Thursday, 2 October 2014

ಕೃಷ್ಣರಾಜಪೇಟೆ. ಗಾಂಧೀ ಜಯಂತಿಯ ಅಂಗವಾಗಿ ತಾಲೂಕು ಕಛೇರಿಯ ಆವರಣದಲ್ಲಿ ಶ್ರಮದಾನ ಮಾಡಲು ಮುಂದಾದ ಶಾಸಕರು ಕೈಯ್ಯಲ್ಲಿ ಕಸಗುಡಿಸುವ ಪೊರಕೆ ಹಿಡಿದರೆ, ತಹಶೀಲ್ದಾರರು ಕೈಯ್ಯಲ್ಲಿ ಕಸಬರಲು ಹಿಡಿದರು, ತಾಲೂಕು ಮಟ್ಟದ ಅಧಿಕಾರಿಗಳು ಕೈಯ್ಯಲ್ಲಿ ಕುಡುಗೋಲು ಹಿಡಿದು ಗಿಡ ಗೆಂಟೆಗಳನ್ನು ಕಿತ್ತು ಸ್ಚಚ್ಛಗೊಳಿಸಿ ಇಂದು ತಾಲೂಕಿನ ಜನತೆಯ ಮೆಚ್ಚುಗೆಗೆ ಪಾತ್ರರಾದರು.
ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಜನ್ಮದಿನದ ಅಂಗವಾಗಿ ತಾಲೂಕು ಆಡಳಿತವು ಹಮ್ಮಿಕೊಂಡಿದ್ದ ಸರಳ ಸುಂದರ ಕಾರ್ಯಕ್ರಮಕ್ಕೆ ಒಂದು ವಿಶೇಷ ಅರ್ಥ ಬರುವ ರೀತಿಯಲ್ಲಿ ಆಚರಣೆಗೆ ಮುಂದಾದ ಶಾಸಕ ನಾರಾಯಣಗೌಡರು ಮಹಾತ್ಮಗಾಂಧೀಝಿಯರ ತತ್ವದಾರ್ಶಗಳನ್ನು ನಿಜವಾಗಿಯೂ ಅಲ್ಪಮಟ್ಟಿಗಾದರೂ ನಮ್ಮ ನಿಜಜೀವನದಲ್ಲಿ ಅಳವಡಿಸಿಕೊಂಡರೆ ಮಹಾತ್ಮನಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಆದ್ದರಿಂದ ಎಲ್ಲರೂ ಅರ್ಧ ಗಂಟೆ ಶ್ರಮದಾನ ಮಾಡಿ ಕಾರ್ಯಕ್ರಮವನ್ನು ಆಚರಿಸೋಣ ಎಂಬ ಶಾಸಕರ ಸಲಹೆಗೆ ಒಪ್ಪಿದ ತಾಲೂಕಿನ ಅಧಿಕಾರಿಗಳು ಹಾಗೂ ನೌಕರರು ಪೈಪೋಟಿಯ ಮೇಲೆ ಕಸಬರಕೆಯನ್ನು ಹಿಡಿದು ಬೀದಿಯ ಕಸಗುಡಿಸಿ ಸ್ವಚ್ಛಮಾಡಿದರೆ, ನೌಕರರು ಕುಡುಗೋಲು ಹಿಡಿದು ಗಿಡಗೆಂಟೆಗಳನ್ನು ಕಿತ್ತು ಸ್ವಚ್ಛಗೊಳಿಸಿ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ನಾರಾಯಣಗೌಡ ಅವರು ಲಾಲ್‍ಬಹದ್ದೂರ್‍ಶಾಸ್ತ್ರೀ ಮತ್ತು ಮಹಾತ್ಮಗಾಂಧೀಜಿ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿ ಮಾತನಾಡಿ ಭಾರತದ ಮಾಜಿಪ್ರಧಾನಿ ಲಾಲ್‍ಬಹದ್ದೂರ್‍ಶಾಸ್ತ್ರೀ ಮತ್ತು ಮಹಾತ್ಮಗಾಂಧೀಜಿ ಅವರ ಬಗ್ಗೆ ನಿಜವಾಗಿಯೂ ಕಾಳಜಿಯನ್ನು ಹೊಂದಿರುವುದಾದರೆ ಅವರ ಆಶಯದಂತೆ ಅಧಿಕಾರಿಗಳು ಮತ್ತು ನೌಕರರ ಕರ್ತವ್ಯದಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಅಳವಡಿಸಿಕೊಂಡು ಬಡ ಜನತೆಯ ಸೇವೆಯಲ್ಲಿ ಭಗವಂತನನ್ನು ಕಾಣಲು ಪ್ರಯತ್ನಿಸಬೇಕು. ಹಿರಿಯರು ಹಾಗೂ ಕಡುಬಡವರನ್ನು ಲಂಚದ ಹಣಕ್ಕಾಗಿ ಒತ್ತಾಯಿಸಿ ಕಛೇರಿಗೆ ಅಲೆದಾಡಿಸದೇ ಕಾನೂನು ಬದ್ಧವಾದ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಡುವ ಮೂಲಕ ಹಿರಿಯರನ್ನು ಗೌರವಿಸಬೇಕು. ನಮ್ಮ ಮನೆಯ ಸುತ್ತಮುತ್ತಲಿನ ವಾತಾವರಣವನ್ನು ನಾವೇ ಸ್ವಚ್ಛಮಾಡಿಕೊಳ್ಳುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಶಾಸಕ ನಾರಾಯಣಗೌಡ ಕರೆ ನೀಡಿದರು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ತಹಶೀಲ್ದಾರ್ ಹೆಚ್.ಎಲ್.ಶಿವರಾಮ್ ಮಾತನಾಡಿ ಜೀವನದಲ್ಲಿ ಶಿಸ್ತು ಮತ್ತು ಬದ್ಧತೆಯನ್ನು ಅಳವಡಿಸಿಕೊಂಡು ಅಹಿಂಸಾ ಹೋರಾಟದ ಮೂಲಕ ಭಾರತದ ನಿವಾಸಿಗಳನ್ನು ಜಾಗೃತಿಗೊಳಿಸಿ ಬ್ರಿಟೀಷರ ದಾಸ್ಯದಿಂದ ದೇಶವನ್ನು ವಿಮುಕ್ತಿಗೊಳಿಸಿ ಸ್ವಾತಂತ್ರ್ಯಕೊಡಿಸಿದ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಮತ್ತು ಸೈನಿಕರು ಮತ್ತು ಕೃಷಿಕರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದ ಆದರ್ಶ ಹೋರಾಟಗಾರ ಮಾಜಿಪ್ರಧಾನಿ ಲಾಲ್ ಬಹದ್ದೂರ್‍ಶಾಸ್ತ್ರೀ ಅವರ ಜೀವನದ ಆದರ್ಶಗಳನ್ನು ಇಂದಿನ ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ಯಶಸ್ಸು ಮತ್ತು ಕೀರ್ತಿಯನ್ನು ಗಳಿಸುವ ಜೊತೆಗೆ ಆರೋಗ್ಯವಂತ ಸಮಾಜವನ್ನು ಸುಲಭವಾಗಿ ನಿರ್ಮಿಸಬಹುದು. ಆದ್ದರಿಂದ ಯುವುಜನರು ಸೋಮಾರಿಗಳಾಗಿ ವ್ಯರ್ಥವಾಗಿ ಕಾಲಕಳೆಯದೇ ದೇಶಭಕ್ತಿ ಹಾಗೂ ಗುರು-ಹಿರಿಯರ ಬಗ್ಗೆ ಅಭಿಮಾನವನ್ನು ಬೆಳೆಸಿಕೊಂಡು ಕಾಯಕಯೋಗಿಗಳಾಗಿ ಮುನ್ನಡೆದು ಜೀವನಕ್ಕೊಂದು ಅರ್ಥ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು. ಶಿಶು ಅಭಿವೃಧ್ಧಿ ಇಲಾಖೆಯ ಅಧೀಕ್ಷಕರಾದ ಪುಟ್ಟಸ್ವಾಮಿ ಅವರು ಮಹಾತ್ಮಗಾಂಧಿ ಮತ್ತು ಶಾಸ್ತ್ರೀಜಿ ಅವರ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಜವರೇಗೌಡ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎನ್.ಕೆಂಚಪ್ಪ, ಉಪನೋಂದಣಾಧಿಕಾರಿ ನರಸಿಂಹಯ್ಯ, ತಾಲೂಕು ಸಮಾಜಕಲ್ಯಾಣಾಧಿಕಾರಿ ಸುಧಾಮಣಿ, ಕಾರ್ಮಿಕ ನಿರೀಕ್ಷಕಿ ವನಜಾಕ್ಷಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಶ್ರಮಧಾನ: ಪಟ್ಟಣದ ಸಕಾರಿ ಪದವಿಪೂರ್ವ ಕಾಲೇಜು, ಸಕಾರಿ ಎಂಜಿನಿಯರಿಂಗ್ ಕಾಲೇಜು, ಪುರಸಭೆ, ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್, ಬಾಲಕರ ಮಾದ್ಯಮಿಕ ಪಾಠಶಾಲೆ, ಅಂಚೆ ಕಛೇರಿ, ಕೆಎಸ್‍ಆರ್‍ಟಿಸಿ ಡಿಫೋನಲ್ಲಿ ಮಹಾತ್ಮಗಾಂಧೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ಶ್ರಮದಾನ ಕಾರ್ಯಕ್ರಮಗಳು ನಡೆದವು. ಡಿಫೋ ಮ್ಯಾನೇಜರ್ ಶ್ರೀನಿವಾಸಮೂರ್ತಿ, ಪ್ರಾಂಶುಪಾಲರಾದ ಡಾ.ಕೆ.ಸಿ.ಕೃಷ್ಣ, ಎನ್.ಡಿ.ವಿವೇಕಾನಂದ, ಕೆ.ಕಾಳೇಗೌಡ, ನವೀನ್, ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್, ಮುಖ್ಯಾಧಿಕಾರಿ ಬಸವರಾಜು, ಮುಖ್ಯಶಿಕ್ಷಕ ಬಿಸಿಎಸ್‍ಕುಮಾರ್ ಮುಂತಾದವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಟಿ.ಜವರೇಗೌಡ ಸ್ವಾಗತಿಸಿದರು, ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಮರಿಸಿದ್ಧೇಗೌಡ ವಂದಿಸಿದರು. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ ಕಾರ್ಯಕ್ರಮ ನಿರೂಪಿಸಿದರು. ಸರ್ವಧರ್ಮ ಪ್ರಾರ್ಥನೆಯನ್ನು ಶಿಕ್ಷಕರು ನಡೆಸಿಕೊಟ್ಟರು.

1 comment: