ಎಂದು ಸುಳ್ಳು ಮಾಹಿತಿ ನೀಡುವ ಮೂಲಕ ನಗರದ ಜನತೆಯನ್ನು ದಿಕ್ಕು ತಪ್ಪಿಸಿದ್ದಾರೆ. ಈ ಹಿಂದೆ ತಾನು ಸಂಸದನಾಗಿದ್ದಾಗ ಮೈಸೂರು ನಗರದಿಂದ ನಿರಂತರವಾಗಿ ಖಾಸಗಿ ವಿಮಾನ ಹಾರಾಟ ನಡೆಯುವುದಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ  ರಾಜ್ಯ ಸರಕಾರವನ್ನು ತೆರಿಗೆಯನ್ನು ಶೇ.4 ರಷ್ಟು ಮಾಡಿಸಿದ್ದೆ. ಆದರೆ 2011 ರ ಏಪ್ರಿಲ್ 12 ರಂದು ರಾಜ್ಯ ಸರಕಾರ ವಾಣಿಜ್ಯ ತೆರಿಗೆ ಇಲಾಖೆಯಿಂದ ಆದೇಶವೊಂದನ್ನು ಹೊರಡಿಸಿ ಇಂಧನ ತೆರಿಗೆಯನ್ನು ಶೇ.4 ರಿಂದ ಶೇ.5ಕ್ಕೆ ಏರಿಸಿ ಆದೇಶ ಹೊರಡಿಸಿದೆ. ಇದೀಗ ಮೈಸೂರಿನಿಂದ ವಿಮಾನಯಾನ ನಡೆಸುವುದಕ್ಕೆ ಇಂಧನ ತೆರಿಗೆ ಶೇ.5 ರಷ್ಟಿದೆ. ಬೆಂಗಳೂರಿನಲ್ಲಿ ಶೇ.22 ರಷ್ಟಿದೆ. ಇದನ್ನು ಸಂಸದರು ಮನಗಾಣಬೇಕು. ಹಿಂದಿನ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸದ ಪ್ರತಾಪ್ ಸಿಂಹವರಿಗೆ ಮೈಸೂರು ನಗರದ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದಿರುವುದು ತಿಳಿಯುತ್ತದೆ. ಅಂಕಣವೊಂದರಲ್ಲಿ ಬರೆದುಕೊಳ್ಳುವ ಸಂಸದರು  ಅಭಿವೃದ್ಧಿಗೆ ತಮ್ಮ ಕೊಡುಗೆ ಏನು ಹಾಗೂ ತಾವು ಇದೂವರೆಗೆ ಏನೇನು ಒತ್ತಾಯ ಮಾಡಿದ್ದರು ಎಂಬುದನ್ನು ತಿಳಿಸಲಿ ಎಂದು ಒತ್ತಾಯಿಸಿದರಲ್ಲದೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ 132 ಎಕರೆ ಭೂಮಿಯನ್ನು ನೋಟಿಫಿಕೇಶನ್ ಮಾಡಿದ್ದ ಪ್ರಕರಣಗನ್ನು ಜಗದೀಶ್ ಶೆಟ್ಟರ್ ಅವರ ಸರಕಾರ ಡಿ ನೋಟಿಫಿಕೇಶನ್ ಮಾಡಿ ಆದೇಶ ಹೊರಡಿಸಿದೆ. ಆದರೆ ಸಂಸದರು ಡಿ ನೋಟಿಫೈ ಮಾಡಿಲಲ್ ಎಂದು ವಾದಿಸುತ್ತಿದ್ದಾರೆ. ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರಕಾರ ರಿಯಲ್ ಎಸ್ಟೇಟ್ ಸರಕಾರವಾಗಿತ್ತು ಎಂದು ಅವರು ಲೇವಡಿ ಮಾಡಿದರು.
ಸಂಸದರ ಈ ನಿಲುವಿನಿಂದಾಗಿ ಹಲವು ಯೋಜನೆಗಳು ತಟಸ್ಥವಾಗುತ್ತಿವೆ. ಬಿಡುಗಡೆಗೊಂಡ ಅನುದಾನಗಳು ವಾಪಸ್ಸಾಗುತ್ತಿವೆ. ಈಗಾಗಲೇ ನರ್ಮ್ ಯೋಜನೆ ಕೈ ತಪ್ಪುತ್ತಿದ್ದು, ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರದ ಬೇಜವಾಬ್ದಾರಿಯಿಂದ ನರ್ಮ್ ಯೋಜನೆಗೆ ಬಿಡುಗಡೆಯಾಗಿದ್ದ ಅನುದಾನ ವಾಪಸ್ ಹೋಗಿದೆ. ಸಾರಿಗೆ ಸಚಿವರಾಗಿದ್ದ ಅಶೋಕ್ ಅವರು ನರ್ಮ್ ಹಣವನ್ನು ಪೋಲು ಮಾಡಿ ಬಸ್ ನಿಲ್ದಾಣಗಳನ್ನು ಮಾಲ್‍ಗಳನ್ನಾಗಿ ಪರಿವರ್ತಿಸಿ ಜನರಿಗೆ ತೊಂದರೆ ನೀಡಿದ್ದಾರೆ. ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಜಾಗವಿಲ್ಲದಿದ್ದ ಪರಿಸ್ಥಿತಿ ಇದ್ದರೆ, ವಿವಿಧೆಡೆ ನಿರ್ಮಿಸಿರುವ ಬಸ್ ನಿಲ್ದಾಣಗಳಲ್ಲಿ ನಾಯಿಗಳು ಮತ್ತು ಭಿಕ್ಷುಕರು ಆಶ್ರಯ ಪಡೆದಿವೆ ಎಂದು ವ್ಯಂಗ್ಯವಾಡಿದರು.

No comments:

Post a Comment