Saturday, 9 August 2014

ಮಂಡ್ಯ-ಕೌಡ್ಲೆ ಚನ್ನಪ್ಪನವರು ಸಮಾಜಸೇವೆಯನ್ನೆ ಪರಮ ಗುರಿಯನ್ನಾಗಿಸಿಕೊಂಡಿದ್ದರು : ಮಹದೇವಪ್ರಸಾದ್

ಕೌಡ್ಲೆ ಚನ್ನಪ್ಪನವರು ಸಮಾಜಸೇವೆಯನ್ನೆ ಪರಮ ಗುರಿಯನ್ನಾಗಿಸಿಕೊಂಡಿದ್ದರು : ಮಹದೇವಪ್ರಸಾದ್
ಮಂಡ್ಯ, ಆ.09- ರಾಜಕೀಯ ವ್ಯಕ್ತಿಗಳು ಕೇವಲ ರಾಜಕೀಯ ದೃಷ್ಟಿಯಿಂದ ಸಮಾಜ ಸೇವೆ ಮಾಡುವುದನ್ನು ಬಿಟ್ಟು, ಸಮಾಜ ಸೇವೆಯೇ ಪರಮ ಗುರಿ ಎನ್ನುವ ಮನೋಭಾವದಿಂದ ಶ್ರಮಿಸಬೇಕಾಗಿದೆ. ಅದೇ ರೀತಿ ಕೌಡ್ಲೆ ಚನ್ನಪ್ಪನವರು ಸಹ ಸಾಗುತ್ತಿದ್ದಾರೆ ಎಂದು ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಶ್ಲಾಘಿಸಿದರು.
ಇಂದು ನಗರದ ಲೋಕನಾಯಕ ಜೆ.ಪಿ.ಸ್ಮಾರಕ ಶಿಕ್ಷಣ ಸಂಸ್ಥೆ, ಹೆಚ್.ಹೊಂಬೇಗೌಡ ಸ್ಮಾರಕ ಕಾನೂನು ಕಾಲೇಜಿನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ ರೈತಾಪಿ ವರ್ಗದವರು ಹೆಚ್ಚಾಗಿದ್ದು, ಕೃಷಿಯ ಜೊತೆಗೆ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಕೆ.ವಿ.ಶಂಕರೇಗೌಡರಂತಹ ಹಿರಿಯ ನಾಯಕರು, ರಾಜಕೀಯ ನಾಯಕರು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದರು.
ಒಂದು ಶಿಕ್ಷಣ ಸಂಸ್ಥೆ ನಿರ್ಮಿಸಬೇಕಾದರೆ ಎಡರು-ತೊಡರುಗಳು ಬರುತ್ತವೆ. ಅವುಗಳನ್ನೆಲ್ಲವನ್ನೂ ನಿವಾರಿಸಿ ಮುನ್ನಡೆಯಬೇಕಾಗಿದೆ ಎಂದು ತಿಳಿಸಿದರು.
ಇಂತಹ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಡಾ.ಜಿ.ಮಾದೇಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ, ಕೆ.ಟಿ.ಶ್ರೀಕಂಠೇಗೌಡ, ಕೌಡ್ಲೆ ಚನ್ನಪ್ಪ, ನಾರಾಯಣಗೌಡ, ಶಿವಾನಂದ, ಶಂಕರೇಗೌಡ, ಪುಟ್ಟಮಾದಯ್ಯ, ಸತೀಶ್ ಸೇರಿದಂತೆ ಇನ್ನಿತರರಿದ್ದರು.

12ರಂದು ಸಿಎಂ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆ
ಮಂಡ್ಯ, ಆ.09- ಅಖಿಲ ಕರ್ನಾಟಕ ಶ್ರೀ ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ವತಿಯಿಂದ ಇದೇ ಆ.12ರಂದು ಬೆಳಿಗ್ಗೆ 10.30ಕ್ಕೆ ನಗರದ ಗಾಂಧಿಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದೇವರಾಜು ಅರಸು ಹಿಂದುಳಿದ ವರ್ಗಗಳ ಅಧ್ಯಕ್ಷ ಎಲ್.ಸಂದೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಸಚಿವ ಡಾ.ಅಂಬರೀಷ್ ಉದ್ಘಾಟಿಸಲಿದ್ದು, ಮಾಜಿ ಸಚಿವ ಹೆಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ ಅಭಿನಂದಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಸಭಾಪತಿ ವಿ.ಆರ್.ಸುದರ್ಶನ್, ರಾಜ್ಯ ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಶಾಸಕ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷ ಬಿ.ಸಿದ್ದರಾಜು ಭಾಗವಹಿಸಲಿದ್ದು, ಅಭಿನಂದಿತರಾಗಿ  ಸಚಿವರಾದ ಸತೀಶ್ ಜಾರಕಿಹೊಳಿ, ಬಾಬುರಾವ್ ಚಿಂಚನಸೂರ್, ವಿಧಾನ ಪರಿಷತ್ ಸದಸ್ಯರಾದ ಹೆಚ್.ಎಂ.ರೇವಣ್ಣ, ವಿ.ಎಸ್.ಉಗ್ರಪ್ಪ, ಡಾ.ಜಯಮಾಲ, ಕೆ.ಅಬ್ದುಲ್ ಜಬ್ಬಾರ್, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಭಾಗವಹಿಸಲಿದ್ದಾರೆ.
ಗೋಷ್ಠಿಯಲ್ಲಿ ಕೊತ್ತತ್ತಿ ಸಿದ್ದಪ್ಪ, ಕೆ.ಹೆಚ್.ನಾಗರಾಜು, ದೊಡ್ಡಯ ಇನ್ನಿತರರಿದ್ದರು.



ಕಬ್ಬಿಗೆ ಮುಂಗಡ ರೂ.2500/- ನೀಡದಿದ್ದಲ್ಲಿ ರೈತರ ಪರವಾಗಿ ಹೋರಾಟ : ಸಿಎಸ್ಪಿ 



ಮಂಡ್ಯ, ಆ.09- ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಕಬ್ಬಿನ ಮುಂಗಡ ಹಣವನ್ನು ರೂ.2500/- ಗಳನ್ನು ನೀಡಬೇಕು, ಇಲ್ಲದಿದ್ದರೆ ಬೀದಿಗಿಳಿದು ರೈತರ ಪರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು  ಸಂಸದ ಸಿ.ಎಸ್.ಪುಟ್ಟರಾಜು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಕಾರ್ಖಾನೆ ಆರಂಭಗೊಂಡಿದ್ದು, ಸಚಿವರು ಹಾಗೂ ಮೈಷುಗರ್ ಅಧ್ಯಕ್ಷರಾಗಿರುವ ಹೆಚ್.ಎಸ್.ಮಹದೇವ ಪ್ರಸಾದ್ ಅವರು, ಕಬ್ಬಿನ ಮುಂಗಡ ಹಣ ರೂ.2200/- ಗಳನ್ನು ನೀಡಲಾಗುವುದು ಹೇಳಿರುವುದು ಸಮಂಜಸವಲ್ಲ. ರೈತರು ಸಾಲ ಮಾಡಿ, ಕಬ್ಬು ಬೆಳೆದಿದ್ದಾರೆ. ರೈತರು ತುಂಬಾ ಸಂಕಷ್ಟದಲ್ಲಿದ್ದು, ಜೀವನ ನಡೆಸಲು ಕಷ್ಟಕರವಾಗಿದೆ. ಇದನ್ನು ಅರಿತು ಸಚಿವರು ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ, ರೈತರಿಗೆ ಮುಂಗಡ ಹಣ ರೂ.2500/- ನೀಡಲು ಕ್ರಮ ಕೈಗೊಳ್ಳಬೇಕು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಅವರು ಮಧ್ಯೆ ಪ್ರವೇಶಿಸಿ, ಸೂಕ್ತ ಕ್ರಮ ಕೈಗೊಂಡು ರೈತರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ಕೆಪಿಎಸ್‍ಸಿ ಅಭ್ಯರ್ಥಿಗಳ ಆಯ್ಕೆ ರದ್ದಿಗೆ ಖಂಡನೆ : ಕೆಪಿಎಸ್‍ಸಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಭ್ರಷ್ಟಾಚಾರ ನಡೆಸಿದ ಅಭ್ಯರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳದೇ ನಿಷ್ಠೆಯಿಂದ ಪರೀಕ್ಷೆ, ಸಂದರ್ಶನ ಎದುರಿಸಿ ಆಯ್ಕೆಯಾದ ಬಡ ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಗೊಳಿಸಿರುವುದು ಸರಿಯಲ್ಲ. ಆದ್ದರಿಂದ ಕೂಡಲೇ ಸರ್ಕಾರ ನೀಡಿರುವ ಆದೇಶವನ್ನು ಹಿಂಪಡೆದು ಭ್ರಷ್ಟಾಚಾರ ನಡೆಸಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕ್ರಮಕೈಗೊಂಡು ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಕಾಪಾಡಬೇಕು ಎಂದು ಒತ್ತಾಯಿಸಿದರು.
ದೆಹಲಿಯ ಯುಪಿಎಸ್‍ಸಿ ಪರೀಕ್ಷೆ ತೆಗೆದುಕೊಳ್ಳಲು ರಾಜ್ಯದ ಅಭ್ಯರ್ಥಿಗಳಿಗೆ ಸರ್ಕಾರ ಸೂಕ್ತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯದಿಂದ ಐಎಎಸ್, ಕೆಎಎಸ್ ಅಧಿಕಾರಿಯಾಗಿ ಆಯ್ಕೆ ಮಾಡಲು ಅನುಕೂಲ ಮಾಡಿಕೊಡಬೇಕು. ಉತ್ತರ ಭಾರತದಲ್ಲಿ ಅಲ್ಲಿನ ಸರ್ಕಾರಗಳು ಯುಪಿಎಸ್‍ಸಿ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಧಿಕಾರಿಗಳಾಗಲು ಅನುವು ಮಾಡಿಕೊಡುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ತಮಿಳುನಾಡು ರಾಜ್ಯ ಇದರಲ್ಲಿ ಅನುಕೂಲ ಪಡೆದಿದೆ. ಅದರಂತೆ ರಾಜ್ಯದಲ್ಲಿ ಅದರಲ್ಲೂ ಗ್ರಾಮೀಣ ಅಭ್ಯರ್ಥಿಗಳು ಭಾಗವಹಿಸುವಂತೆ ಅನುಕೂಲ ಮಾಡಿಕೊಡಲು ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ ಎಂದರು.
ಸಂಸದನಾಗಿ ನಾನು ಜಿಲ್ಲೆಯಲ್ಲಿ ಗ್ರಾಮೀಣ ಅಭ್ಯರ್ಥಿಗಳ ಆಯ್ಕೆಗೆ ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಿ ಮುಂದಿನ ದಿನಗಳಲ್ಲಿ ಮಾರ್ಗದರ್ಶನ ಕೇಂದ್ರಗಳನ್ನು ತೆರೆದು ಅನುಕೂಲ ಮಾಡಿಕೊಡಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಸೋಮಶೇಖರ್ ಕೆರಗೋಡು ಇನ್ನಿತರರಿದ್ದರು.

No comments:

Post a Comment