Saturday, 30 August 2014

ಸಿಇಓ ಏಕಪಕ್ಷೀಯ ಆಡಳಿತ : ಸದಸ್ಯರ ಆಕ್ರೋಷ ಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಬಸವಳಿದ ಸಿಂಧೂರಿ
ಮಂಡ್ಯ,ಆ.30- ಜಿ.ಪಂ.ನ ಸದಸ್ಯರು ನೂತನ ಸಿಇಓ ರೋಹಿಣಿ ಸಿಂಧೂರಿರವರು ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಬದಿಗೊತ್ತಿ, ತಮ್ಮದೆ ಕಾನೂನು ರೂಪಿಸಿಕೊಂಡು ಜಿ.ಪಂ.ನ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಯಾವುದೇ ಬೆಲೆ ನೀಡದೆ ಏಕಪಕ್ಷೀಯ ಆಡಳಿತ ನಡೆಸುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಜಿ.ಪಂ. ನ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ಸಿಇಓ ರವರ ಕಾರ್ಯವೈಖರಿಯು ಸರಿಯಿಲ್ಲ ಎಂದು ಖಂಡಿಸಿದರು.
ಸಭೆಯ ಪ್ರಾರಂಭ ಹಂತದಲ್ಲಿ ಸುರೇಶ್ ಕಂಠಿರವರು ಶ್ರೀ ವೀರಭದ್ರೇಶ್ವರ ಸಮುದಾಯ ಭವನವನ್ನು ವೀರ ಭದ್ರಸ್ವಾಮಿ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್‍ನ ಆಡಳಿತಕ್ಕೆ ನೀಡಿರುವ ವಿಚಾರವಾಗಿ ಈಗಾಗಲೇ ಸಭೆಯಲ್ಲಿ ಚರ್ಚಿಸಿ ಎಲ್ಲಾ ಸದಸ್ಯರು ಏಕಸಾಮ್ಯವಾಗಿ ತೆಗೆದು ಕೊಂಡ ನಿರ್ಧಾರವನ್ನು ಪ್ರಶ್ನಿಸಿ ಸಿಇಓ ರವರು ಸದಸ್ಯರೊಂದಿಗೆ ಚರ್ಚಿಸದೇ, ಆಕ್ಷೇಪಣೆಯೂ ಮಾಡದೆ, ಅಧ್ಯಕ್ಷರ ಗಮನಕ್ಕೂ ತರದೆ ಸರ್ಕಾರಕ್ಕೆ ಪತ್ರ ಬರೆದಿರುವುದು ಸಮಂಜಸವಲ್ಲ, ಹಾಗೆಯೇ ಅಂಬೇಡ್ಕರ್ ಭವನ ನಿರ್ಮಣದ ವಿಚಾರವಾಗಿಯೂ ಸಹ ಪತ್ರದಲ್ಲಿ ತಿಳಿಸಿರುವುಕ್ಕೆ ಸ್ಪಷ್ಟನೆ ನೀಡುವಂತೆ ಕೇಳಿದರು.
ಇದಕ್ಕೆ ದನಿ ಗೂಡಿಸಿದ ವಿರೋದ ಪಕ್ಷದ ನಾಯಕ  ಬಸವರಾಜುರವರು ಸಮುದಾಯ ಭವನವಾಗಲಿ, ಅಂಬೇಡ್ಕರ್ ಭವನವಾಗಲಿ ರಾಜ್ಯಪಾಲರ ಹೆಸರಿಗೆ ನೋಂದಣೆಯಾಗಿರುತ್ತದೆ. ಆಗಾದಾಗ ಅದು ಸರ್ಕಾರದ ಆಸ್ತಿಯಾಗಿರುತ್ತದೆ. ಯಾವುದೇ ಖಾಸಗಿ ಆಸ್ತಿಯಾಗಿರುವುದಿಲ್ಲ, ಒಮ್ಮೆ ನೋಂದಣಿಯಾದುದನ್ನು ಮರು ನೋಂದಣಿ ಮಾಡಲಾಗುವುದಿಲ್ಲ, ಮುರುನೊಂದಣೆ ಮಾಡಿದ್ದಲ್ಲಿ ಅದು ಕ್ರಿಮಿನಲ್ ಮೊಕದ್ದಮೆಯಾಗುತ್ತದೆ. ಆದ್ದರಿಂದ ಈ ವಿಚಾರವಾಗಿ ಸರ್ಕಾರವನ್ನು ಮರು ಪ್ರಶ್ನಿಸುವ ಅಗತ್ಯವಿಲ್ಲ. ಎಲ್ಲವನ್ನು ಸರ್ಕಾರವೇ ಮಾಡುವುದಾದಲ್ಲಿ ಜಿ.ಪಂ. ಬೇಕಾಗಿರುವುದಾದರೂ ಏತಕ್ಕಾಗಿ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರವಾಗಿ ಸಿಇಓ ರವರು ಯಾವುದೇ ಸರ್ಕಾರದ ಕಟ್ಟಡವನ್ನು ಖಾಸಗಿರವರ ಆಡಳಿತಕ್ಕೆ ನೀಡಲಾಗುವುದಿಲ್ಲ, ಅದನ್ನು ಖಚಿತ ಪಡಿಸಿಕೊಳ್ಳು ಉದ್ದೇಶದಿಂದ ಪತ್ರ ಭರೆದಿರುವುದಾಗಿಯೂ, ನೋಂದಣೆ ಮಾಡಿದಂತಹ ಆಸ್ತಿಯನ್ನು ರದ್ದು ಪಡಿಸಿ ಪಂಚಾಯತಿಗೆ ಮರು ನೋಂದಣೆ ಮಾಡಬಹುದಾಗಿದೆ ಎಂದು ತಿಳಿಸಿದರು.
ಇದಕ್ಕೆ ಒಪ್ಪದ ಸದಸ್ಯರು ಯಾವುದೇ ರೀತಿಯಲ್ಲಿ ಸರ್ಕಾರವನ್ನು ಕೇಳುವ ಪ್ರಶ್ನೆಯೇ ಇರುವುದಿಲ್ಲ. ಸಿಇಓ ರವರು ಏಕಪಕ್ಷೀಯ ಆಡಳಿತ ನಡೆಸುತ್ತಲಿದ್ದಾರೆ. ಯಾವುದೇ ವಿಚಾರವಾಗಿಯೂ ಸಹ ಸದಸ್ಯರ ಸಲಹೆಗಳನ್ನು ಕೇಳದ ತಮ್ಮದೇ ಕಾನೂನನ್ನು ಜಾರಿಗೆ ತರಲು ಹೊರಟಿದ್ದಾರೆ ಎಂದು ಸದಸ್ಯ ರು ಖಂಡಿಸಿದರು.
ಮದ್ಯೆ ಪರವೇಶಿಸಿ ಮಾತನಾಡಿದ ಸದಸ್ಯ ಮಂಜೇಗೌಡರವರು ಸಿಇಓರವರು ಸವಾರ್ಧಿಕಾರಿ ಧೋರಣೆ ನೀತಿಯನ್ನು ಅನುಸರಿಸುತ್ತಲಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಮುಖಂಡರ ಕಾರ್ಯಗಾರವನ್ನು ಏರ್ಪಡಿಸುವಾಗಲು ಯಾವುದೇ ರೀತಿಯಲ್ಲಿ ಸಭೆ ಕರೆದು, ಸದ್ಯರ ಅಭಿಪ್ರಾಯವನ್ನಾಗಲಿ, ಅಧ್ಯಕ್ಷರ ಅನುಮತಿಯನ್ನಾಗಲಿ ಪಡೆಯಲಿಲ್ಲ, ತಮ್ಮದೇ ಆದ ಹಾದಿಯನ್ನು ರೂಪಿಸಿಕೊಂಡಿದ್ದಾರೆ ಎಂದು ಕೆಂಡ ಕಾರಿದರು.
ಇಷ್ಟೇ ಅಲ್ಲದೆ ಶೌಚಾಲಯ ನಿರ್ಮಾಣ ಅಭಿಯಾನವನ್ನು ಪ್ರಾರಂಭಿಸಿದ್ದು ಇದೊಂದರಲ್ಲಿಯೇ ಅವರು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಬೇರಾವ ಜವಾಬ್ದಾರಿಯೂ ಇಲ್ಲವೆಂಬಂತೆ ವರ್ತಿಸುತ್ತಿದ್ದು, ಜಿಲ್ಲೆಯ ಯಾವುದೇ ವಸತಿ ನಿಲಯಗಳಿಗೆ , ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಲಿಲ್ಲ, ಅಲ್ಲಿನ ವ್ಯವಸ್ಥೆ-ಅವ್ಯವಸ್ಥೆಗಳ ಅರಿವು ಇವರಿಗಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದರು.
ವಾದ-ವಿವಾದಗಳ ಮಧ್ಯೆ ಪ್ರವೇಶಿಸಿದ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮೀತಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ಮೊದಲು ಅವರಿಗೆ ತಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಲು ಅವಕಾಶ ಮಾಡಿಕೊಡಿ ಎಂದು ಸದಸ್ಯರಲ್ಲಿ ಮನವಿ ಮಾಡಿದರು. ಇದಕ್ಕೆ ಮಣಿದ ಸದಸ್ಯರು ಮೊದಲು ಅಧ್ಯಕ್ಷರ ನಿರ್ಣಯವನ್ನು ಅಪೇಕ್ಷಿಸಿದರು.
ಅಧ್ಯಕ್ಷೆ ಮಂಜುಳಾ ಪರಮೇಶ್‍ರವರು ಈ ಹಿಂದೆ ನಡೆದುಕೊಂಡಂತೆಯೇ ಇನ್ನು ಮುಂದೆಯೂ ನಡೆಯುವಂತಾಗಲೆಂದು ಹೇಳುವಷ್ಟರಲ್ಲಿ, ಸದಸ್ಯರು ಇದನ್ನು ಸಿಇಓ ರಿಂದ ಹೇಳಿಸುವಂತೆ ಪಟ್ಟು ಹಿಡಿದರು.
ಅಧ್ಯಕ್ಷೆ ಸಿಇಓ ತಮ್ಮ ನಿರ್ಧಾರನ್ನು ತಿಳಿಸುವಂತೆ ಕೋರಿದಾಗ, ಸಿಇಓ ಮತ್ತದೆ ರಾಗವೆಂಬಂತೆ ಸರ್ಕಾರದಿಂದ ಬರುವಂತಹ ಆದೇಶ ಪಾಲಿಸುವುದಾಗಿ ಹೇಳಿದದು. ಇದಕ್ಕೆ ಆಕ್ರೋಷಗೊಂಡ ಸದಸ್ಯರುಗಳು ತಮ್ಮ ಆಸನವನ್ನು ಬಿಟ್ಟು ನಿರ್ಣಯವು ಸರಿಯಲ್ಲ ಎಂದು ಹೊರನಡೆಯಲು ಮುಂದಾದಾಗ ಅಧ್ಯಕ್ಷೆ ಮಧ್ಯಪ್ರವೇಶಿಸಿ ಸಭೆಯನ್ನು ಗೌರವಿಸಿ ಮರಳುವಂತೆ ಮನಿವಿ ಮಾಡಿದರು, ಇದಕ್ಕೆ ಮಣಿಯದ ಸದಸ್ಯರು ಹೋರನಡೆಯುತ್ತಿದ್ದಂತೆ ಅಧ್ಯಕ್ಷೆ ಸಭೆಯನ್ನು ಅರ್ಧಗಂಟೆ ಮುಂದೂಡುವುದಾಗಿ ತಿಳಿಸಿದಾಗ, ಇದಕ್ಕೆ ಸದಸ್ಯರು ಸಮ್ಮತಿಸಿ ಹೊರನಡೆದರು.
ಮರು ಪ್ರಾರಂಭವಾದ ಸಭೆಯಲ್ಲಿ ವಿರೋಧ ಪಕ್ಷದ ಬಸವರಾಜುರವರು ಮಾತನಾಡಿ ನಿರ್ಮಿತಿ ಕೇಂದ್ರ ಕುಂಠಿತವಾಗಿದೆ ಯಾವುದೇ ಕಾಮಗಾರಿಗಳು ನಡೆಯುತ್ತಲಿಲ್ಲ, ಇದರಿಂದಾಗಿ ಕೋಟ್ಯಾಂತರ ರೂ. ನಷ್ಟವಾಗುತ್ತಿದೆ. ಇದರ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಇದಕ್ಕೆ ಉತ್ತರವಾಗಿ ಕಾರ್ಯಪಾಲಕ ಅಭಿಯಂತರ ಚನ್ನಯ್ಯ ಮಾತನಾಡಿ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನರೇಶ್ ಅಮಾನತ್ತಾಗಿದ್ದು, ಕೈಗೆತ್ತಿಕೊಂಡಿರುವ ಕಾಮಗಾರಿಗಳು ಕುಂಠಿತವಾಗಿವೆ. 2011-12ನೇ ಸಾಲಿನಲ್ಲಿ ಪ್ರಾರಂಭಿಸಲಾಗಿರುವ 68 ಕಾಮಗಾರಿಗಳ ಪೈಕಿ 38 ಕಾಮಗಾರಿಗಳು ಮುಕ್ತಾಯಗೊಂಡಿವೆ. 8 ಕಾಮಗಾರಿಗಳು ನೀರು ದೊರೆಯದೆ ವಿಫಲಗೊಂಡಿದೆ. ಇನ್ನುಳಿದಂತೆ ಇತರೆ ಕಾಮಗಾರಿಗಳು ಅರ್ಧಪೂರ್ಣಗೊಂಡಿದ್ದು ಸ್ಥಗಿತಗೊಂಡಿವೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು ಇದುವರೆಗೂ ಸಿಇಓ ರವರು ನಾಲ್ಕುಬಾರಿ ಸಭೆಯನ್ನು ಕರೆದು ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ. ಕೆಲವು ಪರಿಶಿಷ್ಟ ಜಾತಿ/ಪಂಗಡಗಳಿಗೆ ಸಂಬಂದಿಸಿದಂತೆ ಕೊಳವೆ ಬಾವಿಗಳ ಕಾಮಗಾರಿಗಳು ನಡೆಯುತ್ತಲಿವೆ ಎಂದರು.
ನಂತರ ಕೆ.ಆರ್.ಡಿ.ಸಿ ಮತ್ತುಭೂಸೇನೆ ವತಿಯಿಂದ ಹಣದೊರೆತ್ತಿದ್ದು, ನಿರ್ಮಿತಿ ಕೇಂದ್ರದ ಹಲವು ಕೆಲಸಗಳು ಕುಂಠಿತಗೊಂಡಿದೆ ಎಂದು ತಿಳಿಸಿದಾಗ, ಸತೀಶ್‍ರವರು ನಿರ್ಮಿತಿ ಕೇಂದ್ರ ಅಧಿಕಾರವನ್ನು ವಹಿಸಿಕೊಳ್ಳುವಂತೆ ತಿಳಿಸಿದರು. ಇದಕ್ಕೆ ಚನ್ನಯ್ಯರವರು ಮಣಿಯದೆ ನಿರಾಕರಿಸಿದರು.
ನಿರ್ಮಿತಿ ಕೇಂದ್ರದಲ್ಲಿ ಕೋಟ್ಯಾಂತರರೂ.ಗಳ ಅವ್ಯವಹಾರ ನಡೆದಿದ್ದು, ಇದಕ್ಕೆ ಪ್ರತ್ಯೇಕ ತನಿಖಾ ತಂಡ ನೇಮಿಸಬೇಕು, ಇಲ್ಲವಾದಲ್ಲಿ ಮೂಡಾ ಹಗರಣ ದಂತಹ ಇತರೇ ಹಗರಣಗಳು ಸಿ.ಬಿ.ಐಗೆ ವಹಿಸಿರುವುದರಿಂದ ಇದನ್ನೂ ಸಹ ಸಿ.ಬಿ.ಐ ಗೆ ವಹಿಸಬೇಕೆಂದು ಬಸವರಾಜುರವರು ಒತ್ತಾಯಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಸುಜಾತ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮೀತಿ ಅಧ್ಯಕ್ಷ ಸತೀಶ್ ಹಾಗೂ ಎಲ್ಲಾ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.


ಬರ ಪೀಡಿತವಾಗುತ್ತಿದೆ ನಾಗಮಂಗಲ-ಹುಚ್ಚೇಗೌಡ



ನಾಗಮಂಗಲ ತಾಲ್ಲೂಕಿನಲ್ಲಿ ಕೊಳವೆ ಬಾವಿಗಳನ್ನು ಕೊರೆಸಿ ವಿಫಲಗೊಂಡಿದೆ. ಜನ-ಜಾನುವಾರುಗಳು ನೀರಿಲ್ಲದ ಪರದಾಡುವಂತಾಗಿದ್ದು, ತಾಲ್ಲೂಕಿನ ಜನಗತೆಗೆ ನೀರು ಒದಗಿಸಬೇಕು, ನೀರಿಲ್ಲದೆ ನಾಗಮಂಗಲ ಬರ ಪೀಡತವಾಗುತ್ತಿದೆ ಎಂದು ತಿಳಿಸಿದರು.
ನಾಗಮಂಗಲದ ಕೆರೆ ಕಟ್ಟೆಗಳು ಬತ್ತು ಹೋಗಿದ್ದು, ಕಾವೇರಿಯಿಂದ ತಮಿಳು ನಾಡಿಗೆ ನೀರನ್ನು ಹರಿಯ ಬಿಡುತ್ತಿದ್ದಾರೆ. ಅದನ್ನು ಸದುಪಯೋಗ ಪಡಿಸಿಕೊಳ್ಳದ ತಮಿಳುನಾಡು ಸರ್ಕಾರ ನೀರನ್ನು ಸಮುದ್ರಕ್ಕೆ ಹರಿಯ ಬಿಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಗೂ ಸಿಇಓ ಇದರ ಬಗ್ಗೆ ಗಮನ ವಹಿಸಿ ಕೆರೆ ಕಟ್ಟೆಗೆ  ನೀರು ಬಿಡಿಸಲು ಮುಂದಾಗಬೇಕೆಂದು ಸಭೆಯಲ್ಲಿ ಹೇಳಿದರು .

No comments:

Post a Comment