Saturday, 20 September 2014

ಕೆ.ಆರ್.ಪೇಟೆ,ಸೆ.19-ತಾಲೂಕಿನ ಮುರುಕನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎ.ಎನ್.ಗೋವಿಂದರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷ ಹೆಚ್.ಎ.ಕೃಷ್ಣೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಎ.ಎನ್.ಗೋವಿಂದರಾಜು ಹೊರತುಪಡಿಸಿ ಬೇರೆ ಯಾರೂ ಸಹ ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ತಾ.ಪಂ. ಇಒ ಕೆಂಚಪ್ಪ ಅವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ನೂತನ ಅಧ್ಯಕ್ಷರನ್ನು ತಾಲೂಕು ಕಾಂಗ್ರೆಸ್ ಉಪಾಧ್ಯಕ್ಷ ಕೆ.ಬಿ.ರವಿಕುಮಾರ್, ಜಿ.ಪಂ.ಮಾಜಿ ಉಪಾಧ್ಯಕ್ಷ ಎಸ್.ಅಂಬರೀಷ್, ಮನ್‍ಮುಲ್ ನಿರ್ದೇಶಕರಾದ ಡಾಲುರವಿ, ಗ್ರಾ.ಪಂ.ಸದಸ್ಯರಾದ ಎಚ್.ವಿ.ಸತೀಶ್, ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷೆ ರತ್ನಮ್ಮ, ಮತ್ತಿತರರು ಅಭಿನಂದಿಸಿದರು. ಸಹ ಚುನಾವಣಾಧಿಕಾರಿಯಾಗಿ ತಾ.ಪಂ. ವ್ಯವಸ್ಥಾಪಕ ಶಿವಕುಮಾರ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ತಿಲಕ್‍ಕುಮಾರ್ ಕಾರ್ಯನಿರ್ವಹಿಸಿದರು.  ನೂತನ ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಗ್ರಾ.ಪಂ.ಆವರಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಿದರು.
ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎನ್.ಗೋವಿಂದರಾಜು ಮಾತನಾಡಿ ಸದಸ್ಯರು ತಮ್ಮ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಇದಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅನುಧಾನವನ್ನು ಸಮಾನವಾಗಿ ಹಂಚಿಕೆ ಮಾಡಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ.  ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮಗಳಲ್ಲಿ ಆಗಬೇಕಾದ ಶೌಚಾಲಯ ನಿರ್ಮಾಣ, ಚರಂಡಿಗಳ ನಿರ್ಮಾಣ, ರಸ್ತೆಗಳ ಅಭಿವೃದ್ಧಿ ಕೈಗೊಂಡು ಜನತೆ ತಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ದಕ್ಕೆ  ಕ್ರಿಯಾಶೀಲವಾಗಿ ಕೆಲಸ ಮಾಡುವುದಾಗಿ ಗೋವಿಂದರಾಜು ಹೇಳಿದರು. ಸಾರ್ವಜನಿಕರು ಗ್ರಾಮ ಪಂಚಾಯಿತಿ ವತಿಯಿಂದ ಆಗಬೇಕಾದ ಯಾವುದೇ ಕೆಲಸಕ್ಕೆ  ಅಲೆಯದಂತೆ ಗ್ರಾ.ಪಂ.ಅಧಿಕಾರಿಗಳು ಕೆಲಸ ಮಾಡಿಕೊಡಬೇಕು. ಫಲಾನುಭವಿಗಳನ್ನು ಆಯ್ಕೆಮಾಡುವಾಗ ಬಡ ಅರ್ಹ ಫಲಾನುಭವಗಳನ್ನು ಮಾತ್ರ ಆಯ್ಕೆ ಮಾಡಬೇಕು ಯಾವುದೇ ಕಾರಣಕ್ಕೂ ತಾವು ಬಡವರ ವಿರೋಧಿ ಆಡಳಿತ ಮಾಡಲು ಬಯಸುವುದಿಲ್ಲ. ಬಡವರ ಸೇವೆಯೇ ತಮ್ಮ ಆಡಳಿತದ ಧ್ಯೇಯವಾಗಿದೆ.  ನನ್ನನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಸಹಕರಿಸಿದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಮಾಜಿ ಸ್ಪೀಕರ್ ಕೃಷ್ಣ, ತಾಲೂಕು ಕಾಂಗ್ರೆಸ್ ಉಪಾಧ್ಯಕ್ಷ ಕೆ.ಬಿ.ರವಿಕುಮಾರ್, ಮನ್‍ಮುಲ್ ನಿರ್ದೇಶಕರಾದ ಎಸ್.ಅಂಬರೀಷ್ ಮತ್ತಿತರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನೂತನ ಅಧ್ಯಕ್ಷ ಗೋವಿಂದರಾಜು ಹೇಳಿದರು.  

No comments:

Post a Comment