ಗಗನಚುಕ್ಕಿ ಜಲಪಾತೋತ್ಸವ ಆಚರಣೆಗೆ ನಿರ್ಧಾರ
ಮಂಡ್ಯ, ಆಗಸ್ಟ್ 14 : ಮಳವಳ್ಳಿ ತಾಲ್ಲೂಕು ಶಿವನಸಮುದ್ರದ ಬಳಿ ಗಗನಚುಕ್ಕಿಯಲ್ಲಿ ಈ ತಿಂಗಳ ಕೊನೆಯ ವಾರದಲ್ಲಿ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಜಲಪಾತೋತ್ಸವ ಕಾರ್ಯಕ್ರಮವನ್ನು ಆಯೋಜಿಸಲು ಮಂಡ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂದ ಗಗನಚುಕ್ಕಿ ಕಾವೇರಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಪ್ರವಾಸಿಗರ ಅತ್ಯಂತ ಆಕರ್ಷಣೀಯ ತಾಣವಾಗಿರುವ ಇಲ್ಲಿ ಪ್ರತಿವರ್ಷದಂತೆ ಈ ವರ್ಷವು ಬಹಳ ಅಚ್ಚುಕಟ್ಟಾಗಿ ಜಲಪಾತೋತ್ಸವ ಆಚರಿಸಬೇಕಾಗಿದೆ ಎಂದು ಮಳ್ಳವಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ ಅವರು ಹೇಳಿದರು.
ಎರಡು ದಿನಗಳ ಜಲಪಾತೋತ್ಸವದ ಆಚರಣೆಗೆ ಶೀಘ್ರದಲ್ಲಿಯೇ ದಿನಾಂಕ ನಿಗದಿಕೊಳಿಸಲಾಗುವುದು. ಪ್ರವಾಸಿಗರಿಗೆ ಸೂಕ್ತ ಊಟೋಪಚಾರ, ಸಾರಿಗೆ ವ್ಯವಸ್ಥೆ ಆಗಬೇಕಿದೆ. ತಾಲ್ಲೂಕು ಪಂಚಾಯಿತಿ ವತಿಯಿಂದ ಈ ಸ್ಥಳದ ಸ್ವಚ್ಛತೆಗೆ ಕ್ರಮವಹಿಸಬೇಕಾಗಿದೆ ಎಂದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಡಾ. ಅಜಯ್‍ನಾಗಭೂಷಣ್ ಅವರು ಸಾಕಷ್ಟು ಕಾಲಾವಕಾಶ ಇರುವುದರಿಂದ ಎಲ್ಲಾ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಇದಕ್ಕಾಗಿ ಸಾಂಸ್ಕøತಿಕ ಸಮಿತಿ, ವೇದಿಕೆ ಸಮಿತಿ, ಸಾರಿಗೆ ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳನ್ನು ರಚಿಸಲಾಗುವುದು. ಎಲ್ಲಾ ಅಧಿಕಾರಿಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಹೇಳಿದರು.
ಎರಡು ದಿನವು ಕಾರ್ಯಕ್ರಮಗಳು ಬೆಳಗ್ಗೆ 11 ಗಂಟೆಯಿಂದಲೇ ಆರಂಭವಾಗುತ್ತದೆ. ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಕ್ಕೆ ಮಾತ್ರ ಜನಪ್ರತಿನಿಧಿಗಳು ಹಾಗೂ ಗಣ್ಯರು ವೇದಿಕೆಗೆ ಆಗಮಿಸುತ್ತಾರೆ. ಉಳಿದ ಸಮಯವನ್ನು ಸಂಪೂರ್ಣವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಮೀಸಲು ಇಡಲಾಗುವುದು ಎಂದು ಶಾಸಕರು ತಿಳಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಸೂಕ್ತ ಗೌರವ ಸಿಗಬೇಕು. ಯಾವುದೇ ವಿವಾದಕ್ಕೆ ಆಸ್ಪದ ಆಗಬಾರದು. ಸಾಂಸ್ಕøತಿಕ ಸಮಿತಿ ಈ ಬಗ್ಗೆ ಎಚ್ಚರವಹಿಸಬೇಕು. ಜಿಲ್ಲೆಯ ವಿವಿಧ ಭಾಗಗಳಿಂದ ಶಾಲಾ ವಿದ್ಯಾರ್ಥಿಗಳು ಇಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡುವುದು ಸೂಕ್ತ. ಶಾಲಾ ಮಕ್ಕಳ ಕಾರ್ಯಕ್ರಮ ತುಂಬಾ ಆಕರ್ಷಕವಾಗಿ ಇರುತ್ತವೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ನೀಡಲಾಗುವುದು. ವಾಹನಗಳ ಪಾರ್ಕಿಗ್‍ಗೆ ಈಗಾಗಲೇ ಜಾಗ ಗುರುತಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳಾದ ಭೂಷಣ್ ಜಿ. ಬೊರಸೆ ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಬಿ.ಆರ್.ಪೂರ್ಣಿಮಾ, ಉಪ ವಿಭಾಗಾಧಿಕಾರಿ ಅರುಳ್‍ಕುಮಾರ್, ತಹಶೀಲ್ದಾರ್ ಬಸವರಾಜಪ್ಪ, ಮಳವಳ್ಳಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
No comments:
Post a Comment