Monday, 1 September 2014

 ನಾಳೆ ಕೆ.ಎಸ್.ಈಶ್ವರಪ್ಪ ಜಿಲ್ಲಾ ಪ್ರವಾಸ
ಮಂಡ್ಯ: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಾಳೆ (ಸೆ.2) ಮಂಡ್ಯ ನಗರ ಸೇರಿದಂತೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ನಾಳೆ ಮಧ್ಯಾಹ್ನ 1 ಗಂಟೆಗೆ ಮಂಡ್ಯ ನಗರಕ್ಕೆ ಆಗಮಿಸಲಿರುವ ಅವರು, ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ 3 ಗಂಟೆಗೆ ನಾಗಮಂಗಲದ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ.
ಸಂಜೆ 4ಗಂಟೆಗೆ ಅಕ್ರಮ ಮರಳು ಮಾಫಿಯಾ ನಡೆಯುತ್ತಿರುವ ನಾಗಮಂಗಲದ ಅರಕೆರೆ, ದೇವಲಾಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಡಿವೈಎಸ್ಪಿ ಸವಿತಾ ಹೂಗಾರ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.
ನಂತರ ಮಂಡ್ಯ ನಗರದ ಅಂಬೇಡ್ಕರ್ ಭವನದ ಕಾಮಗಾರಿ ವೀಕ್ಷಣೆ ನಡೆಸಲಿರುವ ಅವರು, ಮದ್ದೂರಿನ ತೈಲಕೆರೆಗೆ ಭೇಟಿ ನೀಡಿ, ನಂತರ ವಿವಿಧೆಡೆ ಸಾರ್ವಜನಿಕರ ಅಹವಾಲು ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ವಕ್ತಾರ ಹಾಗೂ ವಿಧಾನಪರಿಷತ್ ಸದಸ್ಯ ಅಶ್ವತ್‍ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
ಭಾರತೀನಗರ.ಸೆ.1- ಕಾರ್ಖಾನೆ ಪ್ರಾರಂಭ ಹಾಗೂ ಬೆಲೆ ನಿಗಧಿ ಸಂಬಂಧ ಶಾಸಕ ಡಿ.ಸಿ.ತಮ್ಮಣ್ಣನವರ  ಅಧ್ಯಕ್ಷತೆಯಲ್ಲಿ    ರೈತರ ಸಭೆ ಸೋಮವಾರ ನಡೆಯಿತು.
  ಇಲ್ಲಿನ ಡಿ.ಸಿ.ತಮ್ಮಣ್ಣ ನಿವಾಸದ ಆವರಣದಲ್ಲಿ ನಡೆದ ಸಭೆಯಲ್ಲಿ ರೈತರು ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಿಳಿಸಿದರು.
 ಕೆ.ಪಿ.ದೊಡ್ಡಿ ಕೆ.ಎಲ್.ಶಿವರಾಮು, ಎಚ್.ಎಂ.ಮರಿಮಾದೇಗೌಡ, ರಾಜಣ್ಣ, ಕುಮಾರ್‍ರಾಜು ಸೇರಿದಂತೆ ಇತರರು ಮಾತನಾಡಿ, ವ್ಯವಸಾಯದ ಖರ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಪ್ರತಿಟನ್ ಕಬ್ಬಿಗೆ 2500 ರೂ ಮುಂಗಡ ಹಣ ನೀಡುವಂತೆ ಜೊತೆಗೆ 100 ರೂ ಬಾಕಿಯನ್ನು ಪಾವತಿಸುವಂತೆ ಶಾಸಕ ಡಿ.ಸಿ.ತಮ್ಮಣ್ಣನವರು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಬೇಕೆಂದು ತಿಳಿಸಿದರು.
     ನಂತರ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಸಚಿವ ಮಹದೇವ್ ಪ್ರಸಾದ್‍ರವರೊಂದಿಗೆ ಈಗಾಗಲೇ ಸುದೀರ್ಘವಾಗಿ ಒಂದು ಗಂಟೆಗಳ ಕಾಲ ರೈತರ ಸಮಸ್ಯೆಗಳ ಬಗ್ಗೆ  ಚರ್ಚೆ ನಡೆಸಿದ್ದೇನೆ. ಕಳೆದ ಸಾಲಿನಲ್ಲಿ ಬಾಕಿ ಇರುವ 100 ರೂ ಕೊಡಿಸಿಕೊಡುವುದರ ಬಗ್ಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
    ಸಕ್ಕರೆ ಸಚಿವರು ಸೆ.8 ರಂದು ಕಬ್ಬು ಬೆಲೆ ನಿಗಧಿ ಸಂಬಂಧವಾಗಿ ಕಾರ್ಖಾನೆ ಅಧಿಕಾರಿಗಳನ್ನು ಬೆಂಗಳೂರಿನಲ್ಲಿ ಸಭೆಗೆ ಕರೆದಿದ್ದಾರೆ. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ನಂತರ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವುದರ ಬಗ್ಗೆ  ರೈತರು ಮತ್ತು ಕಾರ್ಖಾನೆ ಅಧಿಕಾರಿಗಳ ಸಮ್ಮುಖದಲ್ಲಿ ಬಹಿರಂಗ ಸಭೆ ಕರೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
     ಉಪಘಟಕಗಳನ್ನು ಪ್ರಾರಂಭಿಸಿದರೆ ಇತರೆ ಕಾರ್ಖಾನೆಗಳಿಗಿಂತ ಪ್ರತೀ ಟನ್ ಕಬ್ಬಿಗೆ ಹೆಚ್ಚು ಹಣ ನೀಡುವುದಾಗಿ ಕಾರ್ಖಾನೆ ಆಡಳಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದರು.  ರೈತರ ಹಿತ ದೃಷ್ಠಿಯಿಂದ ಕಾರ್ಖಾನೆಗೆ ಡಿಸ್ಟಿಲರಿ ಘಟಕ ಮತ್ತು ವಿದ್ಯುತ್ ಘಟಕವನ್ನು ಪ್ರಾರಂಭಿಸಲು ಸರ್ಕಾರದಿಂದ ಲೈಸನ್ಸ್ ಕೊಡಿಸಿದೆ. ಆದರೂ ಕೂಡ ಇವರು ರೈತರಿಗೆ ಅನ್ಯಾಯ ವೆಸಗುತ್ತಾ ಬಂದಿದ್ದಾರೆಂದು ಗುಡುಗಿದರು. ಕಷ್ಟಪಟ್ಟು ಕಬ್ಬು ಬೆಳೆದರೂ ಕೂಡ ರೈತರು ಭಿಕ್ಷೆ ಬೇಡುವಂತಾಗಿದೆ, ರೈತರು ಒಗ್ಗಟಿನಿಂದ ಇಲ್ಲದಿರುವುದರಿಂದಲೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ರೈತರು ಒಗ್ಗಟ್ಟಿನಿಂದ ಇದ್ದರೆ ಯಾರನ್ನು ಬೇಕಾದರೂ ಎದುರಿಸಬಹುದಿತ್ತು. ರೈತರ ಗುಂಪುಗಾರಿಕೆ ಮತ್ತು ಸಡಿಲಿಕೆಯನ್ನು ಮನಗಂಡ ಕಾರ್ಖಾನೆ ಅಧಿಕಾರಿಗಳು ರೈತರ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಕಿಡಿಕಾರಿದರು.
   ರೈತರು ಕಬ್ಬಿನ ಜೊತೆ ಇತರೆ ಬೆಳೆಗಳನ್ನು ಬೆಳೆಯುವುದರ ಮೂಲಕ ಲಾಭವನ್ನು ತಂದುಕೊಳ್ಳಬೇಕು. ಸಂಬಂಧ ಪಟ್ಟ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ರೈತರಿಗೆ ಸಮಗ್ರವಾಗಿ ಮಾಹಿತಿ ಕೊಡಿಸಲಾಗುವುದು. ರೈತರು ಇದನ್ನು ಸಮರ್ಪಕವಾಗಿ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
  ಸೆ.8ರ ನಂತರ ಕಾರ್ಖಾನೆ ಪ್ರಾರಂಭ ಹಾಗೂ ಬೆಲೆ ನಿಗಧಿಗಾಗಿ ಕರೆಯಲಾಗುವ ಬಹಿರಂಗ ಸಭೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಮಸ್ಯೆ ಬಗೆಹರಿವಿಕೆಗೆ ಪ್ರಮುಖ ಪಾತ್ರವಹಿಸಬೇಕು. ನಿಮ್ಮ ಹೋರಾಟಕ್ಕೆ ನಾನು ಬದ್ದನಾಗಿರುತ್ತೇನೆಂದು ತಿಳಿಸಿದರು.
  ಇದೇ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ವೆಂಕಟೇಶ್, ತಾ.ಪಂ ಸದಸ್ಯ ಪುಟ್ಟಸ್ವಾಮಿ, ಕ್ಯಾತಘಟ್ಟದ ಗಿರೀಶ್, ತಿಮ್ಮರಾಜು, ಮೆಣಸಗೆರೆ ಮಧು, ಇಂದ್ರಕುಮಾರ್, ಜಿ.ಎಸ್.ಸಿದ್ದೇಗೌಡ, ಚನ್ನಶೆಟ್ಟಿ, ಸಬ್ಬನಹಳ್ಳಿ ಹೊನ್ನೇಗೌಡ, ಮುಟ್ಟನಹಳ್ಳಿ ಆನಂದ್, ಬೊಪ್ಪಸಮುದ್ರ ರಾಜಣ್ಣ, ತಿಟ್ಟಮಾರನಹಳ್ಳಿ ಶ್ರೀನಿವಾಸ್, ಚಂದೂಪುರ ಶಿವರಾಜು  ಸೇರಿದಂತೆ ಇತರರು ಉಪಸ್ಥಿತರಿದ್ದರು.

 ದಸರಾ ಕಾರ್ಯಕ್ರಮಗಳು
ಹಾರ-ತುರಾಯಿಬೇಡ : ಪುಸ್ತಕ-ಕಲಾಕೃತಿ , ಸಸಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಸೂಚನೆ
 


ಮೈಸೂರು,ಸೆ.1.ಈ ವರ್ಷದ ದಸರಾ ಕಾರ್ಯಕ್ರಮಗಳನ್ನು ಪ್ಲಾಸ್ಟಿಕ್ ಮುಕ್ತವಾಗಿ ಆಚರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಹಾಗೂ ಅನಗತ್ಯ ವೆಚ್ಚಕ್ಕೆ ಬ್ರೇಕ್ ಹಾಕುವ ದೃಷ್ಟಿಯಿಂದ ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ದುಬಾರಿ ಹಾರ-ತುರಾಯಿ, ನೆನಪಿನ ಕಾಣಿಕೆ ಅರ್ಪಿಸುವ ಬದಲು ಪುಸ್ತಕ, ಕಲಾಕೃತಿ, ಸಸಿಗಳನ್ನು ನೀಡುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಸೂಚನೆ ನೀಡಿದ್ದಾರೆ.
     ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಅಮರನಾಥ್ ಅವರು ಸಹ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದು ಪರಿಸರಕ್ಕೆ ಪೂರಕವಾಗುವಂತೆ ಅತಿಥಿಗಳಿಗೆ ಸಸಿಗಳನ್ನು ವಿತರಣೆ ಮಾಡಬೇಕೆಂದು ವಿನಂತಿಸಿದ್ದಾರೆ.
     ಚಿತ್ರಕಲಾ ಸಮಿತಿಯಿಂದ ದಸರಾ ಆರಂಭಕ್ಕೆ ಮುನ್ನವೇ ಚಿತ್ರಕಲಾ ಶಿಬಿರ ಏರ್ಪಡಿಸಿ. ಶಿಬಿರದಲ್ಲಿ ರಚನೆಯಾಗುವ ಕಲಾಕೃತಿಗಳನ್ನು ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ನೀಡಬಹುದು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಕಟಿಸಿರುವ ಪುಸ್ತಕಗಳನ್ನು ನೀಡಬಹುದು ಹಾಗೆಯೇ ಮೂಲಿಕಾ ದಸರಾ ಸಮಿತಿಯವರು ಗಿಡಗಳನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ. ವಿವಿಧ ಸಮಿತಿಗಳು ತಮ್ಮ ಬೇಡಿಕೆಗಳನ್ನು ತಿಳಿಸಿದಲ್ಲಿ ನೆನಪಿನ ಕಾಣಿಕೆ ಒದಗಿಸಿಕೊಡಲಾಗುವುದು, ಜಿಲ್ಲಾ ಪಂಚಾಯತ್ ಉಪನಿರ್ದೇಶಕ ಮಹದೇವ್ ಅವರನ್ನು ಈ ಕಾರ್ಯಕ್ಕೆ ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
    ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಸಮಿತಿಗಳಿಗೆ ಅನುದಾನ ನಿಗಧಿಪಡಿಸುವ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ವೆಚ್ಚಗಳ ಪುನರಾವರ್ತನೆ ಆಗುವುದನ್ನು ತಪ್ಪಿಸಬೇಕು, ವಿವಿಧ ಸಮಿತಿಗಳು ತಮಗೆ ಅಗತ್ಯವಿರುವ ವಸತಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರೆ ವಸತಿ ಸಮಿತಿಯಿಂದ ಅನುಕೂಲ ಕಲ್ಪಿಸಲಾಗುವುದು. ಅದೇ ರೀತಿ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ತಂಡಗಳನ್ನು ಸಾಂಸ್ಕøತಿಕ ಸಮಿತಿಯಿಂದ ಪಡೆದುಕೊಳ್ಳಬೇಕು ಎಂದರು.
    ದಸರಾ ಸಮಿತಿಗಳು ತಮಗೆ ನಿಗಧಿಪಡಿಸಿದ ಅನುದಾನದ ಮಿತಿಯಲ್ಲಿಯೇ ಕಾರ್ಯಕ್ರಮ ರೂಪಿಸಬೇಕು. ಸಾಧ್ಯವಿರುವ ಕಡೆ ಇಲಾಖಾ ಅನುದಾನ ಹಾಗೂ ಪ್ರಾಯೋಜಕತ್ವ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
    ದಸರಾ ಕಾರ್ಯಕ್ರಮಗಳಿಗೆ ಸರ್ಕಾರ 12 ಕೋಟಿ ರೂ. ನಿಗಧಿಪಡಿಸಿದ್ದು ಈ ಪೈಕಿ ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಿಗೆ ತಲಾ ಒಂದು ಕೋಟಿ ರೂ. ನಿಗಧಿಪಡಿಸಲಾಗಿದೆ ಎಂದರು.
    ಕ್ರೀಡಾ ಸಮಿತಿಗೆ 1 ಕೋಟಿ, ಚಲನಚಿತ್ರ 13 ಲಕ್ಷ, ಮಹಿಳಾ ದಸರಾ 6 ಲಕ್ಷ, ಮಕ್ಕಳ ದಸರಾ 7 ಲಕ್ಷ, ಸ್ವಾಗತ ಸಮಿತಿ 3 ಲಕ್ಷ, ಆಹಾರ ಮೇಳ 1 ಲಕ್ಷ, ಯೋಗ ದಸರಾ 7 ಲಕ್ಷ, ಕುಸ್ತಿ 35 ಲಕ್ಷ ಹಾಗೂ ಲಲಿತ ಕಲಾ ಮತ್ತು ಕರಕುಶಲ ಸಮಿತಿಗೆ 6 ಲಕ್ಷ ನಿಗಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
   ಹೆಚ್ಚಿನ ಅನುದಾನದಿಂದಷ್ಟೇ ಉತ್ತಮ ಕಾರ್ಯಕ್ರಮ ರೂಪಿಸಲಾಗುವುದಿಲ್ಲ, ಅಧಿಕಾರಿಗಳು ಶ್ರದ್ದೆಯಿಂದ, ಬದ್ದತೆಯಿಂದ ಕಾರ್ಯನಿರ್ವಹಿಸಿದಲ್ಲಿ ಮಾತ್ರ ಗುಣಮಟ್ಟದ ಕಾರ್ಯಕ್ರಮ ರೂಪಿಸಬಹುದು. ಪಾರದರ್ಶಕವಾಗಿ, ಕಾರ್ಯನಿರ್ವಹಿಸಿ ಅರ್ಥಪೂರ್ಣ ಕಾರ್ಯಕ್ರಮ ರೂಪಿಸುವಂತೆ ಅವರು ಸಲಹೆ ಮಾಡಿದರು.
    ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಮುಡಾ ಆಯುಕ್ತ ಪಾಲಯ್ಯ, ಸೇರಿದಂತೆ ವಿವಿಧ ಉಪಸಮಿತಿಗಳ ಕಾರ್ಯಾಧ್ಯಕ್ಷರು, ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು.



No comments:

Post a Comment