ಕಾಡಿನಿಂದ ನಾಡಿಗೆ ದಸರಾ ಆನೆಗಳ ಸ್ವಾಗತ
ಮೈಸೂರು,ಆ.14-ವಿಶ್ವ ವಿಖ್ಯಾತ ಮೈಸೂರು ದಸರೆಯ ಮೊದಲ ಸಾಂಸ್ಕøತಿಕ ಕಾರ್ಯಕ್ರಮ ಗಜಪಯಣದಲ್ಲಿ ಇಂದು ಕಾಡಿನಿಂದ ನಾಡಿಗೆ ದಸರಾ ಆನೆಗಳ ಸ್ವಾಗತಿಸಲಾಯಿತು..
ಹುಣಸೂರು ತಾಲ್ಲೂಕಿನ ಉಮ್ಮತ್ತೂರು ಗ್ರಾಮ ಪಂಚಾಯಿತಿಯ ನಾಗಪುರ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಅರ್ಜುನ, ಬಲರಾಮ, ಅಭಿಮನ್ಯು, ಮೇರಿ, ವರಲಕ್ಷ್ಮಿ ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ ಶ್ರೀನಿವಾಸ್ ಪ್ರಸಾದ್ ಅವರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗಜಪಯಣಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಚಾಲನೆ ನೀಡಿದ ನಂತರ ಮಾತನಾಡಿ ಮೈಸೂರಿನಲ್ಲಿ ಐತಿಹಾಸಿಕ ಹಾಗೂ ಪಾರಂಪರಿಕವಾಗಿ 403 ವರ್ಷಗಳಿಂದ ದಸರೆಯನ್ನು ಆಚರಿಸಲಾಗುತ್ತಿದೆ. ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಮೊದಲನೇ ತಂಡದ ಆನೆಗಳನ್ನು ಮೈಸೂರಿನ ಅರಣ್ಯ ಭವನದಲ್ಲಿ ಆಗಸ್ಟ್ 16 ರಂದು ಸ್ವಾಗತಿಸಲಾಗುವುದು . ಆನೆಗಳ ಜತೆಯಲ್ಲಿ ಆಗಮಿಸುವ ಮಾವುತರು , ಕಾವಾಡಿಗರು ಹಾಗೂ ಅವರ ಕುಟುಂಬದವರಿಗೆ ತಂಗಲು ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ದಸರೆಯನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು ದಸರೆಯಲ್ಲಿ ಹೆಚ್ಚಿನ ಜನರು ಭಾಗವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ 45 ಗಿರಿಜನ ಕುಟುಂಬದವರಿಗೆ ಆರ್.ಟಿ.ಸಿ. ವಿತರಿಸಲಾಯಿತು ಹಾಗೂ ಗಿರಿಜನ ಆಶ್ರಮ ಶಾಲೆ ಮಕ್ಕಳು, ಟಿಬೆಟಿಯನ್ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಅಮರ್‍ನಾಥ್, ಶಾಸಕ ತನ್ವೀರ್ ಸೇಠ್, ಮೈಸೂರು ಪ್ರಾದೇಶಿಕ ಆಯುಕ್ತರಾದ ರಶ್ಮಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ,ಮುಖ್ಯಮಂತ್ರಿಕಗಳ ಜಂಟಿ ಕಾರ್ಯದರ್ಶಿ ರಾಮಯ್ಯ , ಜಿಲ್ಲಾಧಿಖಾರಿ ಸಿ.ಶಿಖಾ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ ಎ ಗೋಪಾಲ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ವಿದ್ಯುತ್ ಹರಿಯುವಿಕೆ ಎಚ್ಚರ ವಹಿಸಿ
ಮೈಸೂರು,ಆ.13.-ನಂಜನಗೂಡು, ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನ 20 ಕೆರೆಗಳಿಗೆ ಕುಡಿಯುವ ನೀರಿಗಾಗಿ ಆಲಂಬೂರು ಗ್ರಾಮದ ಹತ್ತಿರ ಕಬಿನಿ ನದಿಯಿಂದ ನೀರೆತ್ತುವ ಯೋಜನೆಯ ಮೊದಲನೇ ಹಂತವನ್ನು ಚಾಲನೆಗೊಳಿಸುತ್ತಿರುವುದರಿಂದ ಸುತ್ತೂರು ಸಬ್-ಸ್ಟೇಷನ್ ನಿಂದ ಆಲಂಬೂರು ಗ್ರಾಮದ ಬಳಿ ನಿರ್ಮಿಸಿರುವ ಪಂಪ್ ಹೌಸ್‍ಗೆ 66/11ಕೆ.ವಿ. ವಿದ್ಯುತ್ ಸರಬರಾಜು ಮಾಡುವ ಪ್ರಸರಣಾ ಮಾರ್ಗದಲ್ಲಿ ದಿನಾಂಕ: 14.08.2014 ಅಥವಾ ನಂತರದ ದಿನಗಳಿಂದ ವಿದ್ಯುತ್ ಹರಿಸಲಾಗುತ್ತದೆ.
ಸದರಿ 66 ಕೆ.ವಿ. ಪ್ರಸರಣಾ ಮಾರ್ಗವು ಕುಪ್ಪರವಳ್ಳಿ, ನಗರ್ಲೆ, ಸರಗೂರು, ಬಸವನಪುರ ಹಾಗೂ ಆಲಂಬೂರು ಗ್ರಾಮೀಣ ಪ್ರದೇಶಗಳ ಸರಹದ್ದಿನ ಮಾರ್ಗವಾಗಿ ಹಾಯ್ದು ಹೋಗುತ್ತದೆ.
ಸಾರ್ವಜನಿಕರು, ವಿದ್ಯುತ್ ಗೋಪುರಗಳ ಮೇಲೆ ವಿದ್ಯುತ್ ವಾಹಕವು ಚಾಲನೆಗೊಳ್ಳುವುದರಿಂದ, ಗೋಪುರಗಳಿಗೆ ದನಕರುಗಳನ್ನು ಕಟ್ಟುವುದಾಗಲಿ, ಲೋಹದ ಪಟ್ಟಿಯನ್ನು ತೆಗೆಯುವುದಾಗಲಿ, ಗೋಪುರಗಳನ್ನು ಹತ್ತುವುದಾಗಲಿ, ತಂತಿಗಳನ್ನು ಮುಟ್ಟುವುದಾಗಲಿ, ಗೋಪುರಗಳ ಕೆಳಗಡೆ ಮರಗಿಡಗಳನ್ನು ನೆಡುವುದಾಗಲಿ, ಗೋಪುರಗಳಿಗೆ ಬಳ್ಳಿ ಮತ್ತು ಹಗ್ಗ ಮುಂತಾದುವುಗಳನ್ನು ಎಳೆಯುವುದಾಗಲಿ, ಗಾಳಿಪಟವನ್ನು ಗೋಪುರದ ಹತ್ತಿರ ಹಾರಿಸುವುದಾಗಲಿ ಮಾಡಬಾರದು ಇದು ತುಂಬಾ ಅಪಾಯಕಾರಿ ಹಾಗೂ ಪ್ರಾಣ ಹಾನಿಯಾಗುವ ಸಂಭವವಿರುತ್ತದೆ.
ಈ ಸೂಚನೆಯನ್ನು ಉಲ್ಲಂಘಿಸಿದ ಪಕ್ಷದಲ್ಲಿ ಉಂಟಾಗುವ ಯಾವುದೇ ತರಹದ ಅಪಘಾತ ಅಥವಾ ಪ್ರಾಣ ಹಾನಿಗೆ ಕಾವೇರಿ ನೀರಾವರಿ ನಿಗಮ ನಿಯಮಿತ., ಜವಾಬ್ದಾರರಲ್ಲ ಎಂದು ನಂಜನಗೂಡು ಕಬಿನಿ ನಾಲಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಣತಿದಾರರು ಹಾಗೂ ಮೇಲ್ವಿಚಾರಕರು ಬ್ಯಾಂಕ್ ಖಾತೆ ವಿವರ ನೀಡಿ
ಮೈಸೂರು,ಆ.14-ಮೈಸೂರು ಜಿಲ್ಲೆಯಲ್ಲಿ 2013 ನೇ ನವೆಂಬರ್-ಡಿಸೆಂಬರ್ ಮಾಹೆಯಲ್ಲಿ 6ನೇ ಆರ್ಥಿಕ ಗಣತಿ ಕಾರ್ಯವನ್ನು ನಡೆಸಲಾಗಿದ್ದು, ಹಲವಾರು ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಬ್ಯಾಂಕ್ ಖಾತೆಯ ಸಂಖ್ಯೆ ಮುಂತಾದ ವಿವರಗಳನ್ನು ಸರಿಯಾಗಿ ನೀಡದಿರುವುದರಿಂದ ಗೌರವಧನ ಪಾವತಿಯಾಗಿರುವುದಿಲ್ಲ.
6ನೇ ಆರ್ಥಿಕ ಗಣತಿಯ ಕ್ಷೇತ್ರ ಕಾರ್ಯವನ್ನು ನಿರ್ವಹಿಸಿ ಈವರೆಗೆ ಗೌರವಧನ ಪಾವತಿಯಾಗದೆ ಇರುವ ಗಣತಿದಾರರು ಹಾಗೂ ಮೇಲ್ವಿಚಾರಕರು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಸಂಬಂಧಿಸಿದ ತಾಲ್ಲೂಕುಗಳ ತಹಸೀಲ್ದಾರರವರ ಕಛೇರಿಗೆ ಸಲ್ಲಿಸಲು, ಮೈಸೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ಗಣತಿದಾರರು ಹಾಗೂ ಮೇಲ್ವಿಚಾರಕರು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಮೈಸೂರು ಮಹಾನಗರ ಪಾಲಿಕೆ ಕಛೇರಿಗೆ ಸಲ್ಲಿಸಲು ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿಗಳು, ಮೈಸೂರು ಜಿಲ್ಲೆ ರವರು ಪ್ರಕಟಣೆಯಲ್ಲಿ ಕೋರಿರುತ್ತಾರೆ.
ಗೃಹ ನಿರ್ಮಾಣ: ಸಹಾಯಧನ
ಮೈಸೂರು,ಆ.14.ಬಡವರ ವಸತಿ ಗೃಹ ನಿರ್ಮಾಣಕ್ಕಾಗಿ ನೆರವು ನೀಡುವ ದಿಸೆಯಲ್ಲಿ ಕೇಂದ್ರ ಸರ್ಕಾರದ ರಾಜೀವ್ ರಿನ್ ಎಂಬ ವಿನೂತನ ಯೋಜನೆಯನ್ನು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ತರಲಾಗಿದೆ.
ಆರ್ಥಿಕ ದುರ್ಬಲ ವರ್ಗ (ಇ.ಡಬ್ಲ್ಯೂ.ಎಸ್) ಹಾಗೂ ಕಡಿಮೆ ಆದಾಯ ವರ್ಗಗಳಿಗೆ (ಎಲ್.ಐ.ಜಿ) ಮನೆ ನಿರ್ಮಾಣಕ್ಕಾಗಿ ಭಾರತ ಸರ್ಕಾರ ಜಾರಿಗೊಳಿಸಿದ್ದ ಐ.ಎಸ್.ಹೆಚ್.ಯು.ಪಿ. ಯೋಜನೆಯನ್ನು ಪರಿಷ್ಕರಿಸಿ ರಾಜೀವ್ ರಿನ್ ಯೋಜನೆ ಎಂದು ಮರುನಾಮಕರಣ ಮಾಡಿ 2013ರ ಅಕ್ಟೋಬರ್ 1 ರಿಂದ ಜಾರಿಗೆ ತರಲಾಗಿದೆ.
ಈ ಯೋಜನೆಯಡಿ ಇ.ಡಬ್ಲ್ಯೂ.ಎಸ್ ಮತ್ತು ಎಲ್.ಐ.ಜಿ. ವರ್ಗದವರು ಮನೆ ಖರೀದಿಸಲು, ಹೊಸದಾಗಿ ಮನೆ ನಿರ್ಮಿಸಿಕೊಳ್ಳಲು ಅಥವಾ ಇರುವ ಮನೆಗೆ ಹೆಚ್ಚುವರಿಯಾಗಿ ಕೊಠಡಿ ನಿರ್ಮಿಸಿಕೊಳ್ಳಲು ಸಹಾಯಧನವನ್ನು ನೀಡಲಿದೆ.
ಇ.ಡಬ್ಲ್ಯೂ.ಎಸ್ ಕುಟುಂಬಕ್ಕೆ ಕನಿಷ್ಠ 21 ಚ.ಮಿ.ವರೆಗಿನ ಮನೆ ನಿರ್ಮಿಸಲು ಗರಿಷ್ಠ 5 ಲಕ್ಷ ರೂ. ವರೆಗೆ ಬ್ಯಾಂಕ್ ಸಾಲ ಒದಗಿಸಿ ಶೇ. 5ರಷ್ಟು ಬಡ್ಡಿ ಸಹಾಯಧನ ನೀಡಲಿದೆ. ಹೆಚ್ಚುವರಿ ಸಾಲ ಅವಶ್ಯಕವಿದ್ದಲ್ಲಿ ಸಬ್ಸಿಡಿ ರಹಿತ ದರದಲ್ಲಿ 15 ರಿಂದ 20 ವರ್ಷಗಳ ಅವಧಿವರೆಗಿನ ಸಾಲವನ್ನು ಒಸಗಿಸಲಾಗುವುದು.
ಎಲ್.ಐ.ಜಿ. ಕುಟುಂಬಕ್ಕೆ ಕನಿಷ್ಠ 28 ಚ.ಮೀ. ಹೊಂದಿರುವ ನಿವೇಶನದಲ್ಲಿ ಮನೆ ನಿರ್ಮಿಸಲು ಅಥವಾ ಕಟ್ಟಿರುವ ಮನೆ ಖರೀದಿಸಲು ಗರಿಷ್ಠ 8 ಲಕ್ಷ ರೂ.ಗಳನ್ನು ಬ್ಯಾಂಕಿನಿಂದ ನೀಡಲಿದ್ದು, 5 ಲಕ್ಷ ರೂ.ಗಳಿಗೆ ಮಾತ್ರ ಬಡ್ಡಿ ದರದಲ್ಲಿ ಸಹಾಯಧನ ನೀಡಲಾಗುವುದು. 5 ಲಕ್ಷ ರೂ.ನಿಂದ 8 ಲಕ್ಷ ರೂ.ವರೆಗಿನ ಹೆಚ್ಚುವರಿ ಸಾಲದ ಮೊತ್ತಕ್ಕೆ ಬಡ್ಡಿ ದರದಲ್ಲಿ ಸಹಾಯಧನ ದೊರೆಯುವುದಿಲ್ಲ. ಸಾಲದ ಅವಧಿ 15 ರಿಂದ 20 ವರ್ಷಗಳಾಗಿದೆ.
ಹೆಚ್ಚಿನ ವಿವರಗಳಿಗೆ ಸಂಬಂಧಿಸಿದ ನಂಜನಗೂಡು, ಹುಣಸೂರು, ಕೆ.ಆರ್.ನಗರ, ಬನ್ನೂರು ಪುರಸಭೆ ಹಾಗೂ ಪಿರಿಯಾಪಟ್ಟಣ, ತಿ.ನರಸೀಪುರ, ಹೆಚ್.ಡಿ.ಕೋಟೆ, ಸರಗೂರು ಪಟ್ಟಣ ಪಂಚಾಯಿತಿಗಳ ಸಮುದಾಯ ಸಮನ್ವಯಾಧಿಕಾರಿಗಳನ್ನು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಮುದಾಯ ಅಭಿವೃದ್ಧಿ ತಜ್ಞರು ಹಾಗೂ ಕೌಶಲ್ಯಾಭಿವೃದ್ದಿ ಮತ್ತು ಜೀವನೋಪಾಯ ತಜ್ಞರುಗಳನ್ನು ಹಾಗೂ ಮಹಾನಗರ ಪಾಲಿಕೆಯ ರಾಜೀವ್ ಆವಾಜ್ ಯೋಜನೆ ಅನುಷ್ಠಾನ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
No comments:
Post a Comment