ಗಾಂಧಿ ವಿಚಾರಗಳ ವಿರೋಧ ಸರಿಯಲ್ಲ : ಸುರೇಂದ್ರ ಕೌಲಗಿ
ಮಂಡ್ಯ, ಅ.28- ಮಹಾತ್ಮ ಗಾಂಧೀಜಿಯವರ ತತ್ವಗಳು, ವಿಚಾರಗಳ ವಿರೋಧ ಸರಿಯಲ್ಲ ಎಂದು ಹೇಳಿದ ಗಾಂಧೀವಾದಿ ಹಾಗೂ ಜಮನಲಾಲ್ ಬಜಾಜ್ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಸುರೇಂದ್ರ ಕೌಲಗಿ ಅವರು, ಗಾಂಧಿ ವಿಚಾರಗಳನ್ನು ವಿರೋಧಿಸುವವರು ಮೊದಲು ಅವುಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಗಾಂಧಿ ಚಿಂತನೆಗಳ ಪ್ರಸ್ತುತತೆ’ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಮಾಜದಲ್ಲಿ ಗಾಂಧಿ ವಿಚಾರಗಳು ಅಪ್ರಸ್ತುತವಾಗುತ್ತಿವೆ ಎಂಬ ಭಾವನೆ ಕೆಲವರಿಗೆ ಇದೆ. ಗಾಂಧೀಜಿಯವರು ಅಹಿಂಸೆ, ಸತ್ಯವನ್ನು ಪ್ರತಿಪಾದಿಸಿದರು. ಆದರೆ ಇಂದು ಅಸತ್ಯ ಹಾಗೂ ಹಿಂಸೆ ವ್ಯಾಪಕವಾಗಿರುವುದು ಅವರ ಈ ಭಾವನೆಗೆ ಕಾರಣ ಎಂದು ಹೇಳಿದರು.
ಗಾಂಧಿ ಚಿಂತನೆಗಳ ಬಗ್ಗೆ ಮಾತನಾಡಿದಷ್ಟು ಅನುಷ್ಟಾನದ ಕಡೆಗೆ ಶ್ರಮವಹಿಸಿಲ್ಲ. ಆಡಳಿತಗಾರರು ಬದಲಾಗುತ್ತಾರೆ, ಸರ್ಕಾರಗಳು ಬದಲಾಗುತ್ತವೆ. ಆದರೆ ಗಾಂಧೀಜಿಯವರ ಚಿಂತನೆಗಳ ಅಳವಡಿಕೆಗೆ ಯಾರೂ ಮುಂದಾಗಿಲ್ಲ ಎಂದು ಹೇಳಿದರು.
ಗಾಂಧೀಜಿಯವರು ಅಹಿಂಸೆ, ಸತ್ಯಾಗ್ರಹವನ್ನೇ ಅಸ್ತ್ರವಾಗಿ ಇಟ್ಟುಕೊಂಡು ಹೋರಾಟ ನಡೆಸಿದರು. ಉತ್ತಮವಾದುದನ್ನು ನಿರೀಕ್ಷಿಸುವಾಗ ನಾವು ಉತ್ತಮವಾದ ಹಾದಿಯಲ್ಲಿ ಸಾಗಬೇಕು ಎಂಬುದು ಗಾಂಧಿ ಪ್ರತಿಪಾದನೆ. ಹಾಗಾಗಿ ಅವರು ಬ್ರಿಟಿಷರಿಗೂ ಪ್ರಿಯರಾಗಿದ್ದರು ಎಂದು ಹೇಳಿದರು.
ಗಾಂಧಿಯವರ ವಿಚಾರಗಳು ಅತ್ಯಂತ ಪ್ರಬಲವಾಗಿದ್ದು ಇದನ್ನು ಅನುಸರಿಸಬೇಕಾದರೆ ಧೈರ್ಯ ಅತಿ ಮುಖ್ಯವಾಗಿ ರುತ್ತದೆ. ಪ್ರತಿಯೊಬ್ಬರು ಧೈರ್ಯದಿಂದ ಗಾಂಧಿಯವರ ವಿಚಾರಗಳನ್ನು ಅನುಸರಿಸಿದರೆ ಉತ್ತಮ ಸಮಾಜ ಸøಷ್ಠಿಸಲು ಸಾಧ್ಯವಾಗುತ್ತದೆ ಎಂದರು.
ಮಹಾತ್ಮಾ ಗಾಂಧೀಜಿಯವರು ಅಹಿಂಸಾ ಮಾರ್ಗದಲ್ಲಿ ನಡೆದು, ಅಹಿಂಸೆಯನ್ನೇ ದೇಶದಾದ್ಯಂತ ಸಾರಿದರು, ಪಾಕಿಸ್ತಾನದವರು ನಮ್ಮ ದೇಶವನ್ನು ಇಂದಿಗೂ ಶಸ್ತ್ರಾಸ್ತಗಳಿಂದ ಹಿಂಸಿಸುತ್ತಲೇ ಬಂದಿದ್ದಾರೆ. ಭಾರತದ ಕಳಸದಂತಿರುವ ಕಾಶ್ಮೀರವನ್ನು ಕಬಳಿಸಲು ಇಂದಿಗೂ ಅವರು ಶಸ್ತ್ರಾಸ್ತ್ರ ಗಳನ್ನು ಕೂಡಿ ಹಾಕಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ.
ಚೀನಾದ ಪ್ರಧಾನಿ ಭಾರತಕ್ಕೆ ಭೇಟಿ ನೀಡಿದಾಗ ಚೀನಾ-ಭಾರತ ಬಾಯಿ ಬಾಯಿ ಎಂದು ಹೇಳುತ್ತಾರೆ. ಆದರೆ ಚೀನಾಕ್ಕೆ ಹಿಂದುರುಗಿದೊಡನೆ ಅರುಣಾಚಲ ಪ್ರದೇಶ ನಮ್ಮದು ಎಂದು ಹೇಳಿ ಸೈನ್ಯವನ್ನು ಕಳುಹಿಸಿ ಹಿಂಸಾಚಾರಕ್ಕೆ ಮುಂದಾಗುತ್ತಾರೆ. ಸ್ವಾತಂತ್ಯ ಬಂದು ಇಷ್ಟು ವರ್ಷವಾದರೂ, ಇಂದಿಗೂ ಕೂಡ ದಲಿತರ ಮೇಲೆ ದೌರ್ಜನ್ಯಗಳು, ಅತ್ಯಾಚಾರಗಳು ಹಿಂಸಾತ್ಮಕ ಕೃತ್ಯಗಳು ನಡೆಯುತ್ತಲೇ ಇವೆ ಎಂದು ಹೇಳಿದರು.
ಗಾಂಧಿರವರ ಅಸ್ರøಶ್ಯತೆಯನ್ನು ತೊಲಗಿಸುವುದು, ಕೋಮು ಸೌಹಾರ್ದತೆಯನ್ನು ಕಾಪಾಡುವ ಕನಸು ನನಸಾಗಿಯೇ ಉಳಿದಿವೆ. ಖಾದಿಯ ಕೆಲಸವೆಂಬುದು ಒಂದು ವಿಚಾರ. ಸರಳ ಜೀವನದ ವಿಚಾರ, ಸ್ವಾವಲಂಬನೆಯ ವಿಚಾರ, ಆದರೆ ಸರ್ಕಾರ ಖಾದಿಗೆ ತದ್ವಿರುದ್ಧವಾಗಿ ಕಾಯ್ದೆಯನ್ನು ರೂಪಿಸುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳನ್ನು ವಹಿವಾಟಿಗೆ ಆಹ್ವಾನಿಸಿದ್ದು, ಪುನಃ ಭಾರತ ವನ್ನು ಪರಾವಲಂಬಿಯನ್ನಾಗಿಸುವತ್ತ ನಮ್ಮ ವ್ಯವಸ್ಥೆ ಸಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಮ್ಮಲ್ಲಿ ಗಾಂಧಿವಾದಿಗಳು, ಗಾಂಧೀಜಿಯವರ ಆಶಯಗಳನ್ನು ಇಟ್ಟುಕೊಂಡು ಸ್ಥಾಪನೆಯಾದ ಸಂಘ ಸಂಸ್ಥೆಗಳಿದ್ದರೂ ಅವುಗಳು ಹೆಚ್ಚು ಪ್ರಭಾವವನ್ನು ಬೀರುತ್ತಿಲ್ಲ. ಏಕೆಂದರೆ ಅವುಗಳು ಗಾಂಧೀಜಿರವರ ವಿಚಾರವನ್ನು ಅಳವಡಿಸಿಕೊಳ್ಳಲು ವಿಫಲವಾಗಿರುವುದೇ ಕಾರಣ ಎಂದರು.
ಅಭಿವೃದ್ಧಿ ಬಗೆಗಿನ ಇಂದಿನ ಪರಿಕಲ್ಪನೆಯೇ ತಪ್ಪಾಗಿದೆ. ಅಭಿವೃದ್ದಿಗೆ ಸರಿಯಾದ ವ್ಯಾಖ್ಯಾನ ಯಾವ ಆಡಳಿತಗಾರರಿಗೂ ತಿಳಿದಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ನಮ್ಮ ಪ್ರಾಕೃತಿಕ ಸಂಪತ್ತನ್ನು ವಿದೇಶಿ ಕಂಪನಿಗಳಿಗೆ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತೆ ಭಾರತೀಯರೆಲ್ಲ ಒಂದಾಗಿ ಹೊರದೇಶದ ಕಂಪನಿಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಚಳುವಳಿ ನಡೆಸಬೇಕಾದ ಸಂದರ್ಭ ಬರಬಹುದು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ. ಉಮಾದೇವಿ ವಹಿಸಿದ್ದರು, ಆಪ್ನಾದೇಶ್ ಕಾರ್ಯದರ್ಶಿಗಳಾದ ಡಾ. ಹೆಚ್.ಎಸ್.ಸುರೇಶ್ ಅವರು ಉಪನ್ಯಾಸ ನೀಡಿದರು. ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಲ್, ವಾರ್ತಾಧಿಕಾರಿ ಆರ್. ರಾಜು ಉಪಸ್ಥಿತರಿದ್ದರು.
ಅರ್ಹ ಕುಶಲಕರ್ಮಿಗಳಿಂದ ಅರ್ಜಿ ಆಹ್ವಾನ
ಪ್ರಸಕ್ತ ಸಾಲಿನ ರಾಜ್ಯದ ಕುಶಲಕರ್ಮಿಗಳಿಗೆ ವಿಶೇಷ ಗೃಹ ನಿರ್ಮಾಣ ಯೋಜನೆಯಡಿ ವೈಯಕ್ತಿಕ ಹಾಗೂ ಗುಂಪು ಮನೆ ನಿರ್ಮಾಣಕ್ಕಾಗಿ ಜಿಲ್ಲೆಯಲ್ಲಿರುವ ಕುಶಲಕರ್ಮಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಜಿಗಳನ್ನು ಪಡೆಯುವ ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ಅವಧಿಯನ್ನು ದಿನಾಂಕ:25/10/2014 ರಿಂದ 10/11/2014ರವರೆಗೆ ವಿಸ್ತರಿಸಲಾಗಿದೆ. ಸ್ವಂತ ಖಾಲಿ ನಿವೇಶನ ಅಥವಾ ಗುಡಿಸಲು/ಶಿಥಿಲಗೊಂಡಿರುವ ಮನೆಯನ್ನು ಹೊಂದಿರುವ ಅರ್ಹ ಕುಶಲಕರ್ಮಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಬಿದಿರು, ಬೆತ್ತದ ಕೆಲಸ, ಬಡಗಿ, ಕಮ್ಮಾರಿಕೆ, ಚರ್ಮಗಾರಿಕೆ, ಕರಕುಶಲ ವಸ್ತು ತಯಾರಿಕೆ (ಕರಕುಶಲದ ಹೆಸರು ನಮೂದಿಸುವುದು) ತೆಂಗಿನ ನಾರಿನ ಉತ್ಪನ್ನಗಳ ತಯಾರಿಕೆ, ಕುಂಬಾರಿಕೆ, ನೇಯ್ಗೆ, ಜನರಲ್ ಇಂಜಿನಿಯರಿಂಗ್, ಚಾಪೆ ಹೆಣೆಯುವುದು, ಬುಟ್ಟಿ ಹೆಣೆಯುವುದು, ಕಸೂತಿ, ಹಗ್ಗ ಮಾಡುವುದು (ಪ್ಲಾಸ್ಟಿಕ್ ಹೊರತುಪಡಿಸಿ), ಅಗರಬತ್ತಿ ತಯಾರಿಕೆ, ಜೀನ್ಸ್ ಹೊಲಿಗೆ, ಬೆಳ್ಳಿ ಬಂಗಾರ ಆಭರಣ ತಯಾರಿಕೆ, ನೂಲುಗಾರರು, ಕೌದಿ ಹೊಲಿಯುವುದು, ಕಲ್ಲಿನ ಕೆತ್ತನೆ, ಎತ್ತಿನ ಗಾಡಿ ತಯಾರಿಕೆ ವೃತ್ತಿಯಲ್ಲಿ ತೊಡಗಿರಬೇಕು. ವಸತಿ ಕಾರ್ಯಾಗಾರವನ್ನು ನಿರ್ಮಿಸಲು ಯೋಜನಾ ವೆಚ್ಚ 2.5 ಲಕ್ಷ ಆಗಿದ್ದು, ಇದರಲ್ಲಿ ರೂ.2,20,00/-ಗಳು ಸಹಾಯಧನವಾಗಿರುತ್ತದೆ, ಇನ್ನುಳಿದ ರೂ.30,000/-ಗಳನ್ನು ಫಲಾನುಭವಿಯು ಭರಿಸಬೇಕಾಗಿರುತ್ತದೆ. ಜಿಲ್ಲೆಯಲ್ಲಿರುವ 20 ಮಂದಿ ವೈಯ್ಯಕ್ತಿಕ ಕುಶಲಕರ್ಮಿಗಳಿಗೆ ಹಾಗೂ 20 ಮಂದಿ ಗುಂಪು ಕುಶಲ ಕರ್ಮಿಗಳಿಗೆ ಮಾತ್ರ ಅವಕಾಶವಿರುತ್ತದೆ. ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ಆಯಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳು ಹಾಗೂ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಡ್ಯ ಇವರುಗಳಿಂದ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿ ಜೊತೆಗೆ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ವೃತ್ತಿನಿರತ ಕುಶಲಕರ್ಮಿ ಪ್ರಮಾಣ ಪತ್ರ, ಸ್ವಂತ ನಿವೇಶನ ಹೊಂದಿರುವ ಬಗ್ಗೆ ದಾಖಲೆಗಳು, ಈಗಿರುವ ಗುಡಿಸಲು/ಶಿಥಿಲಗೊಂಡ ಮನೆಗಳ ಫೋಟೋಗಳನ್ನು ದಿನಾಂಕ:10/11/2014ರ ಒಳಗಡೆ ಆಯಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿಗಳು ಅಥವಾ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಕಾರ್ಮೆಲ್ ಕಾನ್ವೆಂಟ್ ಎದುರು, ಸುಭಾಷ್‍ನಗರ, ಮಂಡ್ಯ ಇವರ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment