Tuesday, 28 October 2014

ಕೃಷ್ಣರಾಜಪೇಟೆ. ಮಾನವನ ಅಮೂಲ್ಯವಾದ ಪ್ರಾಣವನ್ನು ಉಳಿಸಲು ರಕ್ತವು ಸಂಜೀವಿನಿಯಂತೆ ಕೆಲಸ ಮಾಡುವುದರಿಂದ ಯುವಜನರು ರಕ್ತದಾನವನ್ನು ಮಾಡುವ ಮೂಲಕ ಸಾವು-ಬದುಕುಗಳ ನಡುವೆ ಹೋರಾಟ ನಡೆಸುತ್ತಿರುವ ಲಕ್ಷಾಂತರ ಜೀವಗಳನ್ನು ಉಳಿಸಲು ಮುಂದಾಗಬೇಕು ಎಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ಕೃಷ್ಣ ಕರೆ ನೀಡಿದರು.
ಅವರು ಇಂದು ಪಟ್ಟಣದ ಲಯೆನಸ್ ಕ್ಲಬ್ ಆಫ್ ಹೇಮಾವತಿ ಸಂಸ್ಥೆಯು ಮಂಡ್ಯದ ವೈದ್ಯಕೀಯ ಕಾಲೇಜಿನ ರಕ್ತನಿಧಿ ಘಟಕ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ತಾಲೂಕು ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಅಪಘಾತದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ವ್ಯಕ್ತಿಯ ಅಮೂಲ್ಯವಾದ ಪ್ರಾಣವನ್ನು ಕಾಪಾಡಲು ಇಲ್ಲವೇ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ವ್ಯಕ್ತಿಯ ಜೀವವನ್ನು ಉಳಿಸಲು ರಕ್ತವು ಅವಶ್ಯಕವಾಗಿ ಬೇಕಾಗಿರುವುದರಿಂದ ಆರೋಗ್ಯವಂತ ಯುವಜನರು ಪ್ರತೀ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ರಕ್ತದಾನ ಮಾಡುವ ಸೇವಾ ಕಾರ್ಯವು ನೊಂದ ವ್ಯಕ್ತಿಗಳ ಜೀವವನ್ನು ಉಳಿಸುವ ಅಮೂಲ್ಯವಾದ ಕೆಲಸಕ್ಕೆ ಸದ್ಭಳಕೆಯಾಗುವುದರಿಂದ ಯುವಜನರು ತಮ್ಮ ರಕ್ತಪರೀಕ್ಷೆಯನ್ನು ಮಾಡಿಸಿಕೊಂಡು ಕಡ್ಡಾಯವಾಗಿ ತಮ್ಮ ರಕ್ತದ ಗುಂಪು ಯಾವುದೆಂದು ತಿಳಿದಿರಬೇಕು. ಬೆಲೆಕಟ್ಟಲಾಗದ ಪ್ರಾಣವನ್ನು ಉಳಿಸುವ ಸಂಜೀವಿನಿಯಾದ ರಕ್ತವು ಜೀವಧಾರೆಯಾಗಿರುವುದರಿಂದ ದಾನದಾನಗಳಲ್ಲಿಯೇ ರಕ್ತದಾನವು ಶ್ರೇಷ್ಠವೆಂದು ತಿಳಿದು ಸ್ವಯಂ ಪ್ರೇರಣೆಯಿಂದ ರಕ್ತದಾನ ಶಿಬಿರದಲ್ಲಿ ಭಾಗವಹಿಸಬೇಕು ಎಂದು ಪ್ರಾಂಶುಪಾಲ ಕೃಷ್ಣ ಮನವಿ ಮಾಡಿದರು.
ಲಯೆನಸ್ ಕ್ಲಬ್ ಆಫ್ ಹೇಮಾವತಿ ಸಂಸ್ಥೆಯ ಅಧ್ಯಕ್ಷೆ ಪೂರ್ಣಿಮಾ ಮಂಜುನಾಥ್ ಮಾತನಾಡಿ ಲಯೆನಸ್ ಸೇವಾ ಸಂಸ್ಥೆಯು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸಾಮಾನ್ಯರಲ್ಲಿ ಅರಿವಿನ ಜಾಗೃತಿಯನ್ನು ಮೂಡಿಸಿ ಸೇವೆಯ ಮಹತ್ವದ ಬಗ್ಗೆ ಯುವಜನರು ಸ್ವಯಂಪ್ರೇರಣೆಯಿಂದ ಭಾಗವಹಿಸುವಂತೆ ಮಾಡುತ್ತಿದೆ. ಹೆಣ್ಣು ಮಕ್ಕಳು ಸುಭದ್ರವಾದ ರಾಷ್ಟ್ರದ ನಿರ್ಮಾಣದಲ್ಲಿ ತಾವೂ ಭಾಗಿಯಾಗಬಲ್ಲರು ಎಂಬ ಸತ್ಯವನ್ನು ಅನಾವರಣ ಮಾಡುತ್ತಿದೆ. ಬಡವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ಧನಸಹಾಯ, ನೋಟ್ ಪುಸ್ತಕಗಳು ಹಾಗೂ ಲ್ಯಾಪ್‍ಟಾಪ್’ಗಳನ್ನು ವಿತರಣೆ ಮಾಡುತ್ತಿದೆ. ಬಡ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ವಿತರಿಸಿ ಜೀವನ ನಡೆಸಲು ಆಸರೆಯಾಗಿದೆ ಎಂದು ಪೂರ್ಣಿಮ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಡಾ.ಸತೀಶ್, ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹೆಚ್.ಪಿ.ಸೋಮಣ್ಣ, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್, ಲಯೆನಸ್ ಸಂಸ್ಥೆಯ ಪದಾಧಿಕಾರಿಗಳಾದ ಮುಬೀನಾಸುರೇಶ್, ಸುಚೇತಸೋಮಶೇಖರ್, ಪರಿಮಳನಾಗರಾಜ್, ನಾಗರತ್ನಸಿದ್ಧಪ್ಪಶೆಟ್ಟಿ, ಲತಾಮೋಹನ್, ಸವಿತರಾಜಶೇಖರ್, ಸಾಕಮ್ಮ, ವಿನೋದರಾಮಕೃಷ್ಣೇಗೌಡ, ಲಯೆನಸ್ ಕೌನ್ಸಿಲ್ ಸದಸ್ಯೆ ಗಿರಿಜಾ ನಂಜಪ್ಪಗೌಡ, ಲಯನ್ಸ್ ಇಬ್ಬನಿ ಸಂಸ್ಥೆಯ ಅಧ್ಯಕ್ಷೆ ಸುಧಾಮಣಿ, ಮಂಡ್ಯದ ರಕ್ತನಿಧಿ ಕೇಂದ್ರದ ಮುಖ್ಯವೈದ್ಯೆ ಡಾ.ಶೋಭ, ಪುರಸಭೆಯ ಮಾಜಿಅಧ್ಯಕ್ಷೆ ಶಕುಂತಲಾ, ಪುರಸಭೆ ಸದಸ್ಯೆ ಸೌಭಾಗ್ಯ ಅಶೋಕ್, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಯಶೇಖರ್, ಡಾ.ಕೃಷ್ಣಮೂರ್ತಿ, ಐಸಿಟಿಸಿ ಕೌನ್ಸಿಲರ್ ಸತೀಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ವೆಂಕಟಲಕ್ಷ್ಮೀ ಮತ್ತಿತರರು ಭಾಗವಹಿಸಿದ್ದರು.



No comments:

Post a Comment