Tuesday, 16 September 2014

 ಟೆಂಪೋಗೆ ಡಿಕ್ಕಿ ತಪ್ಪಿಸಲು ಹೋಗಿ ಹಳ್ಳಕ್ಕೆ ಬಿದ್ದ ಬಸ್
*22 ಮಂದಿ ಪ್ರಯಾಣಿಕರು ಪಾರು
ಮೈಸೂರು: ಟೆಂಪೋಗೆ ಡಿಕ್ಕಿ ತಪ್ಪಿಸಲು ಯತ್ನಿಸಿದ  ಬಸ್ ವೊಂದು ಹಳ್ಳಕ್ಕೆ ಬಿದ್ದು, 22 ಮಂದಿ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾದ ಘಟನೆ ಮೈಸೂರು-ನಂಜನಗೂಡು ರಸ್ತೆಯ ಬಂಡಿ ಪಾಳ್ಯ ಸಮೀಪದ ದಳವಾಯಿ ಕೆರೆಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಚಾಮರಾಜನಗರ ಡಿಪೋಗೆ ಸೇರಿದ ಕೆ ಎಸ್ ಆರ್ ಟಿಸಿ (ಕೆ.ಎ.09.3259) ಬಸ್ 22 ಮಂದಿ ಪ್ರಯಾಣಿಕರನ್ನು ಹೊತ್ತು ಮೈಸೂರಿಗೆ ಬರುತ್ತಿತ್ತು. ಮಧ್ಯಾಹ್ನ 12-30 ರಲ್ಲಿ ಮೈಸೂರಿನಿಂದ ನಂಜನಗೂಡಿಗೆ ತೆರಳುತ್ತಿದ್ದ ಟೆಂಪೋವೊಂದು ಬಸ್ಸಿಗೆ ಎದುರಿಗೆ ವೇಗವಾಗಿ ನುಗ್ಗಿದಾಗ ಡಿಕ್ಕಿ ತಪ್ಪಿಸಲು ಬಸ್ಸಿನ ಚಾಲಕ ಬಸ್ಸನ್ನು ಎಡಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ಬಸ್ ದಳವಾಯಿ ಕೆರೆಗೆ ನುಗ್ಗಿತು. ರಸ್ತೆ ಬದಿಯಲ್ಲಿ ತಡೆ ಕಲ್ಲಿಗಳಿದ್ದರಿಂದ ಬಸ್ಸಿನ ಮುಕ್ಕಾಲು ಭಾಗ ಕೆರೆಯೊಳಗೆ ಇಳಿದು ಹಿಂಭಾಗ ಮಾತ್ರ ಕಲ್ಲುಗಳು ತಡೆದ ಕಾರಣ ಬಸ್ಸು ನೀರಿನಲ್ಲಿ ಮುಳುಗುವುದು ತಪ್ಪಿದೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಬರಿಗೊಂಡು ಹಿಂಭಾಗಿಲಿನಿಂದ ಇಳಿದು ಹೊರಗೆ ಬಂದರು. ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೂ ಹಾನಿಯಾಗಿಲ್ಲ. ಚಾಲಕ ಸಿದ್ದೇಶ್ ರ ಸಮಯ ಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 22 ಮಂದಿ ಹಾಗೂ ಟೆಂಪೋದಲ್ಲಿದ್ದ ಪ್ರಯಾಣಿಕರ ಪ್ರಾಣ ಉಳಿದಿದೆ.
ವಿಷಯ ತಿಳಿದ ಸ್ಥಳಕ್ಕೆ ಆಗಮಿಸಿದ ಕೆ.ಆರ್ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್ಸನ್ನು ಕೆರೆಯಿಂದ ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿ ಸಂಚಾರ ಸುಗುಮಗೊಳಿಸಿದರು. ಈ ಘಟನೆಯಿಂದಾಗಿ ಆ ಮಾರ್ಗದಲ್ಲಿ ಕೆಲ ಸಮಯ ಸಂಚಾರ ಅಸ್ತವ್ಯಸ್ತಗೊಂಡಿತ್ತು.


No comments:

Post a Comment