ದಸರಾ ಕಾರ್ಯಕ್ರಮ
ಮೂರು ದಿನದಲ್ಲಿ ರೂಪುರೇಷೆ ವರದಿ ಸಲ್ಲಿಸಿ-ಡಿಸಿ.ಸಿ.ಶಿಖಾ
ಮೈಸೂರು,ಆ.7.ವಿವಿಧ ದಸರಾ ಸಮಿತಿಗಳು ಮೂರು ದಿನಗಳ ಒಳಗಾಗಿ ಕಾರ್ಯಕ್ರಮಗಳ ರೂಪುರೇಷೆ ಸಿದ್ದಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಇಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿದ ಅವರು ಬಹುತೇಕ ಹಿಂದಿನ ವರ್ಷದ ಅಧಿಕಾರಿಗಳೇ ಇದ್ದು ಹಿಂದಿನ ವರ್ಷದ ಅನುಭವನದಲ್ಲಿ ಯಾವ ರೀತಿ ಕಾರ್ಯಕ್ರಮ ಉತ್ತಮಪಡಿಸಬಹುದು ಎಂಬುದರ ಬಗ್ಗೆ ಸಲಹೆ ನೀಡುವಂತೆ ತಿಳಿಸಿದರು.
ಸಮಿತಿಗಳು ಸಲ್ಲಿಸುವ ರೂಪುರೇಷೆಗಳ ಕ್ರಿಯಾಯೋಜನೆಯನ್ನು ಅನುಮೋದನೆಗಾಗಿ ಕಾರ್ಯಕಾರಿ ಸಮಿತಿ ಮುಂದೆ ಒಪ್ಪಿಗೆಗಾಗಿ ಮಂಡಿಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮಗಳನ್ನು ರೂಪಿಸಲು ಸಿದ್ದತೆ ಕೈಗೊಳ್ಳಬೇಕೆಂದು ಸೂಚಿಸಿದರು.
ಕಳೆದ ವರ್ಷ ಆಹಾರಮೇಳ ಯಶಸ್ವಿಯಾಗಿ ನಡೆದಿದ್ದು ಮೆಚ್ಚುಗೆ ಗಳಿಸಿದೆ. ಆಹಾರ ಮೇಳ ಅವಧಿಯನ್ನು ವಿಸ್ತರಿಸಲು ಸಹ ಬೇಡಿಕೆ ಬಂದಿತ್ತು. ಈ ವರ್ಷ ಸಹ ಉತ್ತಮವಾಗಿ ಆಯೋಜಿಸಲು ಶ್ರಮ ವಹಿಸಬೇಕು ಎಂದು ಹೇಳಿದರು.
ವಿವಿಧ ಉಪಸಮಿತಿಗಳು ಪ್ರತ್ಯೇಕವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ತಮ್ಮ ವೇದಿಕೆಯಲ್ಲಿ ಆಯೋಜಿಸುತ್ತಿದ್ದು, ಇದರಲ್ಲಿ ಕೆಲವರಿಗಷ್ಠೆ ಅವಕಾಶ ದೊರೆಯುತ್ತಿದೆ ಎಂಬ ದೂರುಗಳು ಇವೆ. ಆದ್ದರಿಂದ ಸಾಂಸ್ಕøತಿಕ ಸಮಿತಿಯಿಂದಲೇ ಕಲಾ ತಂಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮೈಸೂರು ಅರಮನೆ, ಚಾಮುಂಡಿಬೆಟ್ಟ ಹಾಗೂ ಮೃಗಾಲಯವನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವೆಂದು ಮುಖ್ಯಮಂತ್ರಿಗಳು ಉನ್ನತಾಧಿಕಾರಿಗಳ ಸಮಿತಿಯಲ್ಲಿ ತಿಳಿಸಿದ್ದು, ದಸರಾ ಕಾರ್ಯಕ್ರಮ ನಡೆಯುವ ಎಲ್ಲ ಸ್ಥಳಗಳಲ್ಲಿ ಸ್ವಚ್ಚತೆ ನಿರ್ವಹಣೆಗಾಗಿ ಮಹಾನಗರಪಾಲಿಕೆಯ ಪರಿಸರ ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕಳೆದ ವರ್ಷ ದೀಪಾಲಂಕಾರದ ಕುರಿತು ಮಿಶ್ರ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲಾಖಾ ಸಚಿವರ ಜೊತೆ ಚರ್ಚಿಸಿ ಸಲಹಾ ಸಮಿತಿ ಸಭೆ ನಡೆಸಿ ಅಭಿಪ್ರಾಯ ಪಡೆಯುವಂತೆ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣಾ ನಿಗಮದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಖಾ ಸೂಚನೆ ನೀಡಿದರು.
ಪ್ರವಾಸೋದ್ಯಮ ಸಮಿತಿಯಿಂದ ಸಾಕಷ್ಟು ಮುಂಚಿತವಾಗಿಯೇ ಪ್ರಚಾರ ಕಾರ್ಯ ಹಮ್ಮಿಕೊಳ್ಳಲು ಯೋಜಿಸಬೇಕು. ಸ್ವಯಂ ಸೇವಕರಿಗೆ ಉತ್ತಮ ತರಬೇತಿ ವ್ಯವಸ್ಥೆ ಮಾಡುವಂತೆ ಅವರು ತಿಳಿಸಿದರು. ಪ್ರಚಾರ ಸಮಿತಿಯ ಜೊತೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರವಾಸೋದ್ಯಮ ಅಧಿಕಾರಿಗಳಿಗೆ ತಿಳಿಸಿದರು. ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗಲು ಕಳೆದ ವರ್ಷ ಮೈಸೂರು ವಿಶ್ವವಿದ್ಯಾನಿಲಯದ ವಿದೇಶಿ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರನ್ನಾಗಿ ಉಪಯೋಗಿಸಿಕೊಳ್ಳಲಾಗಿತ್ತು. ಈ ವರ್ಷವೂ ಅದನ್ನು ಮುಂದುವರಿಸಬಹುದೆಂದು ಹೇಳಿದರು.
ಮೈಸೂರು ನಗರ ಪೊಲೀಸ್ ಹಾಗೂ ಪ್ರವಾಸೋದ್ಯಮ ಸಮಿತಿಯ ಕಿಯೋಸ್ಕ್‍ಗಳು ಪುನರಾವರ್ತನೆ ಆಗುತ್ತಿದ್ದು, ಮುಂಚಿತವಾಗಿ ಚರ್ಚೆಸಿ ಒಂದೇ ಸ್ಥಳದಲ್ಲಿಯೇ ಎರಡು ಕಿಯೋಸ್ಕ್‍ಗಳು ಇರದ ರೀತಿ ಎಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹಿಂದಿನ ವರ್ಷಗಳ ದಸರಾ ದಾಖಲೆಗಳನ್ನು ಸಂಗ್ರಹಿಸಲು ಅರಮನೆಯಲ್ಲಿ ಪ್ರತ್ಯೇಕ ದಾಖಲೆ ಕೊಠಡಿ ಅರಂಭಿಸಿದ್ದು, ಆಯಾ ಸಮಿತಿಗಳು ತಮ್ಮಲ್ಲಿರುವ ಛಾಯಾಚಿತ್ರ, ವಿಡಿಯೋ ಮತ್ತಿತರ ಕಾರ್ಯಕ್ರಮ ವಿವರಗಳನ್ನು ಒದಗಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಈ ವರ್ಷದ ದಸರಾ ಕಾರ್ಯಕ್ರಮದ ದಾಖಲೀಕರಣಕ್ಕೆ ಕೇಂದ್ರೀಕೃತ ವ್ಯವಸ್ಥೆ ಮಾಡುವುದಾಗಿಯೂ ಹೇಳಿದರು.
ಮುಡಾ ಆಯುಕ್ತ ಪಾಲಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸೇವಾ ಕ್ಷೇತ್ರದ ಅಂಕಿ-ಅಂಶ ಅಗತ್ಯ-ಡಿ.ಎಸ್. ಲೀಲಾವತಿ
ಮೈಸೂರು,ಆ.7.ಸೇವಾ ಕ್ಷೇತ್ರದಲ್ಲಿನ ಆರ್ಥಿಕ ಚುಟುವಟಿಕೆಯ ನಿಖರ ಅಂಕಿ ಅಂಶ ಸಂಗ್ರಹಿಸಬೇಕಾದ ಅವಶ್ಯಕತೆಯಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಇಲಾಖೆಯ ಪ್ರಾಧ್ಯಾಪಕಿ ಡಿ.ಎಸ್. ಲೀಲಾವತಿ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರು ಜಿಲ್ಲಾ ಪಂಚಾಯತ್ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯು ಮೈಸೂರು ನಗರದಲ್ಲಿ ಇಂದು ಆಯೋಜಿಸಿದ ಸಾಂಖ್ಯಿಕ ದಿನಾಚರಣೆ ಹಾಗೂ ಡಾ. ಮಹಾಲನೋಬಿಸ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸೇವಾ ಕ್ಷೇತ್ರದಲ್ಲಿ ಅಂಕಿ-ಅಂಶಗಳ ಮಹತ್ವ ಕುರಿತು ಅವರು ತಜ್ಞ ಉಪನ್ಯಾಸ ನೀಡಿದರು.
ಸೇವಾ ಕ್ಷೇತ್ರದ ಆರ್ಥಿಕ ಚುಟುವಟಿಕೆಯ ನಿಖರ ಅಂಕಿ ಅಂಶ ಸಂಗ್ರಹಿಸುವುದರಿಂದ ತೆರಿಗೆ ಕಳ್ಳತನ ತಪ್ಪಿಸಬಹುದಾಗಿದೆ. ಜಿ.ಡಿ.ಪಿ.ಗೆ ಸೇವಾ ಕ್ಷೇತ್ರದ ಕೊಡುಗೆ ಶೇ. 59 ರಷ್ಟು ಇದ್ದು ಅಪಾರವಾದ ಆರ್ಥಿಕ ಚಟುವಟಿಕೆ ಇದೆ. ಆದರೆ ಅಂಕಿ-ಅಂಶಗಳ ಕೊರತೆಯಿಂದ ಈ ಆರ್ಥಿಕ ಚಟುವಟಿಕೆಯನ್ನು ತೆರಿಗೆ ವ್ಯಾಪ್ತಿಯಲ್ಲಿ ತರಲಾಗುತ್ತಿಲ್ಲ. ಇದು ಕಪ್ಪು ಹಣದ ಹೆಚ್ಚುವಿಕೆ ಹಾಗೂ ಪರ್ಯಾಯ ಆರ್ಥಿಕತೆಗೆ ಕಾರಣವಾಗುತ್ತಿದೆ ಎಂದು ಅವರು ವಿಶ್ಲೇಷಿಸಿದರು.
ಮೈಸೂರು ನಗರದಲ್ಲಿನ ಬಾಡಿಗೆ ಕ್ಷೇತ್ರವನ್ನು ಉದಾಹರಿಸಿದ ಅವರು ಎಷ್ಟು ಮನೆಗಳನ್ನು ಬಾಡಿಗೆಗೆ ನೀಡಲಾಗಿದೆ, ಇದರಿಂದ ಬರುವ ಆದಾಯವೇನು ಎಂಬ ಮಾಹಿತಿ ಇಲ್ಲ, ಕೊಡಗಿನಲ್ಲಿ ಹೋಮ್‍ಸ್ಟೇಗಳ ಶೇ.10 ರಷ್ಟು ಮಾತ್ರ ನೋಂದಣಿಯಾಗಿವೆ. ವೈದ್ಯಕೀಯ ಕ್ಷೇತ್ರದ ಸಲಹಾ ಸೇವೆಯೂ ಇದೇ ರೀತಿ ಇದೆ. ಇಂತಹ ಹಲವು ಸೇವಾ ಕ್ಷೇತ್ರಗಳ ನಿಖರ ಅಂಕಿ ಅಂಶ ಸಂಗ್ರಹಿಸಿದಲ್ಲಿ ತೆರಿಗೆ ಕಳ್ಳತನ ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದರು.
ಮುಂದುವರೆದ ರಾಷ್ಟ್ರಗಳು ಶೇ. 80 ರಷ್ಟು ಸೇವೆಗಳನ್ನು 149 ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾರಾಟ ಮಾಡುತ್ತಿವೆ. ಭಾರತವೂ ಇತ್ತೀಚೆಗೆ ಸೇವಾ ಕ್ಷೇತ್ರ ಪ್ರಾಮುಖ್ಯತೆ ಮನಗಂಡಿದ್ದು ಸೇವಾ ಕ್ಷೇತ್ರದ ರಫ್ತು ವಿಷಯದಲ್ಲಿ 6ನೇ ಸ್ಥಾನದಲ್ಲಿದೆ, ಸೇವಾ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ಅಗತ್ಯವಿದ್ದು ಇದಕ್ಕೆ ಪೂರಕವಾಗಿ ಸೇವಾ ಕ್ಷೇತ್ರದ ಅಂಕಿ-ಅಂಶ ಅಗತ್ಯವಿದೆ ಎಂದು ಪ್ರೊ. ಲೀಲಾವತಿ ಹೇಳಿದರು.
ರಾಷ್ಟ್ರದ ಜಿ.ಡಿ.ಪಿ.ಗೆ ಕೃಷಿ ಕ್ಷೇತ್ರದ ಪಾಲು ಶೇ 14.6 ರಷ್ಟು ಕೈಗಾರಿಕಾ ಕ್ಷೇತ್ರದ ಸಾಲು ಶೇ. 26.1 ಆದರೆ ಸೇವಾ ಕ್ಷೇತ್ರದ ಪಾಲು ಶೇ. 59.3 ಆದ್ದರಿಂದಲೇ ಸೇವಾ ಕ್ಷೇತ್ರದ ಅಂಕಿ-ಅಂಶಗಳಿಗೆ ಮಹತ್ವವಿದ್ದು, ತೃಪ್ತಿಕರವಾದಂತಹ ಅಂಕಿ-ಅಂಶದ ಮಾದರಿಯೊಂದನ್ನು ಸಿದ್ದಪಡಿಸಬೇಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಇಲಾಖೆಯ ಪ್ರಾಮುಖ್ಯತೆ ವಿವರಿಸಿ, ಬೆಳೆ ವಿಮಾ ಯೋಜನೆಗೆ ಮೂಲ ಆಧಾರವೇ ಇಲಾಖೆ ಒದಗಿಸುವ ಅಂಕಿ-ಅಂಶಗಳು ವಿವಿಧ ಇಲಾಖೆಗಳ ನಡುವೆ ಅಂಕಿ-ಅಂಶ ಇಲಾಖೆ ಸಮನ್ವಯ ಸಾಧಿಸಿ ತನ್ನ ಪ್ರಾಮುಖ್ಯತೆಯನ್ನು ಮನಗಾಣಿಸಬೇಕಾಗಿದೆ ಎಂದರು.
ಇಲಾಖೆಯ ಉಪನಿರ್ದೇಶಕರಾದ ಎಂ.ಎನ್. ಪ್ರಕಾಶ್ ಹಾಗೂ ಮಹಾದೇವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಹಾಯಕ ನಿರ್ದೇಶಕ ಅನಂತಕೃಷ್ಣ ಪ್ರಾರ್ಥನಾ ಗೀತೆ ಹಾಡಿದರು. ಜಿಲ್ಲಾ ಸಾಂಖ್ಯಿಕ ಅಧಿಕಾರಿ ತಿಬ್ಬೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಪರಿಶೀಲನಾ ಪಟ್ಟಿ ಪಡೆಯಲು ಸೂಚನೆ
ಮೈಸೂರು,ಆ.7.ಮೈಸೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಇಲಾಖಾ ವತಿಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರು ಮಾಡಲು ಮೊದಲನೇ ಪರಿಶೀಲನಾ ಪಟ್ಟಿ ಬಿಡುಗಡೆಯಾಗಿರುತ್ತದೆ. ಎಲ್ಲಾ ಸರ್ಕಾರಿ/ಖಾಸಗಿ ಶಾಲಾ ಮುಖ್ಯೋಪಾದ್ಯಾಯರುಗಳು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಪರಿಶೀಲನಾಪಟ್ಟಿಯನ್ನು ಪಡೆದು, ಪರಿಶೀಲಿಸಿ ಸೂಕ್ತ ದಾಖಲಾತಿಗಳೊಂದಿಗೆ ಆಗಸ್ಟ್ 30 ರೊಳಗೆ ಹಿಂದಿರುಗಿಸುವಂತೆ ಮೈಸೂರು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 2520910/9480843177 ನ್ನು ಸಂಪರ್ಕಿಸಬಹುದು.
ಆಗಸ್ಟ್ 10 ರಂದು ಸ್ಪರ್ಧಾತ್ಮಕ ಪರೀಕ್ಷೆ
ಮೈಸೂರು,ಆ.7.ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಐ.ಎ.ಎಸ್/ಐ.ಪಿ.ಎಸ್/ಕೆ.ಎ.ಎಸ್, ಬ್ಯಾಕಿಂಗ್ ಪರೀಕ್ಷೆಗಳಿಗೆ ತರಬೇತಿ ನೀಡಲು ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಯು ಆಗಸ್ಟ್ 10 ರಂದು ಮೈಸೂರು ಎನ್.ಎಸ್.ರಸ್ತೆಯಲ್ಲಿರುವ ಸದ್ವಿದ್ಯಾ ಪ್ರೌಢಶಾಲೆ, ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜು, ರಮಾವಿಲಾಸ ರಸ್ತೆಯಲ್ಲಿರುವ ಮರಿಮಲ್ಲಪ್ಪ ಪ್ರೌಢಶಾಲಾ ಹಾಗೂ ಜೆ.ಎಲ್.ಬಿ. ರಸ್ತೆಯಲ್ಲಿರುವ ಮಹಾರಾಜ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ನಡೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಹಿರಂಗ ಹರಾಜು
ಮೈಸೂರು,ಆ.7.ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಎನ್.ಆರ್. ಮೊಹಲ್ಲಾ, ಮೈಸೂರು-07 ರಲ್ಲಿರುವ ವಿವಿಧ ವೃತ್ತಿ ಘಟಕದ ನಿರುಪಯುಕ್ತ ವಸ್ತುಗಳಾದ ಸಣ್ಣ ಉಪಕರಣ, ಯಂತ್ರೋಪಕರಣ, ರೆಪ್ರಿಜರೇಟರ್ ಏರ್ ಕಂಡೀಷನರ್, ಕಂಪ್ಯೂಟರ್, ಬ್ಯಾಟರಿ, ಜೆರಾಕ್ಸ್ ಮೆಷಿನ್, ಎಂ.ಎಸ್. ಜಿಪ್ಸ್ ಹಾಗೂ ಮುಂತಾದ ಸಾಮಗ್ರಿಗಳನ್ನು ದಿನಾಂಕ 15-10-2014 ರಂದು ಬೆಳಿಗ್ಗೆ 11 ಗಂಟೆಗೆ ಬಹಿರಂಗ ಹರಾಜಿನ ಮೂಲಕ ಸಂಸ್ಥೆಯ ಆವರಣದಲ್ಲಿ ವಿಲೇವಾರಿ ಮಾಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2498456ಯನ್ನು ಸಂಪರ್ಕಿಸುವುದು.
ತರಬೇತಿ ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಮೈಸೂರು,ಆ.7.ಮೈಸೂರು ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವತಿಯಿಂದ 2014-15ನೇ ಸಾಲಿಗೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅಇಖಿ ತರಬೇತಿ ನೀಡಲು ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ಇxಠಿಡಿessioಟಿ oಜಿ Iಟಿಣeಡಿesಣ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿಯನ್ನು ದಿನಾಂಕ: 08.08.2014 ರಿಂದ 23.08.2014 ಸಂಜೆ 4.30ಗಂಟೆವರೆಗೆ ವಿತರಿಸಲಾಗುವುದು. ಅರ್ಜಿ ಸಲ್ಲಿಸಲು 28.08.2014 ರಂದು ಸಂಜೆ 5.00 ಗಂಟೆ ಕೊನೆಯ ದಿನಾಂಕವಾಗಿರುತ್ತದೆ.
ತರಬೇತಿಯು ದಿನಾಂಕ 01.09.2014 ರಿಂದ 31.03.2015ರವರೆಗೆ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸಿ.ಇ.ಟಿ. ತರಬೇತಿ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, #1179, ಓo.17, 8ನೇ ಕ್ರಾಸ್, ಡಿ.ದೇವರಾಜ ಅರಸು ರಸ್ತೆ, ಭೀಮ & ಬ್ರದರ್ಸ್ ಜ್ಯೂಯಲರಿ ಹಿಂಭಾಗ, ಮೈಸೂರು. ದೂರವಾಣಿ ಸಂಖ್ಯೆ: 0821-2422088ನ್ನು ಸಂಪರ್ಕಿಸಬಹುದು.
No comments:
Post a Comment