Tuesday, 2 September 2014


ಕೆ.ಆರ್.ಪೇಟೆಯಲ್ಲಿ ಜಯ ಕರ್ನಾಟಕ ತಾಲ್ಲೂಕು ಕಾರ್ಯಕಾರಿ ಸಮಿತಿ ಸಭೆ
ಜಯ ಕರ್ನಾಟಕದ ನಡೆ- ಗ್ರಾಮದೆಡೆಗೆ: ಎಸ್.ನಾರಾಯಣ್
ಮಂಡ್ಯ: ಜಯ ಕರ್ನಾಟಕ ಸಂಘಟನೆಯ ಕೆ.ಆರ್.ಪೇಟೆ ತಾಲ್ಲೂಕು ಕಾರ್ಯಕಾರಿ ಸಮಿತಿ ಸಭೆ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಎಸ್.ನಾರಾಯಣ್ ಅಧ್ಯಕ್ಷತೆಯಲ್ಲಿ ನಡೆಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ನಾರಾಯಣ್ ಅವರು ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ರಾಜ್ಯಾದ್ಯಂತ ಏಕರೂಪ ಸಮಾನ ಶಿಕ್ಷಣ ನೀತಿ ಜಾರಿಗೆ ಒತ್ತಾಯಿಸಿ ಸಂಘಟನೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಣ ತೇರನ್ನು ಯಶಸ್ವಿಯಾಗಿ ನಡೆಸುವ ಮೂಲಕ ಜನರಿಗೆ ಅರಿವು ಮೂಡಿಸಲಾಗಿದೆ. ಇದೇ ರೀತಿ ಕಾವೇರಿ ಚಳವಳಿ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಹೋರಾಟ, ವೀರ ಸಂಗೊಳ್ಳಿ ರಾಯಣ್ಣನ ಹುಟ್ಟುಹಬ್ಬ, ನಾಡು- ನುಡಿ ವಿಚಾರವಾಗಿ ಹಲವಾರು ಹೋರಾಟ ನಡೆಸುತ್ತಾ ಬಂದಿದ್ದೇವೆ. ಆರೋಗ್ಯ ಶಿಬಿರಗಳನ್ನು ಯಶಸ್ವಿಯಾಗಿ ಸಂಘಟಿಸಿ, ಜನರ ಆರೋಗ್ಯ ಕಾಪಾಡಲು ಮುಂದಾಗಿದ್ದೇವೆ ಎಂದರು.
ಜಿಲ್ಲೆಯಲ್ಲಿ ಸಾಧನೆ ಮಾಡಿರುವ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಸನ್ಮಾನ ಕಾರ್ಯಕ್ರಮ ಮಾಡುತ್ತಾ ಬಂದಿದ್ದೇವೆ. ವಿದ್ಯಾರ್ಥಿಗಳು, ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಮಹಿಳೆಯರ ಸಬಲೀಕರಣಕ್ಕೆ ಸಂಘಟನೆ ಒತ್ತು ನೀಡಿದೆ ಎಂದು ಹೇಳಿದರು.
ಕ್ರೀಡಾಪಟುಗಳಿಗೆ ಸರ್ಕಾರದಿಂದ ದೊರಕುವ ಸೌಲಭ್ಯಗಳು ತೀರಾ ಕಡಿಮೆಯಿದ್ದು, ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಜಯ ಕರ್ನಾಟಕದ ನಡೆ- ಗ್ರಾಮದೆಡೆಗೆ ಎನ್ನುವ ಧ್ಯೇಯೋದ್ದೇಶದೊಂದಿಗೆ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರಿಗೆ ಸಂಘಟನೆಯನ್ನು ಪುನರ್ ರಚಿಸಲಾಗುತ್ತಿದೆ. ಸಂಘಟನೆಯ ಬಗ್ಗೆ ಒಲವು ಹೊಂದಿರುವ ಯುವಜನತೆ, ಸಂಘಟಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುವಂತೆ ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಯೋಗಣ್ಣ ಮಾತನಾಡಿ, ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಅಂತಹವರನ್ನು ಗುರುತಿಸಿ ಜವಾಬ್ದಾರಿ ನೀಡಲಾಗುವುದು. ಪ್ರತಿಯೊಬ್ಬ ಸದಸ್ಯರು ಸಹ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶ್ರೀರಂಗಪಟ್ಟಣ ತಾಲ್ಲೂಕು ಅಧ್ಯಕ್ಷ ಕುಮಾರ್, ಜಿಲ್ಲಾ ಕಾರ್ಯಕಾರಿ ಸಮಿತಿಯ ಗುರು, ಮಂಜು, ನಟರಾಜ್ ಇತರರು ಭಾಗವಹಿಸಿದ್ದರು.
ಸದಸ್ಯರು: ಕೆ.ಆರ್.ಪೇಟೆ ತಾಲ್ಲೂಕು ಮುಖ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನಾಗೇಶ್, ವಿನಯ್‍ಕುಮಾರ್, ಪ್ರವೀಣ್, ಅನುಸೂಯಮ್ಮ, ಶಶಿಕುಮಾರ್, ಕಿರಣ್, ಮಂಜೇಗೌಡ, ಇಲಿಯಾಸ್ ಅಹಮದ್, ಸೈಯದ್ ಖಲೀಲ್, ಶಿವಪ್ರಸಾದ್, ಸಿರಾಜ್, ಶೌಕತ್ ಪಾಷ, ಆಟೋ ಜಗ್ಗು, ಸಂದೀಪ್, ಭರತ್, ದಿಲೀಪ್, ಗಿರೀಶ್ ಅವರನ್ನು ನೇಮಕ ಮಾಡಿದ್ದು, ಸಂಘಟನೆಯ ಬೈಲಾ ಪ್ರತಿಯನ್ನು ನೀಡಿ ಅದರಂತೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಲಾಯಿತು.

No comments:

Post a Comment