Wednesday, 1 October 2014

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 15.834 ಕೋಟಿ ರೂ. ಮೀಸಲು : ಮುಖ್ಯಮಂತ್ರಿ


ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 15.834 ಕೋಟಿ ರೂ. ಮೀಸಲು : ಮುಖ್ಯಮಂತ್ರಿ
       ಮೈಸೂರು.ಅ.01.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಜನರ  ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ದವಾಗಿದ್ದು, ಅವರ ಏಳಿಗೆಗೆ ಪ್ರಸಕ್ತ  ಸಾಲಿನಲ್ಲಿ 15.834 ಕೋಟಿ ರೂ ಅನುದಾನವನ್ನು ಮೀಸಲಿರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. 
      ಹೆಚ್.ಡಿ.ಕೋಟೆ ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನಾ  ಹಾಗೂ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.   
      ರಾಜ್ಯ ಸರ್ಕಾರವು ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಮೀಸಲಿರಿಸದ್ದು, ರಾಜ್ಯದಲ್ಲಿ ಶೇ. 24.1 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿದ್ದಾರೆ.  ಇದರ ಆಧಾರದ ಮೇಲೆ ಅನುದಾನ ಮೀಸಲಿರಿಸಿದ್ದು, ಅಧಿಕಾರಿಗಳು ಅನುದಾನವನ್ನು ಖರ್ಚು ಮಾಡುವಲ್ಲಿ ವಿಫಲವಾದರೆ ಕಠಿಣ ಕ್ರಮವಹಿಸಲಾಗುವುದು. ಒಂದು ವೇಳೆ ಅನುದಾನ ಖರ್ಚು ಆಗದಿದ್ದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಅನುದಾನದಿಂದ ವಂಚಿತರಾಗದಂತೆ ಮುಂದಿನ ಸಾಲಿನಲ್ಲಿ ಖರ್ಚು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು. 
     ಅಲ್ಲದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ಹೈನುಗಾರಿಕೆಯಲ್ಲಿ ಪ್ರೋತ್ಸಾಹಿಸಲು  ಹಸು ಖರೀದಿಗಾಗಿ 300 ಕೋಟಿ ರೂ. ಮೀಸಲಿರಿಸಿದೆ.  ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು 4 ರೂಪಾಯಿ ಹೆಚ್ಚಿಸಿದ್ದ ಹಿನ್ನೆಲೆಯಲ್ಲಿ  65 ಲಕ್ಷ ಲೀಟರ್ ಹಾಲು ಕರ್ನಾಟಕ ಹಾಲು ಒಕ್ಕೂಟಕ್ಕೆ ರೈತರಿಂದ ನೀಡಲಾಗುತ್ತದೆ ಎಂದರು.
     ಮೈಸೂರು ಜಿಲ್ಲೆಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕು ಆದ ಹೆಚ್.ಡಿ.ಕೋಟೆ ಅಭಿವೃದ್ಧಿಗೆ  ವಿಶೇಷ ಗಮನ ಹರಿಸಲಾಗುವುದು. ತಾಲ್ಲೂಕಿನಲ್ಲಿ ಬರುವ ಎಲ್ಲ ನಾಲೆಗಳನ್ನು ಆಧುನೀಕರಣಗೊಳಿಸಲು ಸರ್ಕಾರವು ಕ್ರಮ ಕೈಗೊಳ್ಳಲಿದೆ. ಕಬಿನಿ ಜಲಾಶಯ ಕೆಳಭಾಗದಲ್ಲಿರುವ ಪ್ರದೇಶವನ್ನು ಮಂಡ್ಯ ಜಿಲ್ಲೆಯ ಕೆ.ಆರ್.ಎಸ್. ಬೃಂದಾವನ ಮಾದರಿಯಲ್ಲಿ ಅಭಿವೃದ್ದಿಗೊಳಿಸಲಾಗುವುದು ಎಂದು ಹೇಳಿದರು.
      ಆನೆ ತಡೆಗೋಡೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅರಣ್ಯ ಇಲಾಖೆಗೆ 200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಹಾಗೂ ಹೆಚ್.ಡಿ.ಕೋಟೆ ತಾಲ್ಲೂಕಿನ ರಸ್ತೆ ಅಭಿವೃದ್ಧಿಗಾಗಿ 37 ಕೋಟಿ ರೂ. ಲೋಕೋಪಯೋಗಿ ಇಲಾಖೆಯಿಂದ ಬಿಡುಗಡೆಗೊಳಿಸಿದೆ.  
      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಚಿಕ್ಕಮಾದು ಅವರು ಹೆಚ್.ಡಿ.ಕೋಟೆ ತಾಲ್ಲೂಕು ಮೈಸೂರು ಜಿಲ್ಲೆಯಲ್ಲೇ ಅತ್ಯಂತ ಹಿಂದುಳಿದ ತಾಲ್ಲೂಕು ಆಗಿರುವುದರಿಂದ ಇದರ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  500 ಕೋಟಿ ರೂ. ವಿಶೇಷ ಪ್ಯಾಕೇಜ್‍ಗೆ ಘೋಷಿಸಲು ಮನವಿ ಮಾಡಿದರು.
       ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಇಂದು ಮುಖ್ಯಮಂತ್ರಿಗಳು 2948.19 ಲಕ್ಷ ಕಾಮಗಾರಿಗಳ ಉದ್ಘಾಟನೆ ಹಾಗೂ 5902.51 ಲಕ್ಷ ರೂ. ಶಂಕುಸ್ಥಾಪನೆ  ಒಟ್ಟು 8850.70 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗಳ ಚಾಲನೆ ನೀಡಿದರು.  
     ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಲೋಕೋಪಯೋಗಿ ಸಚಿವ  ಡಾ|| ಹೆಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್,  ಜಿಲ್ಲಾ ಪಂಚಾಯತ್ ಅಧ್ಯಕ್ಷತೆ ಡಾ| ಪುಷ್ಪಾವತಿ ಅಮರನಾಥ್, ಸಂದಸರಾದ ಆರ್. ಧ್ರುವನಾರಾಯಣ್, ಶಾಸಕರಾದ ಎಂ.ಕೆ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಹೆಚ್.ಡಿ.ಕೋಟೆ ಮಾಜಿ ಶಾಸಕ ಚಿಕ್ಕಣ್ಣ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರವಾಸ ಕಾರ್ಯಕ್ರಮ
     ಮೈಸೂರು.ಅ.01.ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಶ್ರೀ ದಿನೇಶ್ ಗುಂಡುರಾವ್ ಅವರು ಅಕ್ಟೋಬರ್ 3, 4 ಹಾಗೂ 5 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
     ಅಕ್ಟೋಬರ್ 3 ರಂದು ಸಂಜೆ 6 ಗಂಟೆಗೆ ಮೈಸೂರಿಗೆ ಸಚಿವರು ಆಗಮಿಸಿ ವಾಸ್ತವ್ಯ ಹೂಡುವರು.  ಅಕ್ಟೋಬರ್ 4 ರಂದು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಅಕ್ಟೋಬರ್ 5 ರಂದು ಸಂಜೆ 5 ಗಂಟೆಗೆ ಮೈಸೂರು ರಸ್ತೆಯ ಮೂಲಕ ಬೆಂಗಳೂರಿಗೆ ತೆರಳುವರು.

No comments:

Post a Comment