Tuesday, 30 September 2014

ವೃದ್ದಾಪ್ಯದಲ್ಲಿ ಆರೋಗ್ಯ ರಕ್ಷಣೆ ಅತಿಮುಖ್ಯ-ಡಾ.ಸುಭಾಷ್
ಮಂಡ್ಯ,ಸೆ.30-ವೃದ್ಧರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಸಂಧರ್ಭದಲ್ಲಿ ಕಾಯಿಲೆಗಳು ಸಹಜವಾಗೇ ಹೆಚ್ಚಾಗುತ್ತವೆ. ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಜಾಗೃತಿಯಿಂದ ಬದುಕಬೇಕು ಎಂದು ಮಿಮ್ಸ್ ವಿಭಾಗೀಯ ಆರೋಗ್ಯಾಧಿಕಾರಿ ಡಾ.ಸುಭಾಷ್ ಬಾಬು ಕರೆ ನೀಡಿದರು.
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ವತಿಯಿಂದ ಜ್ಞಾನ ಸಿಂಧು ವೃದ್ಧಾಶ್ರಮದ ಆಶ್ರಿತರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವರ್ಷ ವರ್ಷ ಕಳೆದಂತೆ ಆಯಸ್ಸಿಗೆ ನಾವು ಜೀವ ತುಂಬುವ ಕೆಲಸ ಮಾಡಬೇಕು. ವಯಸ್ಸಾದ ನಂತರ ಮಾನಸಿಕ ಆರೋಗ್ಯವನ್ನೂ ದೈಹಿಕ ಆರೋಗ್ಯದ ಜೊತೆಗೆ ಜೋಪಾನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ.ರೇಖಾ ಮಾತನಾಡಿ, ವೃದ್ಧಾಶ್ರಮದಲ್ಲಿ ಬದುಕುತ್ತಿರುವ ನೀವು ಕೌಟುಂಬಿಕ ಚಿಂತನೆಗಳನ್ನು ದೂರವಿಟ್ಟು ವೈಯಕ್ತಿಕ ಶುಚಿತ್ವ ಮತ್ತು ಆರೋಗ್ಯದ ಕಡೆ ಗಮನಹರಿಸಬೇಕು. ಆಗಾಗ್ಗೆ ರಕ್ತದೊತ್ತಡ, ಮಧುಮೇಹ ಪರೀಕ್ಷೆಗಳನ್ನು ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕೆಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೇವಣೇಶ್ ಮಾತನಾಡಿ, ಜೀವನದಲ್ಲಿ ಕಂಡುಂಡ ನೋವುಗಳನ್ನು ಬದಿಗಿಟ್ಟು ಆರೋಗ್ಯದ ಕಡೆ ಗಮನ ಹರಿಸಿ. ನೋವಿಲ್ಲದ ಕುಟುಂಬ ಯಾವುದೂ ಇಲ್ಲ. ದೇವರು ನಮಗೆ ಮುಂಭಾಗದಲ್ಲಿ ಕಣ್ಣು ಕೊಟ್ಟಿರುವುದು ಮುಂದಿನದನ್ನು ನೋಡಿಕೊಂಡು ಬದುಕಿ ಎಂದು. ದಿನನಿತ್ಯ ಹುಟ್ಟುವ ಸೂರ್ಯನನ್ನು ಹೊಸದಾಗಿ ಕಾಣುವ ಪ್ರಯತ್ನ ಮಾಡಿದಾಗ ಬದುಕು ಸುಂದರವಾಗಿ ಕಾಣುತ್ತದೆ. ಶರೀರ ರೋಗಮಯ, ಸಂಸಾರ ದುಃಖಮಯ ಇದು ಸಹಜವಾದುದು. ಚಿಂತೆ ಬಿಟ್ಟು ಬದುಕುವುದನ್ನು ಕಲಿಯಿರಿ ಎಂದರು.
ನಿವೃತ್ತ ಅಧಿಕಾರಿ ಮುಕುಂದ್ ಮಾತನಾಡಿ, ಬದುಕಿನ ನೂರಾರು ಕಷ್ಟಗಳನ್ನು ಸಹಿಸಿ, ನೋವನ್ನು ಅನುಭವಿಸಿ ಮಾಗಿರುವ ನೀವು ಈಗಲಾದರೂ ನೆಮ್ಮದಿಯಾಗಿ ಬದುಕುವಂತಾಗಬೇಕು. ಆರೋಗ್ಯವನ್ನು ಜೋಪಾನದಿಂದ ಕಾಯ್ದುಕೊಂಡು ಅಂತಿಮ ದಿನಗಳನ್ನು ನೆಮ್ಮದಿಯಿಂದ ಕಳೆಯಿರಿ ಎಂದರು.
ಸಮಾರಂಭವನ್ನುದ್ದೇಶಿಸಿ ಪರ್ತಕರ್ತ ದೇವರಾಜ್ ಕೊಪ್ಪ ಮಾತನಾಡಿದರು. ಜ್ಞಾನಸಿಂಧು ಸಂಸ್ಥೆಯ ವ್ಯವಸ್ಥಾಪಕ ಕಾರ್ಯದರ್ಶಿ ವಿಜಯ್ ಕುಮಾರ್ ಉಪಸ್ಥಿತರಿದ್ದರು. ಆಶ್ರಮದ ಮೇಲ್ವಿಚಾರಕಿ ನಿರ್ಮಲಾ ಸ್ವಾಗತಿಸಿದರು. ಶಿಕ್ಷಕ ಅಶ್ವಥ್ ನಾರಾಯಣ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವರಲಕ್ಷ್ಮಿ ವಂದಿಸಿದರು.

No comments:

Post a Comment