Wednesday, 3 September 2014

ಕೃಷ್ಣರಾಜಪೇಟೆ.

ಕೃಷ್ಣರಾಜಪೇಟೆ. ಸಮಾಜದ ಎಲ್ಲಾ ಜಾತಿ ವರ್ಗಗಳ ಜನರು ಒಂದಾಗಿ ಸಂತೋಷದಿಂದ ಕೂಡಿ ಆಚರಿಸುವ ಹಬ್ಬವೇ ಗಣೇಶೋತ್ಸವವಾಗಿದೆ. ಗಣಪತಿಯು ವಿಘ್ನವಿನಾಶಕನಾಗಿದ್ದು ಕಷ್ಟಗಳನ್ನು ಪರಿಹರಿಸಿ ಸುಖ ಸಂತೋಷವನ್ನು ನೀಡಿ ಹರಸಿ ಆಶೀರ್ವದಿಸುತ್ತಾನೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಪ್ರಭಾಕರ್ ಹೇಳಿದರು.
ಅವರು ಪಟ್ಟಣದ ಡಿಸಿಸಿ ಬ್ಯಾಂಕಿನ ಪಕ್ಕದ ಆವರಣದಲ್ಲಿ ತಾಲೂಕು ಲಕ್ಸುರಿ ಕಾರ್ ಚಾಲಕರು ಮತ್ತು ಮಾಲೀಕರ ಸಂಘವು ಆಯೋಜಿಸಿದ್ದ ಗಣೇಶೋತ್ಸವ ಸಮಾರಂಭದ ಅಂಗವಾಗಿ ನಡೆದ ಸಂಗೀತ ರಸಸಂಜೆ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೂಗಳು-ಮುಸ್ಲಿಂಬಾಂಧವರು ಎಂಬ ಬೇಧ-ಭಾವವಿಲ್ಲದಂತೆ ಎಲ್ಲರೂ ಒಂದಾಗಿ ವಿಶಿಷ್ಠವಾಗಿ ಆಚರಿಸುವ ಹಬ್ಬವೇ ಗಣೇಶನ ಹಬ್ಬವಾಗಿದೆ. ಕೃಷ್ಣರಾಜಪೇಟೆ ತಾಲೂಕು ಕೋಮು ಸೌಹಾರ್ಧತೆಗೆ ರಾಜ್ಯದಲ್ಲಿಯೇ ಮಾದರಿಯಾಗಿದ್ದು ಮುಸ್ಲಿಂ ಬಾಂಧವರು ಹಿಂದೂಗಳೊಂದಿಗೆ ಸೇರಿಕೊಂಡು ವಿಶೇಷವಾದ ಕಾರ್ಯಕ್ರಮಗಳನ್ನು ನಡೆಸಿ ಜನತೆಗೆ ಮನರಂಜನೆಯನ್ನು ನೀಡುವ ಜೊತೆಗೆ ಭಯ-ಭಕ್ತಿಯಿಂದ ಗಣಪನನ್ನು ಪೂಜಿಸಿ ಇಷ್ಠಾರ್ಥವನ್ನು ಸಿದ್ಧಿಸಿ ಅನುಗ್ರಹಿಸುವಂತೆ ಬೇಡಿದರೆ ಖಂಡಿತವಾಗಿಯೂ ಗಣಪನು ಹರಸಿ ಆಶೀರ್ವಧಿಸುತ್ತಾನೆ. ನಿಷ್ಕಲ್ಮಶವಾದ ಭಕ್ತಿಭಾವದಿಂದ ವಿಘ್ನವಿನಾಶಕ ಗಣಪತಿಗೆ ಪೂಜೆಯನ್ನು ಸಲ್ಲಿಸಿ ಮೋದಕ ಹಾಗೂ ಕಡುಬಿನ ನೈವೇದ್ಯವನ್ನು ಅರ್ಪಿಸಿ ಪ್ರಾರ್ಥಿಸಿದರೆ ಇಷ್ಠಾರ್ಥವು ಸಿದ್ಧಿಸುತ್ತದೆಯಲ್ಲದೇ ಹಿಡಿದ ಕಾರ್ಯದಲ್ಲಿ ಜಯಲಕ್ಷ್ಮಿಯು ಸುಲಭವಾಗಿ ಒಲಿಯುತ್ತಾಳೆ ಎಂದು ಹೇಳಿದ ಪ್ರಭಾಕರ್ ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರತಿಲಕ್ ಗಣೇಶೋತ್ಸವದ ಮೂಲಕ ದೇಶದಾಧ್ಯಂತ ಭಾರತೀಯರನ್ನು ಸಂಘಟಿಸಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ್ದು ಇಂದಿಗೂ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ ಎಂದು ಕಿಕ್ಕೇರಿ ಪ್ರಭಾಕರ್ ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್ ಹಿರಿಯ ಚಾಲಕರನ್ನು ಸನ್ಮಾನಿಸಿ ಗೌರವಿಸಿ ಮಾತನಾಡಿ ಸಮಾಜದಲ್ಲಿ ಶಿಸ್ತು ಹಾಗೂ ಬದ್ಧತೆಗೆ ಹೆಸರುವಾಸಿಯಾಗಿರುವ ಚಾಲಕರು ದುಶ್ಚಟಗಳಿಂದ ದೂರವಿದ್ದು ಅಪಘಾತಗಳು ಸಂಭವಿಸಿದಂತೆ ಎಚ್ಚರದಿಂದ ವಾಹನಗಳನ್ನು ಚಾಲನೆ ಮಾಡಬೇಕು. ವಾಹನಗಳ ಚಾಲನೆ ಮಾಡುವಾಗ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಕರ್ತವ್ಯವನ್ನೇ ದೇವರೆಂದು ತಿಳಿದು ಪ್ರಯಾಣಿಕರ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಪುರಸಭೆ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಸದಸ್ಯರಾದ ಡಿ.ಪ್ರೇಮಕುಮಾರ್, ಕೆ.ಟಿ.ಚಕ್ರಪಾಣಿ, ಅಮ್ಯೂಸ್‍ಮೆಂಟ್ ಫಾರ್ಕ್ ಕಂಪನಿಯ ಮಾಲೀಕರಾದ ಅಶ್ರಾಫ್, ಸಗಟು ಎಳನೀರು ವ್ಯಾಪಾರಿ ಹನುಮಂತೇಗೌಡ, ಸಮಾಜಸೇವಕ ಕೆ.ಸಿ.ರೇವಣ್ಣ, ಕಾರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಪಿಡಿಜಿಕೊಪ್ಪಲು ಮಹೇಶ್, ಕಾರ್ಯದರ್ಶಿ ಶಿವಮೂರ್ತಿ, ಪದಾಧಿಕಾರಿಗಳಾದ ಬಾಬು, ಚಂದ್ರಶೇಖರ್, ಮೋಹನ್, ಶ್ರೀಕಂಠಪ್ಪ, ಕೆ.ಎಸ್.ಮಂಜುನಾಥ, ಕಾರ್ ಅಣ್ಣಯ್ಯ, ಹಂಸವಾಸು, ರಾಜೇಶ್, ಸತೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಲಕ್ಸುರಿ ಕಾರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಪಿಡಿಜಿಕೊಪ್ಪಲು ಮಹೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಶಿವಮೂರ್ತಿ ವಂದಿಸಿದರು. ಬಾಬು ಮತ್ತು ಶ್ರೀಕಂಠಪ್ಪ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment