Wednesday, 6 August 2014

ಕೆ.ಆರ್.ಎಸ್-ಕಾವೇರಿ ಮಾತೆಗೆ ಪೂಜೆ ಹಾಗೂ ಬಾಗಿನ ಸಮರ್ಪಣೆ- ನೀರಾವರಿಗೆ ಮೊದಲ ಆದ್ಯತೆ ನೀಡಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ


ನೀರಾವರಿಗೆ ಮೊದಲ ಆದ್ಯತೆ ನೀಡಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
   ಮಂಡ್ಯ,ಆ.06. ನೀರಾವರಿಯಿಂದ ರೈತರ ಬದುಕು ಹಸನಾಗುವುದರಿಂದ ಹಾಗೂ ಆಹಾರದ ಸ್ವಾವಲಂಭನೆ ಸಾಧ್ಯವಾಗುವುದರಿಂದ ರಾಜ್ಯದಲ್ಲಿ ನೀರಾವರಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದರು.
    ಇಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರದಲ್ಲಿ ಆಯೋಜಿಸಿದ್ದ ಕಾವೇರಿ ಮಾತೆಗೆ ಪೂಜೆ ಹಾಗೂ ಬಾಗಿನ ಸಮರ್ಪಣೆ ನಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಬೃಹತ್ ನೀರಾವರಿ ಯೋಜನೆಗಳಿಗೆ 10 ಸಾವಿರ ಕೋಟಿ ರೂ.ಗಳು ಹಾಗೂ ಸಣ್ಣ ನೀರಾವರಿ ಯೋಜನೆಗಳಿಗೆ 1300 ಕೋಟಿ ರೂ.ಗಳನ್ನು ಆಯವ್ಯಯದಲ್ಲಿ ನಿಗದಿಪಡಿಸಲಾಗಿದೆ. ಈ ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ 50 ಸಾವಿರ ಕೋಟಿ ರೂ.ಗಳನ್ನು ನೀರಾವರಿ ಯೋಜನೆಗಳಿಗಾಗಿ ಖರ್ಚು ಮಾಡಲಾಗುವುದು ಎಂದು ತಿಳಿಸಿದರು.
    ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ನಾಲೆಗಳ ಆಧುನೀಕರಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗಾಗಿ 1800 ಕೋಟಿ ರೂ.ಗಳನ್ನು ನೀಡಲಾಗಿದೆ. ಕೃಷ್ಣರಾಜಸಾಗರ ಎಡದಂಡೆಯ ಪ್ರದೇಶಗಳಲ್ಲಿ ಸುಮಾರು 400 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಹೇಳಿದರು.
    ದೂರದಲ್ಲಿರುವ ಹುಲಿಕೆರೆ ಸುರಂಗದ ದುರಸ್ಥಿ ಕಾರ್ಯವನ್ನು 14 ಕೋಟಿ ರೂ.ಗಳ ವೆಚ್ಚದಲ್ಲಿ ಸಮರೋಪಾದಿಯಲ್ಲಿ ನಡೆಸಲಾಗಿದ್ದು. ಈ ವರ್ಷ ಎಲ್ಲಾ ಕೆರೆಗಳನ್ನು ತುಂಬಿಸುವ ಗುರಿ ಹೊಂದಲಾಗಿದ್ದು. ಇದರಿಂದ ಅಂತರ್ಜಲ ಸಹ ವೃದ್ಧಿಯಾಗುತ್ತದೆ ಸಹಕಾರಿಯಾಗುತ್ತದೆ ಎಂದು ಹೇಳಿದರು
    ಮಳವಳ್ಳಿಯ ಪೂರಿಗಾಲಿ ಬಳಿ 715 ಕೋಟಿ ರೂ.ಗಳ ಸಣ್ಣ ನೀರಾವರಿ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಕೃಷ್ಣ ಯೋಜನೆ, ತುಂಗಭದ್ರ ಭದ್ರಾ ಯೋಜನೆ, ಕಾರಂಜಾ ಯೋಜನೆ, ಕಾವೇರಿ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ. ಆದಷ್ಟು ಬೇಗ ಪೂರ್ಣಗೊಳಿಸುವ ನಿರೀಕ್ಷೆ ಇದೆ ಎಂದರು.
    ರೈತರ ಅನುಕೂಲಕ್ಕಾಗಿ ಇಡಿ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ರೈತರು ನೀಡುವ ಕಬ್ಬಿನ ಮೇಲೆ ವಿಧಿಸಲಾಗುತ್ತಿದ್ದ 100 ರೂ.ಗಳ ತೆರಿಗೆ ಮನ್ನಾ ಮಾಡಿದೆ. ಇದಲ್ಲದೆ 150 ರೂ.ಗಳ ಸಹಾಯಧನವನ್ನು ಸಹ ರೈತರಿಗೆ ನೀಡಲಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವ ದರಕ್ಕಿಂತ ಕಡಿಮೆ ಹಣ ಪಾವತಿಸುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
    ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಎಚ್.ಅಂಬರೀಷ್ ಅವರು ಮಾತನಾಡಿ, ರಾಜ್ಯ ಸರ್ಕಾರ ಎಲ್ಲರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿದೆ. ಹಿಂದೆ ಆಶ್ರಯ ಮನೆಗಳಿಗೆ 10 ಸಾವಿರದಿಂದ 75 ಸಾವಿರ ರೂ.ಗಳ ವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಈ ಮೊತ್ತವನ್ನು 1.20 ಲಕ್ಷದ ರೂ.ಗಳಿಗೆ ಹೆಚ್ಚಿಸಿದೆ ಎಂದು ತಿಳಿಸಿದರು.
    ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
    ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಸಚಿವರಾದ ಎಂ.ಬಿ.ಪಾಟೀಲ್, ಲೋಕೋಪಯೋಗಿ ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಶಾಸಕರಾದ ಕೆ.ಎಸ್.ಪುಟ್ಟಣ್ಣಯ್ಯ, ಪಿ.ಎಂ.ನರೇಂದ್ರಸ್ವಾಮಿ, ಡಿ.ಸಿ.ತಮ್ಮಣ್ಣ, ಎಂ.ಕೆ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಆರ್.ಧರ್ಮಸೇನ, ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಟಿ.ಮಂಜುಳಾ ಪರಮೇಶ್, ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಡಾ. ಪುಷ್ಪಾವತಿ ಅಮರ್‍ನಾಥ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಜೈಪ್ರಕಾಶ್, ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಂಜೀವ್‍ಕುಮಾರ್, ಮಂಡ್ಯ ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರೋಹಿಣಿ ಸಿಂಧೂರಿ, ಮಂಡ್ಯ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಶಿವಶಂಕರ್, ಅಧೀಕ್ಷಕ ಇಂಜಿನಿಯರ್ ಶಂಕರೇಗೌಡ, ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀರಂಗರಾಜು, ಬಸವರಾಜೇಗೌಡ ಮತ್ತಿತರ  ಗಣ್ಯರು ಉಪಸ್ಥಿತರಿದ್ದರು.


No comments:

Post a Comment